ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಇವರ ಹೇಳಿಕೆ !ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೇರಿಕಾ ಭಾಗವಹಿಸುವಿಕೆಯ ಕುರಿತು ವಿರೋಧ ವ್ಯಕ್ತಪಡಿಸಿದರು ! |
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ವಿವೇಕ ರಾಮಸ್ವಾಮಿ ಅವರು ಭಾರತ-ಅಮೆರಿಕಾ ಸಂಬಂಧಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಹಿಂದೂ ಎಂದು ಹೆಮ್ಮೆಪಡುವ 38ರ ಹರೆಯದ ರಾಮಸ್ವಾಮಿ ಅವರು ಮಾತನಾಡುತ್ತಾ, ಸದ್ಯ ಅಮೆರಿಕಾ ಆರ್ಥಿಕವಾಗಿ ಚೀನಾವನ್ನು ಅವಲಂಬಿಸಿದೆ. ಭಾರತ ಮತ್ತು ಅಮೇರಿಕಾ ನಡುವಿನ ಸಂಬಂಧ ಬಲವರ್ಧನೆಗೊಂಡಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಅಮೇರಿಕಾಗೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಅವರು ಅಮೇರಿಕೆಯ ಅಯೋವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
1. ರಾಮಸ್ವಾಮಿ ಅವರು ಮಾತನಾಡುತ್ತಾ, ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿಯೂ ಭಾರತದೊಂದಿಗೆ ಅಮೇರಿಕಾ ತನ್ನ ಸೇನಾ ಸಂಬಂಧವನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು. ಇದರಿಂದ ಅವಶ್ಯಕತೆ ಬಿದ್ದರೆ ಚೀನಾವನ್ನು ‘ಮಲಕ್ಕಾ ಜಲಸಂಧಿ’ಯಲ್ಲಿ ತಡೆಯಲು ಸಾಧ್ಯವಾಗುತ್ತದೆ. ಮಧ್ಯಪ್ರಾಚ್ಯ ದೇಶಗಳಿಂದ ತೈಲ ಖರೀದಿಸಲು ಚೀನಾದ ಹಡಗುಗಳು ‘ಮಲಕ್ಕಾ ಜಲಸಂಧಿ’ಯ ಮೂಲಕ ಹಾದು ಹೋಗಬೇಕಾಗುತ್ತದೆ ಎಂದು ಹೇಳಿದರು.
2. ರಾಮಸ್ವಾಮಿ ಅವರು ಮಾತನ್ನು ಮುಂದುವರೆಸುತ್ತಾ, ಭಾರತದೊಂದಿಗೆ ಈ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದು ಅಮೇರಿಕಾಗೆ ಒಳಿತಿದೆ. ಪ್ರಧಾನಮಂತ್ರಿ ಮೋದಿಯವರು ಭಾರತಕ್ಕೆ ಉತ್ತಮ ನಾಯಕರಾಗಿದ್ದಾರೆ. ಅವರೊಂದಿಗೆ ಭಾರತ-ಅಮೆರಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ನಾನು ಬಯಸುತ್ತೇನೆ ಎಂದು ಹೇಳಿದರು.
3. ರಾಮಸ್ವಾಮಿ ಅವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೇರಿಕಾದ ಪಾಲ್ಗೊಳ್ಳುವಿಕೆಯ ವಿರುದ್ಧ ಇದ್ದಾರೆ. ಈ ನಿಟ್ಟಿನಲ್ಲಿ ಅವರು, ಅಮೇರಿಕಾದ ವಿದೇಶಾಂಗ ನೀತಿಯಲ್ಲಿನ ದೊಡ್ಡ ಸವಾಲು ಎಂದರೆ ನಾವು ನಮ್ಮ ಭೂಮಿಯನ್ನು ಸುಭದ್ರಗೊಳಿಸಲು ಅಸಮರ್ಥತೆಯನ್ನು ತೋರಿಸುತ್ತಿದ್ದೇವೆ. ಯಾವ ಕ್ಷೇತ್ರಗಳಲ್ಲಿ ಯುದ್ಧಗಳು ನಡೆಯುತ್ತಿವೆಯೋ, ಅಂತಹ ಪ್ರದೇಶಗಳಲ್ಲಿ ಭಾಗವಹಿಸುವುದರಿಂದ ಅಮೇರಿಕಾಗೆ ಯಾವುದೇ ಪ್ರಯೋಜನವಿಲ್ಲ. ಅಮೇರಿಕಾ ಕಮ್ಯುನಿಸ್ಟ್ ಚೀನಾದತ್ತ ಗಮನಹರಿಸಬೇಕು; ಏಕೆಂದರೆ ಇದು ಅಮೇರಿಕಾದ ಎದುರಿಗಿರುವ ಅತಿದೊಡ್ಡ ಬಿಕ್ಕಟ್ಟು ಆಗಿದೆ ಎಂದು ಹೇಳಿದರು.
4. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧವೂ ಬಹಳ ದೊಡ್ಡ ಪ್ರಮಾಣದಲ್ಲಿದೆ. ಕಳೆದ ವರ್ಷ ಅಮೇರಿಕಾ ಮತ್ತು ಚೀನಾ ನಡುವಿನ ವ್ಯಾಪಾರವು ಒಟ್ಟು 690 ಬಿಲಿಯನ್ ಡಾಲರ್ ಆಗಿತ್ತು. ಇದರಲ್ಲಿ ಅಮೇರಿಕಾ ಚೀನಾದಿಂದ 536 ಬಿಲಿಯನ್ ಡಾಲರ್ ಮೌಲ್ಯದ ಸಾಮಗ್ರಿಗಳನ್ನು ಆಮದು ಮಾಡಿಕೊಂಡಿದೆ.
(ಸೌಜನ್ಯ : Oneindia News)
ವಿವೇಕ್ ರಾಮಸ್ವಾಮಿಯವರ ಜನಪ್ರಿಯತೆಯಲ್ಲಿ ಭಾರೀ ಹೆಚ್ಚಳ !
ವಿವೇಕ್ ರಾಮಸ್ವಾಮಿ ಅವರನ್ನು ರಿಪಬ್ಲಿಕನ್ ಪಕ್ಷದ ಪ್ರಮುಖ ಅಭ್ಯರ್ಥಿಯಾಗಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉತ್ತರಾಧಿಕಾರಿಯೆಂದು ಪರಿಗಣಿಸಲಾಗಿದೆ. ಅವರು ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದಾರೆ. ಅವರು ಬಿಲಿಯನೇರ್ ಉದ್ಯಮಿಯಾಗಿದ್ದು,’ರೋಯಿವಂತ ಸಾಯನ್ಸಸ್’ ಎಂಬ ಜೈವಿಕ ತಂತ್ರಜ್ಞಾನ (ಜೈವಿಕ ತಂತ್ರಜ್ಞಾನ) ಕಂಪನಿಯ ಸಂಸ್ಥಾಪಕರಾಗಿದ್ದಾರೆ. ಆಗಸ್ಟ್ 23 ರಂದು, ಅಮೇರಿಕಾದ ವಿಸ್ಕೊಸಿನ್ ರಾಜ್ಯದ ಮಿಲವಾಉಕಿಯಲ್ಲಿ ನಡೆದ ಮೊದಲ ರಾಷ್ಟ್ರಾಧ್ಯಕ್ಷೀಯ ಸಂವಾದದ ನಂತರ ಅವರ ಜನಪ್ರಿಯತೆಯಲ್ಲಿ ಅತ್ಯಧಿಕ ಹೆಚ್ಚಳವಾಯಿತು. ರಿಪಬ್ಲಿಕನ್ ಪಕ್ಷದ ಇತರ ಅಭ್ಯರ್ಥಿಗಳ ತುಲನೆಯಲ್ಲಿ ಅವರು ಬಲಪಂಥೀಯರಾಗಿ ಹೊರಹೊಮ್ಮಿದರು. ಇದರಿಂದ ಅವರಿಗೆ ಸಿಗುತ್ತಿರುವ ಆರ್ಥಿಕ ನೆರವಿನಲ್ಲಿಯೂ ಭಾರಿ ಏರಿಕೆಯಾಗಿದೆ.