ಭಕ್ತವತ್ಸಲ ಶ್ರೀಕೃಷ್ಣ ಮತ್ತು ಶ್ರೀಕೃಷ್ಣಪ್ರಾಪ್ತಿಯ ಸೆಳೆತವಿರುವ ಗೋಪಿಯರ ಭಕ್ತಿಮಯ ರಾಸಲೀಲೆ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಮನ್ವಯಕಿ ಕು. ತೇಜಲ ಪಾತ್ರಿಕರ ಇವರು ರಾಸಲೀಲೆ ಮತ್ತು ಗೋಪಿಯರ ಆಧ್ಯಾತ್ಮಿಕ ಮಹತ್ವದ ವಿಷಯದಲ್ಲಿ ನೀಡಿದ ಮಾಹಿತಿ.

ಕೋಜಾಗಿರಿ ಹುಣ್ಣಿಮೆಯ ಶುಭ ದಿನವೇ ದ್ವಾಪರಯುಗದಲ್ಲಿ ಶ್ರೀಕೃಷ್ಣನು ತನ್ನ ಪರಮ ಭಕ್ತರಾದ ಗೋಪಿಯರು ಮತ್ತು ರಾಧೆಯ ಜೊತೆಗೆ ರಾಸಲೀಲೆಯನ್ನಾಡಿ ಅದರ ಮೂಲಕ ಗೋಪಿಯರಿಗೆ ಮತ್ತು ರಾಧೆಗೆ ಸಾಧನೆಯ ಸರ್ವೋತ್ತಮ ಆನಂದದ ಅನುಭೂತಿಯನ್ನು ನೀಡಿದ್ದನು.

೧. ಗೋಪಿಯರ ಮತ್ತು ಭಗವಾನ ಶ್ರೀಕೃಷ್ಣನ ಪವಿತ್ರ ರಾಸಲೀಲೆಯ ಸ್ವರೂಪ !

ವೃಂದಾವನದಲ್ಲಿ ಭಗವಾನ ಶ್ರೀಕೃಷ್ಣನ ಸ್ಮರಣೆ ಮಾಡಿದೊಡನೆ ನಮಗೆ ಆ ರಾಸಲೀಲೆಯ ನೆನಪಾಗುತ್ತದೆ ! ಸಾಕ್ಷಾತ್‌ ಭಗವಂತನ ಜೊತೆಗೆ ಮಾಡಿದ ರಾಸಲೀಲೆಯು ಅವನ ಒಂದು ಲೀಲೆಯೇ ಆಗಿದೆ. ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಮಹರ್ಷಿ ವ್ಯಾಸರು ವರ್ಣಿಸಿದಂತೆ ಆ ರಾತ್ರಿ ಈ ರಾಸೋತ್ಸವ ಆರಂಭವಾಯಿತು ಹಾಗೂ ಅದು ಸೂರ್ಯೋದಯದ ತನಕ ಅಂದರೆ ಬೆಳಗ್ಗಿನ ವರೆಗೆ ಅವಿರತವಾಗಿ ನಡೆಯಿತು.

‘ಸಾಕ್ಷಾತ್‌ ಭಗವಂತನ ಜೊತೆಗಿನ ಆ ರಾಸವು ಎಷ್ಟು ಅದ್ವಿತೀಯವಿರಬಹುದು !’, ಎಂಬುದನ್ನು ಶಬ್ದದಲ್ಲಿ ವಿವರಿಸಲು ಸಾಧ್ಯವಿಲ್ಲ. ಗೋಪಿಯರ ಭಕ್ತಿಗೆ ‘ಆದರ್ಶ ಭಕ್ತಿ’ ಎನ್ನುತ್ತಾರೆ. ಮೋಹಮಾಯೆಯಿಂದ ವಿರಕ್ತರಾಗಿರುವ ಗೋಪಿಯರು ಮತ್ತು ಭಗವಾನ ಶ್ರೀಕೃಷ್ಣನ ರಾಸಲೀಲೆ ಎಷ್ಟು ಪವಿತ್ರವಿರಬಹುದು !

ಕು. ತೇಜಲ್ ಪಾತ್ರಿಕರ್

೧ ಅ. ಶ್ರೀಕೃಷ್ಣನು ತನ್ನ ಕೊಳಲಿನಲ್ಲಿ ಗೋಪಿಯರಿಗೆ ಇಷ್ಟದ ಗೀತೆಯನ್ನು ಬಾರಿಸಲು ಆರಂಭಿಸಿದನು ಹಾಗೂ ಆ ಧ್ವನಿ ಗೋಪಿಯರ ಕಿವಿಗೆ ಬಿತ್ತು. ಭಗವಂತನ ಕೊಳಲಿನ ನಾದದಿಂದ ಅವರು ತಮ್ಮ ಅಸ್ತಿತ್ವವನ್ನೇ ಮರೆತು ತಮ್ಮೆಲ್ಲ ಕಾರ್ಯವನ್ನು ಬಿಟ್ಟು ಶ್ರೀಕೃಷ್ಣನ ಬಳಿ ಓಡೋಡಿ ಬಂದರು.

೧ ಆ. ‘ಮನೆಮಠಗಳನ್ನು ತೊರೆದು ನನ್ನಲ್ಲಿಗೆ ಬರುವುದು’, ಅಧರ್ಮವಾಗುತ್ತದೆ’, ಎಂದು ಶ್ರೀಕೃಷ್ಣ ಗೋಪಿಯರಿಗೆ ಹೇಳುವುದು ಹಾಗೂ ‘ಭಗವಂತನು ಎದುರಿನಲ್ಲಿರುವಾಗ ಹೇಗೆ ಹಿಂತಿರುಗಿ ಹೋಗುವುದು ?’, ಎಂದು ಗೋಪಿಯರು ಕೇಳುವುದು : ಗೋಪಿಯರು ಶ್ರೀಕೃಷ್ಣನಲ್ಲಿಗೆ ಬಂದಾಗ ಅವನು ಗೋಪಿಯರಿಗೆ ಹೇಳಿದನು, ”ರಾತ್ರಿಯ ಸಮಯದಲ್ಲಿ ತಮ್ಮ ಮನೆಮಠಗಳನ್ನು ತೊರೆದು ನನ್ನಲ್ಲಿಗೆ ಬರುವುದು ಅಧರ್ಮವಾಗುತ್ತದೆ” ಭಗವಂತನ ವಚನವನ್ನು ಕೇಳಿ ಗೋಪಿಯರು ಶ್ರೀಕೃಷ್ಣನಿಗೆ ಹೇಳಿದರು, ”ಕೃಷ್ಣಾ ಇವೆಲ್ಲ ಉಪದೇಶಗಳು ಯೋಗ್ಯವೇ ಆಗಿವೆ; ಆದರೆ ಎಲ್ಲ ಕಾರ್ಯಗಳ ಗುರಿ ನಿನ್ನ ಪ್ರಾಪ್ತಿಯಲ್ಲವೇ ! ನಮಗೆ ನಿನ್ನ ಭಕ್ತಿಯ ಹುಚ್ಚು ಹಿಡಿದಿರುವುದರಿಂದ ಪ್ರತ್ಯಕ್ಷ ಭಗವಂತ, ಅಂದರೆ ನೀನು ನಮ್ಮ ಎದುರಿಗೆ ಇರುವಾಗ ನಾವು ಹೇಗೆ ಹಿಂತಿರುಗಿ ಹೋಗುವುದು ?’

೧ ಇ. ಗೋಪಿಯರ ತೀವ್ರ ಮುಮುಕ್ಷುತ್ವವನ್ನು ನೋಡಿ ಭಗವಾನ ಶ್ರೀಕೃಷ್ಣ ಅಧ್ಯಾತ್ಮದಲ್ಲಿನ ‘ಉತ್ತಮಾಧಿಕಾರಿ’ಗಳೆಂದು ಅವರನ್ನು ಸ್ವೀಕರಿಸುವುದು : ಗೋಪಿಯರ ಈ ಮಾತಿನಿಂದ ಭಗವಂತನಿಗೆ ಅತ್ಯಂತ ಆನಂದವಾಗುತ್ತದೆ. ಭಗವಾನ ಶ್ರೀಕೃಷ್ಣ ಗೋಪಿಯರ ತೀವ್ರ ಮುಮುಕ್ಷುತ್ವವನ್ನು ನೋಡಿ ಅಧ್ಯಾತ್ಮದ ‘ಉತ್ತಮಾಧಿಕಾರಿ’ಗಳೆಂದು ಅವರನ್ನು ಸ್ವೀಕರಿಸುತ್ತಾನೆ. ಅನೇಕ ದೊಡ್ಡ ದೊಡ್ಡ ತಪಸ್ವಿಗಳಿಗೆ ಮನೆಮಠಗಳ ಮೋಹವನ್ನು ತ್ಯಜಿಸಲು ಸಾಧ್ಯವಾಗದಿರುವಾಗ, ಗೋಪಿಯರು ಅದನ್ನು ತ್ಯಜಿಸಿದರು. ಆದ್ದರಿಂದ ಶ್ರೀಕೃಷ್ಣನು ಅವರನ್ನು ಪ್ರಶಂಸಿಸುತ್ತಾ ಸ್ವೀಕರಿಸಿ ಅವರೊಂದಿಗೆ ರಾಸಲೀಲೆಯನ್ನಾಡಿದನು.

೧ ಈ. ಗೋಪಿಯರಲ್ಲಿ ಶ್ರೀಕೃಷ್ಣಪ್ರಾಪ್ತಿಯ ತೀವ್ರ ಸೆಳೆತವಿರುವುದು : ಈ ಅಂಶದಿಂದ ನಮಗೆ ಗೋಪಿಯರಲ್ಲಿ ಶ್ರೀಕೃಷ್ಣನ ಬಗ್ಗೆ ಎಷ್ಟು ಸೆಳೆತವಿತ್ತು ಎಂದು ಗೊತ್ತಾಗುತ್ತದೆ ! ಭಗವಂತನು ಅವರನ್ನು ‘ಹಿಂತಿರುಗಿ ಹೋಗಿರಿ’, ಎಂದರೂ ಅವರು ಹೋಗಲಿಲ್ಲ. ದೇವರ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾದರು ಹಾಗೂ ಭಗವಂತನ ಜೊತೆಗೆ ರಾಸಲೀಲೆಯಾಡಲು ಅವರಿಗೆ ಸಾಧ್ಯವಾಯಿತು.

೧ ಉ. ಭಕ್ತವತ್ಸಲ ಶ್ರೀಕೃಷ್ಣ ! : ಈ ರಾಸಲೀಲೆಯ ಸಮಯದಲ್ಲಿ ಶ್ರೀಕೃಷ್ಣನು ಲಕ್ಷಗಟ್ಟಲೆ ಗೋಪಿಯರ ಜೊತೆಗೆ ಅಷ್ಟೇ ರೂಪ ಗಳನ್ನು ಧಾರಣೆ ಮಾಡಿ ರಾಸಲೀಲೆಯನ್ನಾಡಿದನು. ಅದನ್ನು ಮಾಡುವಾಗ ಗೋಪಿಯರ ರೂಪದಲ್ಲಿ ಶ್ರೀಕೃಷ್ಣನು ಅಷ್ಟೇ ಸಮಯ ಆ ಗೋಪಿಯರ ಪತಿಯರ ಜೊತೆಗೂ ಇದ್ದನು.

೨. ವ್ಯಾಸರು ಭಾಗವತ ಮಹಾಪುರಾಣದಲ್ಲಿ ಹೇಳಿರುವ ರಾಸಲೀಲೆಯ ಆಧ್ಯಾತ್ಮಿಕ ಮಹಾತ್ಮೆ !

