ಅಖಂಡ ಭಾರತದ ಶಿಲ್ಪಿ : ಉಕ್ಕಿನ ಮನುಷ್ಯ ಭಾರತರತ್ನ ಸರದಾರ ವಲ್ಲಭಭಾಯಿ ಪಟೇಲ !

೩೧ ಅಕ್ಟೋಬರ ೨೦೨೩ ರಂದು ಸರದಾರ ವಲ್ಲಭಭಾಯಿ ಪಟೇಲರ ಜಯಂತಿ ಇದೆ. ಅದರ ನಿಮಿತ್ತ…

ಸರದಾರ ವಲ್ಲಭಭಾಯಿ ಪಟೇಲ

೧. ಜನ್ಮ ಮತ್ತು ಶಿಕ್ಷಣ

‘ಸರದಾರ ವಲ್ಲಭಭಾಯಿ ಪಟೇಲರು ೩೧.೧೦.೧೮೭೫ ರಂದು ಗುಜರಾತದ ಖೇಡಾ ಜಿಲ್ಲೆಯ ಕರಮಸದ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಝವೇರಭಾಯಿ ಪಟೇಲರು ಸಾಮಾನ್ಯ ಕೃಷಿಕರಾಗಿದ್ದರು ಹಾಗೂ ಅವರ ತಾಯಿ ಲಾಡಬಾಯಿ ಧರ್ಮನಿಷ್ಠಳಾಗಿದ್ದಳು. ಅವರ ಪ್ರಾಥಮಿಕ ಶಿಕ್ಷಣವು ಅವರ ಊರಲ್ಲಿ ಮತ್ತು ಉಚ್ಚಶಿಕ್ಷಣ ನಡಿಯಾದ ಮತ್ತು ಬಡೋದಾದಲ್ಲಿ ಆಯಿತು. ಅನಂತರ ಅವರು ಸಲಹೆಗಾರರ ಹುದ್ದೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

೨. ಸತ್ಯನಿಷ್ಠ, ನಿರ್ಭೀತ ಹಾಗೂ ಕರ್ತವ್ಯನಿಷ್ಠ

ಅ. ಸರದಾರ ಪಟೇಲರು ವಿದ್ಯಾರ್ಥಿ ಜೀವನದಿಂದಲೂ ಸತ್ಯನಿಷ್ಠ, ನಿರ್ಭೀತ ಹಾಗೂ ಕರ್ತವ್ಯನಿಷ್ಠರಾಗಿದ್ದರು. ನಡಿಯಾದ ಪಾಠಶಾಲೆಯ ಓರ್ವ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ಅಂಗಡಿಯಿಂದಲೇ ಪುಸ್ತಕಗಳನ್ನು ಖರೀದಿಸಬೇಕೆಂದು ಕಡ್ಡಾಯಗೊಳಿಸುತ್ತಿದ್ದರು. ಆಗ ವಲ್ಲಭಭಾಯಿ ಯವರು ಅದನ್ನು ವಿರೋಧಿಸಿದರು ಹಾಗೂ ವಿದ್ಯಾರ್ಥಿ ಗಳನ್ನು ಆ ಶಿಕ್ಷಕರ ಮುಷ್ಟಿಯಿಂದ ಮುಕ್ತಗೊಳಿಸಿದರು.
ಆ. ಅವರು ಗೋಧ್ರಾದ ಮುಖ್ಯ ಸಲಹೆಗಾರರಾಗಿರುವಾಗ ಅವರಿಗೆ ತಮ್ಮ ಪತ್ನಿಯ ನಿಧನದ ವಾರ್ತೆ ಬಂದಿತು. ಆಗ ಅವರು ಒಂದು ಮಹತ್ವದ ಕೆಲಸದಲ್ಲಿ ಮಗ್ನರಾಗಿದ್ದರು. ಅವರು ತಂತಿವರ್ತಮಾನ (ಟೆಲಿಗ್ರಾಮ್) ಓದಿ ಹಾಗೆಯೆ ಮೇಜಿನ ಮೇಲಿಟ್ಟರು. ಅವರ ಕೆಲಸ ಪೂರ್ಣವಾದ ನಂತರವೆ ಅವರು ನಿಧನದ ವಿಷಯವನ್ನು ಇತರರಿಗೆ ಹೇಳಿದರು.

