ಕ್ರೈಸ್ತರ ಮತಾಂತರದ ಹಾವಳಿಯಿಂದ ಭಾರತೀಯ ಆದಿವಾಸಿಗಳ ಸಂಸ್ಕೃತಿ ನಾಶವಾಗುವ ಮಾರ್ಗದಲ್ಲಿ !

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮೂ ಮತ್ತು ಶ್ರೀಮತಿ ನಚಿಯಮ್ಮಾ ಇವರಿಗೆ ರಾಷ್ಟ್ರೀಯ ಮತ್ತು ಜಾಗತಿಕ ಸ್ತರದಲ್ಲಿ ದೊರಕಿದ ಸನ್ಮಾನವು ಭಾರತದ ಆದಿವಾಸಿ ಸಂಸ್ಕೃತಿಯ ಉದಾಹರಣೆಗಳಾಗಿವೆ; ಆದರೆ ಕ್ರೈಸ್ತರಿಂದ ದೊಡ್ಡ ಪ್ರಮಾಣದಲ್ಲಿ ಮಾಡಲಾಗುವ ಮತಾಂತರದಿಂದ ಈ ಪರಂಪರೆಯು ಈಗ ನಾಶವಾಗುವ ಮಾರ್ಗದಲ್ಲಿದೆ. ಈ ವಿಷಯದಲ್ಲಿನ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.

೧. ದ್ರೌಪದಿ ಮುರ್ಮೂ ಇವರು ರಾಷ್ಟ್ರಪತಿಗಳಾಗುವುದು ಆದಿವಾಸಿಗಳಿಗೆ ಹಾಗೂ ಸ್ಥಳೀಯ ಇತರ ಸಮುದಾಯಗಳಿಗೂ ಅಭಿಮಾನದ ವಿಷಯ !

ಭಾರತದಲ್ಲಿನ ಇಬ್ಬರು ಆದಿವಾಸಿ ಮಹಿಳೆಯರು ವಿಶೇಷ ಕಾರ್ಯವನ್ನು ಮಾಡಿದ್ದಾರೆ. ಇವರಲ್ಲಿನ ಮೊದಲ ಮಹಿಳೆಯು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತ ದೇಶದ ಸರ್ವೋಚ್ಚ ಗೌರವದ ಸ್ಥಾನವನ್ನು  ಪ್ರಾಪ್ತಮಾಡಿಕೊಂಡಿದ್ದಾರೆ. ಭಾರತದ ರಾಷ್ಟ್ರಪತಿಯಾಗುವ ಗೌರವವನ್ನು ಪಡೆದ ದ್ರೌಪದಿ ಮುರ್ಮೂ ಇವರು ಮೊದಲ ಆದಿವಾಸಿ ಮಹಿಳೆ ಮತ್ತು ವಯಸ್ಸಿನಿಂದ ಎಲ್ಲರಿಗಿಂತ ಕಿರಿಯ ರಾಷ್ಟ್ರಪತಿಗಳಾಗಿದ್ದಾರೆ. ನಮ್ಮ ದೇಶದಲ್ಲಿ ಆದಿವಾಸಿ ಜನರ ಸಂಪನ್ನ ಸಂಸ್ಕೃತಿ ಮತ್ತು ಶ್ರೇಷ್ಠ ಪರಂಪರೆಯಿದೆ; ಹೀಗಿದ್ದರೂ ಅನೇಕ ವರ್ಷಗಳಿಂದ ಈ ಆದಿವಾಸಿ ಜನರನ್ನು ದುರ್ಲಕ್ಷಿಸಲಾಯಿತು. ದ್ರೌಪದಿ ಮುರ್ಮೂ ಇವರಿಗೆ ರಾಷ್ಟ್ರಪತಿ ಪದವಿ ದೊರಕುವುದು, ಇದು ಕೇವಲ ದುರ್ಲಕ್ಷಿಸಲಾದ ಆದಿವಾಸಿ ಜನಾಂಗಕ್ಕೆ ಮಾತ್ರವಲ್ಲ, ಅದು ಜಗತ್ತಿನ ಇತರ ಸ್ಥಳೀಯ ಸಮುದಾಯಗಳಿಗೂ ಹೆಮ್ಮೆಯ ವಿಷಯವಾಗಿದೆ.

೨. ನಚಿಯಮ್ಮಾ ಈ ಆದಿವಾಸಿ ಮಹಿಳೆಯು ಗಾಯನದಲ್ಲಿ ‘ಉತ್ಕೃಷ್ಟ ಹಿನ್ನೆಲೆ ಗಾಯಕಿ’ ಎಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುವುದು

ಇನ್ನೊಂದು ವಿಶೇಷ ಮಹತ್ವದ ಕಾರ್ಯಯನ್ನು ಮಾಡಿದವರೆಂದರೆ ನಚಿಯಮ್ಮಾ ! ಅವರ ಕಡೆಗೆ ನಮ್ಮ ಗಮನವೇ ಹೋಗಿರಲಿಲ್ಲ. ಈ ಆದಿವಾಸಿ ಮಹಿಳೆಯು ಹಾಡಿದ ಪಾರಂಪಾರಿಕ ಆದಿವಾಸಿ ಹಾಡುಗಳಿಗಾಗಿ ‘ಉತ್ಕೃಷ್ಟ ಹಿನ್ನೆಲೆ ಗಾಯಕಿ’ ಎಂದು ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ನಚಿಯಮ್ಮಾ ಇವರಿಗೆ ದೊರಕಿದ ಈ ಸನ್ಮಾನ ಕೇವಲ ಅವರಿಗಷ್ಟೇ ಅಲ್ಲ, ಅವರು ಪ್ರತಿನಿಧಿಸುವ ಆದಿವಾಸಿ ಜನರ ಪಾರಂಪಾರಿಕ ಸಂಗೀತ ಮತ್ತು ಸಂಸ್ಕೃತಿಯ ಸನ್ಮಾನವೇ ಆಗಿದೆ. ಇವೆರಡು ಘಟನೆಗಳಿಂದ ದೇಶದಲ್ಲಿ ವಿವಿಧ ಜಾತಿಗಳಲ್ಲಿನ ಪರಂಪರೆಗಳನ್ನು ಗೌರವಿಸಲಾಗುತ್ತಿರುವುದು ಕಂಡು ಬರುತ್ತದೆ.

ಪಾರಂಪಾರಿಕ ಆದಿವಾಸಿಗಳ ಹಾಡುಗಳನ್ನು ಹಾಡಿ ನಚಿಯಮ್ಮಾ ಇವರು ಪ್ರಾಪ್ತ ಮಾಡಿಕೊಂಡ ಈ ಯಶಸ್ಸಿನಿಂದ ನಮಗೆ ಆನಂದವಾಗುತ್ತದೆ; ಆದರೆ ಅದೇ ಸಮಯದಲ್ಲಿ ಈ ಸಂಸ್ಕೃತಿಯ ನಾಶದ ಅಂಚಿನಲ್ಲಿದೆ ಎಂದು ದುಃಖವೂ ಆಗುತ್ತದೆ.

೩. ಕ್ರೈಸ್ತ ಧರ್ಮಪ್ರಚಾರಕರು ಆದಿವಾಸಿ ಸಂಸ್ಕೃತಿಯ ವಿರುದ್ಧ ಪ್ರಚಾರ ಮಾಡಿ ಅವರನ್ನು ದೂರ ಒಯ್ಯುವುದು

ಮತಾಂತರದ ಘಟನೆಗಳಿಂದ ಈ ಮಹಾನ ಸಂಸ್ಕೃತಿಯು ಈಗ ವೇಗವಾಗಿ ಕಣ್ಮರೆಯಾಗುತ್ತಿದೆ. ಗುಜರಾತ್‌ನಲ್ಲಿ ‘ಸಿದ್ಧಿ’ ಹೆಸರಿನ ಮುಸಲ್ಮಾನ ಸಮುದಾಯವು ತನ್ನ ಸಂಸ್ಕೃತಿಯನ್ನು ರಕ್ಷಿಸುತ್ತಾ ನವರಾತ್ರಿಯ ಉತ್ಸವವನ್ನೂ ಆಚರಿಸುತ್ತಿತ್ತು; ಆದರೆ ಯಾವಾಗ ಈ ಸಮುದಾಯದ ಮೇಲೆ ಕೆಲವು ಇತರ ಧಾರ್ಮಿಕ ಸಂಸ್ಥೆಗಳ ಪ್ರಭಾವ ಹೆಚ್ಚಾದಂತೆ ಅದು ತನ್ನ ಮೂಲ ಸಂಸ್ಕೃತಿ ಅಥವಾ ಮೂಲ ಪರಂಪರೆಯಿಂದ ದೂರ ಹೋಗತೊಡಗಿತು. ಕ್ರೈಸ್ತ ಧರ್ಮ ಪ್ರಚಾರಕರು ಈ ಆದಿವಾಸಿ ಸಂಸ್ಕೃತಿಯ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಮತ್ತು ಆದಿವಾಸಿ ಜನಾಂಗವನ್ನು ಅವರ ಪದ್ಧತಿ, ಸಂಪ್ರದಾಯ, ಸಂಸ್ಕೃತಿ ಮತ್ತು ಧಾರ್ಮಿಕ ನಡೆನುಡಿಗಳಿಂದ ದೂರಗೊಳಿಸುತ್ತಿದ್ದಾರೆ. ಈ ಆದಿವಾಸಿ ಜನರು ನಿಸರ್ಗವನ್ನು ಪ್ರೀತಿಸುತ್ತಿದ್ದರು ಮತ್ತು ಪೂಜಿಸುತ್ತಿದ್ದರು; ಆದರೆ ಈ ಮತಾಂತರದ ಲಾಬಿಯ ಪ್ರಭಾವದಿಂದ ಅವರು ತಮ್ಮ ನಡೆನುಡಿಗಳನ್ನು ಬದಲಾಯಿಸಿಕೊಂಡಿದ್ದಾರೆ.

೪. ಜಗತ್ತಿನಲ್ಲಿ ಇಸ್ಲಾಮಿ ದೇಶಗಳ ಸಹಿತ ೪೮ ದೇಶಗಳಲ್ಲಿ ಮತಾಂತರಕ್ಕೆ ನಿರ್ಬಂಧವಿದೆ ಮತ್ತು ಭಾರತದಲ್ಲಿ ಕ್ರೈಸ್ತ ಧರ್ಮಪ್ರಚಾರಕರು ಪ್ರಚಾರದ ಹೆಸರಿನಲ್ಲಿ ಇತರ ಧರ್ಮದವರನ್ನು ಮತಾಂತರಿಸುವುದು

ಜಗತ್ತಿನಲ್ಲಿ ೪೮ ಕ್ಕಿಂತ ಹೆಚ್ಚು ದೇಶಗಳಲ್ಲಿ ಮತಾಂತರವನ್ನು ಮಾಡುವವರ ಮೇಲೆ ಕಾನೂನಿನ ನಿರ್ಬಂಧವಿದೆ. ಗ್ರೀಸ್ ಮತ್ತು ಇಸ್ಲಾಮಿ ರಾಷ್ಟ್ರಗಳನ್ನು ಒಳಗೊಂಡಂತೆ ೧೨ ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಮತಾಂತರ ಮಾಡುವುದು ಕಾನೂನಿಗನುಸಾರ ಅಪರಾಧವಾಗಿದೆ. ಅನೇಕ ಇಸ್ಲಾಮೀ ರಾಷ್ಟ್ರಗಳಲ್ಲಿ ಇದು ಗಂಭೀರ ಸ್ವರೂಪದ ಅಪರಾಧವಾಗಿದೆ. ಭಾರತದ ಸಂವಿಧಾನದಲ್ಲಿ ಕಲಮ್ ೨೫ ಕ್ಕನುಸಾರ ಎಲ್ಲ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯವಿದೆ ಮತ್ತು ಪ್ರತಿಯೊಬ್ಬರು ತಮ್ಮ ಧರ್ಮದ ಪ್ರಚಾರವನ್ನು ಮಾಡಬಹುದು; ಆದರೆ ಪ್ರಚಾರ ಈ ಶಬ್ದದ ಬೇರೆ ಅರ್ಥವನ್ನು ತೆಗೆದು ಕ್ರೈಸ್ತ ಧರ್ಮ ಪ್ರಚಾರಕರು ಹಿಂದೂ ಧರ್ಮದ ನಾಗರಿಕರನ್ನು ಮತಾಂತರಿಸುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ‘ರೆವರಂಡ್ (ಕ್ರೈಸ್ತ ಧರ್ಮಗುರುಗಳ ಪದವಿ) ಸ್ಟೆನಿಸಲಸ್ ಇವರ ವಿರುದ್ಧ ಮಧ್ಯಪ್ರದೇಶ ಸರಕಾರ’ ಇವರ ಮೊಕದ್ದಮೆಯ ತೀರ್ಪು ನೀಡುವಾಗ ‘ಪ್ರಚಾರ ಮಾಡುವ ಅಧಿಕಾರವೆಂದರೆ ಇತರ ಧರ್ಮದವರನ್ನು ಮತಾಂತರಿಸುವುದಲ್ಲ’, ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ‘ಧಾರ್ಮಿಕ ಸ್ವಾತಂತ್ರ್ಯವೆಂದರೆ ಪೂರ್ಣ ಸ್ವಾತಂತ್ರ್ಯ ಆಗಬಾರದು. ಸಮಾಜದಲ್ಲಿನ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನವು ನೀಡಿದ ಇತರ ಮೂಲಭೂತ ಅಧಿಕಾರಗಳ ವಿಚಾರ ಮಾಡಿ ಈ ಸ್ವಾತಂತ್ರ್ಯದ ಮೇಲೆ ನಿಯಂತ್ರಣವನ್ನಿಡಬೇಕು.

೫. ಆದಿವಾಸಿಗಳ ಸಾಂಸ್ಕೃತಿಕ ಸ್ವತ್ತನ್ನು ರಕ್ಷಿಸಲು ಮತಾಂತರ ನಿಷೇಧ ಕಾನೂನು ಬೇಕು !

ಮತಾಂತರದಿಂದ ದೇಶದ ಸಾಂಸ್ಕೃತಿಕ ‘ವಿವಿಧತೆಯಿಂದ ಏಕತೆ’ಯ ಮೇಲೆ ಪರಿಣಾಮವಾಗುತ್ತಿದೆ. ಈ ಪರಿಣಾಮದ ಬಗ್ಗೆ ಸಂವಿಧಾನ ಮೌನ ತಾಳಿದೆ. ಆದಿವಾಸಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆಗಿರುವ ಸಾಂಸ್ಕೃತಿಕ ಬದಲಾವಣೆಗೆ ಮತಾಂತರದ ನೇರ ಸಂಬಂಧವಿದೆ. ಈ ಮತಾಂತರದಿಂದ ಒಂದು ರೀತಿಯಲ್ಲಿ ಹಿಂದೂ ಸಂಸ್ಕೃತಿಯ ಹತ್ಯೆಯಾಗುತ್ತಿದೆ. ಆದುದರಿಂದ ಇತರ ದೇಶಗಳಂತೆಯೇ ನಾವು ಕಾನೂನುಮಾರ್ಗದಿಂದ ನಮ್ಮ ಉನ್ನತ ಸಂಸ್ಕೃತಿಯನ್ನು ಮತಾಂತರದಿಂದ ರಕ್ಷಿಸಬೇಕು. ಸಂವಿಧಾನವು ಕಾನೂನಿನ ಮಾಧ್ಯಮದಿಂದ ನಚಿಯಮ್ಮಾ ಇವರ ಸಂಗೀತದಂತಹ ಅಪರೂಪದ ಸಾಂಸ್ಕೃತಿಕ ಸಂಪತ್ತಿನ ರಕ್ಷಣೆಯನ್ನು ಮಾಡಬೇಕು, ಇಲ್ಲದಿದ್ದರೆ ಕಾಲಾಂತರದಲ್ಲಿ ಈ ಎಲ್ಲ ಸಂಪತ್ತು ನಾಶವಾಗುವುದು  !

(ಸೌಜನ್ಯ : ಸಾಪ್ತಾಹಿಕ ‘ಆರ್ಗನೈಸರ್’, ಸೆಪ್ಟೆಂಬರ್ ೨೦೨೨)