ಫೆಬ್ರವರಿ ೯ ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸಅನ್ನು ಆವೇಶದಿಂದ ಟೀಕಿಸಿದರು. ಆಗ ಅವರು ದಿ. ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ಪಂಡಿತ ನೆಹರು ಇವರನ್ನೂ ಉಲ್ಲೇಖಿಸಿದರು. ಹಾಗೆಯೇ ‘ಇಂದಿರಾ ಗಾಂಧಿಯವರು ಪರಿಚ್ಛೇದ ೩೫೬ ನ್ನು ಕಡಿಮೆ ಎಂದರೆ ೫೦ ಬಾರಿ ದುರುಪಯೋಗಿಸಿದರು. ಈ ಪರಿಚ್ಛೇದವನ್ನು ೯೦ ರಾಜ್ಯ ಸರಕಾರಗಳನ್ನು ಉರುಳಿಸಲು ಉಪಯೋಗಿಸಲಾಯಿತು’. ಎಂದೂ ಮೋದಿಯವರು ಹೇಳಿದರು. ಅವರು ಮಾತು ಮುಂದುವರಿಸುತ್ತಾ, ‘ಇತಿಹಾಸದಲ್ಲಿ ಸ್ವಲ್ಪ ಇಣುಕಿ ನೋಡಿ, ಅಧಿಕಾರದಲ್ಲಿರುವಾಗ ೩೫೬ ಈ ಪರಿಚ್ಛೇದವನ್ನು ಎಲ್ಲಕ್ಕಿಂತ ಹೆಚ್ಚು ದುರುಪಯೋಗಿಸಿದ ಪಕ್ಷ ಯಾವುದಾಗಿತ್ತು ? ಆರಿಸಿ ಬಂದ ಸರಕಾರಗಳನ್ನು ಉರುಳಿಸಲು ಅವರು ೯೦ ಬಾರಿ ಈ ಪರಿಚ್ಛೇದವನ್ನು ಉಪಯೋಗಿಸಿದರು. ಇಂದು ಕೇರಳದಲ್ಲಿ ಎಡಪಂಥೀಯರ ಸರಕಾರವಿದೆ, ಜನರು ಅಂತಹ ಜನರ ಜೊತೆಗಿದ್ದಾರೆ. ಕೇರಳದಲ್ಲಿ ಪಂಡಿತ ನೆಹರೂರವರ ಕಾಲದಲ್ಲಿ ಒಮ್ಮೆ ಎಡಪಂಥೀಯರ ಸರಕಾರ ಬಂದಿತ್ತು; ನೆಹರೂರವರಿಗೆ ಎಡಪಂಥೀಯರು ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ಅವರನ್ನು ಮನೆಗೆ ಕಳುಹಿಸಲಾಗಿತ್ತು’ ಎಂದರು.
೧. ಪರಿಚ್ಛೇದ ೩೫೬ ರಲ್ಲಿ ಏನಿದೆ ?
ಸಂವಿಧಾನದಲ್ಲಿನ ಪರಿಚ್ಛೇದ ೩೫೬ ರಲ್ಲಿ ರಾಜ್ಯಗಳಲ್ಲಿ ಸಂವಿಧಾನಾತ್ಮಕ ಅಡಚಣೆ ಉದ್ಭವಿಸಿದರೆ “ರಾಷ್ಟ್ರಪತಿ ಆಡಳಿತ’ ವನ್ನು ತರುವ ವ್ಯವಸ್ಥೆಯಿದೆ. ಒಂದು ವೇಳೆ ರಾಜ್ಯಪಾಲರು ‘ರಾಜ್ಯದ ಪರಿಸ್ಥಿತಿ ಅಸ್ಥಿರವಾಗಿದೆ’, ಎಂದು ರಾಷ್ಟ್ರಪತಿಗಳಿಗೆ ವರದಿಯನ್ನು ಕಳುಹಿಸಿದರೆ, ಆ ವರದಿಯ ಆಧಾರದಲ್ಲಿ ರಾಷ್ಟ್ರಪತಿಗಳು ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳಬಹುದು. ಸರಕಾರವು ಪ್ರಜಾಪ್ರಭುತ್ವದ ನಿಯಮಗಳಿಗನುಸಾರ ನಡೆಯುತ್ತಿಲ್ಲ ಎಂದಾದರೆ, ಈ ನಿರ್ಣಯವನ್ನು ತೆಗೆದುಕೊಳ್ಳಬಹುದು. ರಾಜ್ಯಪಾಲರು ಮಾಡಿದ ಶಿಫಾರಸ್ಸಿನ ನಂತರ ಹಾಗೂ ಕಳುಹಿಸಿದ ವರದಿಯ ನಂತರ ಪರಿಚ್ಛೇದ ೩೫೬ ನ್ನು ಉಪಯೋಗಿಸಿ ರಾಷ್ಟ್ರಪತಿಗಳು ಆ ರಾಜ್ಯದಲ್ಲಿ ‘ರಾಷ್ಟ್ರಪತಿ ಆಡಳಿತ’ವನ್ನು ತರಬಲ್ಲರು.
೨. ೩೫೬ ಪರಿಚ್ಛೇಧವನ್ನು ಮೊದಲ ಬಾರಿ ಯಾವಾಗ ಉಪಯೋಗಿಸಲಾಯಿತು ?
೧೯೫೧ ರಲ್ಲಿ ಮೊದಲ ಬಾರಿ ೩೫೬ ಪರಿಚ್ಛೇದವನ್ನು ಉಪಯೋಗಿಸಲಾಗಿತ್ತು. ಅನಂತರ ಈ ಪರಿಚ್ಛೇದವನ್ನು ಅನೇಕ ಬಾರಿ ದುರುಪಯೋಗಿಸಲಾಯಿತು; ಆದರೆ ಸರ್ವೋಚ್ಚ ನ್ಯಾಯಾಲಯ ೧೯೯೪ ರಲ್ಲಿ ‘ಎಸ್.ಆರ್. ಬೊಮ್ಮಾಯಿ ವಿರುದ್ಧ ಭಾರತ ಸಂಘ’ ಈ ಪ್ರಕರಣದಲ್ಲಿ ನೀಡಿದ ನಿರ್ಣಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಲು ಕೆಲವು ಕಠೋರ ನಿಯಮಗಳ ಏರ್ಪಾಡು ಮಾಡಲಾಯಿತು.
೩. ರಾಷ್ಟ್ರಪತಿ ಆಡಳಿತವನ್ನು ಯಾವಾಗ ತರಲಾಗುತ್ತದೆ ?
ಅ. ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು ಯೋಗ್ಯ ಸಮಯದಲ್ಲಿ ಆರಿಸದಿದ್ದರೆ ಅಥವಾ ನಿರ್ಧರಿಸಿದ ಸಮಯದಲ್ಲಿ ಮುಖ್ಯಮಂತ್ರಿಗಳ ಆಯ್ಕೆಯನ್ನು ಮಾಡಲು ಅಡಚಣೆಗಳು ಬರುತ್ತಿವೆ ಎಂದು ನಿರ್ಣಯವನ್ನು ನೀಡಿದರೆ, ಇಂತಹ ಸಮಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬಹುದು.
ಆ. ಯಾವಾಗ ಅನೇಕ ಪಕ್ಷಗಳ ಮೈತ್ರಿ ಸರಕಾರ ಮುರಿದು ಸರಕಾರ ಅಲ್ಪಮತದಲ್ಲಿ ಬರುತ್ತದೆಯೋ, ಆಗ ಒಂದು ವಿಶಿಷ್ಟ ಅವಧಿಯಲ್ಲಿ ಬಹುಮತವನ್ನು ಸಿದ್ಧಪಡಿಸಲು ಸಾಧ್ಯವಾಗದಿದ್ದರೆ, ರಾಷ್ಟ್ರಪತಿ ಆಡಳಿತವನ್ನು ತರಬಹುದು.
ಇ. ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಬಹುಮತ ಸಿಗದಿದ್ದರೆ ರಾಷ್ಟ್ರಪತಿ ಆಡಳಿತವನ್ನು ತರಬಹುದು.
ಈ. ಯುದ್ಧ, ಮಹಾಮಾರಿ ಅಥವಾ ನೈಸರ್ಗಿಕ ಸಂಕಟ ಇಂತಹ ಕಾಲದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬಹುದು.
ಉ. ಕೆಲವು ಅನಿವಾರ್ಯ ಕಾರಣಗಳಿಂದ ಚುನಾವಣೆ ಸ್ಥಗಿತವಾದರೆ, ರಾಷ್ಟ್ರಪತಿ ಆಡಳಿತವನ್ನು ತರಬಹುದು.
