ಮಧ್ಯಪೂರ್ವದ ೪ ದೇಶಗಳಲ್ಲಿ ೭.೮ ತೀವ್ರತೆಯ ಭೂಕಂಪ : ೫೨೧ ಜನರ ಸಾವು

ನವದೆಹಲಿ- ಮಧ್ಯಪೂರ್ವದ ತುರ್ಕಿ, ಸಿರಿಯಾ, ಲೆಬನಾನ್ ಮತ್ತು ಇಸ್ರಾಯಿಲ್ ಈ ದೇಶಗಳಲ್ಲಿ ಫೆಬ್ರವರಿ ೬ ರಂದು ಬೆಳಿಗ್ಗೆ ೭.೮ ತೀವ್ರತೆಯ ಭೂಕಂಪ ಆಗಿರುವುದರಿಂದ ಇಲ್ಲಿಯವರೆಗೆ ೫೨೧ ಜನರು ಸಾವನ್ನಪ್ಪಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ‘ಯುನಾಯಿಟೆಡ್ ಸ್ಟೇಟ್ಸ್ ಜಿಯೋಲಜಿಕಲ್ ಸರ್ವೆ’ ಯ ಮಾಹಿತಿಯನುಸಾರ ತುರ್ಕಿಯಲ್ಲಿ ಮೃತರ ಸಂಖ್ಯೆ ೧ ಸಾವಿರಕ್ಕೆ ತಲಪಿದ್ದು ಅದು ೧೦ ಸಾವಿರದ ವರೆಗೆ ತಲಪಬಹುದಾಗಿದೆ. ಭೂಕಂಪದ ಕೇಂದ್ರಬಿಂದು ಆಗಿರುವ ತುರ್ಕಿ ಹಾಗೂ ಅದರ ಸಮೀಪದ ಸಿರಿಯಾ ಪ್ರದೇಶದಲ್ಲಿ ಅತ್ಯಧಿಕ ಹಾನಿಯಾಗಿದೆ. ತುರ್ಕಿಯಲ್ಲಿ ಇಷ್ಟರವರೆಗೆ ೨೮೪ ಜನರು ಸಾವನ್ನಪ್ಪಿದ್ದು, ೪೪೦ ಜನರು ಗಾಯಗೊಂಡಿದ್ದಾರೆ. ಸಿರಿಯಾದಲ್ಲಿ ೨೩೭ ಜನರು ಸಾವನ್ನಪ್ಪಿದ್ದು, ೬೩೯ ಜನರು ಗಾಯಗೊಂಡಿದ್ದಾರೆ.

ಲೆಬನಾನ್ ಮತ್ತು ಇಸ್ರಾಯಿಲ್ನಲ್ಲಿ ಭೂಕಂಪದ ಆಘಾತದ ಅರಿವಾಯಿತು; ಆದರೆ ಇಲ್ಲಿ ಯಾವುದೇ ಹಾನಿಯಾಗಿಲ್ಲ. ೧೯೩೯ ರಲ್ಲಿ ತುರ್ಕಿಯಲ್ಲಿ ೭.೮ ರಿಕ್ಟರ್ ಮಾಪನದಷ್ಟು ಭೂಕಂಪ ಆಗಿತ್ತು. ಆಗ ೩೦ ಸಾವಿರ ಜನರು ಸಾವನ್ನಪ್ಪಿದ್ದರು. ಅಂಕಾರಾ, ಗಝಿಯಾನಟೇಪ್, ಕಹರಾಮನಮಾರಾ, ದಿಯಾರಬಾಕಿರ, ಮಾಲತ್ಯಾ, ನುರದಗೀ ನಗರಗಳೊಂದಿಗೆ ೧೦ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಈ ನಗರಗಳ ೨೫೦ ಕ್ಕಿಂತಲೂ ಹೆಚ್ಚು ಕಟ್ಟಡಗಳು ಕೆಳಗುರುಳಿದ ಸುದ್ದಿ ಬಂದಿದೆ. ಅನೇಕ ಜನರು ಮಣ್ಣಿನಗುಡ್ಡದಡಿ ಸಿಲುಕಿದ್ದಾರೆ. ಜನರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ಅನೇಕ ಪ್ರದೇಶಗಳಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಲಾಗಿದೆ.