|
ಸಿಯಾಲಕೋಟ (ಪಾಕಿಸ್ತಾನ) – ಇಲ್ಲಿ ಕಳೆದ 72 ವರ್ಷಗಳಿಂದ ಮುಚ್ಚಲಾಗಿದ್ದ ಹಿಂದೂ ದೇವಸ್ಥಾನವನ್ನು ತೆರೆಯಲಾಯಿತು. ಈ ದೇವಸ್ಥಾನದ ಹೆಸರು ‘ಶಿವಾಲಾ ತೇಜಾ ಸಿಂಹ’ ಎಂದಿದೆ. ಈ ದೇವಸ್ಥಾನವನ್ನು ತೆರೆದ ನಂತರ ದೇವಸ್ಥಾನದಲ್ಲಿನ ಕೆತ್ತನೆಗಳನ್ನು ಕಂಡು ಭಕ್ತರು ಆಶ್ಚರ್ಯಚಕಿತರಾದರು. ಈ ದೇವಸ್ಥಾನವನ್ನು ನೋಡಿದರೆ ‘ಇಷ್ಟು ಹಳೆಯದಾಗಿದೆ’ ಎಂದು ಸ್ವಲ್ಪವೂ ಅನಿಸುವುದಿಲ್ಲ. ಈ ದೇವಸ್ಥಾನವು ಇಂದಿಗೂ ಬಹಳ ಸುಂದರ ಮತ್ತು ಸುದೃಢವಾಗಿದೆ.
ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಯಿತು. ವಿಭಜನೆಯ ಮೊದಲು ಎಷ್ಟು ದೇವಸ್ಥಾನಗಳಿದ್ದವೋ, ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ದೇವಸ್ಥಾನಗಳನ್ನು ಕೆಡವಲಾಗಿತ್ತು. ಕೆಲವು ಭಾಗಶಃ ಕೆಡವಲ್ಪಟ್ಟು ಹಾಗೆಯೇ ಉಳಿದುಕೊಂಡಿದ್ದವು. ಇನ್ನೂ ಕೆಲವು ದೇವಸ್ಥಾನಗಳನ್ನು ಮುಚ್ಚಲಾಯಿತು. ಸಿಯಾಲಕೋಟನಲ್ಲಿರುವ ದೇವಸ್ಥಾನವು ಆ ಸಮಯದಲ್ಲಿ ಮುಚ್ಚಲ್ಪಟ್ಟ ದೇವಸ್ಥಾನಗಳಲ್ಲಿ ಒಂದಾಗಿದೆ. 2019 ರಲ್ಲಿ ಈ ದೇವಸ್ಥಾನವನ್ನು ತೆರೆಯುವಂತೆ ಆಗಿನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಆದೇಶಿಸಿದ್ದರು. ಇದೀಗ ಈ ದೇವಾಲಯದಲ್ಲಿ ದೇವತೆಗಳ ಮೂರ್ತಿಗಳನ್ನು ಮರಳಿ ಪ್ರತಿಷ್ಠಾಪಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಪೂಜೆ ಪುನಸ್ಕಾರಗಳನ್ನು ಆರಂಭಿಸಲಾಗುವುದು. ಈ ದೇವಸ್ಥಾನವನ್ನು ತೆರೆದ ಬಳಿಕ, ಅಲ್ಲಿ ಉಪಸ್ಥಿತರಿದ್ಧ ಭಕ್ತರು ‘ಹರ್ ಹರ್ ಮಹಾದೇವ್’ ಎಂದು ಜಯಘೋಷ ಕೂಗಿದರು.