ಆರೋಗ್ಯಕರ ಆಹಾರದ ೨೧ ಮಂತ್ರಗಳನ್ನು ಉಪಯೋಗಿಸಿರಿ ಮತ್ತು ಆರೋಗ್ಯಕರ ಜೀವನವನ್ನು ಜೀವಿಸಿರಿ !

‘ನಮ್ಮ ಶಾಲೆಯ ಶಿಕ್ಷಣ ಮತ್ತು ನಮ್ಮ ಇತರ ವಾಚನಗಳಿಂದ ನಮ್ಮ ಮೇಲಾದ ಪ್ರಭಾವದಿಂದ ಆಹಾರದ ಸಂದರ್ಭದಲ್ಲಿ ನಮಗೆ ‘ಕ್ಯಾಲರೀಸ್’ (ಉಷ್ಮಾಂಕ), ‘ಪ್ರೋಟೀನ್ಸ್’ (ಪ್ರೋಟೀನ್), ‘ಫ್ಯಾಟ್ಸ್’ (ಕೊಬ್ಬು), ‘ವಿಟಾಮಿನ್ಸ್’ (ಜೀವನಸತ್ವ), ‘ಮಿನರಲ್ಸ್’ (ಖನಿಜ ಪದಾರ್ಥಗಳು), ‘ಎನ್ಟೀಆಕ್ಸಿಡೆಂಟ್ಸ’, ‘ಕೊಲೆಸ್ಟ್ರಾಲ್’, ‘ಕಾರ್ಬೊಹೈಡ್ರೆಟ್ಸ್’ ಈ ಶಬ್ದಗಳು ಪರಿಚಿತ ಶಬ್ದಗಳು ಅನಿಸುತ್ತವೆ. ವಾಸ್ತವದಲ್ಲಿ ನೀವು ಈ ಶಬ್ದಗಳನ್ನು ಎಷ್ಟೇ ಅಧ್ಯಯನ ಮಾಡಿದರೂ ಒಬ್ಬ ಸಾಮಾನ್ಯ ಮನುಷ್ಯನು ಈ ನಿಯಮಗಳನ್ನು ಪಾಲಿಸಿ ತನ್ನ ಆಹಾರವನ್ನು ತಾನೇ ನಿರ್ಧರಿಸಲಾರನು. ‘ದಿನಕ್ಕೆ ೧ ಸಾವಿರ ೨೦೦ ಕ್ಯಾಲರೀಸ್ ಅಂದರೆ ಎಷ್ಟು ಆಹಾರವನ್ನು ಸೇವಿಸಬೇಕು ? ನಮ್ಮಲ್ಲಿ ತಿನ್ನುವ ಪದಾರ್ಥಗಳಲ್ಲಿ ಬಹಳಷ್ಟು ವೈವಿದ್ಯ ಇರುತ್ತದೆ. ಹಾಗಾದರೆ ಹಬ್ಬಹರಿದಿನಗಳಲ್ಲಿ ಬೇರೆ ಪದಾರ್ಥಗಳಿದ್ದರೆ, ಅವುಗಳ ಪ್ರಮಾಣವನ್ನು ಹೇಗೆ ನಿರ್ಧರಿಸಬೇಕು ?, ಹೀಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಅದಕ್ಕಾಗಿ ಅದರ ತಜ್ಞ ವ್ಯಕ್ತಿಯನ್ನು ಕೇಳದೆ ಬೇರೆ ಪರ್ಯಾಯ ಇರುವುದಿಲ್ಲ. ಇದೆಂದರೆ ಪ್ರಾಣಿ ಮತ್ತು ಪಕ್ಷಿಗಳಿಗಿರುವಷ್ಟು ಬುದ್ಧಿ ಮತ್ತು ಸ್ವಾತಂತ್ರ್ಯ ನಮ್ಮಲ್ಲಿ ಇಲ್ಲದಿರುವುದು.

ವೈದ್ಯೆ ಸುಚಿತ್ರಾ ಕುಲಕರ್ಣಿ

ಅದರ ಬದಲು ಅಗ್ನಿ, ಅಗ್ನಿಮಾಂದ್ಯ, ಷಡ್ರಸ ಆಹಾರ, ಕುಕ್ಷಿ, ಧಾತುವರ್ಧಕ ಆಹಾರ, ವೃಷ್ಯ ಪದಾರ್ಥ, ರಸಾಯನ ಪದಾರ್ಥ, ದೋಷಪ್ರಕೋಪ, ವಿಷಮಾಶನ, ಅಧ್ಯಾಶನ, ವಿರುದ್ಧಾಶನ, ಈ ಶಬ್ದಗಳು ಅಪರಿಚಿತವಾಗಿರುತ್ತವೆ. ನಿಜವಾಗಿಯೂ ಇವುಗಳನ್ನು ನೀವು ಒಮ್ಮೆ ತಿಳಿದುಕೊಂಡರೆ, ಅಶಿಕ್ಷಿತ ಮನುಷ್ಯನಿಗೂ ಅದನ್ನಾಧರಿಸಿದ ನಿಯಮಗಳನ್ನು ವ್ಯವಹಾರದಲ್ಲಿ ತರಲು ಸಾಧ್ಯವಾಗುತ್ತದೆ. ನಮ್ಮ ಹಳ್ಳಿಯ ಜನರು ಈಗಲೂ ಈ ನಿಯಮಗಳನ್ನು ತಿಳಿದುಕೊಂಡು ಸಹಜವಾಗಿ ಪಾಲಿಸುವುದನ್ನು ನಾವು ನೋಡುತ್ತೇವೆ. (ಉದಾ. ‘ಹಸಿವಿಗಿಂತ ೨ ತುತ್ತು ಕಡಿಮೆ ಊಟ ಮಾಡಿರಿ, ಈ ನಿಯಮವನ್ನು ಯಾರೂ ಪಾಲಿಸಬಹುದು. ಅದಕ್ಕಾಗಿ ಯಾವುದೇ ವೈದ್ಯರಿಂದ ತುತ್ತಿನ ಆಕಾರ, ಹಸಿವಿನ ವ್ಯಾಖ್ಯೆಯನ್ನು ನಿರ್ಧರಿಸುವುದರ ಆವಶ್ಯಕತೆ ಬೀಳುವುದಿಲ್ಲ. ಇಂತಹ ಅನೇಕ ಸರಳ ಮತ್ತು ಸುಲಭ ಶಾಸ್ತ್ರೀಯ ನಿಯಮಗಳು ಮುಂದೆ ಲೇಖನದಲ್ಲಿ ಬಂದಿವೆ ! )

ಈ ಪ್ರಸ್ತಾವನೆ ಏಕೆಂದರೆ, ಆಯುರ್ವೇದ ಆಹಾರದ ನಿಯಮಗಳನ್ನು ತಿಳಿದುಕೊಳ್ಳುವಾಗ ಅದಕ್ಕೆ ಪಾಶ್ಚಾತ್ಯ ನಿಯಮಗಳ ಮಾನದಂಡ ಹಚ್ಚುವ ಮೋಹ ವಾಚಕರಿಗೆ ತಡೆಯಲು ಆಗುವುದಿಲ್ಲ. ‘ಹಾಲಿನಿಂದ ಕಫ ಹೆಚ್ಚಾಗುತ್ತದೆ, ಆದುದರಿಂದ ಶೀತ ಇರುವ ವರೆಗೆ ಹಾಲು ಕುಡಿಯಬೇಡಿರಿ, ಎಂದು ಹೇಳಿದರೆ, ತಕ್ಷಣ ‘ಹಾಗಾದರೆ ಕ್ಯಾಲ್ಶಿಯಂಮ್ ಹೊಟ್ಟೆಯಲ್ಲಿ ಹೇಗೆ ಹೋಗುವುದು ?’, ಎಂಬುದು ರೋಗಿಗಳ ಖಚಿತವಾದ ಪ್ರಶ್ನೆ ಇರುತ್ತದೆ. ಆಹಾರಶಾಸ್ತ್ರದ ಈ ‘ಕ್ವಾಕಟೇಲ (ಬೇರೆ ಬೇರೆ ಪದಾರ್ಥಗಳ ಮಿಶ್ರಣ) ಯಾವ ಕೆಲಸಕ್ಕೂ ಬಾರದು. ಆಯುರ್ವೇದದ ನಿಯಮಗಳನ್ನು ಆಯುರ್ವೇದದ ಪರಿಭಾಷೆಯಲ್ಲೇ ತಿಳಿದುಕೊಳ್ಳಬೇಕು. ಅವು ಶಾಶ್ವತ ಮತ್ತು ಉದ್ದೇಶಿತವಾಗಿರುವುದರಿಂದ ಅತ್ಯಂತ ಉಪಯುಕ್ತವಾಗಿವೆ. ಇದು ಕಾಲದ ಅಗ್ನಿಪರೀಕ್ಷೆಯಲ್ಲಿ ಸಿದ್ಧವಾಗಿವೆ.

 

ಆಹಾರ ವಿಷಯವು ಎಷ್ಟು ವ್ಯಾಪಕವಾಗಿದೆ ಎಂದರೆ, ಈ ಒಂದು ಲೇಖನದಿಂದ ಅದಕ್ಕೆ ಸಾಕಷ್ಟು ನ್ಯಾಯ ಸಿಗಲಾರದು. ಆದುದರಿಂದ ಈ ‘೨೧ ಅಪೇಕ್ಷಿತ ನಿಯಮ’ಗಳ ಮಾರ್ಗವನ್ನು ಆರಿಸಿದ್ದೇನೆ.

೧. ಹಸಿವಾದಾಗಲೇ ಊಟ ಮಾಡಬೇಕು. ಹಸಿವೆ ಇಲ್ಲದಿದ್ದರೆ ಹಗುರ ಆಹಾರವನ್ನು ಸೇವಿಸಬೇಕು ಅಥವಾ ಉಪವಾಸ ಮಾಡಬೇಕು. ವಾರದಲ್ಲಿ ಒಂದು ಸಲ ಮತ್ತು ಎಷ್ಟು ಸಾಧ್ಯವಿದೆಯೋ ಅಷ್ಟು ಉಪವಾಸ ಮಾಡಬೇಕು.

೨. ಎಂದಿಗೂ ಹೊಟ್ಟೆ ತುಂಬ ಊಟವನ್ನು ಮಾಡಬಾರದು. ಆಹಾರ ಪಚನವಾಗಲು ಹೊಟ್ಟೆಯಲ್ಲಿ ಸ್ವಲ್ಪ ಖಾಲಿ ಜಾಗವನ್ನು ಬಿಡಬೇಕು. ಊಟದ ನಂತರ ನಗುವುದು, ನಡೆದಾಡುವುದು, ಬಗ್ಗುವುದು, ಕುಳಿತುಕೊಳ್ಳುವುದು, ಮಾತನಾಡುವುದು ಮುಂತಾದ ಕೃತಿಗಳನ್ನು ಮಾಡಲು ಕಠಿಣವಾಗದಷ್ಟೇ ಊಟವನ್ನು ಮಾಡಬೇಕು. ಒಮ್ಮೆ ಊಟ ಮಾಡಿದ ಬಳಿಕ ಅದು ಪಚನವಾಗಲು ಕನಿಷ್ಠಪಕ್ಷ ೩ ಗಂಟೆಗಳಾದರೂ ಬೇಕಾಗುತ್ತವೆ, ಆದುದರಿಂದ ೩ ಗಂಟೆಗಳಲ್ಲಿ ಪುನಃ ಏನನ್ನೂ ತಿನ್ನಬಾರದು. (ಪ್ರತಿ ೨ ಗಂಟೆಗಳಿಗೊಮ್ಮೆಯಂತೂ ಏನನ್ನೂ ತಿನ್ನಲೇಬಾರದು.)

