ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯದಂದು ಈ ವ್ರತವು ಪ್ರಾರಂಭವಾಗುತ್ತದೆ.
೧. ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ಪೀಠವನ್ನು ತಯಾರಿಸಿ ಅದರ ಮೇಲೆ ಸಿಂಹಾಸನದ ಮೇಲೆ ಕುಳಿತಿರುವ ಅಷ್ಟಭುಜದೇವಿಯನ್ನು ಹಾಗೂ ನವಾರ್ಣವಯಂತ್ರವನ್ನು ಸ್ಥಾಪಿಸುತ್ತಾರೆ. ಯಂತ್ರದ ಪಕ್ಕದಲ್ಲಿ ಘಟಸ್ಥಾಪಿಸಿ ಅದಕ್ಕೂ ದೇವಿಗೂ ವಿಧಿಪೂರ್ವಕ ಪೂಜೆಯನ್ನು ಮಾಡುತ್ತಾರೆ.
೨. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಘಟ ಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದ ಮಣ್ಣನ್ನು ತಂದು ಅದರಿಂದ ಎರಡು ಬೆರಳುಗಳ ಗಾತ್ರ ದಷ್ಟು ಚೌಕಾಕಾರ ಮಾಡಿ ಅದರಲ್ಲಿ (ಐದು ಅಥವಾ) ಏಳು ಧಾನ್ಯಗಳನ್ನು ಹಾಕಬೇಕು. ಜೋಳ, ಗೋಧಿ, ಎಳ್ಳು, ಹೆಸರು, ನವಣೆ, ಸಾವಿಕಾಳು (ತೃಣ ಧಾನ್ಯ) ಮತ್ತು ಕಡಲೆ ಇವು ಸಪ್ತಧಾನ್ಯಗಳಾಗಿವೆ.
೩. ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚಪಲ್ಲವ, ಪಂಚರತ್ನ ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು.
೪. ಸಪ್ತಧಾನ್ಯ ಮತ್ತು ಕಲಶ ಸ್ಥಾಪನೆಯ ವೈದಿಕ ಮಂತ್ರಗಳು ಗೊತ್ತಿಲ್ಲದಿದ್ದರೆ, ಪುರಾಣೋಕ್ತ ಮಂತ್ರಗಳನ್ನು ಹೇಳಬೇಕು. ಅವೂ ಬರದಿದ್ದರೆ ಆಯಾ ವಸ್ತುಗಳ ಹೆಸರು ಹೇಳಿ ‘ಸಮರ್ಪಯಾಮಿ’ ಎಂದು ನಾಮಮಂತ್ರವನ್ನು ಉಪಯೋಗಿಸಬೇಕು ಕಲಶದೊಳಗೆ ತಲುಪುವಂತೆ ಮಾಲೆಯನ್ನು ಕಟ್ಟಬೇಕು.
೫. ಒಂಭತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆ ಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.
೬. ‘ಅಖಂಡ ದೀಪಪ್ರಜ್ವಲನೆ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತ ಶತಿಪಾಠ, ದೇವಿಭಾಗವತ, ಬ್ರಹ್ಮಾಂಡ ಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳು ವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರ ನವರಾತ್ರಿ ಆಚರಿಸುತ್ತಾರೆ.
೭. ಭಕ್ತನು ಉಪವಾಸವಿದ್ದರೂ ದೇವತೆಗೆ ಎಂದಿನಂತೆ ಅನ್ನದ ನೈವೇದ್ಯವನ್ನು ಮಾಡಬೇಕು.
೮. ಈ ಕಾಲದಲ್ಲಿನ ಆಚಾರದ ಒಂದು ಉತ್ಕ್ರಷ್ಟ ಅಂಗ ವೆಂದು ಶ್ಮಶ್ರೂ ಮಾಡದಿರುವುದು (ಗಡ್ಡ-ಮೀಸೆಗಳ ಕೂದಲು ಮತ್ತು ತಲೆಯ ಕೂದಲನ್ನು ಕತ್ತರಿಸದಿರುವುದು), ಕಠೋರ ಬ್ರಹ್ಮಚರ್ಯ, ಮಂಚ ಮತ್ತು ಹಾಸಿಗೆಯ ಮೇಲೆ ಮಲಗದಿರುವುದು, ಗಡಿಯನ್ನು ಉಲ್ಲಂಘಿಸದಿರುವುದು, ಪಾದರಕ್ಷೆಗಳನ್ನು ಉಪಯೋಗಿಸದಿರುವುದು ಮುಂತಾದ ನಿಯಮಗಳ ಪಾಲನೆಯನ್ನು ಮಾಡುತ್ತಾರೆ.
೯. ನವರಾತ್ರಿಯ ಸಂಖ್ಯೆಗೆ ಒತ್ತುಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ; ಆದರೆ ಶಾಸ್ತ್ರಕ್ಕನುಸಾರ ಕೊನೆಯ ದಿನ ನವರಾತ್ರಿಯ ವಿಸರ್ಜನೆಯಾಗುವುದು ಆವಶ್ಯಕವಾಗಿದೆ. ಆ ದಿನ ಸಮಾರಾಧನೆಯ ಬಳಿಕ ಸಮಯ ವಿದ್ದರೆ ಅದೇ ದಿನ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಷೋಡಶೋಪಚಾರ ಪೂಜೆ ಮಾಡಬೇಕು, ಸಮಯ ವಿಲ್ಲದಿದ್ದರೆ ಮರುದಿನ ಎಲ್ಲ ದೇವರಿಗೂ ಪೂಜಾಭಿ ಷೇಕಗಳನ್ನು ಮಾಡಬೇಕು.
೧೦. ದೇವಿಯ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಬಿತ್ತಿದ ಸಪ್ತಧಾನ್ಯಗಳ ಸಸಿಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗೂ ‘ಶಾಕಂಭರಿದೇವಿ‘ ಎಂದು ತಿಳಿದು ಸ್ತ್ರೀಯರು ಅವುಗಳನ್ನು ತಲೆಯಲ್ಲಿ ಧರಿಸಿ ವಿಸರ್ಜನೆಗೆ ಹೋಗುತ್ತಾರೆ.
೧೧. ನವರಾತ್ರಿಯ ಪ್ರಾರಂಭ ಹಾಗೂ ಸಮಾಪ್ತಿ ವೇಳೆ ದೇವರ ಉದ್ವಾರ್ಜನೆಯನ್ನು ಅವಶ್ಯ ಮಾಡಬೇಕು. ಉದ್ವಾರ್ಜನೆ ಮಾಡಲು ನಿತ್ಯದಂತೆ ನಿಂಬೆಹಣ್ಣು, ಭಸ್ಮ ಮುಂತಾದವುಗಳನ್ನು ಉಪಯೋಗಿಸಬೇಕು. ರಂಗೋಲಿ ಅಥವಾ ಪಾತ್ರೆ ತಿಕ್ಕುವ ಚೂರ್ಣವನ್ನು ಉಪಯೋಗಿಸಬಾರದು.’
೧೨. ಕೊನೆಗೆ ಘಟ ಮತ್ತು ದೇವಿಯನ್ನು ವಿಸರ್ಜಿಸಬೇಕು.