ನವರಾತ್ರಿಯ ವ್ರತದಲ್ಲಿ ಪಾಲಿಸುವಂತಹ ಆಚಾರಗಳು

ನವರಾತ್ರಿಯ ವ್ರತದ ಅತ್ಯಧಿಕ ಲಾಭವಾಗಬೇಕೆಂದು ಶಾಸ್ತ್ರದಲ್ಲಿ ಹೇಳಲಾದ ಆಚಾರಗಳನ್ನು ಪಾಲಿಸುವುದು ಆವಶ್ಯಕತೆಯಿದೆ. ಆದರೆ ದೇಶ-ಕಾಲ-ಪರಿಸ್ಥಿತಿಗನುಸಾರ ಎಲ್ಲ ಆಚಾರಗಳನ್ನು ಪಾಲಿಸುವುದು ಕಠಿಣವಿರುತ್ತದೆ. ಆದುದರಿಂದ ಯಾವುದು ಸಾಧ್ಯವಿದೆಯೋ ಆ ಆಚಾರಗಳನ್ನು ಅವಶ್ಯವಾಗಿ ಪಾಲಿಸಿರಿ.

ಅವುಗಳೆಂದರೆ,

೧. ಪಾದರಕ್ಷೆಗಳನ್ನು ಧರಿಸದಿರುವುದು
೨. ಅನಾವಶ್ಯಕವಾಗಿ ಮಾತನಾಡದಿರುವುದು
೩. ಧೂಮ್ರಪಾನ ಮಾಡದಿರುವುದು
೪. ಮಂಚ ಅಥವಾ ಹಾಸಿಗೆಯಲ್ಲಿ ಮಲಗದಿರುವುದು
೫. ಹಗಲಲ್ಲಿ ನಿದ್ರಿಸದಿರುವುದು
೬. ಬ್ರಹ್ಮಚರ್ಯೆಯ ಪಾಲನೆ
೭. ಊರಿನ ಗಡಿಯನ್ನು ದಾಟದಿರುವುದು ಇತ್ಯಾದಿ
೮. ನವರಾತ್ರಿಯಲ್ಲಿ ಮಾಂಸಾಹಾರ ಸೇವನೆ ಮತ್ತು ಮದ್ಯಪಾನವನ್ನು ಮಾಡಬಾರದು. ಅದರೊಂದಿಗೆ ಚಲನಚಿತ್ರ ನೋಡುವುದು, ಅದರ ಹಾಡುಗಳನ್ನು ಕೇಳುವುದು ಇತ್ಯಾದಿಗಳನ್ನು ತ್ಯಜಿಸಬೇಕು.

ನವರಾತ್ರಿಯ ಕಾಲಾವಧಿಯಲ್ಲಿ ಉಪವಾಸ ಮಾಡುವುದರ ಮಹತ್ವ

ನವರಾತ್ರಿಯ ಒಂಭತ್ತು ದಿನಗಳಲ್ಲಿ ಹೆಚ್ಚಿನ ಜನರು ಉಪವಾಸವನ್ನು ಮಾಡುತ್ತಾರೆ. ಒಂಭತ್ತು ದಿನಗಳು ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ, ಪ್ರಥಮ ದಿನ ಹಾಗೂ ಅಷ್ಟಮಿಯಂದು ಉಪವಾಸವನ್ನು ಅವಶ್ಯವಾಗಿ ಮಾಡುತ್ತಾರೆ. ದೇವಿ ಉಪಾಸನೆಯ ಇತರ ಭಾಗಗಳೊಂದಿಗೆ ನವರಾತ್ರಿಯ ಕಾಲಾವಧಿಯಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ’ ಎಂದು ಜಪಿಸಬೇಕು. ನವರಾತ್ರಿಯಲ್ಲಿ ವಿವಿಧ ತಿಥಿಗಳಂದು ಮಾಡಲಾಗುವ ಧಾರ್ಮಿಕ ಕೃತಿಗಳನ್ನು ಈ ನಾಮಜಪದೊಂದಿಗೆ ಪೂರ್ಣ ಶ್ರದ್ಧಾಭಾವಗಳಿಂದ ಮಾಡುವುದರಿಂದ ಪೂಜಕನಿಗೆ ಹಾಗೂ ಪರಿವಾರದ ಎಲ್ಲ ಸದಸ್ಯರಿಗೂ ಲಾಭವಾಗುತ್ತದೆ.