ಯುನೈಟೆಡ್ ಕಿಂಗ್‌ಡಮ್ ಖಲಿಸ್ತಾನಿಗಳನ್ನು ಹದ್ದುಬಸ್ತಿನಲ್ಲಿಡಲು 1 ಕೋಟಿ ರೂಪಾಯಿಗಳ ಪೂರೈಕೆ !

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ನಡೆದ ಸಭೆಯ ಬಳಿಕ ಘೋಷಣೆ !


ಲಂಡನ್ (ಯುನೈಟೆಡ್ ಕಿಂಗ್‌ಡಮ್) – ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬೇರು ಬಿಟ್ಟಿರುವ ಖಲಿಸ್ತಾನಿ ಭಯೋತ್ಪಾದಕನೆಯನ್ನು ತಡೆಯಲು ಯುನೈಟೆಡ್ ಕಿಂಗ್‌ಡಮ್ 95 ಸಾವಿರ ಪೌಂಡ್‌ಗಳ (1 ಕೋಟಿ ಭಾರತೀಯ ರೂಪಾಯಿ) ನಿಧಿಯನ್ನು ಘೋಷಿಸಿದೆ ಎಂದು ಯುನೈಟೆಡ್ ಕಿಂಗ್‌ಡಮ್‌ನ ರಕ್ಷಣಾ ಸಚಿವ ಟಾಮ್ ಟುಗೆಂಧಾತ್ ಹೇಳಿದ್ದಾರೆ. ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ನವದೆಹಲಿಯಲ್ಲಿದ್ದಾಗ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿದ್ದರು. ಜೈಶಂಕರ್ ಅವರ ಒತ್ತಾಯದಿಂದಲೇ ಯುನೈಟೆಡ್ ಕಿಂಗ್‌ಡಮ್ ಈ ನಿಲುವು ತಳೆದಿದೆಯೆಂದು ಹೇಳಲಾಗುತ್ತಿದೆ.

1. ದುಗೆಂಧಾತ್ ಅವರು ‘ಎಕ್ಸ್’ ನಲ್ಲಿ (ಟ್ವಿಟ್ಟರ್‌ನಲ್ಲಿ) ಪೋಸ್ಟ್ ಮಾಡಿ, ಭಾರತದ ಕೇಂದ್ರಿಯ ತನಿಖಾ ಇಲಾಖೆಯು ನಮ್ಮ ಗುಪ್ತಚರ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು ಗಂಭೀರ ಮತ್ತು ನಿಯೋಜಿತ ಅಪರಾಧಗಳನ್ನು ನಾವು ಜಂಟಿಯಾಗಿ ನಿಭಾಯಿಸುತ್ತಿದ್ದೇವೆ ಎಂದು ಹೇಳಿದರು. ಡಾ. ಜೈಶಂಕರ್ ಅವರೊಂದಿಗೆ ಉತ್ತಮ ಚರ್ಚೆ ನಡೆಯಿತು. ಯಾವುದೇ ರೀತಿಯ ಭಯೋತ್ಪಾದನೆಯ ವಿರುದ್ಧ ಉತ್ಸಾಹದಿಂದ ಕಾರ್ಯನಿರ್ವಹಿಸುವವರ ಮೇಲೆ ನಮಗೆ ಪೂರ್ಣ ವಿಶ್ವಾಸವಿದೆ. ಡಾ. ಜೈಶಂಕರ್ ಜೊತೆ ಕೆಲಸ ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

2. ಈ ಮೊದಲು ಕಳೆದ ತಿಂಗಳು ಜುಲೈ 7 ರಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಿಮ್ ಬ್ಯಾರೋ ಇವರ ನಡುವೆ ಸಭೆ ನಡೆದಿತ್ತು. ಆ ಸಮಯದಲ್ಲಿ, ಭಾರತವು ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ಹೈಕಮಿಷನ್‌ನ ಅಧಿಕಾರಿಗಳಿಗೆ ಖಲಿಸ್ತಾನಿ ಭಯೋತ್ಪಾದಕರಿಂದ ಬಂದ ಬೆದರಿಕೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತ್ತು. ಆ ಸಭೆಯಲ್ಲಿ, ಭಾರತವು ಇದರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕಟ್ಟುನಿಟ್ಟಾದ ಕ್ರಮ ವಹಿಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಅಥವಾ ನ್ಯಾಯಾಲಯದ ಮೊಕದ್ದಮೆಗಳನ್ನು ನಡೆಸಬೇಕೆಂದು ಒತ್ತಾಯಿಸಿತು. ಜುಲೈ 6 ರಂದು ಖಲಿಸ್ತಾನಿ ಭಯೋತ್ಪಾದಕರು ‘ಕಿಲ್ ಇಂಡಿಯಾ’ ಹೆಸರಿನಲ್ಲಿ ಭಾರತೀಯ ಹೈಕಮೀಷನ್ ಹೊರಗೆ ಮೆರವಣಿಗೆ ನಡೆಸಿದ್ದರು.

ಈ ಮೊದಲು ಜೂನ್ 3 ರಂದು ಡಾ. ಎಸ್. ಜೈಶಂಕರ ಇವರು ಕೆನಡಾ, ಅಮೆರಿಕ, ಯುನೈಟೆಡ್ ಕಿಂಗಡಮ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಖಲಿಸ್ತಾನಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಹೀಗೆ ಮಾಡದೇ ಹೋದರೆ, ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜೈಶಂಕರ್ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದರು.

ಸಂಪಾದಕೀಯ ನಿಲುವು

ಯುನೈಟೆಡ್ ಕಿಂಗ್‌ಡಮ್‌ನಂತಹ ಶ್ರೀಮಂತ ರಾಷ್ಟ್ರವು ಖಲಿಸ್ತಾನಿ ಭಯೋತ್ಪಾದನೆ ವಿರುದ್ಧ ಹೋರಾಡಲು 1 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಹಾಸ್ಯಾಸ್ಪದವಾಗಿದೆ. ಖಲಿಸ್ತಾನಿ ಭಯೋತ್ಪಾದಕರು ಕೋಟ್ಯಂತರ ರೂಪಾಯಿಗಳ ಹಣವನ್ನು ಪಡೆಯುತ್ತಾರೆ. ಆದ್ದರಿಂದ ಅವರು ಜಗತ್ತಿನಲ್ಲಿ ಒಂದು ಜಾಲವನ್ನು ರಚಿಸಿದ್ದಾರೆ.