ಚೀನಾದಿಂದ ಹಣ ಪಡೆದ ಆರೋಪದ ಮೇಲೆ ದೆಹಲಿ ಪೊಲೀಸರು ಪತ್ರಕರ್ತರ ನಿವಾಸ ಸೇರಿದಂತೆ 35 ಕಡೆ ದಾಳಿ !

  • ‘ನ್ಯೂಸ್ ಕ್ಲಿಕ್’ ವಾರ್ತಾ ವೆಬ್‌ಸೈಟ್‌ಗೆ ಸಂಬಂಧಿಸಿದ ಪತ್ರಕರ್ತರು ಬಾಗಿ !

  • ಕೆಲವು ಪತ್ರಕರ್ತರನ್ನು ವಶಕ್ಕೆ ಪಡೆಯಲಾಯಿತು

ನವ ದೆಹಲಿ – ಅಕ್ಟೋಬರ್ 3 ರಂದು ದೆಹಲಿ ಪೊಲೀಸರು ದೆಹಲಿ ಹಾಗೂ ಉತ್ತರ ಪ್ರದೇಶದ ನೋಯ್ಡಾ ಮತ್ತು ಗಾಜಿಯಾಬಾದ್‌ ಹೀಗೆ ಒಟ್ಟು 35 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಪೈಕಿ 7 ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪತ್ರಕರ್ತರು ವಾರ್ತಾ ವೆಬ್‌ಸೈಟ್ ‘ನ್ಯೂಸ್ ಕ್ಲಿಕ್’ಗೆ ಸೇರಿದವರು. ಈ ಪ್ರಕರಣದಲ್ಲಿ ಪತ್ರಕರ್ತ ಅಭಿಸಾರ ಶರ್ಮಾ, ಊರ್ಮಿಲೆಶ್, ಎನ್‌.ಡಿ.ಟಿ.ವಿ.ಯ ಮಾಜಿ ಕಾರ್ಯನಿರ್ವಾಹಕ ಸಂಪಾದಕ ಔನಿಂದೋ ಚಕ್ರವರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

(ಸೌಜನ್ಯ – India Today)

1. ದಾಳಿ ವೇಳೆ ಪೊಲೀಸರು ಲ್ಯಾಪ್‌ಟಾಪ್, ಮೊಬೈಲ್ ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಹಾರ್ಡ್ ಡಿಸ್ಕ್‌ನಿಂದ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ. ವೆಬ್‌ಸೈಟ್‌ನ ಸಂಸ್ಥಾಪಕ/ಸಂಪಾದಕರಿಗೆ ಸೇರಿದ ನಿವಾಸಗಳು ಮತ್ತು ಕಟ್ಟಡಗಳ ಮೇಲೂ ದಾಳಿ ನಡೆಸಲಾಗಿದೆ.

2. ತಥಾಕಥಿತ ಸಾಮಾಜಿಕ ಕಾರ್ಯಕರ್ತೆ ತಿಸ್ತಾ ಸೆಟಲ್ವಾಡ್ ಅವರ ಮನೆ ಮೇಲೂ ದಾಳಿ ನಡೆದಿದೆ. ಹಾಸ್ಯನಟ ಸಂಜಯ ರಾಜೌರಾ ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಲಾಗಿದೆ.

3. ದಾಳಿಯ ನಂತರ, 7 ಪತ್ರಕರ್ತರಲ್ಲಿ ಊರ್ಮಿಲೆಶ್ ಮತ್ತು ಗೌರವ ಯಾದವ ದೆಹಲಿ ಪೊಲೀಸರ ವಿಶೇಷ ಪಡೆಯ ಕಚೇರಿಗೆ ತಲುಪಿದರು. ಪತ್ರಕರ್ತ ಅಭಿಸಾರ ಶರ್ಮಾ ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

4. ಈ ವಾರ್ತಾ ವಾಹಿನಿಯ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 120 ಬಿ (ಕ್ರಿಮಿನಲ್ ಪಿತೂರಿ)ನ ಅಡಿಯಲ್ಲಿ ಅಪರಾಧ ದಾಖಲಿಸಿದ್ದಾರೆ.

5. ಈ ವಾರ್ತಾ ವೆಬ್‌ಸೈಟ್‌ ಚೀನಾದಿಂದ ಹಣ ಪಡೆದ ಆರೋಪದ ಮೇಲೆ ದೆಹಲಿ ಪೊಲೀಸ್‌ನ ಹಣಕಾಸು ಅಪರಾಧ ವಿಭಾಗ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಚೀನಾದಿಂದ ಪಡೆದ ಹಣವನ್ನು ಅಕ್ರಮವಾಗಿ ಸ್ವೀಕರಿಸಲಾಗಿದೆ ಎಂದು ಹೇಳಲಾಗಿದೆ.

6. ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ 3 ವರ್ಷಗಳ ಅವಧಿಯಲ್ಲಿ 38 ಕೋಟಿ 5 ಲಕ್ಷ ರೂಪಾಯಿಗಳ ವಿದೇಶಿ ನಿಧಿಯ ವಂಚನೆ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಈ ಪತ್ರಕರ್ತರು ಚೀನಾದಿಂದ ಹಣ ಪಡೆದು ಭಾರತ ವಿರೋಧಿ ಕೆಲಸ ಮಾಡಿದ್ದರೆ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !