ಸಾಧಕರೇ, ‘ಸಮರ್ಪಣಾಭಾವ’ವನ್ನು ಹೆಚ್ಚಿಸಿ ಶ್ರೀರಾಮಸ್ವರೂಪ ಗುರುಗಳ ಅವತಾರಿ ಕಾರ್ಯದಲ್ಲಿ ಅರ್ಪಿಸಿಕೊಳ್ಳಿ ಮತ್ತು ಅವರ ಆಜ್ಞಾಪಾಲನೆಯನ್ನು ಮಾಡಿ ತಮ್ಮ ಉದ್ಧಾರ ಮಾಡಿಕೊಳ್ಳಿ !

೩೦.೩.೨೦೨೩ ರಂದು ಶ್ರೀರಾಮ ನವಮಿ ಆಯಿತು. ಆ ಸಂದರ್ಭದಲ್ಲಿ ಆದರ್ಶ ರಾಮರಾಜ್ಯದ ಸಂಸ್ಥಾಪಕ ಶ್ರೀರಾಮಚಂದ್ರನ ದೈವೀಗುಣಭಂಡಾರವನ್ನು ಭಕ್ತಿಮಯವಾಗಿ ಅವಲೋಕಿಸುವಾಗ ನನಗೆ ರಾಮಾಯಣದ ಈ ಮುಂದಿನ ಘಟನೆ ನೆನಪಾಯಿತು. ‘ರಾಮಸೇತುವಿನ ನಿರ್ಮಾಣ ನಡೆಯುತ್ತಿದ್ದಾಗ ಕಡಲತೀರದಲ್ಲಿ ಶ್ರೀರಾಮನು ಒಂದು ಶಿವಲಿಂಗವನ್ನು ಸ್ಥಾಪಿಸಿದನು. ‘ರಾವಣನನ್ನು ವಧಿಸಿ ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಯಶಸ್ಸು ಲಭಿಸಲಿ’, ಈ ಉದ್ದೇಶದಿಂದ ಶ್ರೀರಾಮನು ಶಿವಶಂಕರನನ್ನು ಪೂಜಿಸಿದನು. ಶ್ರೀರಾಮನ ಈ ಆರಾಧನೆಯಿಂದ ಪ್ರಸನ್ನನಾದ ಭಗವಾನ ಶಿವಶಂಕರನು ಶ್ರೀರಾಮನ ಮುಂದೆ ಪ್ರತ್ಯಕ್ಷನಾದನು. ಆಗ ಈ ಕಾರ್ಯಪೂರ್ಣಗೊಳ್ಳಲೆಂದು ಶಿವನಲ್ಲಿ ಪ್ರಾರ್ಥಿಸುವಾಗ ಭಕ್ತವತ್ಸಲ ಪ್ರಭುಶ್ರೀರಾಮನು ‘ನನಗೆ ಈ ಕಾರ್ಯದಲ್ಲಿ ಸಹಾಯ ಮಾಡುವ ಎಲ್ಲ ವಾನರರಿಗೂ ಭಗವದ್ ಭಕ್ತಿಯ ವರದಾನ ಪ್ರಾಪ್ತವಾಗಲಿ’ ಎಂದು ಪ್ರಾರ್ಥಿಸುತ್ತಾನೆ.

ವಾನರರ ಮೇಲೆ ಶ್ರೀರಾಮನಿಗಿದ್ದ ಅಪಾರ ಪ್ರೀತಿಯನ್ನು ಈ ಪ್ರಾರ್ಥನೆಯ ಮೂಲಕ ನಾವು ಅನುಭವಿಸಬಹುದು. ಆದರೆ, ಶಾಶ್ವತ ಭಕ್ತಿಯು ವರದಾನದಿಂದ ಸಿಗುವಂತದ್ದಾಗಿರದೇ ಅಂತಃಕರಣದಲ್ಲಿ ಭಕ್ತಿ ಮೂಡಲು ಚಿತ್ತಶುದ್ಧಿಯಾಗುವುದು ಆವಶ್ಯಕವಾಗಿದೆ. ಈ ಚಿತ್ತಶುದ್ಧಿಯೂ ಕಠೋರ ತಪಸ್ಸು ಮತ್ತು ಪ್ರಯತ್ನಗಳ ಪರಾಕಾಷ್ಠೆಯ ಮೂಲಕವೇ ಸಾಧ್ಯವಾಗುತ್ತದೆ. ಹೀಗಿದ್ದರೂ ಆ ದಯಾಮಯ ಶ್ರೀರಾಮನು ವಾನರರಿಗಾಗಿ ಭಕ್ತಿಯವರದಾನವನ್ನು ಬೇಡುವ ಹಿಂದೆ ಮುಂದಿನ ಕಾರಣಗಳಿವೆ.

