’ಎಲ್ಲ ಪಾಲಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರುತ್ತಾರೆ; ಆದರೆ ಕೆಲವೊಮ್ಮೆ ಅಜ್ಞಾನದಿಂದ ಅಥವಾ ತಿಳಿಯದೆ ನಮ್ಮಿಂದಾದ ತಪ್ಪುಗಳು ನಮ್ಮ ಮಕ್ಕಳ ಆರೋಗ್ಯಕ್ಕೆ ಸಂಕಟವನ್ನು ತರಬಹುದು. ಈ ವಾರದ ಲೇಖನದಲ್ಲಿ ನಾವು ನಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಏನು ಮಾಡಬೇಕು ? ಎಂಬುದನ್ನು ನೋಡುವವರಿದ್ದೇವೆ.
೧. ’ಮಗು ನೋಡಲು ದುಂಡುದುಂಡಾಗಿದ್ದರೆ, ಅದರ ಆರೋಗ್ಯ ಒಳ್ಳೆಯದಿರುತ್ತದೆ’, ಎಂಬುದು ತಪ್ಪು !
’ನಾವು ಒಬ್ಬರನೊಬ್ಬರು ಭೇಟಿಯಾದಾಗ ನಿಮ್ಮ ಆರೋಗ್ಯ ಹೇಗಿದೆ ?’, ಎಂದು ಕೇಳುತ್ತೇವೆ. ಎದುರಿಗಿನ ವ್ಯಕ್ತಿಯು ನೋಡಲು ತೆಳ್ಳಗಿದ್ದರೆ, ’ಎಲ್ಲ್ಲಾ ಚೆನ್ನಾಗಿದೆ ಅಲ್ವಾ ? ನಿಮ್ಮ ತೂಕ ಕಡಿಮೆ ಆಗಿದೆ ಅದಕ್ಕೆ ಕೇಳಿದೆ’ ಎನ್ನುತ್ತಾರೆ. ಚಿಕ್ಕಮಕ್ಕಳ ಬಗ್ಗೆಯೂ ಅದೇ ರೀತಿ ಇರುತ್ತದೆ. ಮಗು ನೋಡಲು ಸ್ವಲ್ಪ ತೆಳ್ಳಗಿದ್ದರೆ ತಾಯಿ ಮತ್ತು ಕುಟುಂಬದ ಎಲ್ಲ ಸದಸ್ಯರಿಗೆ ಒಂದೇ ಚಿಂತೆ, ಮಗು ಶಾರೀರಿಕವಾಗಿ ಹೇಗೆ ಚೆನ್ನಾಗಿರಬಹುದು ? ಆ ಮಗು ಹೇಗೆ ದುಂಡುದುಂಡಾಗಬಹುದು ? ಇದಕ್ಕಾಗಿ ಮಕ್ಕಳ ಮೇಲೆ ಲಭ್ಯವಿರುವ ಎಲ್ಲ ಪ್ರಯೋಗಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ, ಮಕ್ಕಳು ಶಕ್ತಿವಂತರು, ಚೆನ್ನಾಗಿ ಆಡುತ್ತಿದ್ದರೆ, ಅನಾರೋಗ್ಯದ ಪ್ರಮಾಣ ಕಡಿಮೆ ಇದ್ದರೆ, ಹಸಿವಾದಾಗ ಸರಿಯಾಗಿ ಊಟ ಮಾಡುತ್ತಿದ್ದರೆ, ಕೇವಲ ತೆಳ್ಳಗಿದ್ದಾನೆಂದು ಕಾಳಜಿ ಮಾಡುವ ಆವಶ್ಯಕತೆ ಇರುವುದಿಲ್ಲ. ಯಾವಾಗ ಕಾಳಜಿ ಮಾಡಬೇಕು ? ಮಗು ಸತತವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಸರಿಯಾಗಿ ಊಟ ಮಾಡದಿದ್ದರೆ, ಕಿರಿಕಿರಿ ಮಾಡುತ್ತಿದ್ದರೆ, ಆಟವಾಡಲು ಇಷ್ಟವಿಲ್ಲದಿದ್ದರೆ ಮಾತ್ರ ವೈದ್ಯಕೀಯ ಸಹಾಯವನ್ನು ಪಡೆಯ ಬೇಕು; ಆದರೆ ’ಕೇವಲ ತೆಳ್ಳಗಿದ್ದಾನೆ’ ಎಂದು ಅವನಿಗೆ ಅತಿಯಾಗಿ
