ವಾಹನದ ವಿಮೆಯನ್ನು ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಕೆಳಗಿನ ಮಹತ್ವದ ಅಂಶಗಳನ್ನು ಗಮನದಲ್ಲಿಡಿ !

೧. ‘ವಾಹನದ ವಿಮೆ’ (insurance) ಎಂದರೇನು ?

ಅಪಘಾತದಲ್ಲಿ ನಮ್ಮ ವಾಹನಕ್ಕೆ, ಇತರರ ವಾಹನಕ್ಕೆ, ಇತರರ ಆಸ್ತಿಪಾಸ್ತಿಗಳಿಗೆ  ಹಾನಿ ಆಗಿದ್ದರೆ ಅಥವಾ ಜೀವಹಾನಿ ಆಗಿದ್ದರೆ ನಿರ್ದಿಷ್ಟ ಅವಧಿಯಲ್ಲಿ ಅವುಗಳ ನಷ್ಟ ಪರಿಹಾರದ ಗ್ಯಾರಂಟಿಯನ್ನು ಕೊಡುವ ವ್ಯವಸ್ಥೆಗೆ ‘ವಿಮಾ’ ಅಥವಾ ‘ಇನ್ಶುರನ್ಸ್’ ಎಂದು ಹೇಳಬಹುದು. ಇದು ವಾಹನದ ಮಾಲೀಕ ಮತ್ತು ವಿಮಾ ಸಂಸ್ಥೆಯ (Insurance Company) ನಡುವಿನ ಒಂದು ಒಪ್ಪಂದವಾಗಿದೆ.

ಯಾವುದೇ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ನಡೆಸುವ ಮೊದಲು ಅದರ ವಿಮೆಯನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ‘ಮೋಟಾರ್ ವಾಹನ ಅಧಿನಿಯಮ ೧೯೮೮’ಕ್ಕನುಸಾರ ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳ (ಉದಾ. ಸ್ಕೂಟರ, ಕಾರ ಇತ್ಯಾದಿ) ವಿಮೆಯನ್ನು ಮಾಡಿಸಿಕೊಳ್ಳದಿರುವುದು, ದಂಡನೀಯ ಅಪರಾಧವಾಗಿದೆ. ವಿಮೆಯಿಲ್ಲದೇ ವಾಹನವನ್ನು ನಡೆಸಿದರೆ ವಾಹನದ ಮಾಲೀಕನಿಗೆ ೧ ಸಾವಿರ ರೂಪಾಯಿಗಳ ವರೆಗೆ ದಂಡ ಮತ್ತು ೩ ತಿಂಗಳ ಸೆರೆಮನೆವಾಸವಾಗಬಹುದು.

೨. ವಿಮೆಯನ್ನು ಮಾಡಿಸುವುದರಿಂದಾಗುವ ಲಾಭ

ಅ. ವಾಹನದ ಅಪಘಾತದ ತೀವ್ರತೆಗನುಸಾರ ವಾಹನದ ಮಾಲೀಕನಿಗೆ ಅಲ್ಪ ಪ್ರಮಾಣದಲ್ಲಿ ಅಥವಾ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟವನ್ನು ಸಹಿಸಬೇಕಾಗುತ್ತದೆ. ಆದುದರಿಂದ ಅಪಘಾತದ ನಂತರ ವಾಹನದ ದುರಸ್ತಿ ಸಹಜವಾಗಿ ಆಗಲು ವಾಹನದ ವಿಮೆ ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ.

ಆ. ಕೆಲವೊಮ್ಮೆ ವಾಹನಗಳ ಅಪಘಾತವಾದಾಗ, ಆ ಅಪಘಾತದಲ್ಲಿ ನಮ್ಮ ಅಥವಾ ಎದುರಿನ ವ್ಯಕ್ತಿಯ ವಾಹನಕ್ಕೆ ಹಾನಿಯಾಗುತ್ತದೆ. ಕೆಲವೊಮ್ಮೆ ಪ್ರಾಣಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಅಪಘಾತದಲ್ಲಿ ವಾಹನವು ಡಿಕ್ಕಿ ಹೊಡೆಯುವುದರಿಂದ ಇತರರ ಆಸ್ತಿಪಾಸ್ತಿಯ (ಉದಾ. ಬೇಲಿ, ಪ್ರವೇಶದ್ವಾರ ಅಥವಾ ಗೋಡೆ ಇವುಗಳ) ಹಾನಿಯಾಗಬಹುದು. ಇಂತಹ ಸಮಯದಲ್ಲಿ ಸಂಬಂಧಿತ ವಾಹನದ ವಿಮೆಯನ್ನು ಮಾಡಿಸದಿದ್ದರೆ ಈ ಎಲ್ಲ ನಷ್ಟ ಪರಿಹಾರವನ್ನು ವಾಹನದ ಮಾಲೀಕನಿಗೆ ಭರಿಸಬೇಕಾಗುತ್ತದೆ. ಇಂತಹ ಪ್ರಸಂಗದಲ್ಲಿ ಕೆಲವೊಮ್ಮೆ ನ್ಯಾಯಾಲಯದ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಮತ್ತು ಅದರಿಂದ ಹೆಚ್ಚು ಆರ್ಥಿಕ ಹಾನಿ ಮತ್ತು ಮಾನಸಿಕ ನೋವನ್ನೂ ಸಹಿಸಬೇಕಾಗುತ್ತದೆ.

ಇ. ವಾಹನ ಕಳ್ಳತನ, ಹಾಗೆಯೇ ಇತರ ಆಪತ್ಕಾಲೀನ ಪರಿಸ್ಥಿತಿಯಲ್ಲಿಯೂ ವಾಹನಗಳ ವಿಮೆಯನ್ನು ಪಡೆದುಕೊಂಡಿರುವುದು ಲಾಭದಾಯಕವಾಗಿದೆ . ವಿಮೆ ಮಾಡಿಸಿಕೊಂಡ ವಾಹನಕ್ಕೆ ಹಾನಿಯಾದರೆ ವಾಹನದ ಮಾಲೀಕನು ವಿಮಾ ಕಂಪನಿಯಿಂದ (‘ಇನ್ಶುರನ್ಸ್’ ಕಂಪನಿ’ಯಿಂದ) ಆರ್ಥಿಕ ನಷ್ಟವನ್ನು ಪಡೆಯಬಹುದು

೩. ವಿಮೆಯನ್ನು ಯಾವಾಗ ಮಾಡಿಸಿಕೊಳ್ಳಬೇಕು ?

ಹೊಸ ವಾಹನವನ್ನು ಖರೀದಿಸಿದ ನಂತರ ವಿಮೆ ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ. ಸದ್ಯ ಬಳಸುತ್ತಿರುವ ವಾಹನದ ವಿಮೆಯನ್ನು ಮೊದಲೇ ಮಾಡಿಸಿಕೊಂಡಿದ್ದರೆ, ಅದರ ಕಾಲಾವಧಿ ಮುಗಿಯುವ ಮೊದಲೇ ವಿಮೆಯ ನವೀಕರಣವನ್ನು ಮಾಡಬೇಕು. ಕೆಳಗಿನ ಪೈಕಿ ಯಾವುದಾದರೊಂದು ಪದ್ಧತಿಯಿಂದ ವಾಹನದ ವಿಮೆಯನ್ನು ಮಾಡಿಸಿಕೊಳ್ಳಬಹುದು. ಯಾವ ಪದ್ಧತಿಯಿಂದ ವಿಮೆಯನ್ನು ಮಾಡಿಸಿಕೊಳ್ಳಬೇಕು ಎಂಬುದನ್ನು ವಾಹನದ ಮಾಲೀಕನು (ಓನರ್) ನಿರ್ಧರಿಸಬೇಕು; ಆದರೆ ವಿಮೆಯನ್ನು ಮಾಡಿಸಿಕೊಳ್ಳುವುದು ಮಾತ್ರ ಕಡ್ಡಾಯವಾಗಿದೆ.

