ಭಾರತವು ಒಂದು ‘ಪ್ರಭಾವಶಾಲಿ ಪ್ರಭುತ್ವ’ವಾಗಿ ಉದಯಿಸುತ್ತಿರುವುದೇ ಅಮೇರಿಕಾ ಪ್ರವಾಸದ ಫಲಿತಾಂಶ !

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೩ ದಿನಗಳ ಅಮೇರಿಕಾ ಪ್ರವಾಸ ನೆರವೇರಿತು. ೨೦೧೪ ರಲ್ಲಿ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಇದು ಅಮೇರಿಕಾಕ್ಕೆ ಅವರ ಮೂರನೇ ಪ್ರವಾಸವಾಗಿತ್ತು; ಆದರೂ ಈ ಬಾರಿಯ ಪ್ರವಾಸವು ಅನೇಕ ರೀತಿಯಲ್ಲಿ ಮಹತ್ವದ್ದಾಗಿದ್ದ ಕಾರಣ ಅದು ಸಂಪೂರ್ಣ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿತ್ತು. ಪ್ರಧಾನಮಂತ್ರಿ ಮೋದಿಯವರ ಈ ಹಿಂದಿನ ಅಮೇರಿಕಾ ಭೇಟಿ ಹಾಗೂ ಈ ಬಾರಿಯ ಭೇಟಿಯಲ್ಲಿ ಮಹತ್ವದ ಒಂದು ಗುಣಾತ್ಮಕ ವ್ಯತ್ಯಾಸವನ್ನು ಗಮನಿಸಬೇಕಾಗಿದೆ. ಈ ವ್ಯತ್ಯಾಸವೆಂದರೆ ಈ ಸಲ ಪ್ರಧಾನಮಂತ್ರಿ ಮೋದಿಯವರು ಪ್ರತಿನಿಧಿಸುತ್ತಿರುವ ಈ ಭಾರತ ಅಗಾಧ ಆತ್ಮವಿಶ್ವಾಸದಿಂದ ತುಂಬಿಕೊಂಡಿದೆ ಎಂಬುದು ಈ ಸಂಪೂರ್ಣ ಪ್ರವಾಸದ ಅವಧಿಯಲ್ಲಿ ಪ್ರಧಾನಮಂತ್ರಿಗಳ ಹಾವಭಾವದಿಂದಲೂ ಕಂಡುಬಂತು. ಈ ಆತ್ಮವಿಶ್ವಾಸವು ಭಾರತದ ಹೆಚ್ಚುತ್ತಿರುವ ವರ್ಚಸ್ಸು ಹಾಗೂ ಸಾಮರ್ಥ್ಯವನ್ನು ತೋರಿಸುವುದಾಗಿತ್ತು. ‘ಭಾರತ ತನ್ನ ‘ಜೂನಿಯರ್‌ ಪಾರ್ಟನರ್’ (ಕನಿಷ್ಠ ಪಾಲುದಾರ) ಎಂಬ ಭೂಮಿಕೆಯನ್ನು ನಿಭಾಯಿಸಬೇಕೆಂಬುದು’, ಆರಂಭದಿಂದಲೂ ಅಮೇರಿಕಾದ ಇಚ್ಛೆಯಾಗಿತ್ತು. ಅಮೇರಿಕಾ ತನ್ನ ಪ್ರತಿಯೊಂದು ಮಿತ್ರ ದೇಶದಿಂದ ಇದೇ ಅಪೇಕ್ಷೆಯನ್ನಿಟ್ಟಿರುತ್ತದೆ. ಜಪಾನ್, ಇಂಗ್ಲೆಂಡ್‌ನಂತಹ ದೇಶಗಳು ಅಮೇರಿಕಾದೊಂದಿಗೆ ಮೈತ್ರಿ ಮಾಡಿದ ನಂತರ ‘ಜೂನಿಯರ್‌ ಪಾರ್ಟನರ್’ ಎಂಬ ಭೂಮಿಕೆಯನ್ನು ನಿಭಾಯಿಸಿವೆ. ಈಗ ಭಾರತವೂ ಈ ಸಾಲಿನಲ್ಲಿ ಕುಳಿತುಕೊಳ್ಳಬೇಕು, ಎಂಬುದು ಅಮೇರಿಕಾದ ಇಚ್ಛೆಯಾಗಿದೆ. ಆದರೂ ಭಾರತ-ಅಮೇರಿಕಾದ ಸಂಬಂಧದಲ್ಲಿ ಅನೇಕ ವರ್ಷಗಳಿಂದ ಒಂದು ರೀತಿಯ ಅವಿಶ್ವಾಸ, ಸ್ವಲ್ಪ ಮಟ್ಟಿಗೆ ನಕಾರಾತ್ಮಕತೆಯೂ ಇತ್ತು; ಆದರೆ ಇಂದು ಈ ಜಾಗತಿಕ ಬಲಶಾಲಿ ದೇಶಕ್ಕೆ ಭಾರತದ ಅವಶ್ಯಕತೆ ಇರುವುದರ ಅರಿವು ಪ್ರಧಾನಮಂತ್ರಿಗಳ ಪ್ರವಾಸದ ಪ್ರತಿಯೊಂದು ಪ್ರಸಂಗದಿಂದ ಕಂಡುಬಂತು. ಅಮೇರಿಕನ್‌ ಪ್ರಜಾಪ್ರಭುತ್ವದ ೧೫೦ ವರ್ಷಗಳ ಇತಿಹಾಸದಲ್ಲಿ ಅಮೇರಿಕನ್‌ ಕಾಂಗ್ರೆಸ್‌ನಲ್ಲಿ ೨ ಬಾರಿ ಭಾಷಣ ಮಾಡಿದವರಲ್ಲಿ ಪ್ರಧಾನಮಂತ್ರಿ ಮೋದಿ ಜಗತ್ತಿನ ಏಕೈಕ ನೇತಾರರಾಗಿದ್ದಾರೆ.

