ರಾಮನಾಥಿ, ಜೂ.18 (ಸುದ್ದಿ) – ಭಾರತದ ಶಿಕ್ಷಣ ವ್ಯವಸ್ಥೆಯು ಎಡಪಂಥೀಯ ಮತ್ತು ಕಮ್ಯುನಿಸ್ಟ್ ಶಕ್ತಿಗಳು ಬೇರೂರಿದ್ದು, ಅವುಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಹಿಂದೂ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಸಿಗಬೇಕೆಂದು ತಮ್ಮ ಮಕ್ಕಳನ್ನು ದೊಡ್ಡ ವಿಶ್ವವಿದ್ಯಾಲಯಗಳಿಗೆ ಕಳುಹಿಸುತ್ತಾರೆ; ಆದರೆ ಈ ವಿಶ್ವವಿದ್ಯಾಲಯಗಳು ಶಿಕ್ಷಣದ ಬದಲು ಪ್ರೊಪೊಗಂಡಾದ (ರಾಜಕೀಯ ಪ್ರಸಾರದ, ಉತ್ಪ್ರೇಕ್ಷೆಯ ವರ್ಣನೆಯ) ಸ್ಥಳಗಳಾಗಿವೆ. ಶಿಕ್ಷಣ ಮತ್ತು ಸಂಸ್ಕಾರದ ನಡುವಿನ ಕೊಂಡಿಯನ್ನು ಕಮ್ಯುನಿಸ್ಟರು ಎಂದೋ ತೆಗೆದುಹಾಕಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಭವಿಷ್ಯದ ಪೀಳಿಗೆಯನ್ನು ದೇಶವಿರೋಧಿಗಳನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವ ಗುರುಕುಲ ಶಿಕ್ಷಣ ಪದ್ಧತಿಯನ್ನು ನಾವು ಉತ್ತೇಜಿಸಬೇಕು. ಎಡಪಂಥೀಯರು ಮತ್ತು ಕಮ್ಯುನಿಸ್ಟರು ತಮ್ಮನ್ನು ಮಾನವತಾವಾದಿಗಳು, ಪರಿಸರವಾದಿಗಳು ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಜಗತ್ತಿನಲ್ಲಿ ಎಡಪಂಥೀಯರು ಅಧಿಕಾರಕ್ಕೆ ಬಂದ ಇತಿಹಾಸ ರಕ್ತರಂಜಿತವಾಗಿದೆ. ಹಾಗಾಗಿ ಹಿಂದೂಗಳು ‘ಬ್ರೇಕಿಂಗ್ ಇಂಡಿಯಾ ಫೋರ್ಸಸ್’ ಪಿತೂರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಬಾಹ್ಯ ಆಕ್ರಮಣದ ಅಗತ್ಯವಿರುವುದಿಲ್ಲ. ಇದನ್ನು ತಡೆಗಟ್ಟಲು, ಈ ಪಿತೂರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದಕ್ಕಾಗಿ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ನೀಡಬೇಕು ಮತ್ತು ಇದಕ್ಕಾಗಿ ಹಿಂದೂ ರಾಷ್ಟ್ರದ ಅಗತ್ಯವಿದೆ ಎಂದು ಶ್ರೀ. ರಮೇಶ ಶಿಂದೆಯವರು ಪ್ರತಿಪಾದಿಸಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನದಂದು (18.6.2023 ರಂದು) ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪ್ರಜ್ಞಾ ಮಠ ಪಬ್ಲಿಕೇಶನ್ ನ ಲೇಖಕ ಮತ್ತು ಪ್ರಕಾಶಕರಾದ ಮೇಜರ ಸರಸ ತ್ರಿಪಾಠಿ, ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಅಮೃತೇಶ್ ಎನ್.ಪಿ. ಮತ್ತು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀಮತಿ ಸಿದ್ಧ ವಿದ್ಯಾ ಉಪಸ್ಥಿತರಿದ್ದರು.
ಕರ್ನಾಟಕ ಸರಕಾರದ ಹಿಂದೂ ವಿರೋಧಿ ನಿರ್ಧಾರಗಳ ವಿರುದ್ಧ ಹೋರಾಡಲು ನಾವು ಕಟಿಬದ್ಧರಿದ್ದೇವೆ ! – ವಕೀಲ ಅಮೃತೇಶ್ ಎನ್.ಪಿ.
ರಾಮನಾಥಿ – ಇತ್ತೀಚೆಗೆ ಕರ್ನಾಟಕದಲ್ಲಿ ಸರಕಾರ ಬದಲಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಹಿಂದಿನ ಭಾಜಪ ಸರಕಾರವು ರಾಜ್ಯದಲ್ಲಿ ಕೆಲವು ಸುಧಾರಣಾ ಕಾನೂನುಗಳನ್ನು ತಂದಿತ್ತು; ಆದರೆ ಆ ಕಾನೂನನ್ನು ಪ್ರತ್ಯಕ್ಷ ಅನುಷ್ಠಾನಗೊಳಿಸುವಲ್ಲಿ ಆ ಸರಕಾರ ವಿಫಲವಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ವೀರ ಸಾವರ್ಕರ್ ಮತ್ತು ಡಾ. ಹೆಡಗೆವಾರಗುರುಜಿಯವರ ಪಾಠಗಳನ್ನು ಕೈಬಿಡಲು ನಿರ್ಧರಿಸಿದೆ. ಅದೇ ರೀತಿ ಮತಾಂತರ ತಡೆ ಕಾಯ್ದೆಯನ್ನು ಹಿಂಪಡೆಯುವುದಾಗಿಯೂ ಘೋಷಿಸಿದೆ. ಮೂಢನಂಬಿಕೆ ನಿರ್ಮೂಲನೆ ಕಾಯ್ದೆ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರಕಾರ ಘೋಷಿಸಿದೆ. ಹಿಂದೂ ರಾಷ್ಟ್ರದ ಕುರಿತ ಸಭೆಗೆ ರಾಜ್ಯ ಸರಕಾರವು ಅನುಮತಿ ನಿರಾಕರಿಸಿತು. ರಾಜ್ಯ ಸರಕಾರದ ಹಿಂದೂ ವಿರೋಧಿ ನಿರ್ಧಾರಗಳ ವಿರುದ್ಧ ಹೋರಾಡಲು ಹಿಂದು ವಿಧಿಜ್ಞ ಪರಿಷತ್ತು ಸಿದ್ಧವಾಗಿದೆ. ಕರ್ನಾಟಕದಲ್ಲಿ ಹಿಂದು ಧರ್ಮಪ್ರೇಮಿಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಹಿಂದು ವಿಧಿಜ್ಞ ಪರಿಷತ್ತಿನ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ ಎನ್.ಪಿ. ಅವರು ಇಲ್ಲಿ ಮಾತನಾಡುವಾಗ ಹೇಳಿದರು. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನದಂದು (18.6.2023 ರಂದು) ಮಾತನಾಡುತ್ತಿದ್ದರು.