೩. ಸಿಹಿ ಪದಾರ್ಥಗಳು ಪಚನವಾಗಲು ಸ್ವಲ್ಪ ಕಠಿಣವಾಗಿರುತ್ತವೆ, ಆದುದರಿಂದ ಅವುಗಳನ್ನು ಊಟದ ಆರಂಭದಲ್ಲಿಯೇ, ಅಂದರೆ ಹೊಟ್ಟೆ ಚೆನ್ನಾಗಿ ಹಸಿದಿರುವಾಗಲೇ ತಿನ್ನಬೇಕು. ಊಟದ ನಂತರ ಸಿಹಿ ಪದಾರ್ಥಗಳನ್ನು ತಿನ್ನುವುದೆಂದರೆ ಪಚನಶಕ್ತಿಗೆ ಹೆಚ್ಚು ಕೆಲಸವನ್ನು ಕೊಟ್ಟಂತಾಗುತ್ತದೆ.

೪. ಕ್ಯಾಲರೀಸ್, ಪ್ರೋಟೀನ್ಸ್, ‘ಸ್ಯಾಚುರೇಟೆಡ್ (ಸಂತೃಪ್ತ) ಅಥವಾ ಅನಸ್ಯಾಚುರೇಟೆಡ (ಅಸಂತೃಪ್ತ) ಫ್ಯಾಟ್ಸ್ (ಕೊಬ್ಬು)’, ವಿಟಾಮಿನ್ಸ್ ಇವುಗಳ ಅಗಮ್ಯ ಮತ್ತು ಅವ್ಯವಹಾರದ ಜಾಲದಲ್ಲಿ ಸಿಲುಕಿಕೊಳ್ಳದೇ ಷಡ್ರಸ ಆಹಾರವನ್ನು ತೆಗೆದುಕೊಳ್ಳಬೇಕು. ಉಪ್ಪು, ಸಿಹಿ, ಹುಳಿ, ಖಾರ, ಕಹಿ ಮತ್ತು ಒಗರು ಈ ಆರೂ ರುಚಿಗಳಿಂದ ಕೂಡಿದ ಆಹಾರವು ಸಂಪೂರ್ಣ ಶರೀರದ ಯೋಗ್ಯ ಪೋಷಣೆಗಾಗಿ ಸಮರ್ಥವಾಗಿರುತ್ತದೆ. ಆಹಾರದಲ್ಲಿ ಯಾವುದೇ ರುಚಿಯ ಅತಿರೇಕವಿರಬಾರದು.

೫. ನಮ್ಮ ಮುತ್ತಜ್ಜಿ ಅಥವಾ ಮುತ್ತಜ್ಜ ಇವರು ತಿನ್ನುತ್ತಿದ್ದ ಪದಾರ್ಥಗಳನ್ನು ತಿನ್ನಬೇಕು. ಅವರು ತಿನ್ನದಿರುವ ಪದಾರ್ಥಗಳನ್ನು (ಉದಾ. ವಡಾಪಾವ, ನುಡಲ್ಸ, ಐಸ್ಕ್ರೀಮ, ಪಿಸ್ತಾ, ಬರ್ಗರ ಇತ್ಯಾದಿ) ನಿಯಮಿತ ತಿನ್ನಬಾರದು. ತಿನ್ನದಿದ್ದರೂ ನಡೆಯುತ್ತದೆ. ಏನೂ ತೊಂದರೆ ಇಲ್ಲ. ಒಳ್ಳೆಯದೇ ಆಗುತ್ತದೆ !

೬. ಆಹಾರವು ಯಾವಾಗಲೂ ಬಿಸಿ, ತಾಜಾ (ಬೇಯಿಸಿದ ನಂತರ ೩ ಗಂಟೆಯೊಳಗಿನ) ಮತ್ತು ಸ್ನಿಗ್ಧವಾಗಿರಬೇಕು.

೭. ಶಾಂತ ಚಿತ್ತದಿಂದ, ನೆಲದಲ್ಲಿ ಕುಳಿತುಕೊಂಡು, ಹರಟೆ ಹೊಡೆಯದೇ, ಬಹಳ ನಿಧಾನವಾಗಿಯೂ ಅಲ್ಲ ಮತ್ತು ಬಹಳ ಬೇಗ ಬೇಗನೆಯೂ ಅಲ್ಲ, ಈ ರೀತಿಯಲ್ಲಿ ಊಟ ಮಾಡಬೇಕು. (೫೫ ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡು ಭೋಜನವನ್ನು ಮಾಡಬಾರದು. ಅದರಿಂದ ಆಹಾರ ಸರಿಯಾಗಿ ಪಚನವಾಗುವುದಿಲ್ಲ.)

೮. ದೂರದರ್ಶನದ ಮುಂದೆ ಕುಳಿತು ಊಟವನ್ನು ಮಾಡಬಾರದು. ಅದರಲ್ಲಿನ ಚಲನಚಿತ್ರಗಳನ್ನು ನೋಡುವಾಗ ಮನಸ್ಸು ಶಾಂತವಾಗಿರುವುದಿಲ್ಲ. ಇದರಿಂದ ಆಹಾರದ ಆಸ್ವಾದವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಕೆಲವೊಮ್ಮೆ ಎಷ್ಟು ತಿಂದೆವು, ಹೊಟ್ಟೆ ತುಂಬಿತೋ ಅಥವಾ ಇಲ್ಲವೋ, ಇದರ ಕಡೆಗೆ ಗಮನ ಇರುವುದೇ ಇಲ್ಲ.

೯. ಮೊಳಕೆ ಬಂದ ಕಚ್ಚಾ ದ್ವಿದಳಧಾನ್ಯಗಳನ್ನು ಪ್ರತಿದಿನ ತಿನ್ನಬಾರದು. ಅವು ಒಣ, ವಾತಜನಕ ಮತ್ತು ಪಚನವಾಗಲು ಕಠಿಣವಾಗಿರುತ್ತವೆ. ದ್ವಿದಳ ಧಾನ್ಯಗಳನ್ನು ಯಾವಾಗಲೂ ಬೇಯಿಸಿ ಮತ್ತು ಎಣ್ಣೆ ತುಪ್ಪಗಳನ್ನು ಯಥೇಚ್ಛವಾಗಿ ಬಳಸಿ ತಿನ್ನಬೇಕು.

೧೦. ತೊಪ್ಪಲು ಪಲ್ಯಗಳು ಅಲ್ಪಾಯುಷಿಯಾಗಿರುವುದರಿಂದ ಅವುಗಳನ್ನು ಪ್ರತಿದಿನ ತಿನ್ನಬಾರದು. ಭಾರತೀಯ ಪಾರಂಪಾರಿಕ (ಸಾಂಪ್ರದಾಯಿಕ) ಆಹಾರದಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. (ಮೂರೂ ಹೊತ್ತು ಕೇವಲ ಮಾಂಸಾಹಾರವನ್ನು ತಿನ್ನುವ ಪಾಶ್ಚಾತ್ಯ ಜನರಿಗೆ ಫೈಬರ್‌ನ ಅವಶ್ಯಕತೆ ಇರುತ್ತದೆ ಮತ್ತು ಅಲ್ಲಿಯೇ ಇಂತಹ ಸಂಶೋಧನೆಗಳೂ ಆಗುತ್ತವೆ. ಅದನ್ನು ಹೇಗಿದೆಯೋ ಹಾಗೇಯೇ ನಾವು ತೆಗೆದುಕೊಳ್ಳಬಾರದು.) ಯಾವಾಗಲಾದರೊಮ್ಮೆ ತಿನ್ನುವಾಗ ತೊಪ್ಪಲು ಪಲ್ಯವನ್ನು ಹಬೆಯಿಂದ ಬೇಯಿಸಿ, ಹಿಂಡಿ ಒಗ್ಗರಣೆ ಕೊಟ್ಟು ತಿನ್ನಬೇಕು. ಪ್ರತಿದಿನ ತೊಪ್ಪಲು ಪಲ್ಯವನ್ನು ಸೇವಿಸುವುದರಿಂದ ಶುಕ್ರ, ಓಜ, ಬಲ, ನೇತ್ರ ಇವುಗಳಿಗೆ ಅಪಾಯವಾಗಬಹುದು.

೧೧. ಸಾಯಂಕಾಲದ ಭೋಜನವನ್ನು ಸೂರ್ಯಾಸ್ತದ ಮೊದಲೇ ಮಾಡಬೇಕು. ನಮ್ಮ ಹೊಟ್ಟೆಯಲ್ಲಿನ ಜೀರ್ಣಿಸುವ ಸ್ರಾವಗಳ ಕಾರ್ಯವು ಸೂರ್ಯಾಭಿಮುಖವಾಗಿರುತ್ತದೆ. ಸೂರ್ಯ ಮುಳುಗಿದ ನಂತರ, ಆಹಾರವನ್ನು ಜೀರ್ಣಿಸಿಕೊಳ್ಳಲು ಯಾರೂ ಸಹಾಯ ಮಾಡಲಾರರು. ಈಗ ಎಲ್ಲರೂ ರಾತ್ರಿ ೯ ರ ನಂತರ ಊಟ ಮಾಡುತ್ತಾರೆ ಮತ್ತು ‘ಅದು ಪಚನವಾಗುತ್ತದೆ’ ಎಂಬ ತಪ್ಪು ಕಲ್ಪನೆಯನ್ನು ಇಟ್ಟುಕೊಳ್ಳುತ್ತಾರೆ. ವಾಸ್ತವದಲ್ಲಿ ಆ ಆಹಾರ ಯೋಗ್ಯರೀತಿಯಲ್ಲಿ ಪಚನವಾಗದಿರುವುದರಿಂದ ಮಧುಮೇಹ, ಹೃದಯದ ರೋಗಗಳು, ಸ್ಥೂಲಕಾಯ, ದಮ್ಮು ಇತ್ಯಾದಿ ರೋಗಗಳ ಪ್ರಮಾಣವು ಹೆಚ್ಚಾಗುತ್ತದೆ. ಸಾಯಂಕಾಲದ ಭೋಜನ ಮತ್ತು ಮಲಗುವುದು ಇದರಲ್ಲಿ ಕನಿಷ್ಠ ೩ ಗಂಟೆಗಳ ಅಂತರವಿರಬೇಕು.

೧೨. ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ಭಾಗದಲ್ಲಿ (೨೫ ರಿಂದ ೫೦ ಕಿಲೋಮೀಟರ್ ಪರಿಸರದಲ್ಲಿ) ನೈಸರ್ಗಿಕ ರೀತಿಯಲ್ಲಿ ಬರುವ ಬೆಳೆಗಳು (ಧಾನ್ಯ, ಹಣ್ಣು, ಕಾಯಿಪಲ್ಯ ಇತ್ಯಾದಿ) ನಮಗೆ ಅವಶ್ಯಕ, ಹಿತಕರ ಮತ್ತು ಸಾಕಾಗುವಷ್ಟು ಇರುತ್ತವೆ. ಒಂದು ವಿಶಿಷ್ಟ ಪ್ರದೇಶದ ಹವಾಮಾನಕ್ಕೆ ಆವಶ್ಯಕ ಪದಾರ್ಥಗಳು ನೈಸರ್ಗಿವಾಗಿ ಆ ಪ್ರದೇಶದಲ್ಲಿ ಬೆಳೆಯುತ್ತವೆ. ಆದುದರಿಂದ ವಿದೇಶಿ ಕಾಯಿಪಲ್ಯೆ ಮತ್ತು ಹಣ್ಣುಗಳ ಹಿಂದೆ ಬೀಳಬಾರದು. ನಮ್ಮ ಭೂಮಿಯಲ್ಲಿ ಆ ಕಾಯಿಪಲ್ಯೆ ಅಥವಾ ಹಣ್ಣುಗಳನ್ನು ಬೆಳೆಸುವುದೆಂದರೆ, ನಮ್ಮ ಜೊತೆಗೆ ನಿಸರ್ಗದ ಆರೋಗ್ಯದ ಮೇಲೂ ಆಘಾತ ಮಾಡಿದಂತಾಗುತ್ತದೆ.