ಈ ವರ್ಷದ ಭೇಟಿಯ ಎಲ್ಲಕ್ಕಿಂತ ಮಹತ್ವದ ವೈಶಿಷ್ಟ್ಯವೆಂದರೆ, ಪ್ರಧಾನಮಂತ್ರಿ ಮೋದಿಯವರ ‘ಸ್ಟೇಟ್‌ ವಿಸಿಟ್’ (ರಾಷ್ಟ್ರಪ್ರಮುಖರು ನೀಡಿದ ಆಮಂತ್ರಣದ ಮೇರೆಗೆ ಮಾಡಿದ ಭೇಟಿ) ಆಗಿತ್ತು. ಅಮೇರಿಕನ್‌ ರಾಷ್ಟ್ರಾದ್ಯಕ್ಷರ ಆಮಂತ್ರಣಕ್ಕನುಸಾರ ಈ ಭೇಟಿ ಆಯಿತು. ಜೋ ಬಾಯಡೇನ್‌ ಇವರ ಅಧ್ಯಕ್ಷತೆಯ ಅವಧಿಯಲ್ಲಿ ಮೋದಿಯವರಿಗಿಂತ ಮೊದಲು ಜಪಾನ್‌ನ ಪ್ರಧಾನಮಂತ್ರಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷರನ್ನು ಇಂತಹ ಭೇಟಿಗಾಗಿ ಆಮಂತ್ರಿಸಲಾಗಿತ್ತು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅಮೇರಿಕಾದಿಂದ ಭಾರತಕ್ಕೆ ಈ ಬಹುಮಾನ ೩ ಬಾರಿ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮೊದಲ ಬಾರಿಗೆ ಈ ಸನ್ಮಾನ ಸಿಕ್ಕಿದೆ. ಈ ಹಿಂದೆ ಡಾ. ಸರ್ವಪಳ್ಳಿ ರಾಧಾಕೃಷ್ಣನ್‌ ಇವರಿಗೆ ಮತ್ತು ಅನಂತರ ೨೦೦೯ ರಲ್ಲಿ ಭಾರತದ ಅಂದಿನ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಹ ಇವರಿಗೆ ಸ್ಟೇಟ್‌ ವಿಸಿಟ್‌ಗಾಗಿ ಆಮಂತ್ರಿಸಲಾಗಿತ್ತು. ಈಗ ೧೪ ವರ್ಷಗಳ ನಂತರ ಭಾರತಕ್ಕೆ ಈ ಸನ್ಮಾನ ಸಿಕ್ಕಿದೆ.

ಎಡದಿಂದ ಪ್ರಧಾನಮಂತ್ರಿ ಮೋದಿ ಹಾಗೂ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್‌ ಇವರ ಭೇಟಿಯ ಒಂದು ಕ್ಷಣ

೧. ದಿಗ್ಗಜ ಬಹುರಾಷ್ಟ್ರೀಯ ಕಂಪನಿಗಳ ಪ್ರಮುಖರ ನೇತೃತ್ವವು ಭಾರತದ ವಿಷಯದಲ್ಲಿ ವಿಶ್ವಾಸ ವ್ಯಕ್ತಪಡಿಸುವುದು !

ಡಾ. ಶೈಲೇಂದ್ರ ದೇವಳಾಣಕರ

ಈ ೩ ದಿನಗಳ ಪ್ರವಾಸದ ಅವಧಿಯಲ್ಲಿ ‘ಭಾರತ-ಅಮೇರಿಕಾ ಧೋರಣಾತ್ಮಕ ಪಾಲುದಾರಿಕಾ ಸಂಘ’ದ ಮೂಲಕ ಆಯೋಜಿಸಿದ ವಾಶಿಂಗ್ಟನ್‌ ಡಿ ಸಿ. ಯಲ್ಲಿನ ಜಾನ್‌ ಎಫ್. ಕೆನೆಡಿ ಸೆಂಟರ್‌ನಲ್ಲಿನ ವ್ಯಾಪಾರಿಗಳ ಸಮ್ಮೇಳನವನ್ನು ಪ್ರಧಾನಮಂತ್ರಿ ಮೋದಿಯವರು ಸಂಬೋಧಿಸಿ ಮಾತನಾಡಿದರು. ಅಲ್ಲಿ ವಿವಿಧ ಕ್ಷೇತ್ರಗಳ ಸುಮಾರು ೧ ಸಾವಿರ ಉದ್ಯಮಿಗಳು-ವ್ಯಾಪಾರಿಗಳು ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಮೋದಿಯವರೊಂದಿಗಿನ ಚರ್ಚೆ ಹಾಗೂ ಮಾಡಿದ ಒಪ್ಪಂದದ ನಂತರ ಈ ಅಮೇರಿಕನ್‌ ಉದ್ಯಮಿಗಳು ನೀಡಿದ ಸಂದರ್ಶನವು ಗಮನಾರ್ಹವಾಗಿದೆ. ‘ಭಾರತ ಹೇಗೆ ‘ಇಮರ್ಜಿಂಗ್‌ ಬ್ರೈಟ್‌ ಸ್ಪಾಟ್’ (ಉದಯೋನ್ಮುಖ ತೇಜಸ್ವಿ ಸ್ಥಳ) ಆಗಿದೆ ?, ಅಮೇರಿಕಾಗೆ ಯಾವ ಪದ್ಧತಿಯಲ್ಲಿ ಭಾರತದ ಅವಶ್ಯಕತೆಯಿದೆ ?’, ಎಂಬ ವಿಷಯವು ಪ್ರತಿಯೊಬ್ಬ ಉದ್ಯಮಿಯ ಸಂದರ್ಶನದಿಂದ ವ್ಯಕ್ತವಾಯಿತು. ಗೂಗಲ್, ಅಮೆಝಾನ್, ಏಪಲ್, ಮಾಯಕ್ರಾನ್, ಬೋಯಿಂಗ್, ಟೆಸ್ಲಾ ದಂತಹ ದಿಗ್ಗಜ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರ ನೇತೃತ್ವವು ಭಾರತದ ವಿಷಯದಲ್ಲಿ ಹಾಗೂ ಅಲ್ಲಿನ ಹೂಡಿಕೆಯ ವಿಷಯದಲ್ಲಿ ವ್ಯಕ್ತಪಡಿಸಿದ ವಿಶ್ವಾಸ ಬಹಳಷ್ಟು ವಿಷಯಗಳನ್ನು ಹೇಳಲಿದೆ.

೨. ಸಂರಕ್ಷಣ ವಿಷಯದಲ್ಲಿ ಅಮೇರಿಕಾದೊಂದಿಗೆ ಭಾರತದ ಒಪ್ಪಂದ ಹಾಗೂ ಅದರಿಂದ ದೇಶಕ್ಕಾಗುವ ಲಾಭ

‘ಕಳೆದ ೨ ದಶಕಗಳಲ್ಲಿನ ಭಾರತ-ಅಮೇರಿಕಾ ಸಂಬಂಧಗಳ ಇತಿಹಾಸವನ್ನು ನೋಡಿದರೆ ಈ ಸಂಬಂಧ ಒಂದು ರೀತಿಯಲ್ಲಿ ಖರೀದಿದಾರ ಹಾಗೂ ಮಾರಾಟಗಾರ ಎಂಬ ಸ್ವರೂಪದ್ದಾಗಿತ್ತು’, ಎಂದು ಹೇಳಿದರೆ ತಪ್ಪಿಲ್ಲ; ಆದರೆ ಈ ಭೇಟಿಯಲ್ಲಿ ಆಗಿರುವ ಒಪ್ಪಂದದಿಂದ ಈ ಸಂಬಂಧ ‘ಬಯರ್’ ಮತ್ತು ‘ಸೆಲರ್’ ಇಷ್ಟಕ್ಕೇ ಸೀಮಿತವಾಗಿರದೆ ಭಾರತದಂತಹ ದೇಶ ನಮ್ಮೊಂದಿಗಿರುವುದು, ಅಮೇರಿಕಾಗೆ ಅನಿವಾರ್ಯವಾಗಿದೆಯೆಂಬುದು ಸ್ಪಷ್ಟವಾಗಿ ಕಾಣುತ್ತದೆ. ಆದ್ದರಿಂದ ಪ್ರಧಾನಮಂತ್ರಿಗಳ ಈ ಭೇಟಿಯ ಅವಧಿಯಲ್ಲಿ ಕೇವಲ ಆರ್ಥಿಕ ಹೂಡಿಕೆಯ ಒಪ್ಪಂದ ಮಾತ್ರವಲ್ಲ, ಸುಧಾರಿತ ಸಂವೇದನಾಶೀಲ ತಂತ್ರಜ್ಞಾನದ ವರ್ಗಾವಣೆಯ ವಿಷಯದ ಒಪ್ಪಂದಗಳೂ ಅದರಲ್ಲಿ ಸಮಾವೇಶವಾಗಿವೆ. ಅಮೇರಿಕಾ ಯಾವಾಗಲೂ ಇಂತಹ ಸಂವೇದನಾಶೀಲ ತಂತ್ರಜ್ಞಾನದ ವರ್ಗಾವಣೆಯ ವಿಷಯದಲ್ಲಿ ಹಿಂಜರಿಯುತ್ತಾ ಬಂದಿದೆ; ಆದರೆ ಇತ್ತೀಚೆಗೆ ಭಾರತದ ವಿಷಯದಲ್ಲಿ ಅಮೇರಿಕಾದ ನಿಲುವು ಸೌಮ್ಯವಾಗಿರುವುದು ಕಾಣಿಸುತ್ತಿದೆ. ಇದು ಕಳೆದ ವರ್ಷದಿಂದ ಪ್ರಾರಂಭವಾಯಿತು. ಕಳೆದ ವರ್ಷ ‘ಅಮೇರಿಕನ್‌ ಸೆಕ್ಯುರಿಟಿ ಕೌನ್ಸಿಲ್’ ಹಾಗೂ ‘ಭಾರತದ ಸೆಕ್ಯುರಿಟಿ ಕೌನ್ಸಿಲ್’ ಈ ಎರಡರ ನಡುವೆ ಒಂದು ಮಹತ್ವದ ಒಪ್ಪಂದವಾಯಿತು. ಅದರಲ್ಲಿ ‘ಕ್ರಿಟಿಕಲ್‌ ಇಮರ್ಜಿಂಗ್‌ ಟೆಕ್ನಾಲಾಜಿ’ಯಲ್ಲಿ (ಅತ್ಯಾಧುನಿಕ ಸಂವೇದನಾಶೀಲ ತಂತ್ರಜ್ಞಾನ) ಭಾರತ ಹಾಗೂ ಅಮೇರಿಕಾ ಒಟ್ಟಿಗೆ ಉತ್ಪಾದನೆ ಮಾಡುವುವು’, ಎಂದು ನಿರ್ಧರಿಸಲಾಯಿತು. ‘ಮೈಕ್ರೋಚಿಪ್ಸ್‌’ನಿಂದ ಹಿಡಿದು ಬಾಹ್ಯಾಕಾಶ ಸಂಶೋಧನೆಯ ವರೆಗೆ ಹಾಗೂ ಸಂರಕ್ಷಣಾ ತಂತ್ರಜ್ಞಾನದ ಮಾಹಿತಿ ಇದರಲ್ಲಿ ಒಳಗೊಂಡಿರಲಿದೆ. ಈ ಒಪ್ಪಂದದಲ್ಲಿ ಭಾರತ ಹಾಗೂ ಅಮೇರಿಕಾ ಇವೆರಡೂ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಹಭಾಗವಿದೆ. ಇಂತಹ ಒಪ್ಪಂದವನ್ನು ಅಮೇರಿಕಾ ಈ ಹಿಂದೆ ಯಾವುದೇ ದೇಶದೊಂದಿಗೆ ಮಾಡಿರಲಿಲ್ಲ.

