ದೇವಸ್ಥಾನ ಸುವ್ಯವಸ್ಥಾಪನೆ : ವಿಶ್ವಸ್ಥರ ಮುಂದಾಳತ್ವ ಆವಶ್ಯಕ !

‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ೧೬ ಹಾಗೂ ೧೭ ರಂದು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಕನ್ವೆಂನ್ಷನ್ ಸೆಂಟರ್‌ನಲ್ಲಿ ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ನೆರವೇರಿತು. ರಾಜ್ಯದ ೫೦೦ ಕ್ಕಿಂತಲೂ ಹೆಚ್ಚು ವಿಶ್ವಸ್ಥರು, ಅರ್ಚಕರು ಮುಂತಾದವರು ಈ ಪರಿಷತ್ತಿನಲ್ಲಿ ಭಾಗವಹಿಸಿದ್ದರು. ದೇವಸ್ಥಾನಗಳ ಸಮಸ್ಯೆ ಗಳನ್ನು ನೋಡಿದರೆ ದೇವಸ್ಥಾನಗಳ ಸರಕಾರೀಕರಣ, ದೇವಸ್ಥಾನಗಳಲ್ಲಿನ ಭ್ರಷ್ಟಾಚಾರ, ಭಕ್ತರು ಅರ್ಪಿಸಿದ ನಿಧಿಯ ದುರುಪಯೋಗ, ಭಕ್ತರು ಎದುರಿಸುವ ಅಸೌಲಭ್ಯಗಳು ಹಾಗೂ ಮಹತ್ವದ ವಿಷಯವೆಂದರೆ ದೇವಸ್ಥಾನಗಳ ಪಾವಿತ್ರ್ಯದ ವಿಷಯ ಇತ್ಯಾದಿ ಅನೇಕ ಸಮಸ್ಯೆಗಳನ್ನು ದೇವಸ್ಥಾನಗಳು ಅನುಭವಿಸುತ್ತಿವೆ. ಇಂತಹ ವಿವಿಧ ಸಮಸ್ಯೆಗಳ ಬಗ್ಗೆ ದೇವಸ್ಥಾನ ಪರಿಷತ್ತಿನಲ್ಲಿ ಚರ್ಚೆ ನಡೆಯಿತು. ಭವಿಷ್ಯದಲ್ಲಿ ಇದರ ಫಲಿತಾಂಶ ನಿಶ್ಚಿತವಾಗಿ ಕಾಣಿಸುವುದು. ಆದರೆ ಹಿಂದೂಗಳು ಇದರ ಗಾಂಭೀರ್ಯವನ್ನು ತಿಳಿದುಕೊಂಡರೆ ಈ ಕಾರ್ಯ ವೇಗವಾಗಿ ಮುಂದೆ ಹೋಗಬಹುದು. ಮೂಲತಃ ಕಳೆದ ಅನೇಕ ವರ್ಷಗಳಿಂದ ಹಿಂದೂಗಳ ದುರ್ಲಕ್ಷದಿಂದಲೇ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು. ಈ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ನಡೆಯುವುದು ಹಾಗೂ ದೇವಸ್ಥಾನಗಳ ವ್ಯವಸ್ಥಾಪನೆ ದುರ್ಬಲವಾಗುವುದೆಂದರೆ ಇದು ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲಿನ ದುರ್ಲಕ್ಷದ ಪರಿಣಾಮವಾಗಿದೆ. ದೇವಸ್ಥಾನಗಳೆಂದರೆ ಸಂಬಂಧಪಟ್ಟ ದೇವಸ್ಥಾನದ ವಿಶ್ವಸ್ಥರಿಗೆ ಮಾತ್ರ ಸೀಮಿತವಾದ ವಿಷಯವಾಗಿ ಬಿಟ್ಟಿದೆ. ಇವುಗಳಲ್ಲಿನ ಒಂದೊಂದು ದೇವಸ್ಥಾನವೂ ಹಿಂದೂಗಳ ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ, ಎಂಬುದರ ಮಹತ್ವವನ್ನು ತಿಳಿದುಕೊಳ್ಳುತ್ತಿದ್ದರೆ, ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ ಅಥವಾ ದೇವಸ್ಥಾನಗಳ ಸರಕಾರೀಕರಣ ಆಗುತ್ತಿರಲಿಲ್ಲ, ಎಂಬುದನ್ನು ಹಿಂದೂಗಳು ಮೊದಲು ಸ್ವೀಕರಿಸಬೇಕು. ಹಿಂದೂ ಸಮಾಜವು ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕೆಂದು ಬೇಡಿಕೆ ಮಾಡುತ್ತಿದೆ; ಆದರೆ ಅದಕ್ಕೆ ಸರಕಾರ ಸೊಪ್ಪು ಹಾಕುವುದಿಲ್ಲ. ಹಿಂದೂಗಳು ಅದರ ಮೂಲಕ್ಕೆ ಹೋಗಬೇಕು. ಇದರ ಕಾರಣ ಹಿಂದೂಗಳಿಗೆ ತಮ್ಮ ದೇವಸ್ಥಾನಗಳ ಆಧ್ಯಾತ್ಮಿಕ ಸಾಮರ್ಥ್ಯದ ಮಹತ್ವ ತಿಳಿದಿಲ್ಲ ಎಂಬುದಾಗಿದೆ. ಚರ್ಚ್ ಹಾಗೂ ಮಸೀದಿಗಳ ಸರಕಾರೀಕರಣ ಆಗುವುದಿಲ್ಲ. ಈ ಸಮಾಜ ಅಲ್ಪಸಂಖ್ಯೆಯಲ್ಲಿದ್ದರೂ ಸರಕಾರ ಅವರ ಪ್ರಾರ್ಥನಾಸ್ಥಳಗಳನ್ನು ವಶಪಡಿಸಿಕೊಳ್ಳುವ ವಿಚಾರವನ್ನೂ ಮಾಡುವುದಿಲ್ಲ. ಹಿಂದೂಗಳು ಅದರ ಕಾರಣವನ್ನು ತಿಳಿದುಕೊಳ್ಳಬೇಕಾಗಿದೆ.

