ಮದ್ರಾಸ್ ಉಚ್ಚ ನ್ಯಾಯಾಲಯದ ಸ್ಪಷ್ಟ ಹೇಳಿಕೆ !
ಚೆನ್ನೈ (ತಮಿಳುನಾಡು) – ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿದೆ. ಇದರಲ್ಲಿ ದೇಶ, ರಾಜ, ತಾಯಿ, ತಂದೆ ಮತ್ತು ಗುರುಗಳ ಬಗ್ಗೆ ಕರ್ತವ್ಯಗಳ ಜೊತೆಗೆ ಬಡವರ ಸೇವೆ ಸೇರಿದಂತೆ ಇತರ ಕರ್ತವ್ಯಗಳನ್ನು ಒಳಗೊಂಡಿದೆ. ಆದ್ದರಿಂದ ಸನಾತನ ಧರ್ಮವನ್ನು ನಾಶ ಮಾಡುವುದು, ಅಂದರೆ ಕರ್ತವ್ಯಗಳ ನಾಶ ಮಾಡಿದಂತೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಅರ್ಜಿಯ ಆಲಿಕೆಯ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜ್ಯದ ತಿರುವರೂರು ಜಿಲ್ಲೆಯ ‘ಗವರ್ನಮೆಂಟ್ ಆರ್ಟ್ಸ್ ಕಾಲೇಜ್’ನ ಪ್ರಾಂಶುಪಾಲರು ಒಂದು ಸುತ್ತೋಲೆಯನ್ನು ಹೊರಡಿಸಿದ್ದರು. ಇದರಲ್ಲಿ ವಿದ್ಯಾರ್ಥಿಗಳಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ದ್ರಮುಕ ಪಕ್ಷದ ಸಂಸ್ಥಾಪಕ ಅಣ್ಣಾದೊರೈ ಅವರ ಜಯಂತಿಯಂದು ‘ಸನಾತನದ ವಿರೋಧ’ ಎಂಬ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ತಿಳಿಸಲಾಗಿತ್ತು. ಇದರ ವಿರುದ್ಧ ಇಳಂಗೋವನ್ ಎಂಬ ವ್ಯಕ್ತಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿರೋಧ ವ್ಯಕ್ತವಾದಾಗ ಪ್ರಾಂಶುಪಾಲರು ಈ ಸುತ್ತೋಲೆಯನ್ನು ಹಿಂಪಡೆದರು. ಆದ್ದರಿಂದ, ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು; ಆದರೆ ಅದರ ಆಲಿಕೆಯನ್ನು ಮಾಡುವಾಗ ಅದು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.
‘King’s Duty To His People…’: What #MadrasHighCourt Said On Sanatan Dharmahttps://t.co/Y2aLfSE7Xm
— TIMES NOW (@TimesNow) September 16, 2023
ಉಚ್ಚ ನ್ಯಾಯಾಲಯವು ಮುಂದಿನಂತೆ ಹೇಳಿದೆ,
೧. ಸನಾತನ ಧರ್ಮವನ್ನು ಯಾವುದೇ ಗ್ರಂಥಗಳಲ್ಲಿ ಹುಡುಕಲು ಸಾಧ್ಯವಿಲ್ಲ; ಏಕೆಂದರೆ ಇದರ ಅನೇಕ ಮೂಲಗಳಿವೆ.
೨. ಸನಾತನ ಧರ್ಮದಲ್ಲಿ ಅನೇಕ ಕರ್ತವ್ಯಗಳನ್ನು ಉಲ್ಲೇಖಿಸಿದೆ. ಮಹಾವಿದ್ಯಾಲಯವು ಹೊರಡಿಸಿರುವ ಸುತ್ತೋಲೆಯನ್ನು ಪರಿಗಣಿಸಿದರೆ, ಇವೆಲ್ಲಾ ಕರ್ತವ್ಯಗಳನ್ನು ನಾಶ ಮಾಡುವಂತಿದೆ.
೩. ಒಬ್ಬ ಪ್ರಜೆ ತನ್ನ ದೇಶವನ್ನು ಪ್ರೀತಿಸುವುದಿಲ್ಲವೇ ? ಆತನಿಗೆ ದೇಶದ ಸೇವೆ ಮಾಡುವ ಕರ್ತವ್ಯ ಇಲ್ಲವೇ ? ನಾವು ನಮ್ಮ ತಂದೆ-ತಾಯಿಯರ ಸೇವೆ ಮಾಡುವುದು ಬೇಡವೇ ?, ಎಂದು ನ್ಯಾಯಾಲಯ ಪ್ರಶ್ನಿಸಿತು.
೪. ಅಸ್ಪೃಶ್ಯತೆಯನ್ನು ಸಹಿಸಲು ಸಾಧ್ಯವಿಲ್ಲ. ಸನಾತನ ಧರ್ಮದ ಸಿದ್ಧಾಂತಗಳಲ್ಲಿ ಎಲ್ಲೋ ಅನುಮತಿ ನೀಡಿರುವುದು ಕಂಡುಬಂದರೂ, ಅಸ್ಪೃಶ್ಯತೆಗೆ ಸ್ಥಾನ ಸಿಗುವುದಿಲ್ಲ. (ಸನಾತನ ಧರ್ಮದಲ್ಲಿ ಅಸ್ಪೃಶ್ಯತೆಗೆ ಸ್ಥಾನವಿಲ್ಲ. ಕಳೆದ ಕೆಲವು ಶತಮಾನಗಳಲ್ಲಿ ಅಸ್ಪೃಶ್ಯತೆ ಹರಡಿದೆ. ಅದನ್ನು ಬೆಂಬಲಿಸಲು ಸಾಧ್ಯವಿಲ್ಲ ! – ಸಂಪಾದಕರು) ಸಂವಿಧಾನದ ೧೭ ನೇ ವಿಧಿಯಲ್ಲಿ ಅಸ್ಪೃಶ್ಯತೆಯ ನಾಶದ ಬಗ್ಗೆ ಉಲ್ಲೇಖಿಸಿದ್ದರಿಂದ ಅದು ಸಂವಿಧಾನಾತ್ಮಕವಾಗಿರಲು ಸಾಧ್ಯವಿಲ್ಲ.