ತಿನ್ನಲು ಕೊಡುವ ತಪ್ಪನ್ನು ಮಾಡಬಾರದು. ಅನೇಕ ಪಾಲಕರು ಮಕ್ಕಳ ಆರೋಗ್ಯ ಸುಧಾರಿಸಬೇಕೆಂದು ಸಾಕಷ್ಟು ಒಣಹಣ್ಣು ಗಳನ್ನು (ಬಾದಾಮಿ ಗೋಡಂಬಿ ಇತ್ಯಾದಿ), ಮೇಲಿಂದ ಮೇಲೆ ಹಣ್ಣುಗಳನ್ನು ತಿನ್ನಲು ಕೊಡುತ್ತಾರೆ, ಅದರ ಮೇಲೆ ’ಹಾಲು ಸಹ ಕುಡಿಯಲೇ ಬೇಕು, ಊಟದಲ್ಲಿ ತಟ್ಟೆ ಸ್ವಚ್ಛವಾಗಬೇಕು’, ಎಂದು ಒತ್ತಾಯಿಸುತ್ತಾರೆ. ಈ ಒತ್ತಾಯದಿಂದ ಮಕ್ಕಳ ಆರೋಗ್ಯ ಸುಧಾರಿಸುವುದಿಲ್ಲ, ತದ್ವಿರುದ್ಧ ಜೀರ್ಣಶಕ್ತಿ ಹಾಳಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
೨. ಮಕ್ಕಳ ಪಾಲನೆ-ಪೋಷಣೆಯ ಬಗ್ಗೆ ತಾಯಿ ಜಾಗರೂಕಳಾಗಿರುವುದು ತುಂಬಾ ಮಹತ್ವದ್ದಾಗಿದೆ !
ಮಕ್ಕಳು ಶಾರೀರಿಕವಾಗಿ ತೆಳ್ಳಗಿದ್ದರೆ, ಆ ಮಗುವಿನ ತಾಯಿಗೆ ಕುಟುಂಬದ ಎಲ್ಲ ಸದಸ್ಯರು ಅನೇಕ ಪರ್ಯಾಯ ಗಳನ್ನು ಸೂಚಿಸುತ್ತಾರೆ. ಎಲ್ಲರ ಒತ್ತಡದಿಂದ ತಾಯಿ ತನ್ನ ಮಗುವಿನ ಮೇಲೆ ಎಲ್ಲ ಪ್ರಯೋಗಗಳನ್ನು ಮಾಡಲು ಪ್ರಾರಂಭಿಸುತ್ತಾಳೆ. ’ಕಾಗೆ-ಗುಬ್ಬಿಯ ಕಥೆಯನ್ನು ಹೇಳುತ್ತ ಊಟ ಮಾಡಿಸುವುದು, ಕೆಲವೊಮ್ಮೆ ಮೊಬೈಲ್‌ನಲ್ಲಿ ಹಾಡು ಗಳನ್ನು ಹಾಕಿ ಮಗು ಅದರಲ್ಲಿ ಮೈಮರೆತಾಗ ತಾಯಿ ಆ ತಟ್ಟೆಯಲ್ಲಿ ನೀಡಿರುವುದನ್ನೆಲ್ಲ ಅವನಿಗೆ ತಿನ್ನಿಸುತ್ತಾಳೆ. ಕೇವಲ ಮಗು ನೋಡಲಿಕ್ಕೆ ತೆಳ್ಳಗಿದೆ ಎಂದು ಈ ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಪ್ರತಿಯೊಬ್ಬ ತಾಯಿಗೆ ತನ್ನ ಮಗುವಿನ ಆರೋಗ್ಯ ಹೇಗಿದೆ, ಅದರ ಅರಿವು ನಿಸರ್ಗ ನಿಯಮದಂತೆ ಇರುತ್ತದೆ ಅಥವಾ ಅವಳು ಅನುಭವದಿಂದ ಕಲಿಯುತ್ತಾಳೆ. ’ತನ್ನ ಮಗುವಿಗೆ ಏನು ಆವಶ್ಯಕವಾಗಿದೆ ? ಯಾವುದು ಘಾತಕವಾಗಿದೆ ?’, ಎಂಬುದರ ಬಗ್ಗೆ ಪ್ರತಿಯೊಬ್ಬ ತಾಯಿ ಜಾಗರೂಕವಾಗಿದ್ದು ಮತ್ತು ಯೋಗ್ಯ ಅಧ್ಯಯನ ಮಾಡಿ ಅದರಂತೆ ಆಚರಣೆಯನ್ನು ಮಾಡಬೇಕು. ಸಮಯ ಬಂದಾಗ ತಜ್ಞರ ಸಲಹೆಯನ್ನು ಪಡೆಯಬೇಕು. ಇತರರು ಸೂಚಿಸಿದ ಪರ್ಯಾಯ ಅವರ ಮಕ್ಕಳಿಗೆ ಅನ್ವಯವಾಯಿತು ಎಂದು ನಮ್ಮ ಮಕ್ಕಳಿಗೆ ಅನ್ವಯವಾಗುತ್ತದೆ, ಎಂದೇನಿಲ್ಲ; ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಪ್ರಕೃತಿ ಬೇರೆ ಬೇರೆ ಇರುತ್ತದೆ; ಆದ್ದರಿಂದ ಒಂದೇ ನಿಯಮ ಎಲ್ಲರಿಗೂ ಅನ್ವಯಿಸುವುದಿಲ್ಲ. ಆಗ ಇತರರ ಒತ್ತಡದಿಂದ ತಾಯಿ ತನ್ನ ಮಕ್ಕಳ ಮೇಲೆ ಪ್ರಯೋಗಗಳನ್ನು ಮಾಡದೇ ಯಾವುದು ಯೋಗ್ಯವಾಗಿದೆ, ಎಂಬುದನ್ನು ವೈದ್ಯರಿಂದ ತಿಳಿದುಕೊಂಡು ಅದರಂತೆ ಕೃತಿ ಯನ್ನು ಮಾಡಬೇಕು.
೩. ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಬಾರದು
ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ತುಲನೆ ಮಾಡುವುದು ! ’ಅವನು ನೋಡು ಹೇಗೆ ೨ ಚಪಾತಿಗಳನ್ನು ತಿನ್ನುತ್ತಾನೆ, ನೀನು ಸಹ ಎರಡು ಚಪಾತಿಗಳನ್ನು ತಿನ್ನಬೇಕು’, ಅಥವಾ ’ಅವನು ನೋಡು ಹೇಗೆ ದುಂಡುದುಂಡಾಗಿದ್ದಾನೆ. ನೀನು ಹಾಗೆ ಯಾವಾಗ ಆಗುವೆ ?’, ಹೀಗೆ ಒಂದಲ್ಲ ಅನೇಕ ಉದಾಹರಣೆಗಳನ್ನು ಹೇಳಬಹುದು. ಈ ತುಲನೆಯಿಂದಾಗಿ ನಾವು ನಮ್ಮ ಮಕ್ಕಳ ಆರೋಗ್ಯದ ತೊಂದರೆಗಳನ್ನು ಅನಾವಶ್ಯಕವಾಗಿ ಹೆಚ್ಚಿಸುತ್ತೇವೆ. ನಮ್ಮ ಮಗು ನಮಗೆ ಏನು ಹೇಳುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ !
೪. ಮಕ್ಕಳ ಆರೋಗ್ಯ ಕಾಪಾಡಲು ಶ್ರಮಪಡಬೇಕು !
ಒಮ್ಮೆ ನನ್ನ ಚಿಕಿತ್ಸಾಲಯಕ್ಕೆ ಬಂದ ಓರ್ವ ತಾಯಿ ’ತನ್ನ ಮಗು ಏನೂ ತಿನ್ನುವುದೇ ಇಲ್ಲ’, ಎಂದು ದೂರಿದಳು. ಮಾತನಾಡುವಾಗ ಆ ತಾಯಿಯು, ’ಮಗು ಊಟ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅವನು ಬೇಗ ಊಟ ಮಾಡಬೇಕೆಂದು, ನಾನು ಚಪಾತಿಯನ್ನು ಕಿವುಚಿ ಅದರಲ್ಲಿ ತೊವ್ವೆಯನ್ನು ಹಾಕಿ ಅವನಿಗೆ ತಿನ್ನಿಸುತ್ತೇನೆ, ಒಟ್ಟು ಅವನು ಊಟ ಬೇಗನೆ ಮುಗಿಸಬೇಕು’ ಎಂದು ಹೇಳಿದಳು. ಅದು ಮೂರುವರೆ ವರ್ಷದ ಮಗು ಇತ್ತು. ಈ ವಯಸ್ಸಿನಲ್ಲಿ ಮಗು ಸರಿಯಾಗಿ ಕಚ್ಚಿ ತಿನ್ನಬಹುದು; ಆದರೆ ಕಿವುಚಿ ಸಿದ್ಧಪಡಿಸಿದ ಚಪಾತಿಯನ್ನು ಕೊಡುವುದರಿಂದ ಆ ಮಗು ಬೇಗಬೇಗನೇ ತುತ್ತನ್ನು ಹಾಗೆಯೇ ನುಂಗುತ್ತಿತ್ತು. ಇದರಿಂದ ಬಾಯಿಯಲ್ಲಿನ ಲಾಲಾರಸವು ಅನ್ನದಲ್ಲಿ ಸರಿಯಾಗಿ ಮಿಶ್ರಣವಾಗುತ್ತಿರಲಿಲ್ಲ. ಪದಾರ್ಥಗಳ ರುಚಿಯಂತೂ ಆ ಮಗುವಿಗೆ ತಿಳಿಯುತ್ತಿರಲಿಲ್ಲ. ಈ ರೀತಿ ಪ್ರತಿದಿನ ಊಟ ಮಾಡುವುದರಿಂದ ಅವನಿಗೆ ಅಜೀರ್ಣವಾಯಿತು. ಆದ್ದರಿಂದ ಆ ಮಗು ಊಟ ಮಾಡುತ್ತಿರಲಿಲ್ಲ. ನಮ್ಮ ಜೀರ್ಣಕ್ರಿಯೆಯು ನಾಲಿಗೆಯಿಂದ ಆರಂಭವಾಗುತ್ತದೆ. ಬಾಯಿಯಲ್ಲಿನ ಲಾಲಾರಸ ಆಹಾರದಲ್ಲಿ ಸೇರುವುದು, ಇದು ಮೊದಲನೇ ಪ್ರಕ್ರಿಯೆ ಆಗುವುದು ಏಕೆ ಮಹತ್ವದ್ದಾಗಿದೆ ? ಇದು ಇದರಿಂದ ನಮ್ಮ ಗಮನಕ್ಕೆ ಬರುತ್ತದೆ. ’ಮಗು ಬೇಗಬೇಗ ಹೇಗೆ ಊಟ ಮಾಡಬಹುದು ? ಇದಕ್ಕಿಂತ ಮಗು ಆಹಾರದ ರುಚಿಯನ್ನು ಹೇಗೆ ಪಡೆಯಬಹುದು’, ಎಂಬುದರತ್ತ ಪಾಲಕರು ಗಮನ ಕೊಡಬೇಕು. ಇಲ್ಲಿ ಮಗು ಊಟ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಎಂಬ ತಕರಾರು ಆಯೋಗ್ಯವಾಗಿದೆ. ಮಕ್ಕಳಲ್ಲಿ ಆಹಾರದ ರುಚಿ ನಿರ್ಮಾಣ ಮಾಡಲು ಪಾಲಕರು ಶ್ರಮಪಡಬೇಕಾಗುತ್ತದೆ.
೫. ಮಕ್ಕಳಿಗೆ ಜಂಕ್‌ಫುಡ್ ಪದಾರ್ಥಗಳನ್ನು ತಿನ್ನಲು ಕೊಡುವ ಬದಲು ಮನೆಯಲ್ಲಿ ಸಿದ್ಧಪಡಿಸಿದ ಪದಾರ್ಥಗಳನ್ನು ತಿನ್ನಲು ಕೊಡಬೇಕು !
