ಕಾಂಗ್ರೆಸ್‌ರಾಜ್ಯದಲ್ಲಿ ಹಗರಣ !

ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ ಬಘೇಲ ಅವರು ’ಮಹಾದೇವ್‌ ಯಾಪ್‌’ನಿಂದ ೫೦೮ ಕೋಟಿ ರೂಪಾಯಿಗಳನ್ನು ಪಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಆಘಾತಕಾರಿ ಹೇಳಿಕೆ ನೀಡಿದೆ. ಇದರಿಂದ ಎಲ್ಲರಿಗೂ ಆಘಾತವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಛತ್ತೀಸಗಡದ ದುರ್ಗದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಘೇಲ್‌ ಅವರನ್ನು ಟೀಕಿಸುತ್ತಾ, ’ಮಹಾದೇವನ ಹೆಸರನ್ನೂ ಬಘೇಲ್‌ರು ಬಿಟ್ಟಿಲ್ಲ’ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ’ಮಹಾದೇವ ಯಾಪ್’ ಪ್ರಕರಣದಲ್ಲಿ ಭಾರತೀಯ ಚಲನಚಿತ್ರ ನಟ ಮತ್ತು ನಟಿಯರಿಗೆ ನೋಟಿಸ್‌ ಕಳುಹಿಸುವ ಮೂಲಕ ಇ.ಡಿ.ಯು ತನ್ನ ತನಿಖೆಯನ್ನು ಪ್ರಾರಂಭಿಸಿದೆ. ಪ್ರಾರಂಭದಲ್ಲಿ ಈ ಯಾಪ್‌ ವಿಷಯದಲ್ಲಿ ದುಬೈನಿಂದ ಭಾರತೀಯ ನಟ-ನಟಿಯರ ಸಹಾಯದಿಂದ ನಡೆಸುವ ಆಟ ಎಂಬ ಅನಿಸಿಕೆಯಿತ್ತು; ಆದರೆ ಇ.ಡಿ. ಹಾಗೂ ಸಾಮಾಜಿಕ ಜಾಲತಾಣಗಳ ನೆರವಿನಿಂದ ಲಭ್ಯವಾಗಿರುವ ಮಾಹಿತಿ ಆಘಾತಕಾರಿಯಾಗಿದೆ ಮತ್ತು ಜನಸಾಮಾನ್ಯರ ನಿದ್ದೆಗೆಡಿಸುವಂತಹದ್ದಾಗಿದೆ.

ಒಂದು ರಾಜ್ಯವೇ ಹಗರಣದಲ್ಲಿ ಭಾಗಿ

ಛತ್ತೀಸಗಡದಂತಹ ನಕ್ಸಲವಾದದಿಂದ ಪೀಡಿತ ಮತ್ತು ದುರ್ಗಮಪ್ರದೇಶವಾಗಿರುವ ರಾಜ್ಯದಿಂದ ಸೌರಭ ಚಂದ್ರಕಾರ ಮತ್ತು ರವಿ ಉಪ್ಪಲ ಎಂಬ ಇಬ್ಬರು ಕಿರು ಉದ್ಯಮಿಗಳು ದೊಡ್ಡ ಉದ್ಯಮವನ್ನು ಪ್ರಾರಂಭಿಸಲು ದುಬೈಗೆ ತೆರಳಿದರು. ಅಲ್ಲಿ ಒಬ್ಬ ಶೇಖ್‌ ಮತ್ತು ಒಬ್ಬ ಪಾಕಿಸ್ತಾನಿಯನ್ನು ಭೇಟಿಯಾಗಿ ’ಆನ್‌ಲೈನ್‌ ಗೇಮಿಂಗ್‌ ಪೋರ್ಟಲ್’ ಅನ್ನು ಸಿದ್ಧಪಡಿಸಿದರು. ಈ ಪೋರ್ಟಲ್‌ನಲ್ಲಿ ಪೋಕರ್, ತೀನಪತ್ತಿ ಎಂಬ ಮೊಬೈಲ ಆಟ, ಹಾಗೆಯೇ ಐಪಿಎಲ್, ಕ್ರಿಕೆಟ್, ಸಾಕರ್, ಹಾಕಿಗಳಂತಹ ಪ್ರತ್ಯಕ್ಷ ಆಟಗಳ ಮೇಲೆ ಅನಧಿಕೃತವಾಗಿ ಜೂಜಾಡಲು ಮಾಧ್ಯಮವನ್ನು ಒದಗಿಸಲಾಯಿತು. ಆರಂಭದಲ್ಲಿ ಅವರಿಗೆ ಲಾಭವಾಗುತ್ತಿರಲಿಲ್ಲ; ಆದರೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಅವರ ಅದೃಷ್ಟವು ಖುಲಾಯಿಸಿತು. ಅವರು ಅನೇಕ ಜನರಿಗೆ ವಿಶೇಷವಾಗಿ ಛತ್ತೀಸಗಡದ ಜನರಿಗೆ ಈ ಆಟಗಳ ಬಗ್ಗೆ ಹುಚ್ಚು ಹಿಡಿಸಿದರು. ಛತ್ತೀಸಗಢದ ಅನೇಕ ಬಡವರು ಶೀಘ್ರವಾಗಿ ಹಣ ಗಳಿಸಲು ಈ ಆಟಗಳಲ್ಲಿ ಹಣ ತೊಡಗಿಸಿದರು. ಪ್ರಾರಂಭದ ದಿನಗಳಲ್ಲಿ ಅವರು ಸ್ವಲ್ಪ ಹಣವನ್ನು ಕೂಡ ಪಡೆದರು; ಆದರೆ ಕೊನೆ ಕೊನೆಗೆ ಈ ಆಟದಲ್ಲಿ ಜನರು ಎಷ್ಟೇ ಹಣ ತೊಡಗಿಸಿದರೂ, ಕೊನೆಗೆ ಅವರು ದಿವಾಳಿಯಾಗುವಂತೆ ಮತ್ತು ಮಾಲೀಕರಿಬ್ಬರೂ

