‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ದೇವಸ್ಥಾನದ ಧರ್ಮದರ್ಶಿಗಳ ಆಗ್ರಹ !

ಗೋವಾದ ಆದರ್ಶವನ್ನು ಮುಂದಿಟ್ಟು ಕೇಂದ್ರಸರಕಾರವು ದೇಶಾದ್ಯಂತ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಬೇಕು !

ಎಡದಿಂದ ಶ್ರೀ. ಅನುಪ ಜೈಸ್ವಾಲ, ಸುರೇಶ ಕೌದರೆ , ಶ್ರೀ. ಜಯೇಶ ಥಳಿ, ನ್ಯಾಯವಾದಿ ವಿಷ್ಣು ಶಂಕರ ಜೈನ್ ಮತ್ತು ಶ್ರೀ. ಸುನೀಲ ಘನವಟ

ಫೋಂಡಾ – ಗೋವಾದಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಪೋರ್ಚುಗೀಸರು ಅನೇಕ ದೇವಸ್ಥಾನಗಳನ್ನು ನಾಶ ಮಾಡಿದರು. ವಿದೇಶಿ ಆಕ್ರಮಣಕಾರರಿಂದ ನಾಶವಾದ ಈ ಎಲ್ಲಾ ದೇವಾಲಯಗಳ ಜೀರ್ಣೋದ್ಧಾರ ಮಾಡಿ ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಗೋವಾ ಸರಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ಅದಕ್ಕನುಸಾರ ಪ್ರಾಚೀನ ಶ್ರೀ ಸಪ್ತಕೋಟೇಶ್ವರ ದೇವಾಲಯದ ಜೀರ್ಣೋದ್ಧಾರವನ್ನು ಗೋವಾ ಸರಕಾರವೇ ಮಾಡಿದೆ. ಅಲ್ಲದೇ ಇತರೆ ದೇವಾಲಯಗಳ ಜೀರ್ಣೋದ್ಧಾರಕ್ಕೆ ಒಂದು ಸಮಿತಿ ರಚಿಸಿದ್ದು, ಮುಂದಿನ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಗೋವಾ ಸರಕಾರ ಕೈಗೊಂಡಿರುವ ನಿರ್ಧಾರವು ಮಾದರಿಯಾಗಿದೆ. ದೇಶದಾದ್ಯಂತ ಮೊಘಲ್ ದಾಳಿಕೋರರು ಅನೇಕ ದೇವಾಲಯಗಳನ್ನು ನಾಶಪಡಿಸಿದ ಇತಿಹಾಸ ಲಭ್ಯವಿದೆ. ಆದ್ದರಿಂದ ಗೋವಾ ಸರಕಾರದಂತೆ ಕೇಂದ್ರ ಸರಕಾರವೂ ಪರಕೀಯ ಆಕ್ರಮಣಕಾರರಿಂದ ಧ್ವಂಸಗೊಂಡ ಎಲ್ಲ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ನಿರ್ಧಾರ ಕೈಗೊಳ್ಳಬೇಕು. ಎಂದು ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಸಮನ್ವಯಕ ಶ್ರೀ. ಸುನೀಲ ಘನವಟ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಿಮಿತ್ತ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹತ್ವಪೂರ್ಣ ವಿಷಯ ತಿಳಿಸಿದರು.
ಈ ವೇಳೆ ‘ಕಾಶಿಯಲ್ಲಿ ಜ್ಞಾನವಾಪಿ ಮುಕ್ತಿಗಾಗಿ ನ್ಯಾಯಾಂಗ ಹೋರಾಟ ಮಾಡುತ್ತಿರುವ’ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ‘ಗೋಮಂತಕ ಮಂದಿರ ಮಹಾಸಂಘ’ದ ಶ್ರೀ. ಜಯೇಶ ಥಳಿ, ‘ಜ್ಯೋತಿರ್ಲಿಂಗ ಶ್ರೀಕ್ಷೇತ್ರ ಭೀಮಾಶಂಕರ ದೇವಸ್ಥಾನ’ದ ಅಧ್ಯಕ್ಷ ನ್ಯಾಯವಾದಿ ಸುರೇಶ ಕೌದರೆ ಹಾಗೂ ವಿದರ್ಭದ ‘ದೇವಸ್ಥಾನ ಸೇವಾ ಸಮಿತಿ’ಯ ಕಾರ್ಯದರ್ಶಿ ಶ್ರೀ. ಅನುಪ ಜೈಸ್ವಾಲ ಉಪಸ್ಥಿತರಿದ್ದರು.