ಊ. ರಾಜ್ಯದಲ್ಲಿರುವ ಸರಕಾರ ಸಂವಿಧಾನದ ನಿಯಮಗಳಿಗನುಸಾರ ನಡೆಯುತ್ತಿಲ್ಲ ಎಂದು ರಾಜ್ಯಪಾಲರು ವರದಿಯನ್ನು ನೀಡಿದರೆ ರಾಷ್ಟ್ರಪತಿ ಆಡಳಿತದ ನಿರ್ಣಯವನ್ನು ತೆಗೆದುಕೊಳ್ಳಬಹುದು.
ಇಂತಹ ಪರಿಸ್ಥಿತಿಗಳಲ್ಲಿ ೬ ತಿಂಗಳುಗಳ ವರೆಗೆ ರಾಷ್ಟ್ರಪತಿ ಆಡಳಿತವನ್ನು ತರಲಾಗುತ್ತದೆ. ಅನಂತರ ಅದರ ಕಾಲಾವಧಿ ಯನ್ನು ಹೆಚ್ಚೆಂದರೆ ೩ ವರ್ಷಗಳ ವರೆಗೆ ಹೆಚ್ಚಿಸಬಹುದು.
೪. ೩೫೬ ಪರಿಚ್ಛೇದದ ಬಗ್ಗೆ ಡಾ. ಬಾಬಾಸಾಹೇಬ ಅಂಬೇಡ್ಕರರು ಏನು ಹೇಳಿದ್ದರು ?
ಭಾರತೀಯ ಸಂವಿಧಾನದ ಶಿಲ್ಪಕಾರ ಹಾಗೂ ಸಂವಿಧಾನ ಮಸೂದೆಯ ಸಮಿತಿಯ ಅಧ್ಯಕ್ಷರಾದ ಡಾ. ಬಾಬಾಸಾಹೇಬ ಆಂಬೇಡ್ಕರರು ‘೩೫೬ ಪರಿಚ್ಛೇದವು ಸಂವಿಧಾನದ ಮೃತ್ಯುಪತ್ರವಾಗಿದೆ’, ಎಂದು ಹೇಳಿದ್ದರು. ಅವರು ‘ಈ ಪರಿಚ್ಛೇದದ ದುರುಪಯೋಗವಾಗುವ ಸಾಧ್ಯತೆಯಿದೆ. ರಾಜಕೀಯ ಸ್ವಾರ್ಥಕ್ಕಾಗಿ ಇದನ್ನು ಉಪಯೋಗಿಸಬಹುದು. ಒಂದು ವೇಳೆ ಇದನ್ನು ಅನ್ವಯಗೊಳಿಸಿದರೆ ರಾಜ್ಯಸರಕಾರಗಳನ್ನು ವಜಾಗೊಳಿಸುವ ಮೊದಲು ರಾಷ್ಟ್ರಪತಿಗಳು ಯೋಗ್ಯ ವಿಚಾರ ಮಾಡುವರು, ಎಂದು ನಾನು ಆಶಿಸುತ್ತೇನೆ, ಅದೇ ರೀತಿ ಯಾವುದೇ ರಾಜ್ಯ ಸರಕಾರ ತಪ್ಪು ಮಾಡಿದರೆ ಮೊದಲು ಅದಕ್ಕೆ ಎಚ್ಚರಿಕೆ ಕೊಡಲಾಗುವುದು’, ಎಂದೂ ಅವರು ಹೇಳಿದ್ದರು. ಇದನ್ನೇ ವಿವರಿಸುತ್ತಾ ಪ್ರಧಾನಿ ನರೇಂದ್ರ ಮೋದಿಯವರು ‘ಪರಿಚ್ಛೇದ ೩೫೬ ನ್ನು ಹೇಗೆ ದುರುಪಯೋಗಿಸಲಾಯಿತು’, ಎಂದು ಹೇಳಿದ್ದರು.
(ಆಧಾರ : ದೈನಿಕ ‘ಲೋಕಸತ್ತಾ’ ಹಾಗೂ ಇತರ ವಾರ್ತಾಜಾಲ ತಾಣಗಳು, ೧೦.೨.೨೦೨೩)