ಚದುರಂಗದ ಪ್ರಜ್ಞಾವಂತ !

ಅಜರ್‌ಬೈಜಾನ್‌ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಭಾರತದ ೧೮ ವರ್ಷದ ಪ್ರಜ್ಞಾನಂದ್ ಅವನನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದರು. ೩೨ ವರ್ಷದ ಮ್ಯಾಗ್ನಸ್ ಕಾರ್ಲ್ಸೆನ್ ವಿಶ್ವ ಕ್ರಮಾಂಕದಲ್ಲಿ ಮೊದಲ ಕ್ರಮಾಂಕದಲ್ಲಿದ್ದಾರೆ. ವಿವಿಧ ವಿಶ್ವ ಚೆಸ್ ಸ್ಪರ್ಧೆಗಳಲ್ಲಿ ಅವರು ಒಟ್ಟು ೧೫ ಬಾರಿ ವಿಶ್ವ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಕ್ರಮಣಶೀಲತೆ ಮತ್ತು ರಕ್ಷಣೆಯ ಉತ್ತಮ ಸಂಯೋಜನೆಯನ್ನು ಹೊಂದಿರುವ ಕ್ರೀಡಾಳು. ಅಂತಿಮ ಪಂದ್ಯದ ಸಮಯದಲ್ಲಿ ಅವರಿಗೆ ಆಹಾರದಿಂದ ವಿಷಬಾಧೆಯಾಗಿತ್ತು. ಆದರೂ ಮೊದಲ ೨ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಇದರಿಂದಾಗಿ ಮೂರನೇ ದಿನ ‘ಟೈಬ್ರೇಕ್’ನಲ್ಲಿ (ಅನಿರ್ಣಾಯಕ ಸ್ಥಿತಿಯಲ್ಲಿ) ಕಾರ್ಲ್‌ಸನ್ ಇವರು ಪ್ರಜ್ಞಾನಂದ ಅವರನ್ನು ಸೋಲಿಸಿದರು. ಕಾರ್ಲಸನ್ ತಮ್ಮ ಸ್ವಂತ ಅನುಭವವನ್ನು ಪಣಕ್ಕೊಡ್ಡಿ ಒಬ್ಬ ವಿಶ್ವ ಚಾಂಪಿಯನ್‌ನಂತೆ ಆಡಿದರು. ಅದೇನೇ ಇದ್ದರೂ, ಪ್ರಜ್ಞಾನಂದನಿಗೆ ವಿಶೇಷ ಅಭಿನಂದನೆಗಳು! ಕಳೆದ ಕೆಲವು ವರ್ಷಗಳಲ್ಲಿ ಅವನ ಏರುಗತಿಯ ಆಟ ಶ್ಲಾಘನೀಯವಾಗಿದೆ. ವಿಶ್ವ ಚದುರಂಗ ಸ್ಪರ್ಧೆಯಲ್ಲಿ ಪ್ರಜ್ಞಾನಂದನ ಪ್ರವಾಸ ಖಂಡಿತವಾಗಿಯೂ ಸುಲಭವಾಗಿರಲಿಲ್ಲ. ಸೆಮಿಫೈನಲ್‌ನಲ್ಲಿ ಅವನು ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದನು. ಅವನು ಹಿಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದಲ್ಲಿದ್ದ ಹಿಕಾರು ನಾಕಾಮುರಾ ಅವರನ್ನು ಸೋಲಿಸಿದ್ದನು. ಇಬ್ಬರೂ ಜಗದ್ವಿಖ್ಯಾತ ಅನುಭವಿ ಆಟಗಾರರು. ಇವರಿಬ್ಬರಿಗೂ ಪ್ರಜ್ಞಾನಂದನಿಗಿಂತ ಅನುಭವದ ಬುತ್ತಿ ಹೆಚ್ಚು ಇದೆ; ಆದರೆ ದೇಹದಲ್ಲಿರುವ ಸಹಜ ಕೌಶಲ್ಯ ಮತ್ತು ಇಲ್ಲಿಯವರೆಗೆ ಪಟ್ಟ ಕಷ್ಟಗಳಿಂದ ಪ್ರಜ್ಞಾನಂದನಿಗೆ ಅವರನ್ನು ಜಯಿಸಲು ಸಾಧ್ಯವಾಯಿತು. ಈ ಬಾರಿಯ ವಿಶ್ವಕಪ್ ನ ಕೊನೆಯ ಪಂದ್ಯದಲ್ಲಿ ರನ್ನರ್ ಅಪ್ ಆಗಿದ್ದರೂ ಅವನತಹ ಅದ್ಭುತ ಆಟಗಾರನಿಗೆ ಭವಿಷ್ಯ ಉಜ್ವಲವಾಗಿದೆ.