ಮಕ್ಕಳಿಗೆ ಹಸಿವಾದಾಗ ತಕ್ಷಣ ಏನಾದರೂ ತಿನ್ನಲು ಬೇಕೆಂದು ಹಾಲಿನಲ್ಲಿ ಬಿಸ್ಕತ್ತು ಹಾಕಿ ಕೊಡುವುದು, ೨ ನಿಮಿಷಗಳಲ್ಲಿ ಸಿದ್ಧಪಡಿಸಲಾಗುವ ಮ್ಯಾಗಿ ಕೊಡುವುದು, ಫ್ರೋಜನ್ (ಫ್ರೀಜನಲ್ಲಿ ಇಟ್ಟು ಗಟ್ಟಿಮಾಡಿದ) ಪದಾರ್ಥ, ಇಂತಹ ಪದಾರ್ಥಗಳನ್ನು ಕೊಡುವ ಬದಲು ಮನೆಯಲ್ಲಿ ಮಾಡಿದ ಶೇಂಗಾ ಉಂಡೆ, ಗೋದಿಹಿಟ್ಟನ್ನು ಹುರಿದು ಮಾಡಿದ ಉಂಡೆ, ರಾಜಗಿರಿ ಉಂಡೆ, ಬೆಲ್ಲ-ಪುಟಾಣಿ, ೧-೨ ಗೋಡಂಬಿ ಅಥವಾ ೧-೨ ಬಾದಾಮಿ ಇವುಗಳನ್ನು ಮಕ್ಕಳಿಗೆ ತಿನ್ನಲು ಕೊಡಬೇಕು. ಇದುವರೆಗೆ ನಾನು ಎಷ್ಟು ಚಿಕ್ಕಮಕ್ಕಳ ತಾಯಂದಿರೊಂದಿಗೆ ಮಾತನಾಡಿದ್ದೇನೆಯೋ, ಆ ಪ್ರತಿ ಯೊಬ್ಬರಿಂದ ಮಕ್ಕಳಿಗೆ ’ಹೊರಗೆ ದೊರಕುವ ಇನ್ಸಟಂಟ್ ಪದಾರ್ಥಗಳನ್ನು ಕೊಡಲಾಗುತ್ತದೆ’, ಎಂಬುದನ್ನೇ ಕೇಳಿದ್ದೇನೆ. ಅವುಗಳ ಅತಿ ಆಸೆಯಾಗುವ ಪ್ರಮಾಣವೂ ಹೆಚ್ಚಿದೆ. ಇಂದಿನ ಕಾಲದಲ್ಲಿ ನಿಯಮಗಳನ್ನು ಪಾಲಿಸಿ ಜೀವಿಸುವ ವ್ಯಕ್ತಿಗಳು ಹಾಸ್ಯಸ್ಪದವೆನಿಸುತ್ತಾರೆ; ಆದರೆ ನಾವು ನಮ್ಮ ಮಕ್ಕಳ ಮನಸ್ಸಿನ ಮೇಲೆ ಬಾಲ್ಯದಿಂದಲೇ ಯಾವ ಪದಾರ್ಥಗಳು ತಿನ್ನಲು ಯೋಗ್ಯ ಮತ್ತು ಯಾವ ಪದಾರ್ಥಗಳು ಆರೋಗ್ಯಕ್ಕೆ ಹಾನಿಕರವಾಗಿವೆ, ಎಂಬುದನ್ನು ಸತತವಾಗಿ ಬಿಂಬಿಸಬೇಕು. ಮಕ್ಕಳ ಊಟದ ಸಮಯವನ್ನು ತಿಳಿದುಕೊಂಡು ಆ ಸಮಯದಲ್ಲಿ ಸರಿಯಾಗಿ ಊಟವನ್ನು ಕೊಡಬೇಕು. ನಡುವೆ ಹಸಿವಾದರೆ ಲೇಖನದಲ್ಲಿ ಕೊಟ್ಟಿರುವಂತೆ ತಿನಿಸುಗಳನ್ನು ಕೊಡಬೇಕು. ಊಟದ ಸಮಯದಲ್ಲಿ ಇತರ ಯಾವುದೇ ತಿನಿಸುಗಳನ್ನು ಕೊಡಬಾರದು. ಜಂಕ್‌ಫುಡ್ ಖಾದ್ಯಪದಾರ್ಥ ಗಳ ದುಷ್ಪರಿಣಾಮಗಳನ್ನು ತಿಳಿದುಕೊಂಡು ತಾಯಿ ತನ್ನ ಮಕ್ಕಳ ಆಹಾರದ ಆಯೋಜನೆಯನ್ನು ಮಾಡಬೇಕು ಮತ್ತು ಅದರಂತೆ ಅವರ ಆಹಾರದಲ್ಲಿ ಹೆಚ್ಚೆಚ್ಚು ಮನೆಯಲ್ಲಿ ಮಾಡಿದ ಪದಾರ್ಥಗಳನ್ನು ಕೊಡಲು ಪ್ರಯತ್ನಿಸಬೇಕು. ಇಲ್ಲಿ ತಾಯಿಯ ಪಾತ್ರವು ತುಂಬಾ ಮಹತ್ವ್ವದ್ದಾಗಿರುತ್ತದೆ. ಹಾಲಿನಲ್ಲಿ ಬಿಸ್ಕತ್ತು ಹಾಕಿ ಕೊಡುವುದು, ಇದು ಎಲ್ಲಕ್ಕಿಂತ ಸುಲಭ ಮಾರ್ಗವಾಗಿದ್ದರೂ, ಅದರಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿದುಕೊಂಡು ತಮ್ಮ ಮಕ್ಕಳಿಗಾಗಿ ಯೋಗ್ಯ ಪದಾರ್ಥಗಳನ್ನು ತಯಾರಿಸಲು ಶ್ರಮಪಡುವುದು ಮಹತ್ವದ್ದಾಗಿದೆ. – ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ (೧೧.೯.೨೦೨೩)
೬. ಮಕ್ಕಳ ಆಹಾರದ ಆಯೋಜನೆ ಮಾಡಬೇಕು !
