ಆರ್ಥಿಕ ಮೀಸಲಾತಿಯ ಮುದ್ರೆ

ಆರ್ಥಿಕದೃಷ್ಟಿಯಿಂದ ದುರ್ಬಲ ಘಟಕಗಳಿಗಾಗಿ ೨೦೧೯ ರಲ್ಲಿ ಕೇಂದ್ರ ಸರಕಾರವು ಶಿಕ್ಷಣ ಮತ್ತು ಸರಕಾರಿ ಉದ್ಯೋಗಳಲ್ಲಿ ಇತರ ಮೀಸಲಾತಿಗೊಳಪಡದ ಮೀಸಲಾತಿಯನ್ನು ಜಾರಿಗೆ ತಂದಿತು. ಜಾತಿ ಆಧಾರಿತ ಮೀಸಲಾತಿಗಳಿಗಿಂತ ಆರ್ಥಿಕವಾಗಿ ಮೀಸಲಾತಿ ನೀಡುವುದು ಯಾವಾಗಲೂ ಯೋಗ್ಯವಾಗಿದೆ, ಹಾಗೆಯೇ ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿಯು ಪಿಡುಗನ್ನು ಕ್ರಮೇಣ ಕೊನೆಗೊಳಿಸಲು ಭವಿಷ್ಯದಲ್ಲಿ ಇದೂ ಒಂದು ಉತ್ತಮ ಪರ್ಯಾಯವಾಗಿದೆ; ಆದರೆ ತಮಿಳುನಾಡಿನ ದ್ರವಿಡ ಮುನ್ನೆತ್ರ ಕಳಘಮ್ ಈ ಪಕ್ಷ ಸಹಿತ ಇತರ ೩೦ ಕ್ಕಿಂತ ಹೆಚ್ಚು ಅರ್ಜಿದಾರರು ಈ ನಿರ್ಣಯಕ್ಕೆ ಸವಾಲು ನೀಡಿದರು. ಸರ್ವೋಚ್ಚ ನ್ಯಾಯಾಲಯವು ಈ ಸಂದರ್ಭದಲ್ಲಿ ತೀರ್ಪನ್ನು ನೀಡುವಾಗ ಆರ್ಥಿಕ ದೃಷ್ಟಿಯಿಂದ ದುರ್ಬಲ ವರ್ಗಗಳಿಗೆ ಶೇ. ೧೦ ರಷ್ಟು ಮೀಸಲಾತಿಯನ್ನು ಕಾಯ್ದಿರಿಸುವ ನಿರ್ಣಯವನ್ನು ನೀಡಿತು. ಸದ್ಯ ವಿವಿಧ ರಾಜ್ಯಗಳಲ್ಲಿ ವಿವಿಧ ಪ್ರಕಾರದ ಮೀಸಲಾತಿಗಳಿವೆ. ಅದೂ ಅಲ್ಲದೇ ಈಗ ಈ ಆರ್ಥಿಕ ಮೀಸಲಾತಿ ಜಾರಿಗೆ ಬರಲಿದೆ. ಈ ಮೀಸಲಾತಿಯಲ್ಲಿ ಯಾವುದೇ ಜಾತಿಯ ಮೀಸಲಾತಿಯು ಅನ್ವಯವಾಗದ ಸಾಮಾನ್ಯವರ್ಗವಿರಲಿದೆ; ಆದರೆ ಆರ್ಥಿಕ ಮೀಸಲಾತಿಯಲ್ಲಿಯೂ ಸಹಜವಾಗಿ ಆದಾಯದ ಮಿತಿ ಇರುವುದರಿಂದ ಈ ಮೀಸಲಾತಿಯು ಅನ್ವಯಿಸದ ಒಂದು ವರ್ಗವು ಇರುತ್ತದೆ. ಇತರ ಅನೇಕ ಜನರು ವಿವಿಧ ಮೀಸಲಾತಿ ಪಡೆದಿರುವುದರಿಂದ ಈ ವರ್ಗದ ಸೀಟುಗಳು ಕಡಿಮೆಯಾದುದರಿಂದ ಅವರಿಗೆ ಅನ್ಯಾಯವಾಗುವುದಿಲ್ಲವೇ ?’ ಎಂಬ ಒಂದು ಪ್ರಶ್ನೆಯು ಇದರಿಂದ ಉದ್ಭವಿಸಲಿದೆ ಎಂಬುದನ್ನು ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬೇಕು. ಆರ್ಥಿಕ ಮೀಸಲಾತಿಗೆ ಆದಾಯ ಮಿತಿಗಳು ಬಹಳ ಇವೆ. ‘೫ ಎಕರೆಗಿಂತ ಕಡಿಮೆ ಭೂಮಿ, ೯೦೦ ಚದರ ಅಡಿಗಳಿಗಿಂತ ಚಿಕ್ಕ ಮನೆ ಮತ್ತು ೮ ಲಕ್ಷ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ಆದಾಯವಿರುವ’ ಈ ಆರ್ಥಿಕ ದುರ್ಬಲ ಘಟಕಗಳಿಗೆ ಮಾನದಂಡವಾಗಿದೆ. ಇಂತಹವರನ್ನು ಆರ್ಥಿಕವಾಗಿ ದುರ್ಬಲರೆಂದು ಹೇಗೆ ಹೇಳಬಹುದು ಎಂಬ ಪ್ರಶ್ನೆಯೂ ಸಾಮಾನ್ಯರ ಮನಸ್ಸಿನಲ್ಲಿ ಮೂಡುತ್ತಿದೆ. ಇದರ ಇನ್ನೊಂದು ಅರ್ಥವೆಂದರೆ, ಸಾಮಾನ್ಯ ವರ್ಗದಲ್ಲಿನ (ಓಪನ್ ಕೆಟೆಗರಿ) ಮೇಲ್ಮಧ್ಯಮವರ್ಗಗಳಿಗೆ ಯಾವುದೇ ಮೀಸಲಾತಿಯು ದೊರಕಲಾರದು. ತಜ್ಞರಿಗನುಸಾರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಇತರ ಹಿಂದುಳಿದವರು, ಅಂಗವಿಕಲರು ಮತ್ತು ಈಗ ಆರ್ಥಿಕದಂತಹ ಎಲ್ಲ ಮೀಸಲಾತಿಗಳನ್ನು ಪರಿಗಣಿಸಿದರೂ ಯಾವುದೇ ಮೀಸಲಾತಿ ಅನ್ವಯಿಸದವರಿಗೆ ಕೇವಲ ಶೇ. ೩೬ ರಷ್ಟು ಉದ್ಯೋಗಗಳು ಉಳಿಯಲಿವೆ. ಆದುದರಿಂದ ಮೀಸಲಾತಿ ಯಾವುದೇ ರೀತಿಯದ್ದಾಗಿರಲಿ, ಅದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರಮಿಸಿ ಹೆಚ್ಚು ಅಂಕಗಳನ್ನು ಪಡೆದ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮರ್ಥರಾಗಿರುವ ಪ್ರತಿಭಾವಂತರಿಗೆ ಕೊಂಚ ಮಟ್ಟಿಗೆ ಅನ್ಯಾಯವಾಗುತ್ತದೆ ಎಂಬುದನ್ನು ನಿರಾಕರಿಸಲು ಬರುವುದಿಲ್ಲ. ಮೀಸಲಾತಿಯ ಹೆಸರಿನಲ್ಲಿ ಅನೇಕ ವರ್ಷಗಳಿಂದ ಅನೇಕ ಹುದ್ದೆಗಳು ಖಾಲಿಯಿದ್ದು ಸಮಾಜಕ್ಕಾಗುವ ಹಾನಿ ಬೇರೆಯೇ ಆಗಿದೆ !

ಆರ್ಥಿಕ ಮೀಸಲಾತಿಯ ಲಾಭ !

ಕಾಂಗ್ರೆಸ್ ಸರಕಾರವು ಜಾತಿಯ ರಾಜಕಾರಣವನ್ನು ಹೆಚ್ಚಿಸಲು ಅದಕ್ಕೆ ಮೀಸಲಾತಿಯನ್ನು ನೀಡಲು ಆರಂಭಿಸಿತು ಮತ್ತು ಎಲ್ಲ ಪಕ್ಷಗಳು ಅದರ ರಾಜಕೀಯ ಲಾಭವನ್ನು ಇಂದಿಗೂ ಪಡೆಯುತ್ತಿವೆ, ಇದು ದುರದೃಷ್ಟಕರವಾಗಿದೆ. ವಾಸ್ತವದಲ್ಲಿ ಭಾರತದ ಇತಿಹಾಸದಲ್ಲಿ ಸಾಮಾಜಿಕ ವಸ್ತುಸ್ಥಿತಿಯನ್ನು ನೋಡಿದರೆ ಜಾತಿಯಿಂದ ಯಾರಿಗಾದರೂ ಅನ್ಯಾಯವಾದ ಸಮಯಗಳು ಮತ್ತು ಘಟನೆಗಳು ಈಗ ಹೇಳುತ್ತಿರುವಷ್ಟು ಪ್ರಮಾಣದಲ್ಲಿ ಪ್ರತ್ಯಕ್ಷದಲ್ಲಿಲ್ಲ. ಈ ಬಗೆಗಿನ ವಸ್ತುನಿಷ್ಠ ಸಂಶೋಧನೆಯೂ ಈಗ ಹೊರ ಬರುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಹಾಗೆಯೇ ಇತರ ಹಿಂದುಳಿದವರಲ್ಲಿ ಎಷ್ಟೋ ಜನರ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಿದುದರಿಂದ ಅವರಲ್ಲಿ ‘ಯಾವುದೇ ಮೀಸಲಾತಿಯ ಆವಶ್ಯಕತೆ ಇಲ್ಲ’ ಎಂಬ ದೊಡ್ಡ ವರ್ಗವೂ ಈಗ ನಿರ್ಮಾಣವಾಗಿದೆ. ಆದರೂ ಈ ವರ್ಗವು ಜಾತಿ ಆಧಾರಿತ ಮೀಸಲಾತಿಯ ಲಾಭ ಪಡೆಯುತ್ತಿದೆ. ಅವರು ತಾವಾಗಿಯೇ ‘ನಮಗೆ ಮೀಸಲಾತಿಯ ಆವಶ್ಯಕತೆ ಇಲ್ಲ’ ಎಂದು ಹೇಳಿ ಮೀಸಲಾತಿಯ ಹಿಡಿತದಿಂದ ಹೊರಗೆ ಬೀಳುವುದು ಅಪೇಕ್ಷಿತವಿದೆ. ಈ ವಿಷಯ ಆರ್ಥಿಕ ಮೀಸಲಾತಿಯವರಿಗೆ ಮಾತ್ರ ಅನ್ವಯಿಸುವುದು; ಏಕೆಂದರೆ ಮೀಸಲಾತಿಯನ್ನು ನೀಡುವಾಗ ಯಾರಾದರೊಬ್ಬರ ಆರ್ಥಿಕ ಸ್ಥಿತಿ ಸುಧಾರಿಸಿತೆಂದರೆ ಅವರ ಮುಂದಿನ ಪೀಳಿಗೆಗೆ ಮೀಸಲಾತಿಯು ದೊರಕುವುದಿಲ್ಲ ಮತ್ತು ಅವನು ಮೀಸಲಾತಿಯ ದಾಸ್ಯದಿಂದ ಹೊರಗೆ ಬೀಳುವನು; ಅದರೊಂದಿಗೆ ಯಾರಾದರೊಬ್ಬರ ಆರ್ಥಿಕ ಸ್ಥಿತಿಯು ಯಾವುದೋ ಕಾರಣದಿಂದ ಕುಸಿದರೆ ಅವನಿಗೆ ಈ ಮೀಸಲಾತಿಯ ಲಾಭ ದೊರಕುವುದು. ಇದರಿಂದ ಸಮಾಜದ ವಿಕಾಸಕ್ಕಾಗಿ ಜಾತಿ ಆಧಾರಿತ ಮೀಸಲಾತಿಗಿಂತ ಆರ್ಥಿಕ ಮೀಸಲಾತಿಯ ನಿಜವಾದ ಅರ್ಥದಲ್ಲಿ ಲಾಭವಾಗುವುದು.

