ಡಾ. ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರದ ಇಂದು ಅಂತ್ಯಸಂಸ್ಕಾರ

7 ದಿನಗಳ ರಾಷ್ಟ್ರೀಯ ಶೋಕಾಚರಣೆ

ನವದೆಹಲಿ – ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಡಿಸೆಂಬರ್ 26 ರ ರಾತ್ರಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ಅವರನ್ನು ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ರಾತ್ರಿ 9 ಗಂಟೆ 51 ನಿಮಿಷಕ್ಕೆ ನಿಧನರಾದರು. ಡಿಸೆಂಬರ್ 28 ರಂದು ದೆಹಲಿಯಲ್ಲಿ ಸರಕಾರಿ ಗೌರವಗಳೊಂದಿಗೆ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಾಡಲಾಗುವುದು. ಅವರ ಪಾರ್ಥಿವ ಶರೀರವನ್ನು ರಾಜಧಾನಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕೆಲಕಾಲ ಇಡಲಾಗುವುದು. ಡಾ. ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಇನ್ನೊಂದೆಡೆ, ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಅಲ್ಲದೇ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ರದ್ದಾಗಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಗಳನ್ನೂ ಕೂಡ ರದ್ದುಗೊಳಿಸಲಾಗಿದ್ದು ಪಕ್ಷದ ಕಾರ್ಯಕ್ರಮಗಳು ಜನವರಿ 3ರ ನಂತರ ಆರಂಭವಾಗಲಿವೆ.

ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಜೀವನ ಪರಿಚಯ

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಸೆಪ್ಟೆಂಬರ್ 2, 1932 ರಂದು ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಪಂಜಾಬ ಮತ್ತು ಪೇಶಾವರದ ಪ್ರಾಥಮಿಕ ಶಾಲೆಗಳಲ್ಲಿ ಪಡೆದರು. ವಿಭಜನೆಯ ನಂತರ, ಅವರ ಕುಟುಂಬವು ಭಾರತದ ಪಂಜಾಬಿನ ಅಮೃತಸರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ನಂತರ ಪಂಜಾಬ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡಿದರು. ತದನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದರು. ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆ ಗೌರವ ಪದವಿ ಪಡೆದರು. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಡಿ.ಫಿಲ್ ಪದವಿಯನ್ನೂ ಸಹ ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ಅಲ್ಲದೇ ದೆಹಲಿ ವಿಶ್ವವಿದ್ಯಾನಿಲಯದ ‘ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ಅವರು ಯೋಜನಾ ಆಯೋಗದ ಸದಸ್ಯರಾಗಿದ್ದರು ಮತ್ತು ನಂತರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಹ ಆಗಿದ್ದರು. ಅಲ್ಲದೇ 1991ರಲ್ಲಿ ಪ್ರಧಾನಿ ನರಸಿಂಹರಾವ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಈ ಸಮಯದಲ್ಲಿ, ಅವರು ದೇಶದಲ್ಲಿ ಆರ್ಥಿಕ ಉದಾರೀಕರಣದ ನೀತಿಯನ್ನು ತಂದರು. 2004ರಲ್ಲಿ ಮತ್ತು 2009ರಲ್ಲಿ ಅವರು ದೇಶದ ಪ್ರಧಾನಿಯಾದರು. ತಮ್ಮ ಕಾಲಾವಧಿಯಲ್ಲಿ ಅವರು ‘ರೈಟ್ ಟು ಎಜ್ಯುಕೇಶನ್’(ಶಿಕ್ಷಣದ ಹಕ್ಕು), ರೈಟ್ ಟು ಇನ್ಫಾರ್ಮೇಶನ್( ಮಾಹಿತಿ ಹಕ್ಕು ಅಧಿನಿಯಮ) ಇತ್ಯಾದಿ ನಿರ್ಧಾರಗಳನ್ನು ಕೈಗೊಂಡರು. ಅವರು ದೇಶದ ಮೊದಲ ಸಿಖ್ ಮತ್ತು ದೀರ್ಘಾವಧಿಯವರೆಗೆ ಸೇವೆ ಸಲ್ಲಿಸಿದ ಭಾರತದ ನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದರು.

ಗಣ್ಯರ ಪ್ರತಿಕ್ರಿಯೆಗಳು:

ಡಾ. ಮನಮೋಹನ ಸಿಂಗ್ ಇವರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ನಮ್ಮ ದೇಶದಲ್ಲಿ ಹೊಸ ಆರ್ಥಿಕತೆಗೆ ದಾರಿ ಮಾಡಿಕೊಟ್ಟವರು! – ಪ್ರಧಾನಿ ನರೇಂದ್ರ ಮೋದಿ

ದೇಶವಾಸಿಗರ ಪರವಾಗಿ ನಾನು ಡಾ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಪಕ್ಷದ ರಾಜಕಾರಣವನ್ನು ಹೊರತು ಪಡಿಸಿ ಅವರು ಪ್ರತಿಯೊಂದು ಪಕ್ಷದವರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದರು ಮತ್ತು ಅವರು ಸುಲಭವಾಗಿ ಎಲ್ಲರನ್ನೂ ಭೇಟಿಯಾಗುತ್ತಿದ್ದರು. ದೆಹಲಿಗೆ ಬಂದ ಮೇಲೂ ನಾನು ಅವರನ್ನು ಭೇಟಿಯಾಗುತ್ತಿದ್ದೆ. ಅವರೊಂದಿಗಿನ ನನ್ನ ಸಭೆಗಳು ಮತ್ತು ಚರ್ಚೆಗಳು ಯಾವಾಗಲೂ ನನಗೆ ನೆನಪಾಗುತ್ತವೆ. ಈ ದುಃಖದ ಸಮಯದಲ್ಲಿ ನಾನು ಅವರ ಕುಟುಂಬದವರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ನಾನು ಎಲ್ಲಾ ದೇಶವಾಸಿಗರ ಪರವಾಗಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ. ಮನಮೋಹನ ಸಿಂಗ್ ಅವರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ನಮ್ಮ ದೇಶದಲ್ಲಿ ಹೊಸ ಅರ್ಥವ್ಯವಸ್ಥೆಯ ಮಾರ್ಗವನ್ನು ತೋರಿಸಿಕೊಟ್ಟರು. ಅವರ ಕೊಡುಗೆ ಸದಾ ಸ್ಮರಣೀಯವಾಗಿರುವುದು. ಅವರ ಜನತೆಯೊಂದಿಗಿನ ಮತ್ತು ದೇಶದ ಅಭಿವೃದ್ಧಿಗೆ ಅವರ ಬದ್ಧತೆಯನ್ನು ಯಾವಾಗಲೂ ಗೌರವದಿಂದ ನೋಡಲಾಗುವುದು. ಅವರ ಜೀವನವು ಅವರ ಪ್ರಾಮಾಣಿಕತೆ ಮತ್ತು ಸರಳತೆಯ ಪ್ರತಿಬಿಂಬವಾಗಿತ್ತು. ಅವರ ನಮ್ರತೆ ಮತ್ತು ಸೌಮ್ಯತೆ ಅವರ ಸಂಸದೀಯ ಜೀವನದ ವೈಶಿಷ್ಟ್ಯವಾಗಿತ್ತು.

ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ನಾನು ನನ್ನ ಮಾರ್ಗದರ್ಶಕ ಮತ್ತು ಗುರುವನ್ನು ಕಳೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ.

ಡಾ. ಮನಮೋಹನ ಸಿಂಗ್, ಭಾರತದ ಆರ್ಥಿಕತೆಯ ಆಧುನಿಕ ನಿರ್ಮಾತ ! – ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಾತನಾಡಿ, ಡಾ. ಮನಮೋಹನ ಸಿಂಗ್ ಅವರ ಅಗಲಿಕೆಯು ದೇಶಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ. ಅನೇಕ ವರ್ಷಗಳಿಂದ ನನಗೆ ಅವರ ಪರಿಚಯವಿತ್ತು. ನಾನು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗುತ್ತಿದ್ದೆ. ಅವರು ಸೌಮ್ಯತೆಯ ಪ್ರತೀಕವಾಗಿದ್ದರು. ಅವರು ಭಾರತೀಯ ಆರ್ಥಿಕತೆಯ ಆಧುನಿಕ ಶಿಲ್ಪಕಾರರಾಗಿದ್ದಾರೆ.

ದೇಶಕ್ಕೆ ಮನಮೋಹನ ಸಿಂಗ್ ಕೊಡುಗೆ ಸದಾ ಸ್ಮರಣೀಯ! – ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನಿಧನದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ವ್ಯಕ್ತಪಡಿಸಿದರು. ಅವರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಮನಮೋಹನ ಸಿಂಗ್ ಅವರು ಒಂದು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತ್ಯುನ್ನತ ಹುದ್ದೆಯನ್ನು ತಲುಪಿದರು. ಅವರು ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದರು. ಅವರ ಕೊಡುಗೆಯನ್ನು ದೇಶವು ಸದಾ ಸ್ಮರಿಸುತ್ತದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಹೇಳಿದರು.

ಭಾರತ-ಅಮೆರಿಕ ಸಂಬಂಧಗಳ ಉತ್ತಮ ಬೆಂಬಲಿಗ ! – ಅಮೇರಿಕೆಯ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್

ಅಮೇರಿಕೆಯ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಾ, ಅವರು `ಭಾರತ-ಅಮೇರಿಕಾ ಸಂಬಂಧಗಳ ಮಹಾನ್ ಬೆಂಬಲಿಗರಾಗಿದ್ದರು’ ಎಂದು ಉಲ್ಲೇಖಿಸಿದ್ದಾರೆ. `ಕಳೆದ ಎರಡು ದಶಕಗಳ ಭಾರತ ಮತ್ತು ಅಮೇರಿಕೆಯ ದ್ವಿಪಕ್ಷೀಯ ಸಾಧನೆಗಳಿಗೆ ಅಡಿಪಾಯ ಮನಮೋಹನ ಸಿಂಗ್ ಅವರ ಕಾರ್ಯವಾಗಿದೆ ಎಂದು ಬ್ಲಿಂಕನ್ ಹೇಳಿದರು.

ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರು ಡಾ. ಮನಮೋಹನ ಸಿಂಗ್ ಅವರು ಅಸಾಧಾರಣ ಬುದ್ಧಿವಂತಿಕೆ, ಪ್ರಾಮಾಣಿಕತೆ ಮತ್ತು ಜಾಣ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿ ಅತೀವ ದುಃಖವಾಗಿದೆ ಎಂದು ಪ್ರತಿಕ್ರಿಯಿಸಿದರು.

ಜಾಗತಿಕ ಮಾಧ್ಯಮಗಳು ಮಾಜಿ ಪ್ರಧಾನಿಗಳ ಬಗ್ಗೆ ಪ್ರಕಟಿಸಿದ ಸುದ್ದಿ!

  • ಡಾ. ಮನಮೋಹನ ಸಿಂಗ್ ಅವರ ನಿಧನದ ನಂತರ ಜಾಗತಿಕ ಮಾಧ್ಯಮಗಳಲ್ಲಿ ಹಲವು ಸುದ್ದಿಗಳು ಪ್ರಕಟವಾಗಿವೆ. ‘ನ್ಯೂಯಾರ್ಕ್ ಟೈಮ್ಸ್’ ಅಮೇರಿಕೆಯ ದಿನಪತ್ರಿಕೆ ಅವರನ್ನು ‘ಮೃದುಭಾಷಿ ಮತ್ತು ಬುದ್ಧಿವಂತ’ ಎಂದು ಬಣ್ಣಿಸಿದೆ.
  •  ವಾಷಿಂಗ್ಟನ್ ಪೋಸ್ಟ್ ಅವರನ್ನು ” ದೊಡ್ಡ ಬದಲಾವಣೆ ತಂದಂತಹ ನಾಯಕ” ಎಂದು ಕರೆದಿದೆ.
  • ಬಿಬಿಸಿ ಸಿಂಗ್ ಅವರನ್ನು ‘ಆರ್ಥಿಕ ಸುಧಾರಣೆಯ ಪ್ರವರ್ತಕ’ ಎಂದು ಬಣ್ಣಿಸಿದೆ
  • ‘ದಿ ಗಾರ್ಡಿಯನ್’ ಡಾ. ಮನಮೋಹನ ಸಿಂಗ್ ಅವರನ್ನು ‘ಇಚ್ಛೆಯಿಲ್ಲದ ಪ್ರಧಾನಿ’ ಎಂದು ಕರೆದಿದೆ.