೩. ವಕೀಲಿ ವೃತ್ತಿಯನ್ನು ಬಿಟ್ಟು ಜೀವನವನ್ನು ದೇಶಸೇವೆಗಾಗಿ ಸಮರ್ಪಿಸುವುದು

ಸರದಾರ ಪಟೇಲರು ಲಂಡನ್ನಿನ ವಿಶ್ವವಿದ್ಯಾಲಯದಿಂದ ವಕೀಲಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾದರು. ಅನಂತರ ಅವರು ಅಹಮದಾಬಾದದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ೧೯೧೬ ರಲ್ಲಿ ಗೋಧ್ರಾದಲ್ಲಿ ನಡೆದ ಆಂದೋಲನ ಮತ್ತು ೧೯೧೮ ರ ‘ಖೇಡಾ ಸತ್ಯಾಗ್ರಹ’ದಲ್ಲಿ ಅವರು ಸಕ್ರಿಯವಾಗಿ ಭಾಗ ವಹಿಸಿದ್ದರು. ಅವರು ೧೯೨೧ ರಲ್ಲಿ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಳ್ಳಲು ತಮ್ಮ ವಕೀಲಿ ವೃತ್ತಿಯನ್ನು ಬಿಟ್ಟರು. ದೇಶಕ್ಕಾಗಿ ಅವರು ಹಲವಾರು ಬಾರಿ ಸೆರೆಮನೆಗೂ ಹೋಗಿದ್ದರು. ಅವರ ನೇತೃತ್ವದಿಂದ ಪ್ರಭಾವಿತರಾಗಿ ಬಾರಡೋಲಿಯ ಮಹಿಳೆಯರು ಅವರಿಗೆ ‘ಸರದಾರ’ ಎಂಬ ಬಿರುದನ್ನು ನೀಡಿದರು. ೧೯೩೧ ರಲ್ಲಿ ಕರಾಚಿ ಅಧಿವೇಶನದಲ್ಲಿ ಅವರನ್ನು ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ಮಾಡಲಾಯಿತು.

೪. ಹಿಂದೂಸ್ಥಾನದ ಅರ್ಧಸ್ವಾಯತ್ತ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನೀಕರಣ ಮಾಡುವುದು : ೧೯೪೬ ರಲ್ಲಿ ಸ್ಥಾಪನೆಯಾದ ಅಂದಿನ ಬ್ರಿಟಿಷ ಸರಕಾರದಲ್ಲಿ ಸರದಾರ ಪಟೇಲರು ಭಾರತದ ಗೃಹಮಂತ್ರಿ ಗಳಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯವನ್ನು ನೀಡುವ ಸಮಯದಲ್ಲಿ ಆಂಗ್ಲರು ಅರ್ಧಸ್ವಾಯತ್ತೆ ಇರುವ ಸಂಸ್ಥಾನಿಕರಿಗೆ ಭಾರತ ಅಥವಾ ಪಾಕಿಸ್ತಾನದಲ್ಲಿ ವಿಲೀನವಾಗುವ ಅಥವಾ ಸ್ವತಂತ್ರವಾಗಿರುವ ಅಧಿಕಾರವನ್ನು ನೀಡಿದ್ದರು. ಅದರಿಂದ ದೇಶದ ಅಖಂಡತೆಯು ಸಂಕಟಕ್ಕೀಡಾಗಿತ್ತು. ಇಂತಹ ಸ್ಥಿತಿಯಲ್ಲಿ ಸರದಾರ ಪಟೇಲರು ತಮ್ಮ ಕುಶಾಗ್ರ ಬುದ್ಧಿಯಿಂದ ಸಂಸ್ಥಾನಿಕರನ್ನು ಭಾರತದಲ್ಲಿ ವಿಲೀನ ಮಾಡಿಕೊಂಡರು. ನಂತರ ಹೈದ್ರಾಬಾದ ಮತ್ತು ಜುನಾಗಡದಲ್ಲಿನ ಸಂಸ್ಥಾನಿಕರು ಪಾಕಿಸ್ತಾನದಲ್ಲಿ ವಿಲೀನವಾಗಲು ಆಗ್ರಹಿಸುತ್ತಿದ್ದರು. ಆಗ ಸರದಾರ ಪಟೇಲರು ಅವರ ವಿರುದ್ಧ ಸೇನಾ ಕಾರ್ಯಾಚರಣೆ ಮಾಡಿ ಅವರನ್ನು ಭಾರತದಲ್ಲಿ ವಿಲೀನಗೊಳಿಸಿಕೊಂಡರು. ಭಾರತದ ಐಕ್ಯತೆ ಹಾಗೂ ಅಖಂಡತೆಗಾಗಿ ಯೋಗದಾನವನ್ನು ನೀಡಿದ ಸರದಾರ ವಲ್ಲಭಭಾಯಿ ಪಟೇಲರನ್ನು ‘ಉಕ್ಕಿನ ಮನುಷ್ಯ’ ಎಂದು ಸಂಬೋಧಿಸಲಾಗುತ್ತದೆ. ಕಾಶ್ಮೀರದ ವಿಷಯವನ್ನು ಪಂ. ನೆಹರು ತಮ್ಮ ವಶದಲ್ಲಿಟ್ಟುಕೊಂಡರು. ಆದ್ದರಿಂದ ಅದು ಇಂದಿನ ವರೆಗೂ ಭಾರತಕ್ಕೆ ತಲೆನೋವಿನ ವಿಷಯವಾಗಿದೆ. ೫.೮.೨೦೧೬ ರಂದು ಇಂದಿನ ಕೇಂದ್ರ ಸರಕಾರ ಕಲಮ್‌ ೩೭೦ (ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಮ್) ರದ್ದುಪಡಿಸಿ ಕಾನೂನುರೀತ್ಯಾ ಕಾಶ್ಮೀರವನ್ನು ಭಾರತೀಯ ಗಣರಾಜ್ಯದಲ್ಲಿ ವಿಲೀನಗೊಳಿಸಿತು.