ಕಠಿಣ ಪರಿಶ್ರಮದ ಪರಿಣಾಮ !

ಪ್ರಜ್ಞಾನಂದನ ವಯಸ್ಸಿನ ಯುವಕರು ಮೋಜು-ಮಸ್ತಿ ಮಾಡುವುದು, ತಮ್ಮ ಭಾವನಾವಿಶ್ವದಲ್ಲಿ ತೇಲುವ ಮತ್ತು ಜೀವನದ ‘ಆಸ್ವಾದ’ವನ್ನು ತೆಗೆದುಕೊಳ್ಳುವವರಾಗಿರುತ್ತಾರೆ. ಪ್ರಜ್ಞಾನಂದನು ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡನು. ಅಲ್ಲಿ ಕಷ್ಟ ಮತ್ತು ತ್ಯಾಗ ಮಾಡುವ ಸಿದ್ಧತೆಯ ಆವಶ್ಯಕತೆಯಿತ್ತು. ಈ ಕಷ್ಟದ ಹಾದಿಯನ್ನು ಪ್ರಜ್ಞಾನಂದನು ಆಯ್ಕೆಮಾಡಿಕೊಂಡನು. ಆಗ ಅವನ ಶಿಕ್ಷಕ(ಕೋಚ್) ಆರ್.ಬಿ. ರಮೇಶ ಅವರು ಅವನಿಗೆ ‘ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ನಿಂದ ದೂರವಿರಬೇಕಾಗುತ್ತದೆ’ ಎಂದು ಹೇಳಿದಾಗ ಅವನು ಒಪ್ಪಿಕೊಂಡನು. ‘ನನ್ನ ವಯಸ್ಸಿನ ಮಕ್ಕಳು ಮೋಜುಮಸ್ತಿ ಮಾಡುತ್ತಿರುವಾಗ ನಾನೇಕೆ ಸ್ವಲ್ಪ ಹೊತ್ತಾದರೂ ಅದನ್ನು ಮಾಡಬಾರದು’ ಎನ್ನುವ ಪ್ರಶ್ನೆಯನ್ನು ಅವನು ಕೇಳಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಅವನು ಚದುರಂಗದ ತರಬೇತಿಯನ್ನು ಮುಂದುವರೆಸಿದನು. ಅದರ ಪ್ರತಿಫಲ ಇಂದು ಸಿಗುತ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಾಗತಿಕ ಚದುರಂಗ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಇಲ್ಲಿಯವರೆಗೆ ಕೇವಲ ೩ ಜನರು ತಲುಪಿದ್ದಾರೆ. ಪ್ರಜ್ಞಾನಂದ ನಾಲ್ಕನೇಯ ಆಟಗಾರ ಆಗಿದ್ದಾನೆ. ಇದರಿಂದ ಅವನು ಸಾಧಿಸಿರುವ ಹಂತ ಎಷ್ಟು ದೊಡ್ಡದಿದೆಯೆಂದು ನಮಗೆ ಅರಿವಾಗುತ್ತದೆ. ಚದುರಂಗ ಇದೊಂದು ಭಾರತೀಯ ಆಟ; ಆದರೆ ಭಾರತದಲ್ಲಿ ನಿರ್ಲಕ್ಷಿಸಲ್ಪಟ್ಟ ಕ್ರೀಡೆ. ವಿಶ್ವನಾಥನ್ ಆನಂದ್ ಅವರಿಂದ ಈ ಆಟಕ್ಕೆ ಭಾರತದಲ್ಲಿ ಜನಪ್ರಿಯತೆ ದೊರಕಿತು. ಈಗ ಪ್ರಜ್ಞಾನಂದನ ಮುಂದುವರೆದ ಆಟದಿಂದಾಗಿ ಈ ಆಟಕ್ಕೆ ಭಾರತದಲ್ಲಿ ಮತ್ತೆ ಸುಗ್ಗಿಯ ದಿನಗಳು ಬರಲಿದೆ.

ಒಳ್ಳೆಯ ನಡತೆಯ ಆಟಗಾರ !

ಜಗತ್ತಿನ ಮಹಾನ್ ಚದುರಂಗ ಆಟಗಾರರ ಯಾದಿ ಸಾಕಷ್ಟು ದೊಡ್ಡದಾಗಿದೆ. ಕ್ಯಾಪಾಬ್ಲಾಂಕಾ, ಅಲೆಕ್ಸಾಂಡರ್ ಅಲೆಕಾಯಿನ್, ವ್ಲಾಡಿಮಿರ್ ಕ್ರಾಮ್ನಿಕ್, ಅನಾತೊಲಿ ಕಾರ್ಪೊರೊವ್, ಗ್ಯಾರಿ ಕ್ಯಾಸ್ಪೆರೋವ್, ಬಾಬಿ ಫಿಶರ್, ವಿಶ್ವನಾಥನ್ ಆನಂದ್ ಮುಂತಾದವರು. ಈ ಯಾದಿಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಪ್ರಜ್ಞಾನಂದನ ಹೆಸರೂ ಸೇರ್ಪಡೆಗೊಂಡರೆ ಆಶ್ಚರ್ಯವಿಲ್ಲ. ಪ್ರತಿಯೊಬ್ಬ ಶ್ರೇಷ್ಠ ಆಟಗಾರನು ವಿಭಿನ್ನ ರೀತಿಯಲ್ಲಿ ಆಡುತ್ತಾನೆ. ಕೆಲವರು ಆಕ್ರಮಣಕಾರಿ, ಕೆಲವರು ಸೌಮ್ಯವಾಗಿ ಆಟವಾಡಿ ತಮ್ಮ ಎದುರಾಳಿಗಳನ್ನು ಸೋಲಿಸುತ್ತಾರೆ; ಆದರೆ ಅವರೆಲ್ಲರಿಗೂ ಸಾಮಾನ್ಯವಾದ ಒಂದು ವಿಷಯವೆಂದರೆ ಅವರ ಚದುರಂಗದ ೬೪ ಮನೆಗಳ ಮೇಲಿರುವ ಪ್ರಾಬಲ್ಯ(ಹಿಡಿತ). ಅದನ್ನು ಸಾಧಿಸುವ ಸಾಮರ್ಥ್ಯ ಪ್ರಜ್ಞಾನಂದನಲ್ಲಿಯೂ ಕಂಡು ಬರುತ್ತದೆ. ವಿಶ್ವ ಚಾಂಪಿಯನ್(ವಿಶ್ವವಿಜೇತ) ಆಗಲು ಅಪಾರ ಕಷ್ಟ ಸಹಿಸುವ ಸಿದ್ಧತೆ ಬೇಕಾಗುತ್ತದೆ; ಆದರೆ ಅದಕ್ಕಿಂತ ಹೆಚ್ಚು ಕಷ್ಟ, ತನ್ನ ಗುಣಗಳಿಂದ ಜನರ ಮನಸ್ಸಿನ ಮೇಲೆ ಪ್ರಾಬಲ್ಯ ಸಾಧಿಸುವುದು. ಪ್ರಜ್ಞಾನಂದ್ ಇದೇ ರೀತಿ ಆಟ ಮುಂದುವರಿಸಿದರೆ ಮುಂದಿನ ಕೆಲವು ವರ್ಷಗಳಲ್ಲಿ ಹೊಸ ಹೊಸ ವಿಶ್ವ ದಾಖಲೆಗಳನ್ನು ಸಾಧಿಸಬಹುದು.ಅದಕ್ಕಿಂತ ಹೆಚ್ಚು ಚದುರಂಗ ಲೋಕದಲ್ಲಿ ಅವನನ್ನು ‘ಸಭ್ಯ ಮತ್ತು ಸುಸಂಸ್ಕೃತ ಚದುರಂಗ ಆಟಗಾರ’ ಎಂದು ಗುರುತಿಸಲಾಗುವುದು ಎಂದು ವಿಶೇಷವಾಗಿ ನಮೂದಿಸಬೇಕೆಂದು ಅನಿಸುತ್ತದೆ. ಕೇವಲ ಚದುರಂಗ ಮಾತ್ರವಲ್ಲ, ಯಾವುದೇ ಆಟದಲ್ಲಿ ಅಂತಹ ಛಾಪು ಮೂಡಿಸುವುದು ತುಂಬಾ ಕಷ್ಟವಿರುತ್ತದೆ. ಅಶಿಸ್ತಿನ ನಡವಳಿಕೆ, ಅಹಂಕಾರದಿಂದ ಸಂಬಂಧಿಸಿದ ಕ್ರೀಡೆಗಳಲ್ಲಿ ಪ್ರಾವಿಣ್ಯತೆ ಸಾಧಿಸಿದ ಅನೇಕ ಕ್ರೀಡಾಪಟುಗಳ ಜೀವನ ವ್ಯರ್ಥವಾಗಿರುವ ಅನೇಕ ಉದಾಹರಣೆಗಳನ್ನು ನಾವು ನೋಡುತ್ತೇವೆ. ಚದುರಂಗ ಆಟಗಾರರ ಗುಣ ಮತ್ತು ದುರ್ಗುಣಗಳ ವಿಷಯ ಬಗ್ಗೆ ಮಾತನಾಡುವುದಾದರೆ, ವಿಶ್ವ ಚಾಂಪಿಯನ್ ಬಾಬಿ ಫಿಶರ್ ಅವರ ಹೆಸರನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕೆನಿಸುತ್ತದೆ. ವಿದ್ಯುನ್ಮಾನ ಗತಿಯಲ್ಲಿ ಚಲನೆಗಳನ್ನು ಆಡುವುದು, ಆಕ್ರಮಣಕಾರಿ ಆಟವನ್ನು ಆಡಿ ಎದುರಾಳಿಯನ್ನು ಸೋಲಿಸುವುದು ಅವರ ಆಟದ ವೈಶಿಷ್ಟ್ಯಗಳು! ೧೫ ನೇ ವಯಸ್ಸಿನಲ್ಲಿ, ಫಿಶರ್ ಅಮೇರಿಕನ್ ಚಾಂಪಿಯನ್‌ಶಿಪ್ ಗೆದ್ದರು. ಅದರ ನಂತರ, ಅವರು ಯಾವತ್ತೂ ಹಿಂತಿರುಗಿ ನೋಡಲಿಲ್ಲ. ಹೀಗಿದ್ದರೂ, ಅವರು ಆಟದ ಹೊರತಾಗಿ, ತಮ್ಮ ಹಿಂದೆ ಮುಂದೆ ಯೋಚಿಸದೇ ತಟ್ಟನೆ ಮಾತನಾಡುವುದು, ಸೊಕ್ಕಿನ ಮತ್ತು ಉದ್ಧಟತನ ಸ್ವಭಾವಕ್ಕೆ ಪ್ರಸಿದ್ಧರಾದರು. ಈ ಸ್ವಭಾವದಿಂದಾಗಿ ಅವರು ಪತ್ರಕರ್ತರ ಪ್ರೀತಿಪಾತ್ರರಾಗಿದ್ದರು. ಯಾಕೆಂದರೆ ಪತ್ರಕರ್ತರಿಗೆ ಅವರ ನಡತೆ, ಮಾತುಗಳಿಂದ ಸಾಕಷ್ಟು ಮೇವು ಸಿಗುತ್ತಿತ್ತು. ೧೯೫೭ರ ನಂತರ ಕೆಲವು ದಶಕಗಳ ಕಾಲ ಅವರು ಅಕ್ಷರಶಃ ಚೆಸ್ ಲೋಕದಲ್ಲಿ ಪ್ರಾಬಲ್ಯ ಮೆರೆದರು. ಆದಾಗ್ಯೂ, ಅವರ ತಟ್ಟನೆ ಹಿಂದೆಮುಂದೆ ಯೋಚಿಸದೇ ಮಾತನಾಡುವ ಸ್ವಭಾವವು ಅವರ ವೃತ್ತಿಜೀವನವನ್ನು ಕಳಂಕಿತಗೊಳಿಸಿತು. ಇಲ್ಲಿ ಫಿಶರ್ ಮತ್ತು ಪ್ರಜ್ಞಾನಂದನನ್ನು ಹೋಲಿಸಲು ಯಾವುದೇ ಕಾರಣವಿಲ್ಲ; ಏಕೆಂದರೆ ಪ್ರಜ್ಞಾನಂದನಿಗೆ ಇನ್ನೂ ಬಹಳ ದೂರ ಸಾಗಬೇಕಾಗಿದೆ. ಆದಾಗ್ಯೂ, ಚದುರಂಗ ಮೇಜಿನ ಮೇಲೆ ನೀವು ಹೇಗೆ ಆಡುತ್ತೀರಿ ಎನ್ನುವುದಕ್ಕಿಂತ ನೀವು ಜೀವನದ ಮೇಜಿನ ಮೇಲೆ ಹೇಗೆ ಆಡುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಜೀವನದ ಕೊನೆಯಲ್ಲಿ, ಕೂಡಿಸುವುದು ಮತ್ತು ಕಳೆಯುವಾಗ ಈ ವಿಷಯಗಳೇ ಮುಖ್ಯವಾಗುತ್ತವೆ. ಇದರಿಂದಲೇ ಪ್ರಜ್ಞಾನಂದ ಪ್ರತ್ಯೇಕವಾಗಿ ಕಾಣಿಸುತ್ತಾನೆ. ಇಲ್ಲಿ ಇನ್ನೊಂದು ಘಟನೆಯನ್ನು ವಿಮರ್ಶಿಸಬೇಕು ಎನಿಸುತ್ತದೆ. ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರೊಂದಿಗಿನ ಸಂಭಾಷಣೆಯ ಒಂದು ವಿಡಿಯೊ ಸ್ವಲ್ಪ ಸಮಯದ ಹಿಂದೆ ಪ್ರಸಾರ ಮಾಡಲಾಗಿತ್ತು. ಅದರಲ್ಲಿ, ಅನೇಕ ಮಹತ್ವಾಕಾಂಕ್ಷಿ ಚೆಸ್ ಆಟಗಾರರು ಕಾರ್ಲಸನ್‌ಗೆ ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡು ಬರುತ್ತಿದೆ. ಅದರಲ್ಲಿ ಪ್ರಜ್ಞಾನಂದ ಕೂಡ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಅದರಲ್ಲಿ ಅವನ ಮುಖದಲ್ಲಿ ಕಾಣುವ ಜಿಜ್ಞಾಸೆ, ವಿನಮ್ರತೆ ಬಹಳಷ್ಟು ಹೇಳುತ್ತದೆ. ವಾಸ್ತವಿಕವಾಗಿ ನೋಡಿದರೆ ಇಲ್ಲಿಯವರೆಗೆ ಕಾರ್ಲಸನ್ ಮತ್ತು ಪ್ರಜ್ಞಾನಂದ ೧೯ ಸಲ ಎದುರು ಬದುರು ಬಂದಿದ್ದಾರೆ. ಅದರಲ್ಲಿ ಕಾರ್ಲಸನ ೭ ಸಲ ಗೆದ್ದಿದ್ದಾರೆ. ಪ್ರಜ್ಞಾನಂದ ೫ ಸಲ ಗೆದ್ದಿದ್ದಾರೆ. ಆದರೂ ತನ್ನ ಪ್ರತಿಸ್ಪರ್ಧಿಯಿಂದ ಕಲಿಯುವ ವೃತ್ತಿಯನ್ನು ಇಟ್ಟುಕೊಂಡಿರುವುದು ವಿಶೇಷವಾಗಿದೆ. ಕೇವಲ ಆಟದಲ್ಲಿ ಮಾತ್ರವಲ್ಲ, ಪ್ರಜ್ಞಾನಂದನಿಗೆ ಸಿಕ್ಕಿರುವ ಸಂಸ್ಕಾರದ ಬುತ್ತಿಯಿಂದಲೇ ಅವನು ಚದುರಂಗದ ಜಗತ್ತಿನಲ್ಲಿ ಖಂಡಿತವಾಗಿಯೂ ಪ್ರತ್ಯೇಕವಾಗಿರುವ ಛಾಪನ್ನು ಮೂಡಿಸಲಿದ್ದಾನೆ. ಅವನ ಮುಂದಿನ ಹಾದಿ ಸುಗಮವಾಗಲೆಂದು ಶುಭಾಶಯಗಳು.

ಕ್ರೀಡಾ ಕ್ಷೇತ್ರದಲ್ಲಿ ‘ಶ್ರೇಷ್ಠ’ರಾಗಿರುವ ವಿನಮ್ರ ಮತ್ತು ಸಭ್ಯರಾಗಿರುವ ಆಟಗಾರರೇ ಕ್ರೀಡಾಪ್ರೇಮಿಗಳ ಮನಸ್ಸಿನ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ.