ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ |
ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದುರ್ಗಾದೇವಿಯ ಉತ್ಸವವೆಂದರೆ ನವರಾತ್ರಿ. ನವರಾತ್ರಿ ಇದು ದೇವಿಯ ವ್ರತವಾಗಿದ್ದು ಕರ್ನಾಟಕ ಸೇರಿದಂತೆ ಭಾರತದಲ್ಲಿ ಅನೇಕ ಕಡೆಗಳಲ್ಲಿ ದೇವಿಯ ಉಪಾಸನೆ ಮಾಡಲಾಗುತ್ತದೆ, ಹಲವೆಡೆ ನವರಾತ್ರಿಯ ವ್ರತವನ್ನು ಕುಲಾಚಾರವೆಂದು ಕೂಡ ಪಾಲಿಸಲಾಗುತ್ತದೆ. ಈ ವ್ರತದಲ್ಲಿ ಒಂಭತ್ತು ದಿನವ್ರತಸ್ಥರಾಗಿದ್ದು ದೇವಿಯ ಆರಾಧನೆ ಮಾಡಲಾಗುತ್ತದೆ
ಅಸುರ ಶಬ್ದದ ಉತ್ಪತ್ತಿಯು ಹೀಗಿದೆ – ‘ಅಸುಷು ರಮಂತೆ ಇತೀ ಅಸುರಃ|’ ಅಂದರೆ ‘ಭೋಗದಲ್ಲಿ ರಮಿಸುವವರೇ ಅಸುರರು.’ ಇಂತಹ ಮಹಿಷಾಸುರನ ವಾಸವು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿದ್ದು, ಅವನು ಮನುಷ್ಯನ ಆಂತರಿಕ ದೈವೀ ಪ್ರವೃತ್ತಿಯ ಮೇಲೆ ಪ್ರಭುತ್ವವನ್ನು ಸ್ಥಾಪಿಸಿದ್ದಾನೆ. ಈ ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು.