ಈ ಸಂಚಿಕೆಯಿಂದ ‘ಹೋಮಿಯೋಪಥಿ’ ವಿಷಯದ ಹೊಸ, ಲೇಖನವನ್ನು ಓದಿರಿ !
ಇಂದಿನ ಒತ್ತಡಮಯ ಜೀವನದಲ್ಲಿ ಪ್ರತಿಯೊಬ್ಬರು ಮತ್ತು ಯಾವುದೇ ಸಮಯದಲ್ಲಿ ಸೋಂಕುರೋಗಗಳನ್ನು ಅಥವಾ ಇತರ ಯಾವುದಾದರೂ ರೋಗಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ತಕ್ಷಣ ತಜ್ಞವೈದ್ಯಕೀಯ ಸಲಹೆ ಸಿಗಬಹುದೆಂದು ಹೇಳಲು ಆಗುವುದಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ (ಎಸಿಡಿಟಿ) ಇಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗುತ್ತದೆ. ಹೋಮಿಯೋಪಥಿ ಚಿಕಿತ್ಸಾಪದ್ಧತಿ ಸಾಮಾನ್ಯ ಜನರಿಗೆ ಬಹಳ ಉಪಯುಕ್ತವಾಗಿದೆ. ಈ ಉಪಾಯಪದ್ಧತಿಯನ್ನು ಮನೆಯಲ್ಲಿಯೇ ಹೇಗೆ ಉಪಯೋಗಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ? ಇಂತಹ ಅನೇಕ ವಿಷಯಗಳ ಮಾಹಿತಿಯನ್ನು ಈ ಹೊಸ ಲೇಖನಮಾಲೆಯ ಮೂಲಕ ನೀಡುತ್ತಿದ್ದೇವೆ. ‘ಸನಾತನ ಪ್ರಭಾತ’ದ ವಾಚಕರೊಂದಿಗೆ ಸಾಧಕರು, ಕಾರ್ಯಕರ್ತರು, ಹಿತಚಿಂತಕರು ಮುಂತಾದವರೆಲ್ಲರಿಗೂ ಇದರಿಂದ ಲಾಭವಾಗಬಹುದು. (ಭಾಗ ೧)
ಸಂಕಲನಕಾರರ ಮನೋಗತ
ತಜ್ಞ ವೈದ್ಯಕೀಯ ಸಲಹೆ ಅಥವಾ ಪೇಟೆಯಲ್ಲಿ ಔಷಧಗಳು ಸಿಗದಿರುವಾಗಲೂ ಸ್ವತಃ ಅಥವಾ ಇತರರಿಗೆ ಹೋಮಿಯೋಪಥಿ ಚಿಕಿತ್ಸಾಪದ್ಧತಿಗನುಸಾರ ತಾತ್ಕಾಲಿಕ ಉಪಚಾರವನ್ನು ಮಾಡಲು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಈ ಲೇಖನಮಾಲೆಯನ್ನು ಮುದ್ರಿಸುತ್ತಿದ್ದೇವೆ. ಸಂಕ್ಷಿಪ್ತದಲ್ಲಿ, ಈ ಲೇಖನವನ್ನು ‘ಹೋಮಿಯೋಪಥಿ ಮನೆಮದ್ದು’ ಎಂಬ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ‘ಹೋಮಿಯೋಪಥಿ ವೈದ್ಯರಿಗೆ ಪರ್ಯಾಯ’ ಎಂಬ ದೃಷ್ಟಿಕೋನದಿಂದ ಬರೆದಿಲ್ಲ. ಆದ್ದರಿಂದ ಈ ಲೇಖನಮಾಲೆಯಲ್ಲಿ ಮುಖ್ಯವಾಗಿ ಚಿಕ್ಕ ಕಾಲಾವಧಿಯ ಕಾಯಿಲೆಗಳು ಹಾಗೆಯೇ ದೀರ್ಘಕಾಲೀನ ಕಾಯಿಲೆಗಳ ಲಕ್ಷಣಗಳು ನಡುನಡುವೆ ಕಂಡು ಬಂದಾಗ (acute flare ups), ಅವುಗಳಿಗೆ ಬೇಕಾಗುವ ಹೋಮಿಯೋಪಥಿ ಔಷಧಗಳ ಮಾಹಿತಿಯನ್ನು ಇದರಲ್ಲಿ ಕೊಡಲಾಗಿದೆ.
ಹೋಮಿಯೋಪಥಿಯ ಔಷಧಗಳನ್ನು ನೈಸರ್ಗಿಕ ಸ್ರೋತಗಳಿಂದ ತಯಾರಿಸಿದ ದ್ರವ್ಯಗಳನ್ನು ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ತಯಾರಿಸಲಾಗುತ್ತದೆ. ಆದ್ದರಿಂದ ಈ ಔಷಧಗಳಿಂದ ಯಾವುದೇ ಹಾನಿಯಾಗಲು ಸಾಧ್ಯವೇ ಇಲ್ಲ. ತಪ್ಪಿ ಅಯೋಗ್ಯ ಔಷಧವನ್ನು ಆಯ್ದುಕೊಂಡರೂ, ಅದರಿಂದ ರೋಗಿಗೆ ಮೂಲ ಕಾಯಿಲೆಯಿಂದಾಗುವ ತೊಂದರೆಗಿಂತ ಹೆಚ್ಚುವರಿ ತೊಂದರೆಗಳಾಗುವುದಿಲ್ಲ.
ಈ ಲೇಖನಮಾಲೆಯನ್ನು ಸಾಮಾನ್ಯ ವಾಚಕರ ದೃಷ್ಟಿಕೋನ ದಿಂದ ಬರೆಯಲಾಗಿದೆ. ಆದ್ದರಿಂದ ಈ ಲೇಖನಮಾಲೆಯ ಲಾಭಪಡೆದು ಉಪಚಾರ ಮಾಡಿಕೊಳ್ಳಲು ವೈದ್ಯಕೀಯ ಜ್ಞಾನದ (ಮೆಡಿಕಲ್ ನ್ವಾಲೇಜ್) ಅಥವಾ ಈ ಶಾಸ್ತ್ರದ ತರಬೇತಿಯ ಆವಶ್ಯಕತೆ ಇಲ್ಲ; ಏಕೆಂದರೆ ಹೋಮಿಯೋಪಥಿಯಲ್ಲಿ ‘ರೋಗಿಯ ಲಕ್ಷಣಗಳನ್ನು ತಿಳಿದುಕೊಂಡು ಆ ಲಕ್ಷಣಗಳನ್ನು ದೂರಗೊಳಿಸಲು ಯಾವ ಹೋಮಿಯೋಪಥಿ ಔಷಧದಲ್ಲಿ ಆ ಗುಣಧರ್ಮಗಳಿವೆಯೊ’ ಅವುಗಳಿಗನುಸಾರ ಔಷಧವನ್ನು ನೀಡಲಾಗುತ್ತದೆ. ಆಪತ್ಕಾಲದಲ್ಲಿ ಸ್ವತಃ ಉಪಚಾರಕ್ಕಾಗಿ ವಾಚಕರಿಗೆ ಔಷಧಗಳನ್ನು ಮೊದಲೇ ಖರೀದಿಸಿ ಇಡಬೇಕಾಗುವುದರಿಂದ, ಲೇಖನಮಾಲೆಯಲ್ಲಿ ಪ್ರತಿಯೊಂದು ಕಾಯಿಲೆಯ ಉಪಚಾರಕ್ಕಾಗಿ ಉಪಯೋಗಿಸುವ ಔಷಧಗಳ ಕನಿಷ್ಟ ಸಂಖ್ಯೆಯನ್ನು ನೀಡಲಾಗಿದೆ. ಗಂಭೀರ ಗಾಯಗಳು ಹಾಗೂ ಇತರ ಗಂಭೀರ ರೋಗಗಳಿಗೆ ತಜ್ಞ ವೈದ್ಯಕೀಯ ಸಲಹೆಯನ್ನು ಪಡೆದುಕೊಂಡೇ ಉಪಚಾರ ಮಾಡಬೇಕು. ಇಂತಹ ಪ್ರಸಂಗಗಳಲ್ಲಿ ತಕ್ಷಣ ವೈದ್ಯಕೀಯ ಸಹಾಯ ಸಿಗದಿದ್ದರೆ, ಅದು ಸಿಗುವ ತನಕ ಹೊಮಿಯೋಪಥಿ ಔಷಧಗಳನ್ನು ಕೊಡಬಹುದು.
ಈ ಲೇಖನಮಾಲೆಯಿಂದ ತಮ್ಮ ಬಗ್ಗೆ ಯಾವ ರೀತಿ ಹೋಮಿಯೋಪಥಿ ವೈದ್ಯರಿಗೆ (ಡಾಕ್ಟರರಿಗೆ) ಮಾಹಿತಿಯನ್ನು ಕೊಡಬೇಕೆಂಬುದು ಸಹ ರೋಗಿಗಳ ಗಮನಕ್ಕೆ ಬರುವುದು. ‘ಈ ಲೇಖನಮಾಲೆಯ ಲಾಭವನ್ನು ಪಡೆದು ಎಲ್ಲರೂ ಆರೋಗ್ಯಸಂಪನ್ನ ಜೀವನವನ್ನು ಜೀವಿಸಲಿ’, ಎಂದು ಶ್ರೀ ಗುರುಚರಣಗಳಲ್ಲಿ ಭಾವಪೂರ್ಣ ಪ್ರಾರ್ಥನೆಯನ್ನು ಮಡುತ್ತಿದ್ದೇವೆ ! – ಸಂಕಲನಕಾರರು
೧. ಹೋಮಿಯೋಪಥಿ ಎಂದರೇನು ?
ಹೋಮಿಯೋಪಥಿ ಶಬ್ದವು ‘ಹೋಮಿಯೋಸ್ (Homois) ಮತ್ತು ‘ಪ್ಯಾಥೋಸ್’ (Pathos) ಈ ಎರಡು ಗ್ರೀಕ್ ಭಾಷೆಯ ಪದಗಳಿಂದ ತಯಾರಾಗಿದೆ. ‘ಹೋಮಿಯೋಸ್’ ಅಂದರೆ ಸಾಮ್ಯ ಹಾಗೂ ‘ಪೆಥೋಸ್’ ಅಂದರೆ ರೋಗ ಅಥವಾ ರೋಗದ ಲಕ್ಷಣಗಳು. ಹೋಮಿಯೋಪಥಿ ಈ ಉಪಚಾರ ಪದ್ಧತಿ ಹೇಗಿದೆ ಎಂದರೆ, ರೋಗಿಗೆ ಕೊಡುವ ಔಷಧವನ್ನು ಆರೋಗ್ಯವಂತ ವ್ಯಕ್ತಿಗೆ ಕೊಟ್ಟರೆ ಅವನಲ್ಲಿ ರೋಗಿಯ ಲಕ್ಷಣಗಳು ಕಾಣಿಸತೊಡಗುತ್ತವೆ, ಉದಾ. ನೆಗಡಿಯನ್ನು ಗುಣಪಡಿಸುವ ‘ಎಲಿಯಮ್ ಸೇಪಾ’ ಈ ಔಷಧವನ್ನು ಆರೋಗ್ಯಶಾಲಿ ವ್ಯಕ್ತಿಗೆ ಕೊಟ್ಟರೆ, ಅವನ ಮೂಗಿನಿಂದ ಬಹಳಷ್ಟು ಪ್ರಮಾಣದಲ್ಲಿ ಉರಿಉರಿಯಾಗುವ ಸ್ರಾವ ಸ್ರವಿಸುವುದು, ಅದರಿಂದ ಮೂಗು ಮತ್ತು ಮೇಲಿನ ತುಟಿಯ ಚರ್ಮ ಸುಲಿಯುವುದು, ಸತತವಾಗಿ ಸೀನುಗಳು ಬರುವುದು, ಕಣ್ಣುಗಳಿಂದ ಉರಿಉರಿಯಾದ ನೀರು ಬರುವುದು, ಇಂತಹ ನೆಗಡಿಯ ಲಕ್ಷಣಗಳು ಉದ್ಭವಿಸುತ್ತವೆ.