ಪ್ರಧಾನಮಂತ್ರಿಗಳ ಈ ಪ್ರವಾಸದ ಮೊದಲು ಅಮೇರಿಕಾದ ಸಂರಕ್ಷಣಾ ಸಚಿವ ಲಾಯಿಡ್‌ ಅಸ್ಟೀನ್‌ ಇವರು ಭಾರತ ಭೇಟಿಗೆ ಬಂದು ಹೋಗಿದ್ದರು. ಆಗ ಭಾರತದ ಸಂರಕ್ಷಣಾಮಂತ್ರಿ ರಾಜನಾಥ ಸಿಂಹ ಇವರೊಂದಿಗೆ ಅವರ ಚರ್ಚೆಯಾಗಿತ್ತು. ಈ ಚರ್ಚೆಯಲ್ಲಿನ ಎರಡು ಮಹತ್ವದ ವಿಷಯಗಳನ್ನು ಪ್ರಧಾನಮಂತ್ರಿಗಳ ಪ್ರವಾಸದ ಸಂದರ್ಭದಲ್ಲಿ ಘೋಷಣೆ ಮಾಡಲಾಯಿತು. ಇದರಲ್ಲಿನ ಎಲ್ಲಕ್ಕಿಂತ ಮಹತ್ವದ ಘೋಷಣೆಯೆಂದರೆ, ‘ಜೆಟ್‌ ಇಂಜಿನ್’ ಉತ್ಪಾದನೆ. ಅಮೇರಿಕಾದ ‘ಜನರಲ್‌ ಇಲೆಕ್ಟ್ರಿಕಲ್ಸ್‌’ ಈ ಕಂಪನಿ ಇದನ್ನು ಉತ್ಪಾದಿಸುತ್ತಿದ್ದು ಅದು ಭಾರತದ ‘ಹಿಂದೂಸ್ಥಾನ ಎರೋನಾಟಿಕ್ಸ್ ಲಿಮಿಟೆಡ್‌ (ಎಚ್‌.ಎ.ಎಲ್‌.)’ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಕ್ಕನುಸಾರ ಈ ಜೆಟ್‌ ಇಂಜಿನ್‌ನನ್ನು ಭಾರತದಲ್ಲಿ ಉತ್ಪಾದಿಸಲಾಗುವುದು. ಇದು ಅತ್ಯಂತ ಮಹತ್ವದ ವ್ಯವಹಾರವಾಗಿದೆ. ಏಕೆಂದರೆ ಭಾರತ ಸದ್ಯ ತನ್ನ ವಾಯುದಳಕ್ಕಾಗಿ ಅತ್ಯಂತ ಆಧುನಿಕ ಯುದ್ಧ ವಿಮಾನಗಳನ್ನು ನಿರ್ಮಿಸುತ್ತಿದೆ. ಆ ಯುದ್ಧ ವಿಮಾನಗಳಲ್ಲಿ ಈ ಇಂಜಿನ್ನ್ನು ಉಪಯೋಗಿಸಲಾಗುವುದು ಹಾಗೂ ‘ತೇಜಸ್’ ಈ ಭಾರತೀಯ ನಿರ್ಮಿತಿಯ ಯುದ್ಧ ವಿಮಾನದಲ್ಲಿ ಈ ಇಂಜಿನ್‌ನನ್ನು ಉಪಯೋಗಿಸಬಹುದು. ಇಂದು ಜಗತ್ತಿನಾದ್ಯಂತ ಬಹಳ ಕಡಿಮೆ ದೇಶಗಳಲ್ಲಿ ಈ ಇಂಜಿನ್‌ಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಇದರ ತಂತ್ರಜ್ಞಾನವನ್ನು ಅಮೇರಿಕಾ ಭಾರತಕ್ಕೆ ನೀಡಲು ಒಪ್ಪಿಕೊಂಡಿರುವುದು ಮಹತ್ವದ್ದಾಗಿದೆ. ಇದಲ್ಲದೆ ಅಮೇರಿಕನ್‌ ವಾಯುದಳದಲ್ಲಿನ ‘ಪ್ರಿಡೇಟರ್‌ ಡ್ರೋನ್ಸ್‌’ ಖರೀದಿ ಮಾಡುವ ವಿಷಯದಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ. ಇದರ ತಂತ್ರಜ್ಞಾನವನ್ನೂ ಭಾರತಕ್ಕೆ ವರ್ಗಾಯಿಸಲಾಗುವುದು. ಆದ್ದರಿಂದ ರಾಷ್ಟ್ರದ ಶತ್ರುವಿಗೆ ಕಾಲರೂಪಿಯಾಗಿರುವ ಈ ಡ್ರೋನ್ಸ್‌ಗಳನ್ನು ಭವಿಷ್ಯದಲ್ಲಿ ಭಾರತದಲ್ಲಿ ತಯಾರಿಸಲಾಗುವುದು.

