ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಆಶ್ವಯುಜ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದಿನ ಎನ್ನುವುದೇ ಯೋಗ್ಯವಾಗಿದೆ ಲಕ್ಷ್ಮೀಪೂಜೆ ಯಂದು (ನವೆಂಬರ್ ೧೨) ‘ಪ್ರಾತಃಕಾಲದಲ್ಲಿ ಮಂಗಲ ಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣ ಶ್ರಾದ್ಧಹಾಗೂ ಬ್ರಾಹ್ಮಣ ಭೋಜನ ಮತ್ತು ಪ್ರದೋಷ ಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆ ಮಾಡುತ್ತಾರೆ. ಲಕ್ಷ್ಮೀಯ ಪೂಜೆ ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳಕಮಲ ಅಥವಾ ಸ್ವಸ್ತಿಕ ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪ ಕುಬೇರನ ಪ್ರತಿಮೆ ಇಡುತ್ತಾರೆ. ಲವಂಗ, ಏಲಕ್ಕಿ, ಸಕ್ಕರೆಯಿಂದ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯ ಅರ್ಪಿಸುತ್ತಾರೆ.