೨. ಹೋಮಿಯೋಪಥಿಯ ಜನಕ ಡಾ. ಹಾನೆಮಾನ್
ಡಾ. ಸ್ಯಾಮುಎಲ್ ಹಾನೆಮಾನ್ ಇವರು ಜರ್ಮನಿಯಲ್ಲಿನ ಓರ್ವ ಆಧುನಿಕ ವೈದ್ಯರಾಗಿದ್ದರು (ಆಲೋಪಥಿ ಡಾಕ್ಟರ). ೧೭೮೧ ರಲ್ಲಿ ಅವರು ಖಾಸಗಿ ವ್ಯವಸಾಯ ಆರಂಭಿಸಿದ ನಂತರ ವೈದ್ಯಕೀಯ ಕ್ಷೇತ್ರದ ಅಂದಿನ ಉಪಚಾರಪದ್ಧತಿಯ ವಿಷಯದಲ್ಲಿ ಅವರಿಗೆ ಸಮಾಧಾನವಿರಲಿಲ್ಲ, ವಿಶೇಷವಾಗಿ ಉಪಚಾರವೆಂದು ರೋಗಿಯ ರಕ್ತವಾಹಿನಿಯಿಂದ ರಕ್ತವನ್ನು ತೆಗೆಯುವುದು, (bloodletting)’, ಇಂತಹ ಉಪಚಾರ ಪದ್ಧತಿಯ ಬಗ್ಗೆ ಅವರಿಗೆ ಸಮಾಧಾನವಿರಲಿಲ್ಲ. ‘ಅವರಿಗೆ ಕಲಿಸಿದ ವೈದ್ಯಕೀಯ ಶಾಸ್ತ್ರದಿಂದ ಕೆಲವೊಮ್ಮೆ ರೋಗಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರ ಕರ್ತವ್ಯಬುದ್ಧಿ ಅವರಿಗೆ ವೈದ್ಯಕೀಯ ಶಾಸ್ತ್ರದ ರೋಗಗಳು ಮತ್ತು ಔಷಧಗಳ ಬಗ್ಗೆ ಪೂರ್ಣ ಅಭ್ಯಾಸ ಇಲ್ಲದಿರುವಾಗ ರೋಗಿಗಳಿಗೆ ಉಪಚಾರ ಮಾಡಲು ಬಿಡುತ್ತಿರಲಿಲ್ಲ. ಆದ್ದರಿಂದ ನವವಿವಾಹಿತರಾಗಿದ್ದರೂ ಅವರು ತಮ್ಮ ವೈದ್ಯಕೀಯ ವ್ಯವಸಾಯವನ್ನು ನಿಲ್ಲಿಸಿ ವ್ಯವಸಾಯಿಕ ಅನುವಾದಕರೆಂದು ಕೆಲಸವನ್ನು ಆರಂಭಿಸಿದರು.
ಅನುವಾದದ ಕೆಲಸದ ಅಂತರ್ಗತ ೧೭೯೦ ರಲ್ಲಿ ಅವರ ಬಳಿ ಆಧುನಿಕ ವೈದ್ಯ ಕ್ಯುಲೇನ್ ಇವರ ‘ಮೆಟೇರಿಯಾ ಮೆಡಿಕಾ’ದ ಪ್ರಬಂಧವನ್ನು (A treatise on the Materia Medica) ಜರ್ಮನ್ ಭಾಷೆಗೆ ಅನುವಾದಿಸುವ ಕೆಲಸ ಬಂದಿತು. ಆ ಪ್ರಬಂಧದಲ್ಲಿ ‘ಸಿಂಕೋನಾ’ (cinchona) ಈ ಒಂದು ವೃಕ್ಷದ ಸಿಪ್ಪೆಯ ಕಹಿತನದಿಂದಾಗಿ ಅದು ಮಲೇರಿಯಾ (malaria) ರೋಗಕ್ಕೆ ಗುಣಕಾರಿಯಾಗುತ್ತದೆ’, ಎಂಬ ಉಲ್ಲೇಖ ಅವರಿಗೆ ಸಿಕ್ಕಿತು. ಇತರ ಕಹಿ ವಸ್ತುಗಳು ಮಲೇರಿಯಾ ಜ್ವರಕ್ಕೆ ಗುಣಕಾರಿಯಾಗಿಲ್ಲ್ಲ’, ಎಂದು ಶ್ರೀ. ಹಾನೆಮಾನ್ ಇವರ ನಿರೀಕ್ಷಣೆಯಾಗಿತ್ತು. ಆದ್ದರಿಂದ ಅವರು ತಮ್ಮ ಮೇಲೆ ಪ್ರಯೋಗ ನಡೆಸಿ ‘ಸಿಂಕೋನಾ’ದ ಮಾನವೀ ದೇಹದ ಮೇಲಿನ ಪರಿಣಾಮದ ಬಗ್ಗೆ ಸಂಶೋಧನೆಯನ್ನು ಆರಂಭಿಸಿದರು. ಈ ಔಷಧವನ್ನು ತಾವೇ ಸೇವಿಸಿದಾಗ ಅವರಲ್ಲಿ ಮಲೇರಿಯಾ ಜ್ವರದ ಲಕ್ಷಣಗಳು ಉತ್ಪನ್ನವಾದವು. ಇದರಿಂದ ಯಾವುದೇ ಆರೋಗ್ಯಶಾಲಿ ವ್ಯಕ್ತಿಯು ಈ ಔಷಧವನ್ನು ಸೇವಿಸಿದರೆ ಅವನಲ್ಲಿ ಮಲೇರಿಯಾದ ಲಕ್ಷಣಗಳು ಉದ್ಭವಿಸುತ್ತವೆ, ಎಂಬುದು ಅವರಿಗೆ ಸ್ಪಷ್ಟವಾಯಿತು.
ಅನಂತರ ಅವರು ‘ಸಿಂಕೋನಾ’ ಔಷಧವನ್ನು ಸೇವಿಸಿದಾಗ ಆಗುವ ಶಾರೀರಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಸೂಕ್ಷ್ಮ ರೀತಿಯಲ್ಲಿ ಪರಿಶೀಲಿಸಿದರು. ಈ ಲಕ್ಷಣಗಳು ಮೇಲುಮೇಲಿ ನಿಂದ ತಿಳಿದಿರುವ ಔಷಧದ ಗುಣಧರ್ಮಗಳ ಸಂಖ್ಯೆಗಿಂತ ಅನೇಕ ಪಟ್ಟು ಹೆಚ್ಚು ಇರುವುದು ಅವರ ಗಮನಕ್ಕೆ ಬಂತು. ಇಷ್ಟಕ್ಕೂ ಪೂರ್ಣ ಸಮಾಧಾನವಾಗದೆ ಅವರು ಮತ್ತೊಮ್ಮೆ ತಮ್ಮ ಮೇಲೆ ಹಾಗೂ ತಮ್ಮ ಮಿತ್ರರ ಮೇಲೆ ಪ್ರಯೋಗಿಸಿ ಅದರ ಅನುಭವ ಪಡೆದು ಖಾತ್ರಿಮಾಡಿಕೊಂಡರು. ಇದರಿಂದ ‘ಔಷಧದ ಪೂರ್ಣ ಗುಣಧರ್ಮವನ್ನು ತಿಳಿದುಕೊಳ್ಳಲು ಔಷಧವನ್ನು ಆರೋಗ್ಯಶಾಲಿ ಜನರ ಮೇಲೆ ಪ್ರಮಾಣಿಸಿ (prove) ನೋಡಬೇಕು’, ಎಂಬುದು ಅವರ ಗಮನಕ್ಕೆ ಬಂತು.