ಕಾಶಿಯ ನಂತರ ಮಥುರಾ ಮತ್ತು ಕಿಷ್ಕಿಂಧೆ ಮುಕ್ತಿಗಾಗಿ ಹೋರಾಟ ನಡೆಸುವೆವು ! – ನ್ಯಾಯವಾದಿ ವಿಷ್ಣು ಜೈನ್

ಈ ಅಧಿವೇಶನದಿಂದಾಗಿ ಕಾಶಿಯಲ್ಲಿ ಜ್ಞಾನವಾಪಿ ಮುಕ್ತಿಗಾಗಿ ಹೋರಾಟ ನಿಸ್ಸಂದೇಹವಾಗಿ ಆರಂಭವಾಗಿದೆ. ಈಗ ಕಾಶಿಯ ನಂತರ ಮಥುರಾ ಮತ್ತು ಕಿಷ್ಕಿಂಧೆಯ ಮುಕ್ತಿಗಾಗಿ ಹೋರಾಟ ನಡೆಸಲಾಗುವುದು ಎಂದು ‘ಕಾಶಿಯಲ್ಲಿ ಜ್ಞಾನವಾಪಿ ಮುಕ್ತಿಗಾಗಿ ಹೋರಾಟ ಮಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಮಾಹಿತಿ ನೀಡಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕಾಶಿ ನಂತರ ಮಥುರಾ ವಿಷಯದಲ್ಲೂ ‘ವಕ್ಫ್ ಕಾಯ್ದೆ’ ಮತ್ತು ‘ಪ್ಲೇಸಸ್ ಆಫ್ ವರ್ಶಿಪ್ ಎಕ್ಟ್’ ಅನ್ವಯವಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ. ಇದರೊಂದಿಗೆ ಎರಡೂ ಸ್ಥಳಗಳ ಸಮೀಕ್ಷೆ ನಡೆಸುವಂತೆ ಪುರಾತತ್ವ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ. ಹನುಮಂತನ ಜನ್ಮಸ್ಥಳವಾದ ಕಿಷ್ಕಿಂಧೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯದ ಕಾನೂನನ್ನು ಅಸಂವಿಧಾನಿಕ ಎಂದು ಉಚ್ಚನ್ಯಾಯಾಲಯ ಘೋಷಿಸಿದೆ. ದೇಶಾದ್ಯಂತ ವಿವಿಧ ರಾಜ್ಯ ಸರಕಾರಗಳು ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಿರುವ ಎಲ್ಲಾ ಕಾನೂನುಗಳು ಸಂವಿಧಾನದ 19, 21, 25, 26 ಮತ್ತು 27 ರ ಉಲ್ಲಂಘನೆಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ಕಾನೂನು ರೂಪಿಸಿ ಈ ಎಲ್ಲ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲಾ ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ನ್ಯಾಯವಾದಿ ಜೈನ್ ಇವರು ಹೇಳಿದರು.

ಈ ಸಮಯದಲ್ಲಿ ಶ್ರೀ. ಸುನೀಲ ಘನವಟ ಇವರು ಮಾತನಾಡುತ್ತಾ, ಹಿಂದೂ ರಾಷ್ಟ್ರ ಅಧಿವೇಶನವು ಯಾವಾಗಲೂ ‘ದೇವಾಲಯ ಮುಕ್ತಿ ಮತ್ತು ದೇವಾಲಯ ರಕ್ಷಣೆ’ಯ ನಿಲುವಿಗೆ ಬದ್ಧವಾಗಿದೆ. ಈ ಅಧಿವೇಶನದಿಂದ ಅನೇಕ ದೇವಾಲಯ ಚಳುವಳಿಗಳು ಆರಂಭಗೊಂಡಿತು. ಉದಾ. ಮಧ್ಯಪ್ರದೇಶದಲ್ಲಿ ಭೋಜಶಾಲಾ ಮುಕ್ತಿ ಆಂದೋಲನ, ತಿರುಪತಿ ಬಾಲಾಜಿಯಲ್ಲಿ ಅಕ್ರಮ ಇಸ್ಲಾಮಿಕ್ ಅತಿಕ್ರಮಣ ತೆರವು; ಪಂಢರಾಪುರ, ಶಿರ್ಡಿ, ಕೊಲ್ಲಾಪುರ, ತುಳಜಾಪುರಗಳಲ್ಲಿನ ಸರಕಾರ ಸ್ವಾಧೀನಪಡಿಸಿಕೊಂಡಿರುವ ದೇವಾಲಯಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇವು ಪ್ರಮುಖ ಚಳುವಳಿಗಳಾಗಿವೆ. ‘ಗೋಮಾಂತಕ ಮಂದಿರ ಮಹಾಸಂಘ’ವು ಗೋವಾದಲ್ಲಿ ದೇವಾಲಯ ಸಂಸ್ಕೃತಿಯನ್ನು ಉಳಿಸಲು ಮತ್ತು ಉತ್ತೇಜಿಸಲು ಕಾರ್ಯ ಮಾಡುತ್ತಿದ್ದರೆ, ಮಹಾರಾಷ್ಟ್ರದಲ್ಲಿ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ ಕಾರ್ಯನಿರ್ವಹಿಸುತ್ತಿದೆ. ಮಹಾರಾಷ್ಟ್ರದಲ್ಲಿ ನಾವು 131 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿದ್ದೇವೆ. ಮಹಾರಾಷ್ಟ್ರದಂತೆ ಕರ್ನಾಟಕ, ದೆಹಲಿ ಮೊದಲಾದೆಡೆ ದೇವಸ್ಥಾನಗಳ ಟ್ರಸ್ಟಿಗಳ ಸಭೆಯನ್ನು ಶೀಘ್ರದಲ್ಲೇ ಆಯೋಜಿಸುತ್ತೇವೆ ಎಂದು ಹೇಳಿದರು.

ಈ ವೇಳೆ ‘ಗೋಮಾಂತಕ ಮಂದಿರ ಮಹಾಸಂಘ’ದ ಶ್ರೀ. ಜಯೇಶ ಥಳಿ ಇವರು ಮಾತನಾಡುತ್ತಾ, ಪೋರ್ಚುಗೀಸರಿಂದ ಧ್ವಂಸಗೊಂಡ ದೇವಾಲಯಗಳ ಜೀರ್ಣೋದ್ಧಾರವನ್ನು ಗೋವಾ ಸರಕಾರವು ಸಮಯಮಿತಿ ಹಾಕಿಕೊಂಡು ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಸರಕಾರವು ರಚಿಸಿದ ಸಮಿತಿಗೆ ಮಂದಿರ ಮಹಾಸಂಘದ ಪೂರ್ಣ ಸಹಕಾರ ಇದೆ’, ಎಂದರು. ದೇವಸ್ಥಾನಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ‘ಮುಂಬಯಿ ಸಾರ್ವಜನಿಕ ವಿಶ್ವಸ್ಥ ಸಂಸ್ಥೆ ಅಧಿನಿಯಮ’ದಲ್ಲಿ ಬದಲಾವಣೆ ಮಾಡಲು ‘ದೇವಾಲಯ ಸೇವಾ ಸಮಿತಿ’ಯು ಕಾರ್ಯವನ್ನು ಆರಂಭಿಸಿದೆ ಎಂದು ಸಮಿತಿಯ ಶ್ರೀ. ಅನುಪ ಜೈಸ್ವಾಲ್ ಇವರು ಈ ಸಮಯದಲ್ಲಿ ಹೇಳಿದರು.

ಈ ವೇಳೆ ‘ಜ್ಯೋತಿರ್ಲಿಂಗ ಶ್ರೀಕ್ಷೇತ್ರ ಭೀಮಾಶಂಕರ ದೇವಸ್ಥಾನ’,ದ ಅಧ್ಯಕ್ಷ ನ್ಯಾಯವಾದಿ ಸುರೇಶ ಕೌದರೆ ಇವರು ಮಾತನಾಡುತ್ತಾ, ಇಂದು ಸರಕಾರ ಹಲವು ರಾಜ್ಯಗಳಲ್ಲಿ ಮಸೀದಿ, ಮದರಸಾಗಳಲ್ಲಿನ ಇಮಾಮ್, ಮುಲ್ಲಾ-ಮೌಲ್ವಿಗಳಿಗೆ ಅನುದಾನ ನೀಡುತ್ತಿದೆ. ಹಾಗಾದರೆ ದೇವಸ್ಥಾನದಲ್ಲಿರುವ ಹಿಂದೂ ಅರ್ಚಕರಿಗೆ ಏಕೆ ವೇತನ ನೀಡುತ್ತಿಲ್ಲ ? ಇಂದು ಪುರೋಹಿತರಿಗೆ ಅನೇಕ ಸಮಸ್ಯೆಗಳಿವೆ. ವಂಶಪರಂಪರೆಯಿಂದ ಅರ್ಚಕರು ಮತ್ತು ವಹಿವಾಟುದಾರರು ಇವರ ಕರ್ತವ್ಯಗಳನ್ನು ಸಂರಕ್ಷಿಸಲು ಸರಕಾರವು ಮುಂಬಯಿ ಸಾರ್ವಜನಿಕ ವಿಶ್ವಸ್ಥ ಕಾಯಿದೆಗೆ ತಿದ್ದುಪಡಿ ತರಬೇಕು. ಅಲ್ಲದೇ ದೇವಸ್ಥಾನದ ವಿಶ್ವಸ್ತ ಮತ್ತು ಅರ್ಚಕರ ನಡುವಿನ ವಿವಾದವನ್ನು ಬಗೆಹರಿಸಲು ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಮೂಲಕ ಪ್ರಯತ್ನಿಸುತ್ತೇವೆ, ಎಂದು ನ್ಯಾಯವಾದಿ ಕೌದರೆ ಹೇಳಿದ್ದಾರೆ.