ದೇವಸ್ಥಾನ ಸರಕಾರೀಕರಣದ ದೋಷಿ ಯಾರು ?

ಹಿಂದೂಗಳ ಧಾರ್ಮಿಕತೆ ಕಡಿಮೆಯಾಗಿದೆಯೇ ? ಇಲ್ಲ. ತದ್ವಿರುದ್ಧ ದಿನಗಳೆದಂತೆ ದೇವಸ್ಥಾನಗಳಿಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚುತ್ತಾ ಇದೆ; ಹಾಗಾದರೆ ಪ್ರಸಿದ್ಧ ದೇವಸ್ಥಾನಗಳಿಗೆ ಬರುವ ಭಕ್ತರು ಈ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರದ ವಿಷಯದಲ್ಲಿ ಧ್ವನಿಯೆತ್ತಲಿಲ್ಲವೇಕೆ ? ಭಕ್ತರು ಈ ದೇವಸ್ಥಾನಗಳ ಭ್ರಷ್ಟಾಚಾರಕ್ಕೂ ನಮಗೂ ಏನೂ ಸಂಬಂಧವಿಲ್ಲವೆನ್ನುವ ಹಾಗೆ ವರ್ತಿಸುತ್ತಾರೆ. ಎಲ್ಲ ಕಡೆಗಳ ಭಕ್ತರ ಸ್ಥಿತಿ ಇದೇ ಆಗಿದೆ, ಇದು ಹಿಂದೂಗಳಿಗೆ ಅತ್ಯಂತ ಆಘಾತಕಾರಿಯಾಗಿದೆ. ದೇವರ ದರ್ಶನ ಪಡೆಯುವಾಗ ‘ಭಗವಂತನ ಕೃಪೆ ನನಗೆ ಮತ್ತು ನನ್ನ ಕುಟುಂಬದವರಿಗೆ ಆಗಬೇಕೆಂದು ಭಕ್ತರಿಗೆ ಅನಿಸುತ್ತದೆ; ಆದರೆ ಆ ದೇವಸ್ಥಾನದ ಪಾವಿತ್ರ್ಯ ಶಾಶ್ವತವಾಗಿರಬೇಕು’, ಎಂಬುದರ ಕಡೆಗೆ ಹಿಂದೂಗಳು ದುರ್ಲಕ್ಷ ಮಾಡುತ್ತಾರೆ. ದೇವಸ್ಥಾನಗಳ ಸರಕಾರೀಕರಣ ಆಗುವುದರ ಹಿಂದೆ ಹಿಂದೂಗಳ ಈ ವೃತ್ತಿಯೇ ಕಾರಣವಾಗಿದೆ. ದೇವಸ್ಥಾನಗಳು ಸರಕಾರೀಕರಣದಿಂದ ಮುಕ್ತ ವಾಗಬೇಕೆಂದು, ಕೆಲವೇ ಬೆರಳೆಣಿಕೆಯಷ್ಟು ಹಿಂದೂಗಳು ಧ್ವನಿಯೆತ್ತುವುದು ಕಾಣಿಸುತ್ತದೆ; ಸಮಸ್ತ ಹಿಂದೂಗಳು ಇದಕ್ಕಾಗಿ ಧ್ವನಿಯೆತ್ತುವುದಿಲ್ಲ, ಎಂಬುದು ವಾಸ್ತವಿಕವಾಗಿದೆ. ಸಂಪೂರ್ಣ ಹಿಂದೂ ಸಮಾಜ ಒಗ್ಗಟ್ಟಾಗಿ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಲು ಬೇಡಿಕೆಯನ್ನು ಮುಂದಿಟ್ಟಾಗ ಯಾವ ಸರಕಾರಕ್ಕೂ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವ ಧೈರ್ಯ ಬರಲಿಕ್ಕಿಲ್ಲ. ಹಿಂದೂಗಳನ್ನು ಜಾಗೃತಗೊಳಿಸುವ ಹೊಣೆಯನ್ನು ದೇವಸ್ಥಾನಗಳ ವಿಶ್ವಸ್ಥರು ಸ್ವೀಕರಿಸಬೇಕು. ಆಗ ಮಾತ್ರ ಆ ದೇವತೆಯ ಕೃಪೆಯಾಗಬಹುದು.

ಕೌಟುಂಬಿಕ ಹಿತಕ್ಕಾಗಿ ದೇವಸ್ಥಾನದ ಮೆಟ್ಟಿಲನ್ನು ಹತ್ತುವ ಹಿಂದೂಗಳನ್ನು ಧರ್ಮಹಿತಕ್ಕಾಗಿ ಉತ್ತೇಜಿಸುವ ಹೊಣೆ ವಿಶ್ವಸ್ಥರದ್ದಾಗಿದೆ. ಕೇವಲ ದೇವಸ್ಥಾನ ಪರಿಷತ್ತು ನಡೆಯುವುದರಿಂದ ದೇವಸ್ಥಾನಗಳ ಸಮಸ್ಯೆ ನಿವಾರಣೆಯಾಗುತ್ತವೆ, ಎನ್ನುವ ಹಾಗಿಲ್ಲ, ದೇವಸ್ಥಾನ ಪರಿಷತ್ತಿನಲ್ಲಿ ಯಾವೆಲ್ಲ ಸಮಸ್ಯೆಗಳನ್ನು ಮಂಡಿಸಲಾಗಿದೆಯೊ, ಅವುಗಳನ್ನು ನಿವಾರಿಸಲು ಎಲ್ಲ ವಿಶ್ವಸ್ಥರು ತಮ್ಮ ತಮ್ಮ ಕ್ಷಮತೆಗನುಸಾರ ಯೋಗದಾನ ನೀಡುವ ಆವಶ್ಯಕತೆಯಿದೆ. ವಿಶ್ವಸ್ಥರು ತಮ್ಮ ದೇವಸ್ಥಾನಕ್ಕೆ ಬರುವ ಹಿಂದೂಗಳಲ್ಲಿ ದೇವಸ್ಥಾನಗಳ ಮಹತ್ವವನ್ನು ಬಿಂಬಿಸಲು ಪ್ರಯತ್ನಿಸಬೇಕು.
ದೇವಸ್ಥಾನಗಳು ಅರ್ಥಾರ್ಜನೆಯ

ಕೇಂದ್ರವಲ್ಲ, ಆಧ್ಯಾತ್ಮಿಕ ಕೇಂದ್ರಗಳಾಗಿವೆ !