ಆಹಾರದ ಆಯೋಜನೆ, ಎಂದರೆ ನಮ್ಮ ಮಕ್ಕಳಿಗೆ ದಿನದಲ್ಲಿ ಎಷ್ಟು ಬಾರಿ ಹಸಿವಾಗುತ್ತದೆ ? ಅದರಲ್ಲಿ ಎರಡು ಬಾರಿಯಾದರೂ ಮಗು ಸರಿಯಾಗಿ ಊಟ ಮಾಡುತ್ತಿದೆಯೇ ? ಎಂಬುದನ್ನು ನೋಡಬೇಕು. ಅದಕ್ಕೆ ಊಟದ ನಂತರ ಎಷ್ಟು ಗಂಟೆಗಳ ನಂತರ ಹಸಿವಾಗುತ್ತದೆ ? ಆಗ ನಾವು ಯಾವ ತಿನಿಸನ್ನು ಕೊಡಬೇಕು ? ಊಟದ ಮೊದಲು ಸ್ವಲ್ಪ ಸಮಯ ಹಸಿವಾದರೆ, ಅದರಿಂದ ಅವನ ಊಟದ ಮೇಲೆ ಪರಿಣಾಮ ಆಗಬಾರದಂತಹ ಯಾವ ತಿನಿಸುಗಳನ್ನು ಕೊಡಬೇಕು, ಈ ರೀತಿ ಆಯೋಜನೆ ಇರುವುದು ಆವಶ್ಯಕವಾಗಿದೆ. ಒಟ್ಟಿನಲ್ಲಿ ಆಹಾರದ ಆಯೋಜನೆ ಇದ್ದರೆ ಜಂಕ್‌ಫುಡ್‌ಗಳು ಅಗತ್ಯವೆನಿಸುವುದಿಲ್ಲ. ಕುಟುಂಬದಲ್ಲಿನ ಎಲ್ಲ ಸದಸ್ಯರು ಊಟದ ಸಮಯ ಗಳನ್ನು ಪಾಲಿಸಿದರೆ ಮಕ್ಕಳಿಗೂ ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸವಾಗುತ್ತದೆ.
ಈ ರೀತಿ ನಾವು ನಮ್ಮ ಮಕ್ಕಳ ಊಟ-ತಿಂಡಿಯ ಕುರಿತು ಯಾವ ತಪ್ಪುಗಳನ್ನು ಮಾಡುತ್ತಿರುತ್ತೇವೆ, ಎಂಬುದನ್ನು ನೋಡಿದೆವು. ನಮ್ಮ ಮುಂದಿನ ಪೀಳಿಗೆ ಆರೋಗ್ಯಕರವಾಗಿರುವುದು ಸಹ ಇಂದಿನ ಪೀಳಿಗೆಯ ನೈತಿಕ ಜವಾಬ್ದಾರಿಯಾಗಿದೆ. ಅದಕ್ಕಾಗಿ ಎಲ್ಲರು ಪ್ರಯತ್ನಿಸುವುದು ಆವಶ್ಯಕವಾಗಿದೆ.’ – ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ (೧೧.೯.೨೦೨೩)