ಶ್ರೀಮಂತರಾಗುವ ರೀತಿಯಲ್ಲಿ ’ಸೆಟ್ಟಿಂಗ’ ಮಾಡಲಾಯಿತು !

‘ಯಾಪ್’ ಮೂಲಕ ೫ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದ್ದು, ರಾಜ್ಯದ ಜನತೆಯ ಹಣ ಲೂಟಿ ಹೊಡೆಯುತ್ತಿದ್ದರೂ ಪೊಲೀಸರಿಗೆ, ಆಡಳಿತಾಧಿಕಾರಿಗಳಿಗೆ ಈ ಬಗ್ಗೆ ಕಿಂಚಿತ್ತೂ ಕಲ್ಪನೆ ಇರಲಿಲ್ಲ ಎಂದು ಹೇಳಲು ಸಾಧ್ಯವೇ ? ಖಂಡಿತವಾಗಿಯೂ ಈ ಬಗ್ಗೆ ಕಲ್ಪನೆ ಇತ್ತು, ಇಷ್ಟೇ ಅಲ್ಲ ಇದರಲ್ಲಿ ಪೊಲೀಸ್, ಆಡಳಿತ ಅಧಿಕಾರಿಗಳೇ ಭಾಗಿಯಾಗಿದ್ದಾರೆ ! ಅಲ್ಲಿಯ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು, ಮುಖ್ಯಮಂತ್ರಿ ಕಚೇರಿಯಲ್ಲಿರುವ ವ್ಯಕ್ತಿಗಳು ಸೇರಿದಂತೆ ಹಲವರಿಗೆ ಕೋಟ್ಯಂತರ ರೂಪಾಯಿ ಸಿಕ್ಕಿದೆ. ಈ ಪ್ರಕರಣದಲ್ಲಿ ದುರ್ಗದ ಪೊಲೀಸ್‌ ಅಧೀಕ್ಷಕ ಅಭಿಷೇಕ ಪಲ್ಲವ ಅವರನ್ನು ಬಂಧಿಸಲಾಗಿದೆ.

ಸಂಘಟಿತ ಅಪರಾಧದ ಉಚ್ಛಾಟನೆ ?

‘ಯಾಪ್‌’ನ ಈ ಇಬ್ಬರು ಮಾಲೀಕರ ಪೈಕಿ ಸೌರಭ್‌ ಮದುವೆಗೆ ೨೦೦ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಅಂದಿನಿಂದ, ಜಾರಿ ನಿರ್ದೇಶನಾಲಯವು ಹಗರಣದ ಬಗ್ಗೆ ನಿಜವಾದ ಅರ್ಥದಿಂದ ತನಿಖೆ ಪ್ರಾರಂಭಿಸಿದೆ. ಮದುವೆ ನಿಮಿತ್ತದಿಂದ ನಗದು ವ್ಯವಹಾರ ನಡೆದಿದ್ದು, ೨೦೦ ಕೋಟಿ ರೂಪಾಯಿಗಳನ್ನು ಛತ್ತೀಸಗಡಕ್ಕೆ ಕಳುಹಿಸಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಇನ್ನೂ ಒಂದು ಆಘಾತಕಾರಿ ಸಂಗತಿಯೆಂದರೆ ’ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್’ ಇದು ’ಮಹದೇವ್‌ ಯಾಪ್’ ಮುಖ್ಯಸ್ಥನಿಗೆ ಬೆದರಿಕೆ ಹಾಕಿದ ಕೂಡಲೇ ದಾವೂದ್‌ ನಿಂದ ಬಿಷ್ಣೋಯ್‌ ಗ್ಯಾಂಗ್‌ಗೆ ತಿಳುವಳಿಕೆ ನೀಡಲಾಗಿದೆ ಎನ್ನಲಾಗುತ್ತಿದೆ ! ಅಂದರೆ, ಇದರ ಬೇರುಗಳು ದೇಶದ ಹೊರಗಿನ ದಾವೂದ್‌ ವರೆಗೆ ಮತ್ತು ಭಾರತದಲ್ಲಿ ಒಂದು ಕಾಂಗ್ರೆಸ್‌ ಆಡಳಿತದ ರಾಜ್ಯದ ಮುಖ್ಯಮಂತ್ರಿ ವರೆಗೆ ತಲುಪಿದೆ !

ಭ್ರಷ್ಟಾಚಾರಿ, ವಂಚಕರು ಮತ್ತು ಕಳ್ಳರೊಂದಿಗೆ ಕೈಜೋಡಿಸಿ ಪೊಲೀಸ್‌ ಮತ್ತು ಆಡಳಿತ ವ್ಯವಸ್ಥೆಯು ರಾಜ್ಯದ ಜನತೆಯನ್ನು ಯಾವ ರೀತಿ ಲೂಟಿ ಮಾಡುತ್ತದೆ ? ಎನ್ನುವುದಕ್ಕೆ ’ಮಹಾದೇವ ಯಾಪ್’ ಹಗರಣ ಉತ್ತಮ ಉದಾಹರಣೆ ಯಾಗಿದೆ. ಒಂದು ಬಡ ರಾಜ್ಯ ಮತ್ತು ಅದರ ಮುಖ್ಯಸ್ಥರು ರಾಜ್ಯದ ಜನರನ್ನು ಅವರ ದುಃಸ್ಥಿತಿಯಿಂದ ಮೇಲೆತ್ತಲು ಅವರ ಜೀವನವನ್ನು ಸುಧಾರಿಸಲು ಪ್ರಯತ್ನಿಸುವುದು ಅವರನ್ನು ಆರ್ಥಿಕವಾಗಿ ಮತ್ತು ಸರ್ವತೋಮುಖವಾಗಿ ಸಬಲರನ್ನಾಗಿ ಮಾಡಲು ಚಡಪಡಿಸುವುದು ಅಪೇಕ್ಷಿತವಿರುವಾಗ ಕಾಂಗ್ರೆಸ್‌ ಆಡಳಿತವಿರುವ ರಾಜ್ಯದ ದುಃಸ್ಥಿತಿ ಈ ರೀತಿ ಇದೆ ! ಇದರಿಂದ ’ಕಾಂಗ್ರೆಸ್‌ ಕಾ ಹಾತ್‌ ಭ್ರಷ್ಟಾಚಾರಿಯೋಂಕೆ ಸಾಥ್’ ಎಂಬ ಮಾತು ಏಕೆ ಚಾಲ್ತಿಯಲ್ಲಿದೆ ?’ ಎನ್ನುವುದು ಇದರಿಂದ ದೃಢವಾಗಿದೆ. ಇನ್ನೂ ತನಿಖೆ ಪೂರ್ಣಗೊಂಡು ಮುಖ್ಯಮಂತ್ರಿ ವಿರುದ್ಧದ ಆರೋಪ ಸಾಬೀತಾಗಬೇಕಿದ್ದರೂ ಹಗರಣದ ವ್ಯಾಪ್ತಿ ಗಮನಕ್ಕೆ ಬರುತ್ತಿದೆ. ಜಾರಿ ನಿರ್ದೇಶನಾಲಯವು (ಇ.ಡಿ.) ಪ್ರಕಟಿಸಿರುವ ಅಂಕಿ-ಅಂಶ ಕೋಟ್ಯಂತರ ರೂಪಾಯಿ ಆಗಿದ್ದರೂ, ಇಷ್ಟು ದೊಡ್ಡ ಭ್ರಷ್ಟಾಚಾರ ವ್ಯವಸ್ಥಿತವಾಗಿ ರಾಜ್ಯದಲ್ಲಿ ನಡೆಯಲು ಸರಕಾರ ಮತ್ತು ಪೊಲೀಸರ ನಡುವೆ ಎಷ್ಟು ಕೋಟಿ ರೂಪಾಯಿಗಳನ್ನು ಹಂಚಲಾಗಿರಬಹುದು ? ಎನ್ನುವುದು ಕೂಡ ಆದಷ್ಟು ಬೇಗ ಹೊರಬರುವುದು ಅವಶ್ಯವಿದೆ.

ಮಹಾರಾಷ್ಟ್ರದಲ್ಲಿ ಅಬ್ದುಲ್‌ ಕರೀಂ ತೆಲಗಿ ಎಂಬ ವಂಚಕನು ಮುದ್ರಾಂಕ ಶುಲ್ಕದ ದೊಡ್ಡ ಹಗರಣ ನಡೆಸುವ ಮೂಲಕ ರಾಜ್ಯವನ್ನು ಬೆಚ್ಚಿಬೀಳಿಸಿದ್ದನು. ಅಲ್ಲದೆ ಅಂದಿನ ಕಾಂಗ್ರೆಸ್‌ ಸರಕಾರದ ಮುಖ್ಯಮಂತ್ರಿ ಮತ್ತು ಮಂತ್ರಿಗಳು ಸೇರಿದಂತೆ ಹಲವರಿಗೆ ಕೋಟ್ಯಂತರ ರೂಪಾಯಿ ಹಂಚಿಕೆ ಮಾಡಿ ಅವರನ್ನು ಖರೀದಿ ಮಾಡಿರುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದನು. ಹರ್ಷದ ಮೆಹತಾನು ಭಾರತೀಯ ಬ್ಯಾಂಕ್‌ಗಳ ಮೇಲೆ ತನ್ನ ಕೆಟ್ಟ ದೃಷ್ಟಿಯನ್ನು ಹಾಕಿ ಕೋಟಿಗಟ್ಟಲೆ ರೂಪಾಯಿಗಳ ’ಷೇರು ಮಾರುಕಟ್ಟೆ ಹಗರಣ’ ಮಾಡಿ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿದ್ದನು. ಹೀಗೆ ಕೋಟ್ಯಂತರ ರೂಪಾಯಿಗಳ ಹಗರಣಗಳ ಮೇಲೆ ಹಗರಣ ಗಳು ಬಯಲಾಗಿವೆ ಮತ್ತು ಈಗಲೂ ನಡೆಯುತ್ತಲೇ ಇವೆ. ಇದರಲ್ಲಿ ಮುಖ್ಯ ಸಮಸ್ಯೆಯೆಂದರೆ, ಹಗರಣವು ಬಹಿರಂಗವಾಗುತ್ತವೆ, ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ; ಆದರೆ ಶಿಕ್ಷೆ ಮಾತ್ರ ಯಾರಿಗೂ ಆಗುವುದಿಲ್ಲ. ಹರ್ಷದ ಮೆಹ್ತಾ ಮತ್ತು ತೆಲಗಿ ಇವರು ಮರಣ ಹೊಂದಿದ್ದಾರೆ; ಆದರೆ ಅವರು ಹೆಸರಿಸಿರುವ ರಾಜಕಾರಣಿಗಳು ಸ್ವತಂತ್ರರಾಗಿ ತಿರುಗಾಡುತ್ತಿದ್ದಾರೆ. ಅವರಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ !

ಭ್ರಷ್ಟಾಚಾರದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯನ್ನು ನಿಗದಿಪಡಿಸಿ ಅವರಿಗೆ ಕಠಿಣ ಶಿಕ್ಷೆಯಾಗುವುದು ಅಗತ್ಯವಾಗಿದೆ. ಸಂಘಟಿತ ಅಪರಾಧದ ಅಡಿಯಲ್ಲಿ ಈ ಆರೋಪಗಳನ್ನು ನಿಗದಿಪಡಿಸಿ, ಶಿಕ್ಷಿಸಬೇಕು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ದುಬೈನಲ್ಲಿ ಇಂತಹವರನ್ನು ಬೆಂಬಲಿಸುತ್ತಿರುವ ದೊಡ್ಡ ದೊಡ್ಡ ಶ್ರೀಮಂತರು ಯಾರು ? ಅವರನ್ನು ಭಾರತಕ್ಕೆ ಎಳೆದುಕೊಂಡು ಕರೆತರುವ ಮತ್ತು ದೇಶದ ಅತಿದೊಡ್ಡ ಭಯೋತ್ಪಾದಕ ದಾವೂದನ ಕೈವಾಡ ಪ್ರತಿಯೊಂದು ವಿಷಯದಲ್ಲಿಯೂ ಇರುವುದರಿಂದ, ಅವನ ಹೆಡೆಮುರಿ ಕಟ್ಟಿ ಕರೆತರುವ ಧೈರ್ಯ ಸರಕಾರ ತೋರಿಸುವ ಆವಶ್ಯಕವಾಗಿದೆ. ಆಗ ಮಾತ್ರ ಜನತೆಯನ್ನು ಲೂಟಿ ಮಾಡುವ ಈ ಸಂಘಟಿತ ಅಪರಾಧವನ್ನು ನಿರ್ಮೂಲನೆ ಮಾಡಲು ಸಾಧ್ಯ !