ಕೆಲವು ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರ, ‘ಕಾರಿಡಾರ್’ ಕಾರ್ಯಗಳು ನಡೆಯುತ್ತಿದೆ. ಈ ಮೂಲಕ ಭಕ್ತರಿಗೆ ಆವಶ್ಯಕವಿರುವ ಸೌಲಭ್ಯಗಳನ್ನು ಪೂರೈಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಈ ಪ್ರಾಚೀನ ದೇವಸ್ಥಾನಗಳ ಭವ್ಯದಿವ್ಯತೆಯನ್ನು ಹೆಚ್ಚಿಸಲಾಗುವುದು; ಆದರೆ ‘ದೇವಸ್ಥಾನಗಳ ಪ್ರವಾಸೀತಾಣ ಮಾಡುವುದೇ ಇದರ ಹಿಂದಿನ ಉದ್ದೇಶವಾಗಿದೆ. ಅದರಿಂದ ದೇವಸ್ಥಾನಗಳಿಗೆ ಹೆಚ್ಚೆಚ್ಚು ಜನರು ಬರುವರು, ದೇವಸ್ಥಾನದ ದಾನಪೆಟ್ಟಿಗೆಯಲ್ಲಿ ಹಣವನ್ನೂ ಅರ್ಪಣೆ ಮಾಡುವರು, ಪರಿಸರದಲ್ಲಿರುವ ಅಂಗಡಿಗಳಲ್ಲಿ ಮಾರಾಟ ಹೆಚ್ಚಾಗುವುದು. ಇದರಿಂದ ಆರ್ಥಿಕ ಸಮೃದ್ಧಿ ಆಗುವುದು; ಆದರೆ ದೇವಸ್ಥಾನಗಳಿರುವುದು ಆರ್ಥಿಕ ಸಮೃದ್ಧಿಗಾಗಿ ಅಲ್ಲ. ಇದರಿಂದ ನಿರ್ಮಾಣವಾಗುವ ಅರ್ಥಾರ್ಜನೆ ತಪ್ಪೇನೂ ಅಲ್ಲ; ಆದರೆ ‘ದೇವಸ್ಥಾನಕ್ಕೆ ಬರುವ ಭಕ್ತನಿಗೆ ಆಧ್ಯಾತ್ಮಿಕ ಲಾಭವಾಗಬೇಕು, ಎಂಬುದಕ್ಕಾಗಿ ದೇವಸ್ಥಾನಗಳಿರುತ್ತವೆ’ ಎಂಬುದನ್ನು ವಿಶ್ವಸ್ಥರು ಮೊದಲು ತಿಳಿದುಕೊಳ್ಳಬೇಕು. ‘ಸರಕಾರದ ನಿಧಿಯಿಂದ ದೇವಸ್ಥಾನಗಳ ಪಾವಿತ್ರ್ಯ ಹೆಚ್ಚಾಗಬಹುದೇ ?’ ಇದರ ಉತ್ತರವನ್ನು ವಿಶ್ವಸ್ಥರೆ ಹುಡುಕಬೇಕು. ಹಣದಿಂದ ದೇವಸ್ಥಾನಗಳಲ್ಲಿ ಪಾವಿತ್ರ್ಯ ನಿರ್ಮಾಣವಾಗುವುದಿಲ್ಲ, ಯಾವುದರಿಂದ ಆಗುತ್ತದೋ, ಅದನ್ನು ಮಾಡುವ ಹೊಣೆ ದೇವಸ್ಥಾನಗಳ ವಿಶ್ವಸ್ಥರದ್ದಾಗಿದೆ.

ಸಂತರು ಹಾಗೂ ಧರ್ಮಗ್ರಂಥಗಳ ತುಲನೆಯಲ್ಲಿ ಸಾಮಾನ್ಯರು ಹಾಗೂ ಬಡವ-ಶ್ರೀಮಂತ ಎಂಬ ಎಲ್ಲ ಸ್ತರದಲ್ಲಿನ ಹಿಂದೂಗಳಿಗೆ ಸಹಜವಾಗಿ ಆಧ್ಯಾತ್ಮಿಕ ಶಕ್ತಿಯನ್ನು ಪೂರೈಸುವ ಸ್ಥಾನವೆಂದರೆ ‘ದೇವಸ್ಥಾನ’ಗಳಾಗಿವೆ. ಆದ್ದರಿಂದ ದೇವಸ್ಥಾನಗಳು ಕೇವಲ ಅರ್ಥಾರ್ಜನೆಯ ಸಾಧನವಾಗಿರದೆ ಆಧ್ಯಾತ್ಮಿಕ ಕೇಂದ್ರಗಳಾದರೆ, ಹಿಂದೂ ಧರ್ಮ ಹಾಗೂ ಹಿಂದೂ ಸಮಾಜ ಸಮೃದ್ಧವಾಗುವುದು. ದೇವಸ್ಥಾನಗಳ ಈ ಮಹತ್ವವನ್ನು ಮೊದಲು ವಿಶ್ವಸ್ಥರು ತಿಳಿದುಕೊಳ್ಳಬೇಕು. ದೇವಸ್ಥಾನ ಪರಿಷತ್ತಿನಲ್ಲಿ ಉಪಸ್ಥಿತರಾಗಿರದ ಸಾವಿರಾರು ವಿಶ್ವಸ್ಥರು ಕರ್ನಾಟಕದಲ್ಲಿದ್ದಾರೆ, ಅವರಿಗೆ ಈ ವಿಷಯವನ್ನು ತಲುಪಿಸುವ ಹೊಣೆಯನ್ನು ಇಲ್ಲಿರುವ ವಿಶ್ವಸ್ಥರು ವಹಿಸಿಕೊಳ್ಳಬೇಕು. ವಿಶ್ವಸ್ಥರು ಮತ್ತು ಭಕ್ತರಿಗೆ ದೇವಸ್ಥಾನದ ಮಹತ್ವ ತಿಳಿದಾಗ ದೇವಸ್ಥಾನದ ವಿವಿಧ ಸಮಸ್ಯೆಗಳಿಗಾಗಿ ಸರಕಾರದ ಹಿಂದೆ ಹೋಗುವ ಕಾಲ ಹಿಂದೂಗಳಿಗೆ ಬರಲಿಕ್ಕಿಲ್ಲ, ಎಂಬುದು ಮಾತ್ರ ಖಚಿತ !