ಇಸ್ರೋದಿಂದ ಪ್ರಜ್ಞಾನ್ ರೋವರ್ ಕಾರ್ಯ ಸ್ಥಗಿತ !

ಸೆಪ್ಟೆಂಬರ್ 22 ರ ನಂತರ ರೋವರ್ ಮತ್ತೆ ಕಾರ್ಯನಿರ್ವಹಿಸುವ ನಿರೀಕ್ಷೆ !

ಬೆಂಗಳೂರು – ‘ಚಂದ್ರಯಾನ-3’ ರ ಪ್ರಜ್ಞಾನ್ ರೋವರ್ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಅದನ್ನು ಈಗ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ `ಪಾರ್ಕ’(ನಿಲುಗಡೆ) ಮಾಡಲಾಗಿದೆ ಮತ್ತು ಅದರ ‘ಸ್ಲೀಪ್ ಮೋಡ್’ (ಸ್ಥಗಿತಗೊಳಿಸುವಿಕೆ) ಸಕ್ರಿಯಗೊಳಿಸಲಾಗಿದ್ದು, ಅದರ ಉಪಕರಣಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಈ ಉಪಕರಣಗಳಲ್ಲಿರುವ ಮಾಹಿತಿಯನ್ನು ‘ವಿಕ್ರಮ್’ ಲ್ಯಾಂಡರ್ ಮೂಲಕ ಭೂಮಿಗೆ ಕಳುಹಿಸಲಾಗಿದೆ. ಸದ್ಯಕ್ಕೆ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದ್ದು, ಮುಂದಿನ ಸೂರ್ಯೋದಯವು ಸೆಪ್ಟೆಂಬರ್ 22, 2023 ರಂದು ಆಗಲಿದೆ. ಆ ಸಮಯದಲ್ಲಿ ಸೂರ್ಯನ ಬೆಳಕು ಬೀಳುವಂತೆ ಸೋಲಾರ್ ಪ್ಯಾನೆಲ್ ವಿನ್ಯಾಸ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ಮೇಲೆ ದಕ್ಷಿಣ ಧ್ರುವದಲ್ಲಿ ಇಳಿದಿತ್ತು ಮತ್ತು ‘ಪ್ರಜ್ಞಾನ್’ ರೋವರ್ 2 ಗಂಟೆ 26 ನಿಮಿಷಗಳ ನಂತರ ಹೊರಬಂದಿತ್ತು. ಆ ದಿನದಿಂದ ಮುಂದಿನ 14 ದಿನಗಳವರೆಗೆ ಸೂರ್ಯನ ಬೆಳಕು ಇತ್ತು. ಈ ಅವಧಿಯಲ್ಲಿ ಸೌರಶಕ್ತಿಯ ಮೂಲಕ ‘ವಿಕ್ರಮ್’ ಮತ್ತು ‘ಪ್ರಜ್ಞಾನ್’ ಕಾರ್ಯ ನಿರ್ವಹಿಸಲಿದ್ದರು. ಈಗ ಸೆಪ್ಟಂಬರ್ 4 ಕ್ಕೆ 14 ದಿನಗಳು ಪೂರ್ಣಗೊಳ್ಳುತ್ತಿರುವುದರಿಂದ ಇಲ್ಲಿ ಕತ್ತಲು ಆವರಿಸಲಿದೆ. ಆದ್ದರಿಂದ ಪ್ರಜ್ಞಾನ್ ಅನ್ನು ಇಸ್ರೋ ಸ್ಥಗಿತಗೊಳಿಸಿದೆ.

ಚಂದ್ರನ ಮೇಲೆ ಭಾರತದ ರಾಯಭಾರಿಯಾಗಿ ‘ಪ್ರಜ್ಞಾನ್’ ರೋವರ್ ಚಂದ್ರನ ಮೇಲೆ ಶಾಶ್ವತವಾಗಿ ಉಳಿಯಲಿದೆ !

ಇಸ್ರೋ, ಸೆಪ್ಟೆಂಬರ್ 22 ರ ನಂತರ, ರೋವರ್ ಮತ್ತೊಮ್ಮೆ ಹೊಸ ಕಾರ್ಯಕ್ಕಾಗಿ ಯಶಸ್ವಿಯಾಗಿ ಪ್ರಾರಂಭವಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದೆ. ಈ ‘ಪ್ರಜ್ಞಾನ್’ ರೋವರ್ ಭಾರತದ ಚಂದ್ರನಲ್ಲಿನ ರಾಯಭಾರಿಯಾಗಿ ಚಂದ್ರನ ಮೇಲೆ ಶಾಶ್ವತವಾಗಿ ಉಳಿಯುತ್ತದೆ.