೧೩. ಭಾರತೀಯ ವಂಶದ (ದೇಶಿ) ಆಕಳಿನ ಹಾಲು ಪೂರ್ಣಾನ್ನವಾಗಿದೆ; ಡೈರಿ ಹಾಲು ಮಾತ್ರ ಪೂರ್ಣಾನ್ನವಾಗಿಲ್ಲ. ಜರ್ಸಿ ಪ್ರಾಣಿಗಳಿಗೆ (ಆಕಳುಗಳಿಗೆ) ಕೊಡುವ ಔಷಧಗಳ ದುಷ್ಪರಿಣಾಮವು ನಮ್ಮ ಮೇಲೂ ಆಗುತ್ತದೆ. ಆದುದರಿಂದ ಒಂದು ವೇಳೆ ನಮಗೆ ದೇಶಿ ಆಕಳ ಹಾಲು ಸಿಗದಿದ್ದರೆ ಮಕ್ಕಳಿಗೆ ಪ್ಲಾಸ್ಟಿಕ್ ಚೀಲದಲ್ಲಿನ (ಡೈರಿ) ಹಾಲನ್ನು ಬಲವಂತವಾಗಿ ಕುಡಿಸಬಾರದು. ನಾವೂ ಕೂಡ ಆ ಹಾಲನ್ನು ಕುಡಿಯಬಾರದು.

೧೪. ಯಾವ ಋತುಗಳಲ್ಲಿ ಯಾವ ಕಾಯಿಪಲ್ಯೆ ಅಥವಾ ಹಣ್ಣುಗಳು ಬರುತ್ತವೆಯೋ, ಅವುಗಳನ್ನು ತಿನ್ನಬೇಕು. ಸುಮ್ಮನೆ ಹನ್ನೆರೆಡೂ ತಿಂಗಳು ಬರುವ ಮಾವಿನ, ಸೇಬು ಹಣ್ಣು ಇತ್ಯಾದಿ ಹಣ್ಣುಗಳನ್ನು ತಿನ್ನುವುದು ತಪ್ಪಾಗಿದೆ. ಏಕೆಂದರೆ ಬೇರೆ ಋತುಗಳಲ್ಲಿ ಈ ಹಣ್ಣಗಳಲ್ಲಿ ಉತ್ತಮ ಗುಣಗಳಿರುವುದಿಲ್ಲ ಮತ್ತು ಆ ಋತುವಿನಲ್ಲಿ ಶರೀರಕ್ಕೆ ಅದರ ಅವಶ್ಯಕತೆಯೂ ಇರುವುದಿಲ್ಲ. ಕೆಲವೊಮ್ಮೆ ಅವುಗಳಿಂದ ತೊಂದರೆಯೇ ಆಗುತ್ತದೆ.

೧೫. ‘ಮಾಂಸಾಹಾರ ಸೇವಿಸದಿದ್ದರೆ ಬಲಶಾಲಿಯಾಗುವುದಿಲ್ಲ’, ಎಂಬುದು ತಪ್ಪು ಕಲ್ಪನೆಯಾಗಿದೆ. ತಲೆಮಾರಿನಿಂದ ಮಾಂಸಾಹಾರ ಸೇವಿಸುವ ಜನರೂ ಕೂಡ ನಿಯಮಿತವಾಗಿ ಮಾಂಸಾಹಾರ ಸೇವಿಸಬಾರದು. ಯಾರ ಪೂರ್ವಜರು ಶಾಕಾಹಾರಿಗಳಾಗಿದ್ದರೋ, ಅಂತಹ ಜನರು ಕೂಡ ಅನವಶ್ಯಕ ಮಾಂಸಾಹಾರವನ್ನು ಸೇವಿಸಬಾರದು. ಇದರಿಂದ ಗುದವಿಕಾರವಾಗುವ ಸಾಧ್ಯತೆ ಹೆಚ್ಚುತ್ತದೆ.

