Diwali 2023 : ಸಹೋದರ ಬಿದಿಗೆ (ಯಮದ್ವಿತೀಯಾ)

ಕಾರ್ತಿಕ ಶುಕ್ಲ ಬಿದಿಗೆ (೧೫ ನವೆಂಬರ್‌ ೨೦೨೩) ಈ ತಿಥಿಯು ಯಮದ್ವಿತೀಯಾ ಹೆಸರಿನಿಂದ ಪ್ರಚಲಿತವಾಗಿದೆ. ಪುರಾಣ ಪ್ರಚಲಿತ ಕಥೆಯ ಪ್ರಕಾರ, ಈ ದಿನ ಮೃತ್ಯು ದೇವತೆ ಯಮರಾಜನು ತನ್ನ ಸಹೋದರಿ ಯಮುನಾ ದೇವಿಯ ಮನೆಗೆ ಹೋಗಿ ಆಕೆಗೆ ವಸ್ತ್ರ ಮತ್ತು ಆಭರಣಗಳ ಉಡುಗೊರೆ ನೀಡಿ ಬಹಳ ಆನಂದದಿಂದ ಭೋಜನ ಮಾಡಿದನು. ಶಾಸ್ತ್ರಜ್ಞರು ಈ ಕೌಟುಂಬಿಕ ವಿಧಿಗೆ ಧರ್ಮದ ಜೋಡಣೆಯನ್ನು ನೀಡಿ ಈ ದಿನವನ್ನು ಸಹೋದರ ಬಿದಿಗೆ ಎಂದು ಆಚರಿಸುವುದು ಸಹೋದರ ಸಹೋದರಿಯರ ಶ್ರೇಷ್ಠ ಕರ್ತವ್ಯವಾಗಿದೆ ಎಂದು ನಿರ್ಧರಿಸಿದರು. ಭಾರತದಲ್ಲಿ ಎಲ್ಲೆಡೆ ಈ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಸಹೋದರಿಯು ಸಹೋದರನನ್ನು ತನ್ನ ಮನೆಗೆ ಕರೆದು ಆತನಿಗೆ ಮಂಗಳ ಸ್ನಾನ ಮಾಡಿಸುತ್ತಾಳೆ. ಭಕ್ಷಭೋಜ್ಯ ಗಳನ್ನು ಸಿದ್ಧಪಡಿಸಿ ಸ್ವಾದಿಷ್ಟ ಭೋಜನವನ್ನು ಬಡಿಸುತ್ತಾಳೆ ಮತ್ತು ಆನಂದ ವ್ಯಕ್ತಪಡಿಸುತ್ತಾಳೆ. ಸಹೋದರನೂ ಕೂಡ ಆಕೆಗೆ ಉಡುಗೊರೆಯನ್ನು ನೀಡುತ್ತಾನೆ. ಸಹೋದರನು ಶ್ರೀಮಂತನಾಗಿರಲಿ ಅಥವಾ ಬಡವ ನಾಗಿರಲಿ, ಅವನನ್ನು ಮನೆಗೆ ಕರೆದು ಸತ್ಕರಿಸಿ ಆನಂದ ಪಡೆಯುವುದು ಸಹೋದರಿಯ ಉದ್ದೇಶವಾಗಿರುತ್ತದೆ. ಹಾಗೆಯೇ ಸಹೋದರಿಯು ಶ್ರೀಮಂತಳಾಗಿರಲಿ ಅಥವಾ ಬಡವಳಾಗಿರಲಿ ಆಕೆಯ ಮನೆಗೆ ಹೋಗಿ, ಆಕೆಯ ಸುಖದುಃಖಗಳನ್ನು ವಿಚಾರಿಸ ಬೇಕೆಂದು ಸಹೋದರನಿಗೆ ಅನಿಸುತ್ತದೆ. ಇದು ಭಾವಬಿದಿಗೆಯ ಮಹತ್ವವಾಗಿದೆ. ಸಹೋದರ ಸಹೋದರಿಯ ಆತ್ಮೀಯತೆ ಈ ದಿನ ಎಲ್ಲರಿಗೂ ಅರಿವಿಗೆ ಬರುತ್ತದೆ. ಸಾಮಾನ್ಯ ವಾಗಿ ವ್ಯವಹಾರದಲ್ಲಿ ಒಂದಷ್ಟು ಭಿನ್ನಾಭಿಪ್ರಾಯಗಳು ಬಂದರೂ, ಸಿಟ್ಟು ಲೋಭದ ಪ್ರಸಂಗಗಳು ಬಂದರೂ, ಈ ದಿನ ಮಾತ್ರ ಮನಸ್ಸಿನಲ್ಲಿರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಸಹೋದರ ಸಹೋದರಿಯರು ಆನಂದದಲ್ಲಿ ಇರುತ್ತಾರೆ. ಯಾರಿಗೆ ಸ್ವಂತ ಸಹೋದರಿಯರಿಲ್ಲವೋ ಅವರು ದೊಡ್ಡಪ್ಪನ ಮಗಳು, ಮಾವನ ಮಗಳು ಅಥವಾ ಸೋದರತ್ತೆಯ ಮಗಳಿಂದ ಆರತಿ ಮಾಡಿಸಿಕೊಂಡು ಸಹೋದರಬಿದಿಗೆಯನ್ನು ಆಚರಿಸುತ್ತಾರೆ. (ಆಧಾರ : ದಿನ ವಿಶೇಷ, ಭಾರತೀಯ ಇತಿಹಾಸದ ತಿಥಿ, ವಾರದರ್ಶನ ಲೇಖಕರು : ಪ್ರಹ್ಲಾದ ನರಹರಿ ಜೋಶಿ)