೩. ಅಮೇರಿಕಾವು ಭಾರತಕ್ಕೆ ಮಹತ್ವ ನೀಡಲು ಭಾರತ ಮಾಡಿದ ಆರ್ಥಿಕ ಸುಧಾರಣೆಯೇ ಕಾರಣವಾಗಿದೆ!

ಇವೆಲ್ಲವುಗಳಿಂದ ಒಂದು ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ, ಅದೇನೆಂದರೆ, ಭಾರತೀಯ ಪ್ರಧಾನಮಂತ್ರಿಗಳಿಗೆ ಇಷ್ಟು ‘ರೆಡ್‌ ಕಾರ್ಪೇಟ್’ (ರತ್ನಕಂಬಳಿ) (ಪ್ರಮುಖ ಅತಿಥಿಗಳಿಗೆ ಒಂದು ವಿಶೇಷ ಔಪಚಾರಿಕತೆ) ಏಕೆ ಹಾಸಲಾಯಿತು ? ವಿಶೇಷವಾಗಿ ಇದೇ ನರೇಂದ್ರ ಮೋದಿಯವರಿಗೆ ಎರಡು ದಶಕಗಳ ಹಿಂದೆ ಅಮೇರಿಕಾ ವೀಸಾ ನಿರಾಕರಿಸಿತ್ತು, ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಇದೇ ಅಮೇರಿಕಾ ಭಾರತಕ್ಕೆ ‘ಜಿ.ಪಿ.ಎಸ್‌.’ ತಂತ್ರಜ್ಞಾನ (‘ಗ್ಲೋಬಲ್‌ ಪೊಜಿಶನಿಂಗ್‌ ಸಿಸ್ಟಮ್’ – ಸಂಪೂರ್ಣ ಜಗತ್ತಿನ ಯಾವುದೇ ಸ್ಥಳದ ಮಾಹಿತಿಯನ್ನು ತೋರಿಸುವ ಪದ್ಧತಿ) ನೀಡಲು ನಿರಾಕರಿಸಿತ್ತು, ಅದೇ ಅಮೇರಿಕಾ ಈಗ ಭಾರತದ ಪ್ರಧಾನಮಂತ್ರಿಗಳಿಗೆ ‘ಸ್ಟೇಟ್‌ ವಿಸಿಟ್‌’ನ ಸನ್ಮಾನ ನೀಡುವವರೆಗೆ ಬದಲಾಗಿರುವುದರ ಕಾರಣವೇನು ? ಎರಡನೇ ಮಹಾಯುದ್ಧದ ನಂತರ ‘ಜಾಗತಿಕ ಮಹಾಶಕ್ತಿ’ಯೆಂಬ ಬಿರುದನ್ನು ಉಳಿಸಿಕೊಳ್ಳುವ ಅಮೇರಿಕಾ ಈ ರತ್ನಕಂಬಳಿಯನ್ನು ಹಾಸುವುದರ ಹಿಂದೆ ಭಾರತದಲ್ಲಿ ಆಗಿರುವ ೩ ಮಹತ್ವದ ಕ್ರಾಂತಿಗಳೇ ಕಾರಣವಾಗಿವೆ.