೫. ಸೋಮನಾಥ ಮಂದಿರದ ಜೀರ್ಣೋದ್ಧಾರ

ಸರದಾರ ಪಟೇಲರು ರಾಷ್ಟ್ರಗೌರವದ ಪ್ರತೀಕವಾಗಿರುವ ಪ್ರಾಚೀನ ಸೋಮನಾಥ ಜ್ಯೋತಿರ್ಲಿಂಗ ಮಂದಿರವನ್ನು ಜೀರ್ಣೋದ್ಧಾರ ಮಾಡಲು ನಿರ್ಧರಿಸಿ ಮಂದಿರದ ಪುನರ್ನಿರ್ಮಾಣವನ್ನು ಆರಂಭಿಸಿದರು. ಅವರ ಮೃತ್ಯುವಿನ ನಂತರ ಮಂದಿರದ ನಿರ್ಮಾಣ ಕಾರ್ಯ ಪೂರ್ಣವಾಯಿತು. ೧೧.೫.೧೯೫೧ ರಂದು ಭಾರತದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ಅದರ ಅಡಿಪಾಯವನ್ನು ಹಾಕಲಾಯಿತು.

೬. ನಿಧನ ಹಾಗೂ ನಿಧನದ ನಂತರ ‘ಭಾರತರತ್ನ’ ಪ್ರಶಸ್ತಿ

೧೫.೧೨.೧೯೫೦ ರಲ್ಲಿ ಅಖಂಡ ಭಾರತದ ಶಿಲ್ಪಿಯಾಗಿದ್ದ ಸರದಾರ ಪಟೇಲರ ನಿಧನವಾಯಿತು. ಸಂಪೂರ್ಣ ಭಾರತ ದುಃಖ ಸಾಗರದಲ್ಲಿ ಮುಳುಗಿತು. ಭಾರತ ಸರಕಾರ ೧೯೯೧ ರಲ್ಲಿ ಅವರಿಗೆ ಮರಣೋತ್ತರ ‘ಭಾರತರತ್ನ’ ಎಂಬ ಸರ್ವೋಚ್ಚ ನಾಗರಿಕ ಪುರಸ್ಕಾರವನ್ನು ನೀಡಿ ಸನ್ಮಾನಿಸಿತು.’

– ವಿಜಯಸಿಂಹ ಮಾಲೀ, ಪ್ರಧಾನಾಚಾರ್ಯ ಸಹಸಂಪಾದಕ (ಆಧಾರ : ‘ಗೀತಾ ಸ್ವಾಧ್ಯಾಯ’, ವರ್ಷ ೧೦, ಸಂಚಿಕೆ ೭, ಅಕ್ಟೋಬರ್‌ ೨೦೧೯)