ಮನುಷ್ಯನು ಸಣ್ಣ-ಪುಟ್ಟ ಪ್ರವಾಸಕ್ಕೆ ಹೋಗುವುದಿದ್ದರೂ ಅವನು ಮೊದಲಿಂದಲೇ ತನ್ನೊಂದಿಗೆ ಒಯ್ಯುವ ಹೋಗಬೇಕಾದ ವಸ್ತು, ಬಟ್ಟೆ, ಹಣ ಇತ್ಯಾದಿಗಳ ಸಿದ್ಧತೆ ಮಾಡಿಕೊಳ್ಳುತ್ತಾನೆ; ಆದರೆ ಕೊನೆಗೆ ಅನಂತಕ್ಕೆ ಹೋಗುವ ಪ್ರವಾಸದ ಸಿದ್ಧತೆಯನ್ನು ಮಾತ್ರ ಎಂದಿಗೂ ಮಾಡುವುದಿಲ್ಲ. ಕೊನೆಗೆ ಅಂದರೆ ತನ್ನ ಸಾವಿನ ಸಮಯದಲ್ಲಿ, ಮೃತ್ಯುವಿನ ಸಮಯದಲ್ಲಿ ಮತ್ತು ಅನಂತದಲ್ಲಿ ಹೋಗುವುದು ಎಂದರೆ ಭಗವಾನ ವಿಷ್ಣುವಿನೊಂದಿಗೆ, ಈಶ್ವರನೊಂದಿಗೆ ಏಕರೂಪವಾಗುವುದು. ಮಹಾಭಾರತದ ವಿಷ್ಣುಸಹಸ್ರನಾಮಸ್ತೋತ್ರದಲ್ಲಿ ೧೦೮ ನೇ ಶ್ಲೋಕದಲ್ಲಿ ವಿಷ್ಣುವಿನ ‘ಅನಂತ’ ಈ ಹೆಸರಿನ ಉಲ್ಲೇಖವಿದೆ.
ಮೃತ್ಯುವಿನ ನಂತರ ಪುನರ್ಜನ್ಮ ಬೇಡವಾಗಿದ್ದರೆ ಆ ಅನಂತನೊಂದಿಗೆ, ಈಶ್ವರನೊಂದಿಗೆ ಏಕರೂಪವಾಗಬೇಕು. ಅದಕ್ಕಾಗಿನ ಪ್ರವಾಸದ ಸಿದ್ಧತೆ ಎಂದರೆ ಚಿತ್ತವನ್ನು ಶುದ್ಧ ಮಾಡಿಕೊಂಡು ಶ್ರದ್ಧೆ ಮತ್ತು ವಿಶ್ವಾಸದಿಂದ ಈಶ್ವರನ ಭಾವಪೂರ್ಣ ಭಕ್ತಿ, ಈ ಭಕ್ತಿಮಾರ್ಗದ ಸಾಧನೆಯನ್ನು ಮಾಡಬೇಕು. ಅನಂತದಲ್ಲಿ ಹೋಗುವ ಇನ್ನೊಂದು ಉಪಾಯವಿದೆ. ‘ಸತ್ಯಂ ಜ್ಞಾನಂ ಅನಂತಂ ಬ್ರಹ್ಮ’ ಹೀಗೆ ತೈತ್ತಿರಿಯೋಪನಿಷದ್‌ನಲ್ಲಿ (ಬ್ರಹ್ಮಾನಂದವಲ್ಲೀ ೨ ಅನುವಾಕ ೧ ಮಂತ್ರ ೧) ಹೇಳಲಾಗಿದೆ. ಅಂದರೆ ಬ್ರಹ್ಮನು ವಾಸ್ತವದಲ್ಲಿಯೂ ಇದ್ದಾನೆ, ಜ್ಞಾನಮಯನಾಗಿ ದ್ದಾನೆ ಮತ್ತು ಅನಂತ ಅಂದರೆ ಸ್ಥಳ, ಕಾಲ ಮತ್ತು ವಸ್ತುಗಳ ಮಿತಿ ಇಲ್ಲದ ಅಂತಹೀನನಾಗಿದ್ದಾನೆ. ಇಂತಹ ಅನಂತ ಬ್ರಹ್ಮನಲ್ಲಿ ವಿಲೀನವಾಗಬೇಕಿದ್ದರೆ ಅವನ ಸ್ವರೂಪವನ್ನು ತಿಳಿದುಕೊಳ್ಳುವುದು ಮತ್ತು ಆ ಸ್ವರೂಪದಲ್ಲಿ ವಿಲೀನವಾಗಲು ಬೇಕಾದ ಉಪಾಯಗಳನ್ನು ತಿಳಿದುಕೊಂಡು ಅದಕ್ಕನುಸಾರ ಆಚರಣೆ ಮಾಡುವುದು, ಇದು ಆ ಪ್ರಯಾಣದ ಸಿದ್ಧತೆ ಎಂದರೆ ಜ್ಞಾನಮಾರ್ಗದ ಸಾಧನೆಯನ್ನು ಮಾಡಬೇಕು.
ಈ ರೀತಿಯ ಸಿದ್ಧತೆ ಆಗದಿದ್ದರೂ ಪ್ರಯಾಣವನ್ನು ಮಾಡಲೇಬೇಕಿದೆ. ಪುನಃ ಪುನಃ ಜನಿಸುವುದು ಮತ್ತು ಪುನಃ ಪುನಃ ಸಾಯುವುದು, ಈ ರೀತಿ ಜೀವಾತ್ಮಾಗಳ, ಸಂಖ್ಯೆಗಳಿಗೆ ಕೊನೆ ಇರದ, ಅನಂತದ ಪ್ರಯಾಣ ನಡೆಯುತ್ತಲೇ ಇರುತ್ತದೆ. ಪುನಃ ಪುನಃ ಜನ್ಮ ಏಕೆ ಬೇಡ ? ಏಕೆಂದರೆ ನಾವು ಜೀವನ ದಲ್ಲಿ ಹೆಜ್ಜೆಹೆಜ್ಜೆಗೂ ದುಃಖವನ್ನು ಭೋಗಿಸುತ್ತಿರುತ್ತೇವೆ. ಭಗವಾನ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಪುನರ್ಜನ್ಮಕ್ಕೆ ‘ದುಃಖಾಲಯಮಶಾಶ್ವತಮ್’ (ಅ.೮ ಶ್ಲೋಕ ೧೫) ಅಂದರೆ ‘ದುಃಖದ ಸ್ಥಾನ ಮತ್ತು ಅನಿತ್ಯ’ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಓರ್ವ ಸಂತ ಕವಯಿತ್ರಿಯು, ‘ಸುಖವು ಸಾಸಿವೆಯಷ್ಟು ದುಃಖ ಪರ್ವತದಷ್ಟು’ ಎಂದು ಹೇಳಿದ್ದಾರೆ. ಈ ದುಃಖಗಳ ಪುನರಾವೃತ್ತಿಯನ್ನು ತಪ್ಪಿಸಲು ಯಾವುದಾದರೂ ಸಾಧನೆಯಿಂದ ಅಂತಿಮ ಪ್ರವಾಸದ ಸಿದ್ಧತೆಯನ್ನು ಮಾಡಿದರೆ ಅನಂತದಲ್ಲಿ ವಿಲೀನಗೊಂಡು ಜನ್ಮ-ಮರಣದ ಪ್ರವಾಸವು ಕೊನೆಗೊಳ್ಳುವುದು.
– ಅನಂತ ಆಠವಲೆ (೧೩.೪.೨೦೨೩)