ಗುರುತತ್ತ್ವ ಹಾಗೂ ರಾಷ್ಟ್ರಹಿತ !

ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ | ಅರ್ಥ : ಎಲ್ಲ ಭಾವಗಳಿಂದ ಮುಕ್ತರಾದ ತ್ರಿಗುಣರಹಿತ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ. ಸನಾತನ ಭಾರತೀಯ ಸಂಸ್ಕೃತಿಯ ಆತ್ಮವಾಗಿರುವ ಅತ್ಯಂತ ಮಹತ್ವದ ಹಾಗೂ ಮಂಗಲಮಯ ಗುರುಪೂರ್ಣಿಮೆಯ ದಿನವನ್ನು ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಆಚರಿಸಲಾಗುವುದು. ಭಾರತಸಹಿತ ಸಂಪೂರ್ಣ ವಿಶ್ವವೇ ಒಂದು ಬಹುದೊಡ್ಡ ಪರಿವರ್ತನೆಯ ಚಕ್ರದಿಂದ ಸಾಗುತ್ತಿದ್ದು ಹೊಸತೇನಾದರೂ ಆರಂಭವಾಗುವ ಮೊದಲಿನ ಪ್ರಚಂಡ ಚಟುವಟಿಕೆಗಳಿಂದ ತುಂಬಿಕೊಂಡಿರುವ ಸಂಧಿಕಾಲವನ್ನು ಇಂದು ಎಲ್ಲರೂ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಉಪಾಸನೆ ಹಾಗೂ ರಾಷ್ಟ್ರಕಾರ್ಯ ಇವೆರಡೂ ದೃಷ್ಟಿ ಯಿಂದ ಗುರುಪೂರ್ಣಿಮೆಯ ದಿನದ ಮಹತ್ವವು ಅತ್ಯಂತ ಅಸಾಧಾರಣವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಜೀವನದ ಮುಖ್ಯ ಧ್ಯೇಯವು ‘ಮೋಕ್ಷಪ್ರಾಪ್ತಿ’ ಎಂದು ಹೇಳಲಾಗಿದೆ ಹಾಗೂ ಅದು ಗುರುಕೃಪೆಯ ಹೊರತು ಅಸಾಧ್ಯವಾಗಿದೆ. ಶಾಂತಿಪಾಠದಲ್ಲಿ ಗುರುಗಳನ್ನು ‘ಪೂರ್ಣಸ್ವರೂಪ’ ಎಂದು ಹೇಳಲಾಗಿದೆ. ಈಶ್ವರನ ರೂಪವಿರುವ, ಆದರೆ ಎಲ್ಲ ಕರ್ತೃತ್ವಗಳಿಂದ ದೂರ ಉಳಿಯುವ ಗುರುತತ್ತ್ವವೇ ಮಾನವನಿಗೆ ಮನಃಶಾಂತಿ ಹಾಗೂ ಅಂತಿಮ ಆನಂದವನ್ನು ನೀಡುವುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ‘ರಾಜ್ಯಾಧಿಕಾರವು ಧರ್ಮಾಧಿಕಾರದ ಅಧೀನವಿದ್ದರೆ, ಅದು ಯಶಸ್ವಿ ಹಾಗೂ ಪ್ರಜಾಹಿತಕಾರಿಯಾಗುತ್ತದೆ’, ಎಂಬುದು ಪ್ರಾಚೀನ ಕಾಲದಿಂದಲೂ ಸಿದ್ಧವಾಗಿದೆ. ಗುರುಕೃಪೆಯಿಂದ ಆತ್ಮಬಲ ಪ್ರಾಪ್ತಿಯಾದ ರಾಜ ಮತ್ತು ಈಶ್ವರಭಕ್ತರಾದ ಪ್ರಜೆಗಳೇ ಆದರ್ಶ ಹಾಗೂ ಸಮೃದ್ಧ ರಾಷ್ಟ್ರದ ಅಧಿಕಾರಿಗಳಾಗಿದ್ದಾರೆ. ‘ಇಂದ್ರಿಯನಿಗ್ರಹವೇ ರಾಷ್ಟ್ರದ ಮೂಲವಾಗಿದೆ’, ಎಂದು ಆರ್ಯ ಚಾಣಕ್ಯರು ಬರೆದಿಟ್ಟಿದ್ದಾರೆ. ಆದರ್ಶ ರಾಷ್ಟ್ರದ ಮೂಲ ಅಂತಿಮವಾಗಿ ಧರ್ಮ ಮತ್ತು ಸಾಧನೆಯ ಕಡೆಗೆ ಬರುತ್ತದೆ ಹಾಗೂ ಅದಕ್ಕಾಗಿ ಗುರುಗಳ ಮಹತ್ವವು ಶಬ್ದಾತೀತವಾಗಿದೆ. ಇಂತಹ ಈ ಗುರುಗಳ ಕುರಿತು ಕೃತಜ್ಞತೆ ವ್ಯಕ್ತಪಡಿಸುವ ದಿನ ಇದಾಗಿದೆ. ಯಾರೇ ಒಬ್ಬ ವ್ಯಕ್ತಿ ಎಷ್ಟೇ ನಾಸ್ತಿಕ, ನಿಧರ್ಮಿ, ಪ್ರಗತಿಪರ ಅಥವಾ ಸಾಮ್ಯವಾದಿ ಆಗಿದ್ದರೂ ಅವನು ಸಮಾಜದಲ್ಲಿ ಹಾಗೂ ರಾಷ್ಟ್ರದಲ್ಲಿಯೇ ವಾಸಿಸುತ್ತಾನೆ. ಆದ್ದರಿಂದಲೇ ಅವನ ಅಸ್ತಿತ್ವವು ಸುರಕ್ಷಿತವಾಗಿರುತ್ತದೆ. ‘ಈಶ್ವರ ಸ್ವರೂಪ ಗುರುತತ್ತ್ವವಿಲ್ಲದೇ ಸಮಾಜ ಹಾಗೂ ರಾಷ್ಟ್ರದ ವಾಹನವು ಮುನ್ನಡೆಯಲು ಸಾಧ್ಯವಿಲ್ಲ’, ಎಂಬುದನ್ನು ಭಾರತೀಯ ಸಂಸ್ಕೃತಿಯು ಸಾವಿರಾರು ವರ್ಷಗಳ ಹಿಂದೆಯೇ ಸಿದ್ಧಪಡಿಸಿದ ತ್ರಿಕಾಲಬಾಧಿತ ಸತ್ಯವಾಗಿದೆ. ಗುರುಪೂರ್ಣಿಮೆಯ ದಿನದಂದು ಗುರುತತ್ತ್ವವು ಸಾವಿರ ಪಟ್ಟು ಹೆಚ್ಚು ಕಾರ್ಯನಿರತ ವಾಗಿರುತ್ತದೆ. ಅದು ಈ ದಿನದ ಆಧ್ಯಾತ್ಮಿಕ ಮಹತ್ವವಾಗಿದೆ. ‘ಭಾರತ ಮತ್ತೊಮ್ಮೆ ವಿಶ್ವಗುರು ಆಗುವ ಹೊಸ್ತಿಲಲ್ಲಿ ನಿಂತಿದೆ.’ ಎಂದು ದಾರ್ಶನಿಕ ಸಂತರು ಮಾತ್ರವಲ್ಲ, ಅಂತರರಾಷ್ಟ್ರೀಯ ಸ್ತರದ ವಿಚಾರವಂತರು ಹಾಗೂ ಅಭ್ಯಾಸಕರು ಹೇಳುತ್ತಿದ್ದಾರೆ. ಈ ದಿಶೆಯಲ್ಲಿ ಸಾಗುತ್ತಿರುವ ಜಗತ್ತಿನ ಹಾಗೂ ಭಾರತದಲ್ಲಿನ ಘಟನಾವಳಿಗಳ ವರದಿಯನ್ನು ನೋಡಿದರೆ ಅದರ ಸತ್ಯದ ಅರಿವಾಗುತ್ತದೆ. ಅಮೇರಿಕಾ, ಆಸ್ಟ್ರೇಲಿಯಾ, ಜರ್ಮನಿ ಮುಂತಾದ ದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿರುವುದು ಎಷ್ಟು ದೊಡ್ಡ ಪ್ರಮಾಣದಲ್ಲಿ ನೋಡಲು ಸಿಗುತ್ತದೆಯೆಂದರೆ, ಅಲ್ಲಿನ ನೇತಾರರು ಹಿಂದೂಗಳ ಮತವನ್ನು ಪಡೆದು ಚುನಾವಣೆಯನ್ನು ಗೆಲ್ಲಲು ಅವರ ಮನಸ್ಸನ್ನು ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿನ ಹಿಂದೂಗಳ ಮೇಲಿನ ಆಘಾತಗಳ ವಾರ್ತೆ ಗಳನ್ನು ಯಾವತ್ತೂ ನೀಡದ ಪ್ರಸಾರಮಾಧ್ಯಮಗಳು ಈಗ ಹಿಂದೂಗಳ ಮೇಲಿನ ಅನ್ಯಾಯಗಳ ವಿಷಯದಲ್ಲಿ ವಾರ್ತೆಗಳನ್ನು ನೀಡಲು ಆರಂಭಿಸಿವೆ. ಇದು ಕಾಲದ ಮಹಿಮೆಯಾಗಿದೆ. ‘ಹಿಂದೂ’ ಈ ಶಬ್ದದಲ್ಲಿನ ಚೈತನ್ಯಶಕ್ತಿ ಕಾರ್ಯನಿರತವಾಗಿದೆ ಹಾಗೂ ಅದರ ಹಿಂದೆ ಸೂಕ್ಷ್ಮದಿಂದ ಕಾರ್ಯ ಮಾಡುವ ‘ಗುರುತತ್ತ್ವ’ವೇ ಕಾರಣವಾಗಿದೆ. ಅದರ ಸ್ಥೂಲದಿಂದ ಅರಿವಾಗುವ ಭಾರತದಲ್ಲಿನ ಸಕಾರಾತ್ಮಕ ಪರಿಣಾಮ ಹಾಗೂ ಅದರಿಂದ ಅದಕ್ಕಾಗುವ ವಿರೋಧವನ್ನು ಎಲ್ಲ ಭಾರತೀಯರು ಅನುಭವಿಸುತ್ತಿದ್ದಾರೆ. ಆದರೂ, ಭಾರತವು ‘ವಿಶ್ವಗುರು’ ಆಗುವ ಮಾರ್ಗ ಅಷ್ಟು ಸರಳ ಹಾಗೂ ಸುಲಭವಲ್ಲ. ಅದಕ್ಕಾಗಿ ಭಾರತೀಯರು ಅಂದರೆ ಹಿಂದೂಗಳು ಹಗಲಿರುಳು ಪರಿಶ್ರಮ ಹಾಗೂ ಕಷ್ಟಪಡಬೇಕಾಗಿದೆ. ಆಧ್ಯಾತ್ಮಿಕ ಬಲಸಂಪನ್ನ ಸಮಾಜವೇ ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ಏರಿಸಲು ಸಾಧ್ಯ, ಎಂಬುದನ್ನು ಇಲ್ಲಿ ಗಮನಿಸಬೇಕು. ಭಾರತದಲ್ಲಿನ ಹಿಂದೂ ಸಮಾಜ ಮೂಲತಃ ಧಾರ್ಮಿಕವಾಗಿದೆ; ಆದರೆ ಇಂದಿನ ಸ್ಥಿತಿಯಲ್ಲಿ ಅದಕ್ಕೆ ಮಾರ್ಗದರ್ಶನದ ಅವಶ್ಯಕತೆಯಿದೆ. ಈ ಸಮಾಜಕ್ಕೆ ಮಾರ್ಗದರ್ಶನ ನೀಡಲು ಗುರುತತ್ತ್ವವು ಒಂದಲ್ಲ ಒಂದು ಮಾಧ್ಯಮದಿಂದ ಕಾರ್ಯನಿರತವಾಗಿದೆ.

ಸಮಾಜ ಹಾಗೂ ರಾಷ್ಟ್ರ ರಸಾತಳಕ್ಕೆ ಹೋಗುತ್ತಿರುವಾಗ, ಧರ್ಮ ಗ್ಲಾನಿ ಬಂದಿರುವಾಗ ಸನಾತನ ಸಂಸ್ಥೆಯ ಸಂಸ್ಥಾಪಕ ರಾದ ಪರಾತ್ಪರ ಗುರು ಡಾ. ಆಠವಲೆಯವರ ಜೊತೆಗೆ ಅನೇಕ ಋಷಿತುಲ್ಯ ಸಂತಮಹಾತ್ಮರು ‘ಭಾರತದಲ್ಲಿ ಪುನಃ ರಾಮರಾಜ್ಯ ಬರಬೇಕೆಂದು ಸಂಕಲ್ಪ ಮಾಡಿದ್ದಾರೆ. ಆದರ್ಶ ರಾಷ್ಟ್ರವನ್ನು ಸ್ಥಾಪಿಸಲು ಆಪತ್ಕಾಲದ ದೃಷ್ಟಿಯಲ್ಲಿ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಕ್ಷಮವಾಗುವುದೇ ಇಂದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಹಾಗೂ ಅದಕ್ಕಾಗಿ ಗುರುತತ್ತ್ವದ ಕೃಪೆಯ ಅವಶ್ಯಕತೆಯಿದೆ. ಗುರುಗಳ ಕೃಪೆಗೆ ಪಾತ್ರರಾಗುವುದು ಸುಲಭದ ವಿಷಯವಲ್ಲ; ಆದರೆ ಅದು ಅಷ್ಟು ಕಷ್ಟವೂ ಅಲ್ಲ. ಅಹಂಕಾರವನ್ನು ತ್ಯಜಿಸಿ ಸಂಪೂರ್ಣ ಶರಣಾಗತಿಯಿಂದ ಶಿಷ್ಯ ಗುರುಗಳಿಗೆ ಶರಣಾದ ನಂತರ ಅವರು ಶಿಷ್ಯನ ಮೇಲೆ ಕೃಪೆ ಮಾಡುತ್ತಾರೆ. ನಮ್ಮ ಮೇಲೆ ನಿರಂತರ ಗುರುಕೃಪೆ ಆಗುತ್ತಾ ಇರಬೇಕೆಂದು ಕಠೋರ ಪ್ರಯತ್ನ ಮಾಡಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟು ಶಿಷ್ಯೋತ್ತಮ ಅಂದರೆ ಸ್ವತಃ ಸಕ್ಷಮ ಭಕ್ತನಾಗಿ ರಾಷ್ಟ್ರಕ್ಕಾಗಿ ಸಮರ್ಪಿಸಿಕೊಳ್ಳಲು ಇಂದಿನ ಗುರುಪೂರ್ಣಿಮೆಯ ಶುಭದಿನದಂದು ಗುರುಚರಣಗಳಲ್ಲಿ ಪ್ರಾರ್ಥಿಸಿ ಅವರ ಕೃಪೆಗೆ ಪಾತ್ರರಾಗೋಣ !