ರಾಸಲೀಲೆಯ ಆಧ್ಯಾತ್ಮಿಕ ಮಹಾತ್ಮೆಯನ್ನು ಹೇಳುವಾಗ ವ್ಯಾಸರು ಭಾಗವತ ಮಹಾಪುರಾಣದಲ್ಲಿ ಮುಂದಿನಂತೆ ಹೇಳಿದ್ದಾರೆ, ‘ಶ್ರದ್ಧೆಭಕ್ತಿಯಿಂದ ಗೋಪಿಯರ ಜೊತೆಗೆ (ವೃಜಬಾಲೆಯರ ಜೊತೆಗೆ) ಭಗವಾನ ಶ್ರೀಕೃಷ್ಣನು ಮಾಡಿದ ರಾಸಲೀಲೆಯನ್ನು ಶ್ರವಣ ಮಾಡಿದರೆ ಹಾಗೂ ಅದನ್ನು ವರ್ಣಿಸಿದವರಿಗೆ ಭಗವಂತನ ಚರಣದಲ್ಲಿ ಸ್ಥಾನ ಸಿಗುತ್ತದೆ.’

೩. ರಾಧೆ ಮತ್ತು ಗೋಪಿಯರ ವೈಶಿಷ್ಟ್ಯಗಳು

೩ ಅ. ‘ಮಧುರಾಭಕ್ತಿಯ ಮೂಲಕ ಕೃಷ್ಣನೊಂದಿಗೆ ಏಕರೂಪ ವಾಗಿರುವ ಗೋಪಿಯರು ! : ಸುದಾಮಾ, ಅರ್ಜುನನಂತಹ ಅನೇಕರು ಶ್ರೀಕೃಷ್ಣನ ಭಕ್ತರಿದ್ದಾರೆ; ಆದರೆ ಅವರಲ್ಲಿ ರಾಧೆ ಮತ್ತು ಗೋಪಿಯರ ಮಹತ್ವ ವಿಶೇಷವಾಗಿದೆ. ಅವರು ಮಧುರಾ ಭಕ್ತಿಯ ಮೂಲಕ, ಅಂದರೆ ‘ಶ್ರೀಕೃಷ್ಣನೇ ನಮ್ಮ ಪ್ರಿಯತಮನಾಗಿದ್ದಾನೆ’, ಎಂಬ ಭಾವದಿಂದ ಶ್ರೀಕೃಷ್ಣನೊಂದಿಗೆ ಏಕರೂಪವಾಗಿದ್ದರು. ಅನೇಕ ಜನರು ರಾಧಾ-ಕೃಷ್ಣನ ಸಂಬಂಧದ ಬಗ್ಗೆ ಟೀಕಿಸುತ್ತಾರೆ. ಶ್ರೀಕೃಷ್ಣನ ವಿಷಯದಲ್ಲಿ ಅಪಶಬ್ದಗಳನ್ನು ಉಪಯೋಗಿಸಲಾಗುತ್ತದೆ; ಆದರೆ ನಿಜವಾಗಿಯೂ ಆ ಸಮಯದಲ್ಲಿ ಶ್ರೀಕೃಷ್ಣನಿಗೆ ಕೇವಲ ೮ ವರ್ಷವಾಗಿತ್ತು ಹಾಗೂ ಗೋಪಿಯರು ವಯಸ್ಸಿನಲ್ಲಿ ದೊಡ್ಡವರಾಗಿದ್ದರು.

೪. ಗೋಪಿಯರ ಹಾಗೆ ಶ್ರೀ ಕೃಷ್ಣನಭಕ್ತಿ ಮಾಡುವ ಸಂಕಲ್ಪ ಮಾಡೋಣ !

ಭಗವಾನ ಶ್ರೀಕೃಷ್ಣನ ಭಕ್ತಿಯಲ್ಲಿ ನಮ್ಮ ಮುಂದಿನ ಜೀವನವನ್ನು ಕಳೆಯಲು ಅಂದರೆ ಗೋಪಿಯರ ಹಾಗೆ ಸಾಧನೆ ಮಾಡುತ್ತಾ ನಾವು ಶ್ರೀಕೃಷ್ಣಭಕ್ತಿ ಮಾಡುವ ಸಂಕಲ್ಪ ಮಾಡೋಣ.

– ಕು. ತೇಜಲ ಪಾತ್ರಿಕರ (ಆಧ್ಯಾತ್ಮಿಕ ಮಟ್ಟ ಶೇ. ೬೧, ಸಂಗೀತ ವಿಶಾರದೆ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೮.೧೦.೨೦೨೧)