೧. ವಾನರರು ಶ್ರೀರಾಮನ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡು ಶ್ರೀರಾಮನ ಸೇವೆಯನ್ನು ಮನಃಪೂರ್ವಕವಾಗಿ ಮಾಡಿದರು.

೨. ವಾನರರು ಸ್ವಂತದ ಬಗ್ಗೆ ಯಾವುದೇ ವಿಚಾರ ಮಾಡದೆ ಶ್ರೀರಾಮನ ಪ್ರತಿಯೊಂದು ಆಜ್ಞೆಯನ್ನು  ಸಂಪೂರ್ಣ ಶ್ರದ್ಧೆಯಿಂದ ಪಾಲಿಸಿದರು.

ಶ್ರೀರಾಮಪ್ರಭುಗಳ ಕಾರ್ಯದಲ್ಲಿ ಸಂಪೂರ್ಣ ಅರ್ಪಿಸಿಕೊಂಡ ವಾನರರ ಉದಾಹರಣೆಯಿಂದ ‘ನಾವು ಭಗವಂತನ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರೆ, ಭಗವಂತನು ಎಲ್ಲ ರೀತಿಯಲ್ಲೂ ನಮ್ಮ ಉತ್ಕರ್ಷಕ್ಕಾಗಿ ಹಂಬಲಿಸುತ್ತಾನೆ. ಆತನೇ ನಮ್ಮೆಲ್ಲಾ ಜವಾಬ್ದಾರಿಯನ್ನು ಹೊರುವನು ಮತ್ತು ನಮ್ಮನ್ನು ಉದ್ಧರಿಸುವನು. ಭಕ್ತಿಯಂತಹ ಅಮೂಲ್ಯವಾದುದನ್ನು ಭಕ್ತನಿಗೆ ಸಹಜವಾಗಿ ನೀಡುತ್ತಾನೆ’ ಎಂದು ಕಲಿಯಬಹುದು.

ಶ್ರೀರಾಮಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಅವತಾರಿ ಕಾರ್ಯದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡರೆ, ಅವರು ಖಂಡಿತವಾಗಿಯೂ ನಮ್ಮಲ್ಲಿ  ಚಿತ್ತಶುದ್ಧಿ ಮತ್ತು ಭಕ್ತಿಯವೃದ್ಧಿಯನ್ನೂ ಮಾಡುತ್ತಾರೆ. ಶ್ರೀಗುರುಗಳ ಆಜ್ಞಾಪಾಲನೆಯನ್ನು ಮಾಡುವುದರಿಂದ ಮತ್ತು ಅವರ ಕಲಿಸಿರುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡುವುದರಿಂದ ನಮ್ಮಲ್ಲಿ ‘ಸಮರ್ಪಣಾಭಾವ’ ಹೆಚ್ಚಾಗುವುದು.

ಸಾಧಕರೇ, ‘ಕರುಣಾವತ್ಸಲ ಶ್ರೀ ಗುರುಗಳ ಕೃಪೆಯಿಂದ ನಮ್ಮೆಲ್ಲರ ಉದ್ಧಾರವಾಗಲಿದೆ’ ಎಂಬ ಶ್ರದ್ಧೆಯಿಟ್ಟುಕೊಂಡು ಸ್ವಂತ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ನಿಃಸಂದೇಹವಾಗಿ ಗುರುಗಳ ಸೇವೆಯನ್ನು ಮಾಡೋಣ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