ಅ. ಇದರಲ್ಲಿ ಒಂದು ಆಧಾರಕಾರ್ಡ್ ಕ್ರಾಂತಿ. ಇಂದು ಭಾರತದಲ್ಲಿನ ಶೇ. ೯೦ ರಷ್ಟು ನಾಗರಿಕರ ಡಿಜಿಟಲ್‌ ಗುರುತು ಆಧಾರ್‌ ಕಾರ್ಡ್‌ನ ಮೂಲಕ ಸಿದ್ಧವಾಗಿದೆ. ‘ಸಾಮಾನ್ಯವಾಗಿ ಜಗತ್ತಿನ ೮೦೦ ಕೋಟಿ ಜನರಲ್ಲಿ ೪೦೦ ಕೋಟಿ ಜನರಲ್ಲಿ ಡಿಜಿಟಲ್‌ ಗುರುತುಪತ್ರವಿದೆ’, ಎಂದು ಹೇಳಲಾಗುತ್ತದೆ. ಇದರಲ್ಲಿ ೧೪೦ ಕೋಟಿ ಜನರು ಕೇವಲ ಭಾರತದವರಾಗಿದ್ದಾರೆ.

ಆ. ಎರಡನೆಯ ಕ್ರಾಂತಿಯೆಂದರೆ, ದೂರಸಂಚಾರ ಕ್ರಾಂತಿ. ‘೫ ಜಿ’ ತಂತ್ರಜ್ಞಾನವನ್ನು ಉಪಯೋಗಿಸಲು ಆರಂಭಿಸುವಾಗಲೇ ಭಾರತ ‘೬ ಜಿ’ ತಂತ್ರಜ್ಞಾನದ ‘ಬ್ಲೂ ಪ್ರಿಂಟ್’ ಸಿದ್ಧಪಡಿಸಿದೆ.

ಇ. ಮೂರನೇ ಕ್ರಾಂತಿಯೆಂದರೆ ಇದು ಮೂಲಭೂತ ಸೌಲಭ್ಯಗಳ ಕ್ಷೇತ್ರದಲ್ಲಿನ ವಿಕಾಸದಿಂದ ಅವತರಿಸಿದೆ. ಕಳೆದ ೯ ವರ್ಷಗಳಲ್ಲಿ ಭಾರತದಲ್ಲಿ ರಸ್ತೆ, ರೈಲ್ವೆ, ಜಲಮಾರ್ಗ, ಜಲ ಹಾಗೂ ವಾಯು ಸಾರಿಗೆ, ವಿಮಾನ ನಿಲ್ದಾಣಗಳು, ಬಂದರುಗಳು, ರಾಷ್ಟ್ರೀಯ ಹೆದ್ದಾರಿ ಇವೆಲ್ಲವೂ ಬಹುದೊಡ್ಡ ಪ್ರಮಾಣದಲ್ಲಿ ವಿಕಾಸವಾಗಿವೆ. ಇದರಿಂದ ಭಾರತದ ‘ಲಾಜಿಸ್ಟಿಕ್‌ ಕಾಸ್ಟ್‌’ (ಸೈನ್ಯದ ಅನ್ನಧಾನ್ಯ ಪೂರೈಕೆಯ ಖರ್ಚು) ವಿಪರೀತ ಕಡಿಮೆಯಾಗಲಿಕ್ಕಿದೆ. ಇದಲ್ಲದೆ ‘ಯು.ಪಿ.ಐ.’ಯಂತಹ (ಯುನಿಫಾಯಿಡ್‌ ಪೇಮೆಂಟ್‌ ಇಂಟರ್‌ಫೇಸ್- ಹಣ ಕೊಡುಕೊಳ್ಳುವುದಕ್ಕಾಗಿ ಒಂದು ಪದ್ಧತಿ) ಪದ್ಧತಿಯ ವಿಕಾಸದಿಂದ ಭಾರತದಲ್ಲಿ ‘ಡಿಜಿಟಲ್‌ ಇನ್ಫ್ರಾಸ್ಟ್ರಕ್ಚರ್’ ಸಹ (ಡಿಜಿಟಲ್‌ ಮೂಲಭೂತ ಸೌಲಭ್ಯಗಳ) ದೊಡ್ಡ ಪ್ರಮಾಣದಲ್ಲಿ ವಿಕಾಸವಾಗಲಿದೆ.

ಈ ಮೂರು ಕ್ರಾಂತಿಯ ಮೂಲಕ ಭಾರತದಲ್ಲಿ ಕಳೆದ ದಶಕದಲ್ಲಿ ಬಹಳಷ್ಟು ಬದಲಾವಣೆ ಮಾಡಿದೆ. ‘ಸ್ಟೆನ್ಲೆ ಮಾರ್ಗನ್’ ಈ ಸಂಸ್ಥೆ ಇತ್ತೀಚೆಗಷ್ಟೆ ಭಾರತದ ಈ ವಿಕಾಸ ದರದ ವಿಷಯದಲ್ಲಿ ವಿಶ್ಲೇಷಣೆ ಮಾಡುವಾಗ ‘ಕಳೆದ ೧೦ ವರ್ಷಗಳಲ್ಲಿ ಭಾರತ ಮಾಡಿದ ಆರ್ಥಿಕ ಸುಧಾರಣೆಯು ಪ್ರಶಂಸಾರ್ಹವಾಗಿದೆ’, ಎಂದು ಹೇಳಿದೆ. ವಿಶೇಷವೆಂದರೆ ೨೦೧೩ ರಲ್ಲಿ ಈ ಸ್ಟೆನ್ಲೇ ಮಾರ್ಗನ್‌ ‘ಮುಂಬರುವ ಕೆಲವು ವರ್ಷಗಳಲ್ಲಿ ಭಾರತ ಅತ್ಯಂತ ಕೆಟ್ಟ ಕಾಲವನ್ನು ಎದುರಿಸಬೇಕಾಗಬಹುದು’, ಎಂದು ಭವಿಷ್ಯ ನುಡಿದಿತ್ತು.

ಜಾಗತಿಕ ಬ್ಯಾಂಕ್‌ ಹಾಗೂ ಅಂತರರಾಷ್ಟ್ರೀಯ ನಾಣ್ಯನಿಧಿ ಇವರ ವರದಿಯಿಂದಲೂ ‘ಸದ್ಯ ಭಾರತ ಜಗತ್ತಿನ ಸರ್ವಾಧಿಕ ವಿಕಾಸ ದರವಿರುವ ದೇಶವಾಗಿದೆ’, ಎಂದು ಕಂಡುಬಂದಿದೆ. ಇಷ್ಟು ಮಾತ್ರವಲ್ಲ, ಯಾವಾಗಲೂ ಭಾರತವನ್ನು ಹಗೆತನದಿಂದ ನೋಡುವ ಪಾಕಿಸ್ತಾನದಲ್ಲಿನ ‘ದ ಡಾನ್’ ಈ ರಾಷ್ಟ್ರೀಯ ವರ್ತಮಾನಪತ್ರಿಕೆ ಸಂಪಾದಕೀಯ ಬರೆದು ಭಾರತವನ್ನು ಪ್ರಶಂಸೆ ಮಾಡಿದೆ. ‘ಪಾಕಿಸ್ತಾನ ಇನ್ನು ಹೆಚ್ಚು ದಿನ ಭಾರತವನ್ನು ಟೀಕಿಸಬಾರದು. ಅದರ ಬದಲು ಭಾರತ ಮಾಡಿದ ಆರ್ಥಿಕ ಪರಿವರ್ತನೆಯಿಂದ ಪಾಠ ಕಲಿತು ಪಾಕಿಸ್ತಾನ ಕೂಡ ಪ್ರಯತ್ನಿಸಬೇಕು’, ಎಂದು ಹೇಳಿದೆ. ಒಟ್ಟಾರೆ ಕಳೆದ ೧೦ ವರ್ಷಗಳಲ್ಲಿ ಆಗಿರುವ ಆರ್ಥಿಕ ಬದಲಾವಣೆಯಯಿಂದ ಜಗತ್ತಿನ ಅನೇಕ ದೇಶಗಳಿಗೆ ಭಾರತದೊಂದಿಗೆ ಸಂಬಂಧವಿಡುವುದು ಮಹತ್ವದ್ದೆನಿಸುತ್ತಿದೆ.

೪. ಅಮೇರಿಕಾದ ಆರ್ಥಿಕವಿಕಾಸಕ್ಕಾಗಿ ಭಾರತದ ಅವಶ್ಯಕತೆ

ಇಂದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ೨ ಪ್ರಕಾರದ ಚಿತ್ರಣ ಕಾಣಿಸುತ್ತಿದೆ. ಒಂದೆಡೆ ಅಮೇರಿಕಾ ಹಾಗೂ ಯುರೋಪಿಯನ್‌ ದೇಶಗಳಿವೆ. ಅದರಲ್ಲಿ ಅಮೇರಿಕಾದ ಸ್ಥಿತಿ ನೋಡಿದರೆ ಅಲ್ಲಿನ ಅನೇಕ ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವುದು ಕಾಣಿಸುತ್ತವೆ. ಅಲ್ಲಿನ ಅನೇಕ ದಿಗ್ಗಜ ಕಂಪನಿಗಳು ಸಿಬ್ಬಂದಿಗಳನ್ನು ಕಡಿತಗೊಳಿಸುತ್ತಿವೆ. ಅಲ್ಲಿ ಬೆಲೆ ಏರಿಕೆ ಮಿತಿಮೀರಿದೆ. ಅನ್ನಧಾನ್ಯದ ಬೆಲೆ ಮುಗಿಲು ಮುಟ್ಟಿದೆ. ಆರ್ಥಿಕ ವಿಕಾಸದ ದರ ಕುಸಿದಿದೆ. ಇದೇ ಸ್ಥಿತಿ ಯುರೋಪ್‌ನಲ್ಲಿಯೂ ಕಾಣಿಸುತ್ತಿದೆ. ತದ್ವಿರುದ್ಧ ಇನ್ನೊಂದು ಚಿತ್ರಣದಲ್ಲಿ ಭಾರತದಂತಹ ದೇಶ ಕೊರೋನಾ ಮಹಾಮಾರಿಯ ನಂತರದಲ್ಲಿ ವಿನಾಕಾರಣ ಯಾವುದೇ ರೀತಿಯ ರಾಜಕಾರಣದ ಹಿಂದೆ ಹೋಗದೆ ತಟಸ್ಥ ನಿಲುವಿನಲ್ಲಿದ್ದು ಆರ್ಥಿಕ ಹಾಗೂ ಮೂಲಭೂತ ಸೌಲಭ್ಯಗಳ ವಿಕಾಸ ಮಾಡಿದೆ. ಅದರಿಂದಲೆ ಭಾರತ ಇಂದು ಶೇ. ೬ ರಿಂದ ೭ ರಷ್ಟು ವಿಕಾಸದರದೊಂದಿಗೆ ಜಗತ್ತಿನಲ್ಲಿ ಅಗ್ರಸ್ಥಾನಕ್ಕೆ ತಲಪಿದೆ. ಸಹಜವಾಗಿಯೇ ಇಂದು ಅಮೇರಿಕಾಗೆ ಆರ್ಥಿಕ ವಿಕಾಸಕ್ಕಾಗಿ ಭಾರತದಂತಹ ದೇಶದ ಅವಶ್ಯಕತೆಯಿದೆ. ಭಾರತದೊಂದಿಗೆ ಮಾಡಿದ ‘ಪ್ರಿಡೇಟರ್‌ ಡ್ರೋನ್ಸ್‌’ನ ೨೫ ಸಾವಿರ ಕೋಟಿ ರೂಪಾಯಿಗಳ ಒಪ್ಪಂದದಿಂದ ಅಮೇರಿಕಾಗೆ ದೊಡ್ಡ ಆಧಾರ ಸಿಗಲಿಕ್ಕಿದೆ; ಏಕೆಂದರೆ ಇದರಿಂದ ಅಮೇರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವಾಗಲಿಕ್ಕಿದೆ.

೫. ಪ್ರಧಾನಮಂತ್ರಿ ಮೋದಿಯವರ ಅಮೇರಿಕಾ ಭೇಟಿ ಸರಿಸಮಾನ ಪಾಲುದಾರಿಕೆ ಹಾಗೂ ಅಪರಿಮಿತ ಆತ್ಮವಿಶ್ವಾಸದಿಂದ ಕೂಡಿದೆ !

ಇವೆಲ್ಲವನ್ನೂ ವಿಚಾರ ಮಾಡುವಾಗ ಪ್ರಧಾನಮಂತ್ರಿ ಮೋದಿಯವರ ಈ ಬಾರಿಯ ಭೇಟಿ ಒಂದು ಶ್ರೀಮಂತ, ವಿಕಸಿತ, ಪ್ರಗತ ದೇಶ ಹಾಗೂ ಒಂದು ಬಡ ದೇಶದ ನಡುವಿನ ಭೇಟಿಯಾಗಿರಲಿಲ್ಲ, ಇದು ಸರಿಸಮಾನ ಪಾಲುದಾರರ ಹಾಗೂ ಆತ್ಮವಿಶ್ವಾಸದಿಂದ ತುಂಬಿರುವ ಭೇಟಿಯಾಗಿತ್ತು. ಭವಿಷ್ಯದಲ್ಲಿ ಇದಕ್ಕಿಂತಲೂ ದೊಡ್ಡ ವ್ಯವಹಾರಗಳು ಭಾರತ-ಅಮೇರಿಕಾದ ನಡುವೆ ನಡೆಯುವುದು ಕಾಣಿಸಬಹುದು. ಭಾರತ ‘ಒಂದು ಪ್ರಭಾವಶಾಲಿ ರಾಷ್ಟ್ರ’ವೆಂದು ಬೆಳೆಯುತ್ತಿರುವುದು ಈ ಭೇಟಿಯಿಂದ ಎದ್ದು ಕಾಣಿಸುತ್ತಿದೆ. ‘೨೫೦ ವರ್ಷಗಳ ಗುಲಾಮಗಿರಿಯ ಇತಿಹಾಸವನ್ನು ನಾವು ಅಳಿಸಿಹಾಕಿದ್ದು ನಮ್ಮ ಪ್ರಗತಿಯನ್ನು ಜಗತ್ತಿನಲ್ಲಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲ’, ಎಂಬುದು ಪ್ರಧಾನಮಂತ್ರಿ ಮೋದಿಯವರು ವ್ಯಕ್ತಪಡಿಸಿದ ಆತ್ಮವಿಶ್ವಾಸವೇ ಈ ಭೇಟಿಯ ಫಲಿತಾಂಶವೆಂದು ಹೇಳಬಹುದು.’ (೩.೭.೨೦೨೩) – ಡಾ. ಶೈಲೇಂದ್ರ ದೇವಳಾಣಕರ್, ವಿದೇಶ ಧೋರಣೆಯ ವಿಶ್ಲೇಷಕರು. (ಆಧಾರ : ಫೇಸ್‌ಬುಕ್)

ಸಂಪಾದಕೀಯ ನಿಲುವು

ವಿಶ್ವದಾದ್ಯಂತ ಮಹಾಶಕ್ತಿಶಾಲಿಯೆಂದು ಮೇಲೇರುತ್ತಿರುವ ಭಾರತವು ಪಾಕಿಸ್ತಾನ ಪುರಸ್ಕೃತ ಭಯೋತ್ಪಾದನೆಯನ್ನು ನಾಶಗೊಳಿಸಲು ಪ್ರಾಧಾನ್ಯತೆ ನೀಡಬೇಕು !