ಹಾಸನಾಂಬಾ ದೇವಿಯ ದರ್ಶನ ಪ್ರಾರಂಭ (ದೇವಿಯ ದರ್ಶನ ಆರಂಭ ನವೆಂಬರ್‌ ೨)

ಸುಮಾರು ೧೨ ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರರಾದ ಶ್ರೀ. ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರರಾದ ಶ್ರೀ. ಕೃಷ್ಣಪ್ಪ ನಾಯ್ಕರು ಹುತ್ತದ ರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು, ಎಂದು ಇಲ್ಲಿನ ನಂಬಿಕೆಯಾಗಿದೆ. ದೇವಿಯರು ನೆಲೆಸಿದ ಪುರಾಣ ಕಥೆ ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರವಾದ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆ ನಿಂತರು. ಆ ಸಪ್ತಮಾತೆಯರಾದ ಬ್ರಾಹ್ಮದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಹಾಹಿಣಿ, ಇಂದ್ರಾಣಿ ಮತ್ತು ಚಾಮುಂಡಿ ಇವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರಿ, ದೇವಿಯರು ದೇವಸ್ಥಾನದಲ್ಲಿ ಹುತ್ತದ ರೂಪದಲ್ಲಿ ಹಾಗೂ ವಹಾಹಿಣಿ, ಇಂದ್ರಾಣಿ, ಚಾಮುಂಡಿ ನಗರದ ಮಧ್ಯಭಾಗ ದಲ್ಲಿರುವ ದೇವಿಗೆರೆಯಲ್ಲಿ (ಕೆರೆ) ನೆಲೆಸಿರುವರು. ಬ್ರಾಹ್ಮದೇವಿಯು ಹಾಸನದಿಂದ ಸುಮಾರು ೩೫ ಕಿ.ಮೀ.ದೂರದ ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾಂಬೆಯ ಹೆಸರಿನಲ್ಲಿ ನೆಲೆಸಿದ್ದಾಳೆ. ದೇವಸ್ಥಾನದ ವೈಶಿಷ್ಟ್ಯ ಈ ಸಂದರ್ಭದಲ್ಲಿ ಇರುವ ಇನ್ನೊಂದು ವೈಶಿಷ್ಟ್ಯವೇನೆಂದರೆ ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ. ಮುಂದಿನ ವರ್ಷ ದೇವಸ್ಥಾನದ ಬಾಗಿಲು ತೆಗೆಯುವವರೆಗೆ ಹೂವು ಬಾಡದೇ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರು ತ್ತದೆ. ಆಕಸ್ಮಿಕ ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ, ಎಂದು ಇಲ್ಲಿನ ನಂಬಿಕೆಯಾಗಿದೆ. ಈ ದೇವಿಯ ಭಾವಚಿತ್ರವನ್ನು ಮನೆಯಲ್ಲಿ ಇಡುವುದಿಲ್ಲ. ಕಾರಣ ಮನೆಯಲ್ಲಿ ಮಡಿಮೈಲಿಗೆ ಆಚರಿಸದಿದ್ದರೆ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಊರಿನ ಯಾವುದೇ ಮನೆಯಲ್ಲಿ ಈ ದೇವಿಯ ಭಾವಚಿತ್ರವಿಲ್ಲ.

– ಶ್ರೀ. ರಂಗನಾಥ, ಹಾಸನ.

ಸಿದ್ದೇಶ್ವರಸ್ವಾಮಿಯ ಜಾತ್ರ್ಯೋತ್ಸವ ಹಾಸನಾಂಬೆಯ ದೇವಾಲಯದ ದ್ವಾರದಿಂದ ಒಳ ಪ್ರವೇಶಿಸಿದ ತಕ್ಷಣವೇ ಮೊದಲು ನೋಡಬಹುದಾದ ಸಿದ್ದೇಶ್ವರ ಸ್ವಾಮಿಯ ದೇವಾಲಯವು ಸುಂದರ ರೂಪದಲ್ಲಿದೆ. ಈ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿಯು ಲಿಂಗರೂಪದಲ್ಲಿ ಇಲ್ಲ, ಈ ಉದ್ಭವ ಮೂರ್ತಿಯು ಅರ್ಜುನನಿಗೆ ಈಶ್ವರನು ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ಉದ್ಭವಮೂರ್ತಿಯ ಹಣೆಯ ಮೇಲೆ ಜಿನುಗುವ ರೂಪದಲ್ಲಿರುವ ಗಂಗೆಯನ್ನು ಪ್ರತಿನಿತ್ಯವೂ ನೋಡಬಹುದಾಗಿದೆ. ಪ್ರತಿ ವರ್ಷ ಈ ದೇವಾಲಯದ ಉತ್ಸವ ಮೂರ್ತಿಗೆ ಅಮಾವಾಸ್ಯೆಯಂದು ಉತ್ಸವ ಮತ್ತು ಬಲಿಪಾಡ್ಯಮಿ, ಚಂದ್ರಮಂಡಲ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಎಲ್ಲ ದೇವಾಲಯಗಳ ಈಗಿನ ಸುಂದರ ರೂಪಕ್ಕೆ ಹಾಸನದ ಪಟೇಲ ವಂಶಸ್ಥರು ಸೇವೆ ಸಲ್ಲಿಸುತ್ತಾರೆ.

(ಆಧಾರ : ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ – ೨೦೧೩ ಇದರ ಕರಪತ್ರದಿಂದ)