ಅನಂತರ ಎಕೋನಾಯಿಟ್, ಬೆಲಾಡೋನಾ, ನಕ್ಸ್ ಹ್ವೋಮಿಕಾ, ಆರ್ಸೆನಿಕ, ಮರ್ಕ್ಯುರಿ, ಸಲ್ಫರ್ ಇತ್ಯಾದಿ ಔಷಧಿ ದ್ರವ್ಯಗಳಿಂದಲೂ ಇಂತಹ ಅನುಭವವನ್ನು ಪಡೆದು ಆ ಔಷಧಗಳನ್ನು ಸೂಕ್ಷ್ಮ ಪ್ರಮಾಣದಲ್ಲಿ ರೋಗಿಗಳಿಗೆ ಕೊಟ್ಟು ಒಳ್ಳೆಯ ಪರಿಣಾಮ ಬಂದಿರುವುದನ್ನು ಅವರು ಮನಗಂಡರು ಹಾಗೂ ಅವುಗಳನ್ನು ರೋಗಿಗಳಿಗೆ ಕೊಡಲು ನಿರ್ಧರಿಸಿದರು.
ಈ ಪದ್ಧತಿಯಿಂದ ಉಪಚಾರ ಮಾಡುತ್ತಿರುವಾಗ ಅದರಿಂದಲೇ ಅವರಿಗೆ ಹೋಮಿಯೋಪಥಿಯ ತತ್ತ್ವ ಹೊಳೆಯಿತು ಹಾಗೂ ೧೭೯೬ ರಲ್ಲಿ ಅವರು ‘ಹೊಸ ತತ್ತ್ವದ ಮೇಲಿನ ಪ್ರಬಂಧ’ವನ್ನು (Essay on New Principle) ಪ್ರಸಿದ್ಧ ಪಡಿಸಿದರು. ಅನಂತರ ಅವರು ಈ ತತ್ತ್ವದ ಆಧಾರದಲ್ಲಿ ಪುನಃ ಖಾಸಗಿ ವೈದ್ಯಕೀಯ ವ್ಯವಸಾಯ ಹಾಗೂ ಹೋಮಿಯೋಪಥಿ ಉಪಚಾರಪದ್ಧತಿಯನ್ನು ಪ್ರಸಾರ ಮಾಡಲು ಆರಂಭಿಸಿದರು. (ಮುಂದುವರಿಯುವುದು)
– ಹೋಮಿಯೋಪಥಿ ಡಾಕ್ಟರ ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. ಸೌ. ಸಂಗೀತಾ ಭರಮಗುಡೆ
ಮುಂಬರುವ ಕಾಲದಲ್ಲಿ ‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ ! ಈ ಗ್ರಂಥದಿಂದ ಆಯ್ದುಕೊಂಡಿರುವ ಕೆಲವೊಂದು ಭಾಗವನ್ನು ಪ್ರತಿವಾರದ ಸಂಚಿಕೆಯಲ್ಲಿ ಲೇಖನದ ರೂಪದಲ್ಲಿ ಪ್ರಸಿದ್ಧ ಮಾಡಲಾಗುವುದು. ಸಾಧಕರು, ವಾಚಕರು, ರಾಷ್ಟ್ರ ಹಾಗೂ ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನವನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. |