ಕಾಳಿ

೧. ಕಾಳಿಯ ವ್ಯಾಖ್ಯೆ

ಅ. ‘ಕಾಲಿಯ ವ್ಯಾಖ್ಯೆಯನ್ನು ‘ಪ್ರಾಣತೋಷಿಣೀ’ ಎಂಬ ಗ್ರಂಥದಲ್ಲಿ ಮುಂದಿನಂತೆ ಕೊಡಲಾಗಿದೆ.

ಕಾಲಸಂಕಲನಾತ್‌ ಕಾಲೀ ಸರ್ವೇಷಾಮಾದಿರೂಪಿಣೀ |
ಕಾಲತ್ವಾದಾದಿಭೂತತ್ವಾದಾದ್ಯಾ ಕಾಲೀತಿ ಗೀಯತೇ ||

ಭಾವಾರ್ಥ : ಕಾಲಿಯು ಕಾಲವನ್ನು ಜಾಗೃತಗೊಳಿಸುವವಳು ಮತ್ತು ಎಲ್ಲರ ಉತ್ಪತ್ತಿಯ ಮೂಲವಾಗಿದ್ದಾಳೆ. ಕಾಲ, ಪಂಚಮಹಾಭೂತಗಳು ಮತ್ತು ಪ್ರಾಣಿಮಾತ್ರರಲ್ಲಿ ಕಾಲಿಯೇ ಎಲ್ಲರಿಗಿಂತ ಮೊದಲು ಪ್ರಕಟವಾಗುವವಳಾಗಿದ್ದಾಳೆ. ಕಾಲವೇ ಅವಳ ಕಾಲುಗಳಾಗಿದ್ದು, ಅವಳು ಭೂತಕಾಲಕ್ಕಿಂತಲೂ ಮೊದಲು ಪ್ರಕಟವಾಗುವವಳಾಗಿದ್ದಾಳೆ; ಆದ್ದರಿಂದ ಅವಳಿಗೆ ‘ಕಾಳಿ’ ಎನ್ನುತ್ತಾರೆ.

ಆ. ತಂತ್ರಲೋಕದಲ್ಲಿ ಕಾಲಿಯ ವ್ಯಾಖ್ಯೆಯನ್ನು ಕೆಳಗಿನಂತೆ ನೀಡಲಾಗಿದೆ.

ಕಾಲೀ ನಾಮ ಪರಾಶಕ್ತಿಃ ಸೈವ ದೇವಸ್ಯ ಗೀಯತೆ |

ಅರ್ಥ : ಬ್ರಹ್ಮನ ನಿತ್ಯ ಕ್ರಿಯಾಶಕ್ತಿರೂಪ ಪರಾಶಕ್ತಿಯನ್ನೇ (ಶ್ರೇಷ್ಠ ಶಕ್ತಿಯನ್ನೇ) ‘ಕಾಲಿ’ ಎನ್ನುತ್ತಾರೆ.

೨. ಕಾಳಿಯ ವೈಶಿಷ್ಟ್ಯ ಮತ್ತು ಕಾರ್ಯ

‘ಕಾಲಿಯು ಮಹಾಕಾಲ ಅರ್ಥಾತ್‌ ಶಿವನ ಹೃದಯದ ಮೇಲೆ ನಿಂತು ನೃತ್ಯವನ್ನು ಮಾಡುತ್ತಾಳೆ. ಅವಳನ್ನು ಕಾಲೀ ವಿಲಾಸತಂತ್ರದಲ್ಲಿ ‘ಶವಾಸನಾ ಅಥವಾ ಶವಾರೂಢಾ’ ಎಂದೂ ಕರೆಯಲಾಗಿದೆ. ತಂತ್ರಮಾರ್ಗದಲ್ಲಿ ಶವ ಮತ್ತು ಶಿವ ಇವು ಒಂದೇ ತತ್ತ್ವದ ಹೆಸರುಗಳಾಗಿವೆ. ನಿರಾಕಾರ ಬ್ರಹ್ಮನ ಪ್ರಥಮ ಸಾಕಾರ ರೂಪವೆಂದರೆ ಶವ. ಅದು ನಿಶ್ಚಲವಾಗಿರುತ್ತದೆ. ಯಾವಾಗ ಅದರಲ್ಲಿ ಶಕ್ತಿಯ ಸ್ಪಂದನಗಳು ಪ್ರಾರಂಭವಾಗಿ ಅದು ಸೃಷ್ಟಿರಚನೆಯ ಕಾರ್ಯಕ್ಕಾಗಿ ಸಕ್ರಿಯವಾಗುತ್ತದೆಯೋ, ಆಗ ಅದಕ್ಕೆ ಶಿವ ಎನ್ನುತ್ತಾರೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಶಕ್ತಿಹೀನ ಬ್ರಹ್ಮವು ‘ಶವ’ವಾಗಿದ್ದು ಶಕ್ತಿಯುತ ಬ್ರಹ್ಮವೆಂದರೆ ‘ಶಿವ’. ಶಿವ ಎಂಬ ಪದದಲ್ಲಿನ ಇಕಾರವು ಶಕ್ತಿವಾಚಕವೇ ಆಗಿದೆ. ಮಹಾಶಕ್ತಿಯ ಕ್ರೀಡೆಗೆ ಆಧಾರವಾಗಿದೆ ಎಂಬ ಕಾರಣಕ್ಕಾಗಿ ಅದನ್ನೇ ‘ಶವಾಸನ’ ಎನ್ನುತ್ತಾರೆ. ‘ಹೇಸೌಃ’ ಎಂಬುದು ಶವಬೀಜ ಅಥವಾ ಪ್ರೇತಬೀಜವಾಗಿದೆ. ಇದೇ ಪ್ರೇತವು ಸೃಷ್ಟಿರಚನೆಯ ಕಾಲದಲ್ಲಿ ಪದ್ಮರೂಪವನ್ನು ಗ್ರಹಿಸುತ್ತದೆ ಮತ್ತು ಮಹಾಮಾಯೆಯಾದ ಕಾಳಿಯ ಆಸನ ಅಥವಾ ಕ್ರೀಡಾಸ್ಥಳವಾಗುತ್ತದೆ. ಇದನ್ನೇ ಕಾಲಿಯ ‘ಮಹಾಪ್ರೇತಪದ್ಮಾಸನ’ ಎನ್ನುತ್ತಾರೆ.

೩. ಕಾಳಿ ಮಾತೆಯ ರೂಪದ ವೈಶಿಷ್ಟ್ಯ ಮತ್ತು ಭಾವಾರ್ಥ

೧. ಮಹಿಷಾಸುರನ ತುಂಡರಿಸಿದ ರುಂಡ – ಅಜ್ಞಾನ ಅಥವಾ ಮೋಹ ಇವುಗಳ ನಾಶ
೨. ಕೊರಳಿನಲ್ಲಿನ ರುಂಡಮಾಲೆ (ಕರ್ಪೂರಾದಿ ಸ್ತೋತ್ರಗಳಿಗನುಸಾರ ೫೨ ಮತ್ತು ನಿರುತ್ತರ ತಂತ್ರಕ್ಕನುಸಾರ ೫೦ ರುಂಡಗಳು) – ಶಬ್ದಬ್ರಹ್ಮನ ಪ್ರತೀಕವಾಗಿರುವ ವರ್ಣಮಾಲೆ
೩. ಶವಗಳ ಕೈಗಳನ್ನು ಕತ್ತರಿಸಿ ಅವುಗಳಿಂದ ಮಾಡಿದ ಮೇಖಲೆ (ಸರ) – ಕತ್ತರಿಸಿದ ಕೈಗಳೆಂದರೆ ಸಾಧಕರು ಕ್ರಿಯಮಾಣ ಕರ್ಮದಿಂದ ಮಾಡಿದ ಅವರ ಮುಕ್ತತೆ
೪. ಸ್ಮಶಾನದಲ್ಲಿ ನೃತ್ಯ – ವಾಸನೆಗಳಿಂದ ಮುಕ್ತನಾಗಿರುವ ಸಾಧಕನ ಹೃದಯವೆಂದರೆ ಸ್ಮಶಾನ ಮತ್ತು ನೃತ್ಯವೆಂದರೆ ಆನಂದ (ಆಧಾರ : ಸನಾತನ ನಿರ್ಮಿತ ಗ್ರಂಥ ‘ಶಕ್ತಿ’)