೧೬. ಯಾವುದೇ ಕಾಯಿಲೆಯಲ್ಲಿ, ಹಾಗೆಯೇ ತೂಕ ಅಥವಾ ಕೊಲೆಸ್ಟೆರಾಲ್ ಇವುಗಳ ಭಯದಿಂದ ಎಣ್ಣೆ-ತುಪ್ಪವನ್ನು ಬಿಡಬಾರದು. ಶರೀರವು ಪ್ರತಿದಿನ ಸವೆಯುತ್ತಿರುತ್ತದೆ. ಅ ಸವೆತವನ್ನು ನಿಯಂತ್ರಿಸಲು ಸ್ನಿಗ್ಧತೆಯು (ಫ್ಯಾಟ) ಅತ್ಯಂತ ಆವಶ್ಯವಾಗಿರುತ್ತದೆ.

೧೭. ಭಾರತೀಯ ಆಕಳಿನ (ದೇಶಿ) ಬೆಣ್ಣೆ ಅಥವಾ ತುಪ್ಪವು ಉತ್ತಮ ಪಾಚಕ, ಸ್ಮರಣಶಕ್ತಿಯುಕ್ತ, ಬಲವರ್ಧಕ ಮತ್ತು ದೃಷ್ಟಿದಾಯಕವಾಗಿದೆ. ಅದುದರಿಂದ ಅದನ್ನು ವಿದ್ಯಾರ್ಥಿಗಳಿಗೆ ಅವಶ್ಯ ಕೊಡಬೇಕು.

೧೮. ಊಟ ಮಾಡುವಾಗ ನಡುನಡುವೆ ಸ್ವಲ್ಪ ಸ್ವಲ್ಪ ನೀರು ಕುಡಿಯಬೇಕು. ಊಟದ ಮೊದಲು ಮತ್ತು ಊಟದ ನಂತರ ಕೂಡಲೇ ನೀರು ಕುಡಿಯಬಾರದು.

೧೯. ಕಟ್ಟಿಗೆಯ ಗಾಣದ ಅಥವಾ ‘ಫಿಲ್ಟರ್ಡ ಎಣ್ಣೆ’ಯನ್ನು ಪ್ರತಿದಿನ ಅಡುಗೆಗೆ ಬಳಸಬೇಕು. ಈ ಎಣ್ಣೆಯು ಎಳ್ಳಿನ, ಶೇಂಗಾಬೀಜದ ಅಥವಾ ಕೊಬ್ಬರಿಯ ಎಣ್ಣೆ ಆಗಿರಬೇಕು. ಎಳ್ಳಿನ ಎಣ್ಣೆ ಇದ್ದರೆ ಬಹಳ ಉತ್ತಮ ! ಇತರ ಎಣ್ಣೆಗಳ ಗೊಂದಲದಲ್ಲಿ ಬೀಳಬಾರದು.

೨೦. ಊಟದ ನಂತರ ವೀಳ್ಯದೆಲೆ, ಸುಣ್ಣ, ಕಾಚು, ಲವಂಗ, ಕರ್ಪೂರ (ಸ್ವಲ್ಪ), ಯಾಲಕ್ಕಿ ಇವುಗಳೊಂದಿಗೆ ತಾಂಬೂಲವನ್ನು ತಿನ್ನಬೇಕು.

೨೧. ಹಸಿವು ಹೆಚ್ಚಾಗಲು, ಪಚನ ಶಕ್ತಿ ಸುಧಾರಿಸಲು ಮತ್ತು ಆರೋಗ್ಯ ಚೆನ್ನಾಗಿರಲು ನಿಯಮಿತ ವ್ಯಾಯಾಮ ಮಾಡುವುದೇ ಸರ್ವಶ್ರೇಷ್ಠವಾದ ಔಷಧಿಯಾಗಿದೆ.’

– ವೈದ್ಯೆ ಸುಚಿತ್ರಾ ಕುಲಕರ್ಣಿ (ಆಧಾರ : ದೈನಿಕ ‘ಮಹಾರಾಷ್ಟ್ರ ಟೈಮ್ಸ್’)