ವಿರೋಧಿಗಳ ‘ಇಂಡಿಯಾ’ ಬೇಡವೇ ಬೇಡ !

ದೇಶದಲ್ಲಿ ಲೋಕಸಭಾ ಚುನಾವಣೆಯ ಗಾಳಿ ಬೀಸಲು ಆರಂಭವಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಅದರ ಸಿದ್ಧತೆಯಲ್ಲಿ ತೊಡಗಿರುವುದು ಕಾಣಿಸುತ್ತಿದೆ. ಇದರ ಮೊದಲ ಹಂತವೆಂದು ಅಧಿಕಾರಾರೂಢ (ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟ (ಎನ್.ಡಿ.ಎ)) ಪಕ್ಷ ಹಾಗೂ ವಿರೋಧಿಗಳು (ಸಂಯುಕ್ತ ಪ್ರಗತಿಪರ ಮೈತ್ರಿಕೂಟ) ‘ತಮ್ಮ ತಮ್ಮ ತಕ್ಕಡಿಯಲ್ಲಿ ಎಷ್ಟು ರಾಜಕೀಯ ಪಕ್ಷಗಳ ತೂಕವಿದೆ ?’, ಎಂಬುದನ್ನು ಪರೀಕ್ಷಣೆ ಮಾಡುತ್ತಿವೆ. ಇತ್ತೀಚೆಗೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಅನುಕ್ರಮವಾಗಿ ನೆರವೇರಿದ ಇವೆರಡೂ ಬಣಗಳ ಸಭೆಗಳು ಅದರದ್ದೇ ಒಂದು ಭಾಗವಾಗಿತ್ತು. ಅದರೂ ದೇಶ ದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿರುವುದು ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಸಭೆಯ ವಿಷಯದಲ್ಲಿ. ಇದರ ಹಿಂದಿನ ಮುಖ್ಯ ಕಾರಣವೆಂದರೆ ಸಂಯುಕ್ತ ಪ್ರಗತಿಪರ ಮೈತ್ರಿಕೂಟ ಮಾಡಿಕೊಂಡಿರುವ ಮರುನಾಮಕರಣ. ಇನ್ನು ಮುಂದೆ ಈ ಮೈತ್ರಿಕೂಟವು ‘ಇಂಡಿಯಾ’ ಎಂಬ ಹೆಸರಿನಲ್ಲಿ ಗುರುತಿಸಲ್ಪಡಲಿದೆ.

ವಿರೋಧ ಪಕ್ಷದ ಮೈತ್ರಿಕೂಟವನ್ನು ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (INDIA)

‘INDIA’ ಈ ಅಕ್ಷರಕ್ಕನುಸಾರ ‘ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲಾಯನ್ಸ್’, ಎಂದು ಅದರ ಹೆಸರನ್ನು ನಿರ್ಧರಿಸಲಾಗಿದೆ. ಯಾವುದೇ ರಾಜಕೀಯ ಪಕ್ಷ ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ; ಆದರೆ ‘ಇಂಡಿಯಾ’ದಂತಹ ಚೆಂದದ ಹೆಸರಿನಲ್ಲಿ ಒಗ್ಗಟ್ಟಾಗಿರುವ ಪಕ್ಷಗಳ ಉದ್ದೇಶ ಮಾತ್ರ ‘ಮೋದಿ ಬೇಡ’ ಎಂಬುದಾಗಿದೆ. ದ್ವೇಷಾಧಾರಿತ ಮೈತ್ರಿಯು ಅನೈಸರ್ಗಿಕವಾಗಿರುತ್ತದೆ, ಆದ್ದರಿಂದ ಅದು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ, ಎಂಬ ಇತಿಹಾಸವಿದೆ. ‘ನಾವು ಒಳ್ಳೆಯ ಆಡಳಿತವನ್ನು ನೀಡುವೆವು,’ ‘ನಾವು ವಿಕಾಸ ಮಾಡುತ್ತೇವೆ’, ‘ನಾವು ಜನರ ಸಮಸ್ಯೆಗಳನ್ನು ನಿವಾರಿಸುತ್ತೇವೆ’, ಎಂದು ಎಲ್ಲಿಯೂ ಈ ‘ಇಂಡಿಯಾ ಮೈತ್ರಿಕೂಟವು’ ಹೇಳಿಲ್ಲ. ಅದಕ್ಕಾಗಿ ಮೈತ್ರಿಕೂಟವು ಯಾವುದೇ ಸಮಾನ ಕೃತಿ ಕಾರ್ಯಕ್ರಮವನ್ನೂ ಹಮ್ಮಿಕೊಂಡಿಲ್ಲ. ಈ ಮೈತ್ರಿಕೂಟದ ಎಲ್ಲರ ಬಾಯಿಯಲ್ಲಿ ಎರಡೇ ಶಬ್ದಗಳಿವೆ. ಅದೇನೆಂದರೆ, ‘ಮೋದಿ ಬೇಡ.’ ವಿರೋಧಿಗಳು ‘ಮೋದಿ ಬೇಡ’ವೆಂಬ ಪ್ರಯೋಗವನ್ನು ೨೦೧೮ ರಲ್ಲಿಯೂ ಬೆಂಗಳೂರಿನಲ್ಲಿ ಮಾಡಿದ್ದು ಅದು ಯಶಸ್ವಿಯಾಗಿಲ್ಲ. ಆಗ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಭಾಜಪಕ್ಕಿಂತ ಕಡಿಮೆ ಸ್ಥಾನ ಸಿಕ್ಕಿದ್ದರೂ ಜನತಾ ದಳ (ಸೆಕ್ಯುಲರ್) ಈ ಪಕ್ಷದೊಂದಿಗೆ ಕೂಡಿಕೊಂಡು ಅಲ್ಲಿ ಸರಕಾರವನ್ನು ಸ್ಥಾಪಿಸಿತ್ತು. ಅದಕ್ಕಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ಕುಮಾರಸ್ವಾಮಿಯವರ ಕೊರಳಿಗೆ ಹಾರ ಹಾಕಿತ್ತು. ಈ ಸರಕಾರದ ಪ್ರಮಾಣವಚನದ ಸಮಯದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ನೇತಾರರು, ಅಂದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಶರದ ಪವಾರ್, ಮಮತಾ ಬ್ಯಾನರ್ಜಿ, ಚಂದ್ರಬಾಬೂ ನಾಯ್ಡು, ಮಾಯಾವತಿ ಮುಂತಾದವರು ಮಾಧ್ಯಮಗಳ ಮುಂದೆ ಕೈ ಎತ್ತಿ ‘ಮೋದಿ ಬೇಡ’ವೆಂಬ ಸಂದೇಶವನ್ನು ನೀಡಿದ್ದರು. ಆದರೂ ೨೦೧೯ ರಲ್ಲಾದ ಲೋಕಸಭಾ ಚುನಾವಣೆಯಲ್ಲಿ ಭಾಜಪವು ೨೦೧೪ ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತು. ಇದರ ಅರ್ಥ ನೇತಾರರ ಸಂಖ್ಯೆಯ ಆಧಾರದಲ್ಲಿ ಚುನಾವಣೆಯ ಫಲಿತಾಂಶ ಬರುವುದಿಲ್ಲ, ಜನರಿಗೆ ನಿಮ್ಮ ಕಾರ್ಯ ಎಷ್ಟು ಇಷ್ಟವಾಗುತ್ತದೆ’, ಎಂಬುದನ್ನು ಅವಲಂಬಿಸುತ್ತದೆ ಎಂದಾಗಿದೆ. ಅದ್ದರಿಂದ ವಿರೋಧಿಗಳು ಮೋದಿದ್ವೇಷದ ಸೂತ್ರದಲ್ಲಿ ಒಗ್ಗಟ್ಟಾಗುವ ಬದಲು ನಾಗರಿಕರ ಸಮಸ್ಯೆಗಳನ್ನು ನಿವಾರಿಸಲು ಮುಂದೆ ಬರಬೇಕು.

ಭಾಜಪದ ವಿರುದ್ಧ ದ್ವೇಷಕಾರುವ ಬದಲು ಸಮಾಜದಲ್ಲಿ ಹದಗೆಟ್ಟಿರುವ ಕಾನೂನು ಹಾಗೂ ಸುವ್ಯವಸ್ಥೆ ಯನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ಒಂದು ಕಾಲದಲ್ಲಿ ಈ ವಿರೋಧಿಪಕ್ಷಗಳಿಗಾಗಿ ಹೋರಾಡುತ್ತಿದ್ದ ಪ್ರಸಿದ್ಧ ರಣನೀತಿತಜ್ಞ ಪ್ರಶಾಂತ ಕಿಶೋರ್ ಇವರು ಕೂಡ ‘ಕೇವಲ ನೇತಾರರು ಒಟ್ಟಾಗುವುದರಿಂದ ಬಲಶಾಲಿ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ’, ಎಂದು ವಿರೋಧಿಗಳ ಕಿವಿ ಹಿಂಡಿದ್ದಾರೆ. ಇದರಿಂದಾದರೂ ಈ ವಿರೋಧಿಗಳು ಪಾಠಕಲಿಯುವುದು ಬೇಡವೇ ?

ಹೆಸರನ್ನು ಬದಲಾಯಿಸುವ ಪ್ರಮೇಯ ಏಕೆ ಬಂತು ?

ರಾಹುಲ್ ಗಾಂಧಿಯವರಿಗೆ ದೇಶದಲ್ಲಿ ಅನೇಕ ವರ್ಷ ಗಳಿಂದ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಪುರಸ್ಕೃತ ‘ಸಂಯುಕ್ತ ಪ್ರಗತಿಪರ ಮೈತ್ರಿಕೂಟ’ಕ್ಕೆ ಮರುನಾಮಕರಣದ ಪ್ರಮೇಯ ಏಕೆ ಬಂತು ? ಅಥವಾ ಅವರು ಮೈತ್ರಿಕೂಟದ ಹೆಸರನ್ನು ಏಕೆ ಬದಲಾಯಿಸಿದರು ? ಎಂಬ ವಿಷಯದಲ್ಲಿ ಎಲ್ಲರೂ ಬಾಯಿ ಮುಚ್ಚಿ ಕುಳಿತಿದ್ದರೂ ಅದರ ಉತ್ತರ ಅತ್ಯಂತ ಸುಲಭವಾಗಿದೆ. ಮೂಲತಃ ಇವೆಲ್ಲ ಪಕ್ಷಗಳು ತಮ್ಮನ್ನು ‘ಪ್ರಗತಿಪರ’ರೆಂದು ಹೇಳಿಸಿಕೊಳ್ಳುತ್ತವೆ. ‘ಪ್ರಗತಿಪರ’ ಎಂಬ ಸುಂದರವಾದ ಹೆಸರಿನಲ್ಲಿ ಈ ಪಕ್ಷಗಳು ಇಂದಿನ ವರೆಗೆ ಮಾಡಿರುವ ಹಿಂದೂದ್ವೇಷದಿಂದಾಗಿ ಈ ‘ಪ್ರಗತಿಪರ’ ಎಂಬುದು ಭಾರತದಲ್ಲಿ ಒಂದು ಬೈಗುಳವಾಗಿ ಬಿಟ್ಟಿದೆ. ಹಿಂದೂದ್ವೇಷದಿಂದ ತುಂಬಿ ತುಳುಕುತ್ತಿರುವ ‘ಪ್ರಗತಿಪರ’ ಎಂಬ ಹೆಸರಿನ ಮುಳ್ಳಿನ ಕಿರೀಟದ ಅಧಿಕಾರಿಯಾಗಲು ಈಗ ಯಾರು ಕೂಡ ಸಿದ್ಧರಿಲ್ಲ. ಆದ್ದರಿಂದ ಕಟ್ಟಾ ಪ್ರಗತಿಪರರಾಗಿದ್ದ ರಾಹುಲ್ ಗಾಂಧಿ ಈಗ ತಮ್ಮನ್ನು ‘ಜನಿವಾರ ಧಾರಿ ಬ್ರಾಹ್ಮಣ’ನೆಂದು ಕರೆಸಿಕೊಳ್ಳುತ್ತಿದ್ದಾರೆ ಹಾಗೂ ಚುನಾವಣೆಯ ಸಂದರ್ಭದಲ್ಲಿಯಾದರೂ ದೇವಸ್ಥಾನಗಳಿಗೆ ಹೋಗುತ್ತಾರೆ ! ಈ ನಾಮಕರಣದ ಹಿಂದೆ ಇನ್ನೊಂದು ಕಾರಣವೂ ಇದೆ. ಭಾಜಪ ಅನೇಕ ಅಂಶಗಳಲ್ಲಿ ರಾಷ್ಟ್ರವಾದವನ್ನು ಜೋಪಾಸನೆ ಮಾಡುತ್ತದೆ, ಅದು ಜನರಿಗೆ ಇಷ್ಟವಾಗುತ್ತದೆ. ಆದ್ದರಿಂದಲೇ ‘ಸಂಯುಕ್ತ ಪ್ರಗತಿಪರ ಮೈತ್ರಿ’ಯನ್ನು ರಾಷ್ಟ್ರಕ್ಕೆ ಸಂಬಂಧಿಸಿದ ‘ಇಂಡಿಯಾ’ ಎಂಬ ಹೆಸರಿಗೆ ಬದಲಾಯಿಸಿ ತನ್ನನ್ನು ರಾಷ್ಟ್ರವಾದಿಯೆಂದು ತೋರಿಸುವ ಉದ್ದೇಶವೂ ಇದರ ಹಿಂದಿದೆ. ಅಂದರೆ ಕೇವಲ ಹೆಸರನ್ನು ಬದಲಾಯಿಸಿದರೆ, ಯಾರೂ ರಾಷ್ಟ್ರವಾದಿಗಳಾಗುವುದಿಲ್ಲ. ಹಾಗಿರುತ್ತಿದ್ದರೆ, ಕಾಂಗ್ರೆಸ್ಸನ್ನು ಒಡೆದು ಬಂದಿರುವ ಶರದ ಪವಾರರ ‘ರಾಷ್ಟ್ರವಾದಿ ಕಾಂಗ್ರೆಸ್’ ಪಕ್ಷ ಇಂದು ಎಲ್ಲಿಂದ ಎಲ್ಲಿಗೆ ತಲುಪಬೇಕಿತ್ತು; ಆದರೆ ಅದು ಕೊನೆಯುಸಿರೆಳೆಯತ್ತಿದೆ. ಇನ್ನೊಂದು ಮೋಜೆಂದರೆ, ಸಂಯುಕ್ತ ಪ್ರಗತಿಪರ ಮೈತ್ರಿಯಲ್ಲಿನ ಯಾವ ನೇತಾರರು ‘ಇಂಡಿಯಾ’ ಎಂದು ನಾಮಕರಣ ಮಾಡಿದರೊ, ಅದೇ ನೇತಾರರು ಜೆ.ಎನ್.ಯು.ನಂತಹ ಶೈಕ್ಷಣಿಕ ಸಂಸ್ಥೆಯಲ್ಲಿ ‘ಭಾರತ ತೆರೆ ತುಕ್‌ಡೆ ಹೋಂಗೆ’ಯ ಘೋಷಣೆ ನೀಡುವ ಹಾಗೂ ಅಂತಹ ಪ್ರತಿಜ್ಞೆ ಮಾಡುವವರ ಬೆಂಬಲಕ್ಕೆ ನಿಂತಿದ್ದರು. ಇದರಿಂದ ಈ ಮೈತ್ರಿಯೆಂದರೆ ‘ಹೊಸ ಬಾಟ್ಲಿ, ಹಳೆಯ ಸರಾಯಿ’ ಎನ್ನುವ ಹಾಗಿದೆ. ಅವರಲ್ಲಿ ನಿಜವಾಗಿಯೂ ರಾಷ್ಟ್ರವಾದ ಇರುತ್ತಿದ್ದರೆ, ಅವರು ತಮ್ಮ ಪಕ್ಷದ ಹೆಸರಿನಲ್ಲಿ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತಿರಲಿಲ್ಲ.

ವಿರೋಧಿಗಳ ‘ಇಂಡಿಯಾ’ ‘ವಿಭಜನೆಯ’ಯ ಹೊಸ್ತಿಲಲ್ಲಿ !

ಬೆಂಗಳೂರಿನ ಸಭೆಯ ನಂತರ ವಿರೋಧಿಗಳ ಈ ‘ಇಂಡಿಯಾ’ ‘ವಿಭಜನೆ’ಯ ಹೊಸ್ತಿಲಲ್ಲಿ ನಿಂತಿರುವುದು ಕಾಣಿಸಿತು; ಏಕೆಂದರೆ ಸಭೆಯ ನಂತರದ ಸಂಯುಕ್ತ ಪತ್ರಕರ್ತರ ಪರಿಷತ್ತಿನ ಮೊದಲೇ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಹಾಗೂ ರಾಷ್ಟ್ರೀಯ ಜನತಾ ದಳದ ನೇತಾರ ಲಾಲೂ ಪ್ರಸಾದ ಯಾದವ ಇವರು ಬೆಂಗಳೂರಿನಿಂದ ಪಲಾಯನಗೈದರು. ಅವರಿಗೆ ‘ಇಂಡಿಯಾ’ ಈ ಹೆಸರಿನ ಬಗ್ಗೆಯೇ ಆಕ್ಷೇಪವಿತ್ತು. ಈ ಹೆಸರು ರಾಹುಲ್ ಗಾಂಧಿ ಮತ್ತು ಅರವಿಂದ ಕೇಜರೀವಾಲ ಇವರ ಆಯ್ಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಮೋದಿವಿರೋಧಿ ಮೈತ್ರಿಗಾಗಿ ನಿತೀಶ ಕುಮಾರ ಇವರು ಹಗಲಿರುಳು ಶ್ರಮಪಟ್ಟು ಸಭೆಯ ಆಯೋಜನೆ ಮಾಡಿರುವಾಗ ಅದರ ಶ್ರೇಯಸ್ಸನ್ನು ಕಾಂಗ್ರೆಸ್ ಕಸಿದುಕೊಳ್ಳುವುದನ್ನು ನೋಡಿ ಈ ತ್ರಿಕುಟರು ಬೇಸರ ಪಟ್ಟುಕೊಂಡರು. ಕೊನೆಗೆ ‘ಕಾಂಗ್ರೆಸ್ಸಿಗೆ ಪ್ರಧಾನಿ ಹುದ್ದೆಯಲ್ಲಿ ಆಸಕ್ತಿಯಿಲ್ಲ’, ಎಂದು ‘ಕಾಂಗ್ರೆಸ್ಸಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು ಬಹಿರಂಗವಾಗಿ ಹೇಳಬೇಕಾಯಿತು, ಅದು ಇದಕ್ಕಾಗಿಯೆ ! ಇಂತಹ ಹಗೆತನ ಇರುವ ‘ಇಂಡಿಯಾ’ದ ಆಡಳಿತ ಯಾರಿಗೆ ಬೇಕು ?