‘ಮೀಸಲಾತಿಯೇ ಬೇಡ’ ಎಂದಾಗುವುದು ಯಾವಾಗ ?

ಮೀಸಲಾತಿ ನೀಡುವ ಉದ್ದೇಶ ಮೂಲದಲ್ಲಿ ‘ಯಾರೂ ಹಿಂದುಳಿಯುವುದು ಬೇಡ’ ಎಂದಾಗಿದೆ. ಆದುದರಿಂದ ಸಹಜವಾಗಿಯೇ ಇದರಿಂದ ‘ಹೊರಗೆ ಬರುವುದೇ’ ಎಲ್ಲ ಜನರ, ಸರಕಾರ ಮತ್ತು ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಗುರಿಯಾಗಬೇಕು; ಆದರೆ ನಮ್ಮಲ್ಲಿ ಸ್ವಾರ್ಥಿ ಮತ್ತು ಜಾತಿಯ ಕೊಳಕು ರಾಜಕಾರಣಗಳಿಂದ ಮೀಸಲಾತಿಯ ಕಪಿಮುಷ್ಠಿಯಲ್ಲಿ ಜನರನ್ನು ಹೇಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಬರುತ್ತದೆ, ಎಂಬುದನ್ನೇ ಎಲ್ಲ ಪಕ್ಷಗಳಿಂದ ನೋಡಲಾಗುತ್ತದೆ. ‘ಯಾರಿಗೂ ಮೀಸಲಾತಿಯ ಆವಶ್ಯಕತೆ ಇಲ್ಲ’, ಎಂಬುದೇ ದೇಶದ ನಿಜವಾದ ವಿಕಾಸದ ಅಥವಾ ಪ್ರಗತಿಯ ಹಂತವಾಗಿದೆ; ಆದರೆ ಸಮಾಜದ ವಿಕಾಸವಾಗುತ್ತಿದ್ದರೂ ಆಡಳಿತಗಾರರು ಸಮಾಜವನ್ನು ಆ ದಿಶೆಗೆ ಕರೆದೊಯ್ಯಲು ಮಾರ್ಗಕ್ರಮಣ ಮಾಡುತ್ತಿರುವುದು ಕಂಡು ಬರುವುದಿಲ್ಲ; ಆದರೆ ತದ್ವಿರುದ್ಧ ಚುನಾವಣೆಯಲ್ಲಿ ಗೆದ್ದು ಬರಲು ಈ ಅಂಶಗಳ ಲಾಭ ಪಡೆಯುತ್ತಿದ್ದಾರೆ. ಅದಕ್ಕಿಂತಲೂ ಗಂಭೀರ ವಿಷಯವೆಂದರೆ ನ್ಯಾಯಾಲಯವು ಆರ್ಥಿಕ ಮೀಸಲಾತಿಯಯನ್ನು ಜಾರಿಗೆ ತಂದ ನಂತರ ಕಾಂಗ್ರೆಸ್‌ನ ೨ ನಾಯಕರು ನ್ಯಾಯಾಲಯವನ್ನೇ ಟೀಕಿಸಿದರು ಮತ್ತು ನ್ಯಾಯಾಲಯದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಆದುದರಿಂದ ಆರ್ಥಿಕ ಮೀಸಲಾತಿಯನ್ನು ವಿರೋಧಿಸುವವರಿಗೆ ಜಾತಿ ಆಧರಿಸಿದ ಕೊಳಕು ರಾಜಕಾರಣವನ್ನು ಮುಕ್ತಾಯಗೊಳಿಸುವುದು ಬೇಕಿಲ್ಲ ಎಂಬುದೇ ಗಮನಕ್ಕೆ ಬರುತ್ತದೆ.

ಸ್ವತಃ ಡಾ. ಬಾಬಾಸಾಹೇಬ ಅಂಬೇಡಕರ ಸಹಿತ ಆರ್ಥಿಕ ಮೀಸಲಾತಿಯ ತೀರ್ಪನ್ನು ನೀಡಿದ ನ್ಯಾಯಾಧೀಶರೂ ‘ಮೀಸಲಾತಿಯ ಕಾಲಾವಧಿಗೆ ಮಿತಿ ಇರಬೇಕು’ ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ದೊರಕಿ ೭ ದಶಕಗಳಾದರೂ ಮೀಸಲಾತಿಯ ಕಾಲಾವಧಿಯು ಮುಗಿಯುತ್ತಿಲ್ಲ. ವಾಸ್ತವದಲ್ಲಿ ‘ಮೀಸಲಾತಿಯ ಕಾಲಾವಧಿ ಅಥವಾ ಆವಶ್ಯಕತೆ ಕೊನೆಗೊಳ್ಳುವುದು’ ಇದು ಸಮಾಜದ ವಿಕಾಸದ ಲಕ್ಷಣವಾಗಿದೆ. ಈ ಬಗ್ಗೆ ಯಾವುದೇ ರಾಜಕೀಯ ಪಕ್ಷವು ಎಂದಿಗೂ ಚರ್ಚೆ ಮಾಡುವುದಿಲ್ಲ; ಏಕೆಂದರೆ ಅವರು ಮತಕ್ಕಾಗಿ ಯಾವುದೇ ಸಮಾಜದ ಕೋಪಕ್ಕೆ ಗುರಿಯಾಗಲು ಬಯಸುವುದಿಲ್ಲ. ಆರ್ಥಿಕ ಮೀಸಲಾತಿಯನ್ನು ಅಧಿಕೃತವೆಂದು ನಿಶ್ಚಯಿಸುವಾಗ ನ್ಯಾಯಮೂರ್ತಿ ತ್ರಿವೇದಿ, ನ್ಯಾಯಮೂರ್ತಿ ಪಾರದಿವಾಲಾ ಇವರು ‘ಯಾವುದೇ ಮೀಸಲಾತಿಯ ಕಾಲಾವಧಿ ಸುದೀರ್ಘವಾಗಬಾರದು. ಅದರ ಪರಿಶೀಲನೆಯನ್ನು ಮಾಡಬೇಕು, ಮುಂದುವರಿದವರನ್ನು ಹೊರಗಿಡಬೇಕು, ದೇಶದ ಸ್ವಾತಂತ್ರ್ಯಕ್ಕೆ ೭೫ ವರ್ಷಗಳಾದರೂ ಮೀಸಲಾತಿಯ ಮರುಪರಿಶೀಲನೆಯಾಗಬೇಕು’, ಎಂದು ಸೂಚಿಸಿದ್ದಾರೆ. ಈ ಸೂಚನೆಗಳ ಪರಿಶೀಲನೆಯನ್ನು ಮುಂಬರುವ ಕಾಲದಲ್ಲಿ ಆಡಳಿತಗಾರರಿಂದ ಮಾಡಲಾಗುವುದು ಎಂಬ ಅಪೇಕ್ಷೆಯನ್ನಿಟ್ಟುಕೊಳ್ಳೋಣ !