೪. ವಾಹನ ವಿಮೆಗಳ ವಿಧಗಳು

೪ ಅ. ‘ಕಾಮ್‌ಪ್ರೆಹೆನ್ಸಿವ್ ಇನ್ಶುರನ್ಸ್’ (Comprehensive Insurance) : ಈ ಪದ್ಧತಿಯ ವಿಮೆಯನ್ನು ಮಾಡಿಸಿಕೊಂಡಿದ್ದರೆ ವಾಹನದ ಅಪಘಾತವಾದರೆ ನಮ್ಮ, ಹಾಗೆಯೇ ಎದುರಿನ ವ್ಯಕ್ತಿಯ (ಇತರರ) ವಾಹನದ ನಷ್ಟಪರಿಹಾರ ಸಿಗುತ್ತದೆ. ಅಪಘಾತದಲ್ಲಿ ಎರಡೂ ವಾಹನಗಳಲ್ಲಿನ ಯಾರಿಗಾದರೂ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಯ ಹಾನಿಯಾಗಿದ್ದರೂ ಅದರ ಪರಿಹಾರವೂ ಸಿಗುತ್ತದೆ. ಆದುದರಿಂದ ಈ ವಿಮೆಯನ್ನು ಮಾಡಿಸಿಕೊಂಡಿದ್ದರೆ ಅದರಲ್ಲಿ ‘ಥರ್ಡ್ ಪಾರ್ಟಿ’ ವಿಮೆಯೂ ತಾನಾಗಿಯೇ ಬರುತ್ತದೆ.

ಈ ವಿಮೆಗೆ ‘ಸಮಗ್ರ ವಿಮೆ’ (ಸರ್ವಸಮಾವೇಶಕ ವಿಮೆ) ಎಂದೂ ಸಹ ಹೇಳಬಹುದು. ಹೊಸ ವಾಹನವನ್ನು ಖರೀದಿಸಿದ ನಂತರ ಮುಂದಿನ ೧೦ ವರ್ಷಗಳವರೆಗೆ ಈ ವಿಮೆಯನ್ನು ಮಾಡಿಸಿಕೊಳ್ಳಬಹುದು; ಆದರೆ ಅದು ಕಡ್ಡಾಯವಾಗಿಲ್ಲ.

೪ ಆ. ‘ಥರ್ಡ್ ಪಾರ್ಟಿ ಇನ್ಶುರನ್ಸ್’ (Third Party Insurance, (TPI)) : ಈ ಪದ್ಧತಿಯಿಂದ ಪ್ರತಿಯೊಂದು ವಾಹನದ ವಿಮೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ವಾಹನವನ್ನು ಖರೀದಿಸಿ ೧೦ ವರ್ಷಗಳಿಗಿಂತ ಹೆಚ್ಚು ಸಮಯವಾಗಿದ್ದರೆ ಈ ಪದ್ಧತಿಯಿಂದ ವಿಮೆಯನ್ನು ಮಾಡಿಸಿಕೊಳ್ಳಬಹುದು. ‘ಥರ್ಡ್ ಪಾರ್ಟಿ ಇನ್ಶುರನ್ಸ್’ ಇದ್ದರೆ ಅಪಘಾತದಲ್ಲಿ ಇತರರ ವಾಹನ, ಆಸ್ತಿ ಪಾಸ್ತಿಗೆ ಹಾನಿಯಾಗಿದ್ದರೆ ಅಥವಾ ಜೀವಹಾನಿಯಾಗಿದ್ದರೆ ಅದಕ್ಕೆ ನಷ್ಟ ಪರಿಹಾರ ಸಿಗುತ್ತದೆ. ಈ ಪದ್ದತಿಯಲ್ಲಿ ನಮ್ಮ ವಾಹನಕ್ಕಾದ ಹಾನಿಗೆ ವಿಮೆ ಇರುವುದಿಲ್ಲ, ಆದುದರಿಂದ ನಮ್ಮ ವಾಹನದ ನಷ್ಟವನ್ನು ನಾವೇ ಭರಿಸಬೇಕಾಗುತ್ತದೆ.

೫. ವಾಹನದ ವಿಮೆಯ ಮೊತ್ತವನ್ನು ಸಕಾಲದಲ್ಲಿ ತುಂಬುವುದರ ಮಹತ್ವ !

ವಾಹನದ ಮಾಲೀಕನು ಯಾವ ಪದ್ಧತಿಯಿಂದ ವಿಮೆಯನ್ನು ಮಾಡಿಸಿಕೊಳ್ಳಬೇಕು ಎಂದು ನಿರ್ಧರಿಸಿದ ನಂತರ ಅವನು ಪ್ರತಿ ವರ್ಷ ವಿಮಾ ಕಂಪನಿಗೆ ವಿಶಿಷ್ಟ ಮೊತ್ತವನ್ನು (ಪ್ರಿಮಿಯಮ್) ತುಂಬ ಬೇಕಾಗುತ್ತದೆ. ಈ ಮೊತ್ತವನ್ನು ಸಕಾಲದಲ್ಲಿ ತುಂಬದಿದ್ದರೆ ವಿಮಾ ಕಂಪನಿಯಿಂದ ವಾಹನದ ಅಧಿಕೃತ ತಪಾಸಣೆ (‘ಇನಸ್ಫೆಕ್ಯನ್’) ಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ವಾಹನವನ್ನು ತೆಗೆದುಕೊಂಡು ಹೋಗುವುದು, ತಪಾಸಣೆಗಾಗಿ ಹೆಚ್ಚುವರಿ ಶುಲ್ಕವನ್ನು ಕೊಡುವುದು, ಆರ್.ಸಿ.ಬುಕ್ ಪರಿಶೀಲನೆಯಂತಹ ವಿಷಯಗಳನ್ನು ಎದುರಿಸಬೇಕಾಗುತ್ತದೆ.

ಹೆಚ್ಚಿನ ವಾಹನ ಮಾಲೀಕರು ವಿಮಾ ಕಂಪನಿಗೆ ವಿಮೆಯ ಮೊತ್ತವನ್ನು ನಗದು ಸ್ವರೂಪದಲ್ಲಿ ಕೊಡುತ್ತಾರೆ, ಮತ್ತು ಕೆಲವು ಜನರು ಧನಾದೇಶ ಅಥವಾ ‘ಕಾರ್ಡ್ ಪೆಮೆಂಟ್’ ಮೂಲಕ ಜಮೆ ಮಾಡುತ್ತಾರೆ. ಕಂಪನಿಗೆ ಎಲ್ಲಿಯವರೆಗೆ ವಿಮೆಯ ಮೊತ್ತವು ಸಿಗುವುದಿಲ್ಲವೋ, ಅಲ್ಲಿಯವರೆಗೆ ವಿಮೆಯ ‘ಪಾಲಿಸಿ’ ಜಾರಿಗೆ ಬರುವುದಿಲ್ಲ. ಯಾವುದಾದರೊಂದು ಕಾರಣದಿಂದ ವಿಮೆಯ ಮೊತ್ತವು ಸಿಗದಿದ್ದರೆ, ವಿಮಾಪಾಲಿಸಿಯು ರದ್ದಾಗುತ್ತದೆ. ಆ ಕಾಲದಲ್ಲಿ ವಾಹನದ ಸಂದರ್ಭದಲ್ಲಿ ಏನಾದರು ‘ಕ್ಲೆಮ್’ ಇದ್ದರೆ ಅದು ವಾಹನದ ಮಾಲೀಕನಿಗೆ ವಿಮಾ ಕಂಪನಿಯಿಂದ ಸಿಗುವುದಿಲ್ಲ.

೬. ‘ನೊ ಕ್ಲೆಮ್ ಬೊನಸ್’ ನ ಬಗೆಗಿನ ಮಾಹಿತಿ

ವಾಹನ ಮಾಲೀಕನು ವಿಮೆಯ ಮೊತ್ತವನ್ನು ಪ್ರತಿವರ್ಷ ಸಮಯಮಿತಿಯಲ್ಲಿ ತುಂಬಿದ್ದರೆ ಮತ್ತು ಆದರೆ  ವಾಹನದ ಸಂದರ್ಭದಲ್ಲಿ ಯಾವುದೇ ಕ್ಲೆಮ್‌ವನ್ನು ಮಾಡಿರದಿದ್ದರೆ (ಅಂದರೆ ವಾಹನದ ಯಾವುದೇ ಪ್ರಕಾರದ ನಷ್ಟಪರಿಹಾರವನ್ನು ಕಂಪನಿಯಿಂದ ಕೇಳದೇ ಇದ್ದರೆ) ಆಗ ಅವನಿಗೆ ವಿಶಿಷ್ಟ ಮೊತ್ತವು ವಿಮಾ ಕಂಪನಿಯಿಂದ ‘ಬೊನಸ್’ ಎಂದು ಸಿಗುತ್ತದೆ. ಆದುದರಿಂದ ವಾಹನ ಮಾಲೀಕನು ವಿಮಾ ಕಂಪನಿಗೆ ಪಾವತಿಸುವ ವಿಮೆಯ ಮೊತ್ತದಲ್ಲಿ ಅವನಿಗೆ ರಿಯಾಯಿತಿ ಸಿಗುತ್ತದೆ. ಇದಕ್ಕೆ ‘ನೊ ಕ್ಲೆಮ್ ಬೊನಸ್’ ಎಂದು ಹೇಳುತ್ತಾರೆ. ರಿಯಾಯಿಯ ಬಗೆಗಿನ ಮಾಹಿತಿಯನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

ಈ ಬೊನಸ್ ಕೇವಲ ‘ಕಾಮ್‌ಪ್ರೆಹೆನ್ಸಿವ್ ಇನ್ಶುರನ್ಸ್’ಗೆ ಮಾತ್ರ ಸಿಗುತ್ತದೆ. ‘ಥರ್ಡ್ ಪಾರ್ಟಿ ಇನ್ಶುರನ್ಸ್’ಗೆ ಸಿಗುವುದಿಲ್ಲ. ಮೊದಲಿನ ಪಾಲಿಸಿಯ ಸಮಯಮಿತಿ ಮುಗಿದ ನಂತರ ೩ ತಿಂಗಳ ವರೆಗೆ ‘ಬೊನಸ್’ ಸಿಗುತ್ತದೆ. ೩ ತಿಂಗಳುಗಳಲ್ಲಿ ಪಾಲಿಸಿಯ ನವೀಕರಣವನ್ನು ಮಾಡದಿದ್ದರೆ ಬೊನಸ್ ಸಿಗುವುದಿಲ್ಲ.

೭. ಇತರರಿಂದ (ಸೆಕಂಡಹ್ಯಾಡ್) ವಾಹನವನ್ನು ಖರೀದಿಸುವಾಗ ವಿಮೆ ಹಸ್ತಾಂತರಿಸು ಪ್ರಕ್ರಿಯೆ

ವಾಹನವನ್ನು ಮೊದಲು ನಮ್ಮ ಹೆಸರಿಗೆ ಮಾಡಿಕೊಳ್ಳಬೇಕು. ನಂತರ ನಮ್ಮ ಹೆಸರಿರುವ ‘ಆರ್.ಸಿ. ಬುಕ್’ ಮತ್ತು ಮೊದಲಿನ ವಿಮಾ ‘ಪಾಲಿಸಿ’ಯನ್ನು ವಿಮಾ ಕಂಪನಿಗೆ ತೋರಿಸಿ ವಿಮೆಯನ್ನು ತಮ್ಮ ಹೆಸರಿನಲ್ಲಿ ಮಾಡಿಸಿಕೊಳ್ಳಬೇಕು. ವಾಹನವನ್ನು ನಮ್ಮ ಹೆಸರಿಗೆ ಮಾಡಿಸಿಕೊಂಡ ೧೪ ದಿನಗಳಲ್ಲಿ ಮೇಲಿನ ವಿಮೆ ಪಾಲಿಸಿ ಹಸ್ತಾಂತರವಾಗುವುದು ಅಪೇಕ್ಷಿತವಾಗಿರುತ್ತದೆ, ಇಲ್ಲದಿದ್ದರೆ ವಾಹನದ ಅಧಿಕೃತ ತಪಾಸಣೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆ ಸಮಯದಲ್ಲಿ ಏನಾದರೂ ‘ಕ್ಲೆಮ್’ ಇದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಬಾರಿ ‘ಆರ್.ಸಿ. ಬುಕ್’ ಸಿಗಲು ಬಹಳಷ್ಟು ಸಮಯ ಬೇಕಾಗುತ್ತದೆ. ಆದುದರಿಂದ ‘ಆರ್.ಸಿ. ಬುಕ್’ನ ಪಾವತಿಯನ್ನು ತೋರಿಸಿ ೧೪ ದಿನಗಳಲ್ಲಿ ವಿಮೆಯನ್ನು ಹಸ್ತಾಂತರಿಸಿಕೊಳ್ಳುವುದು ಅನುಕೂಲವಾಗಿದೆ.

ಪ್ರತಿಯೊಬ್ಬ ವಾಹನ ಮಾಲೀಕನು ತನ್ನ ವಾಹನದ ವಿಮೆ ಇದೆಯಲ್ಲ ಮತ್ತು ಪ್ರತಿವರ್ಷ ಸಕಾಲದಲ್ಲಿ ಹಣತುಂಬಿ ಅದರ ರಿನಿವಲ್ ಮಾಡಲಾಗಿದೆಯಲ್ಲ, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿಮೆಯನ್ನು ಮಾಡಿಸಿಕೊಳ್ಳದಿದ್ದರೆ ಅಥವಾ ಅದರ ರಿನಿವಲ್ ಮಾಡಿರದಿದ್ದರೆ, ಅದರ ಎಲ್ಲ ಪ್ರಕ್ರಿಯೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ವಿಮೆಯ ಮೂಲ ಕಾಗದಪತ್ರಗಳನ್ನು (ಒರಿಜನಲ್), ಹಾಗೆಯೇ ಛಾಯಾಂಕಿತ (ಝೆರಾಕ್ಸ್) ಪ್ರತಿಗಳನ್ನು ವಾಹನದಲ್ಲಿಡಬೇಕು ಮತ್ತು ಒಂದು ಛಾಯಾಂಕಿತ (ಝೆರಾಕ್ಸ್) ಪ್ರತಿಯನ್ನು ಮನೆಯಲ್ಲಿಯೂ ಇಡಬೇಕು.

೮. ವಾಹನ ಅಪಘಾತವಾದರೆ ಏನು ಮಾಡಬೇಕು ?

ವಾಹನದ ಅಪಘಾತವಾದಾಗ ಕೂಡಲೇ ಅದರ ಕಲ್ಪನೆಯನ್ನು ವಿಮಾ ಕಂಪನಿಗೆ ಲಿಖಿತ ಸ್ವರೂಪದಲ್ಲಿ ಕೊಡಬೇಕು. ವಾಹನದ ದೊಡ್ಡ ಹಾನಿಯಾಗಿದ್ದರೆ, ಜೀವಹಾನಿಯಾಗಿದ್ದರೆ ಎದುರಿನ ವ್ಯಕ್ತಿಯ ತಪ್ಪು ಇದ್ದರೆ ಅಥವಾ ಕೆಲವು ವಿವಾದಗಳಿದ್ದರೆ ಕೂಡಲೇ ಪೊಲೀಸ್ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು ಮತ್ತು ಆ ವಾಹನವನ್ನು ಬಳಸದೇ ‘ಗ್ಯಾರೇಜ್’ನಲ್ಲಿಡಬೇಕು. ವಾಹನದ ಹಾನಿಯ ಸಂಭಾವ್ಯ ಖರ್ಚು (ಎಸ್ಟಿಮೆಟ್), ‘ಕ್ಲೆಮ್ ಫಾರ್ಮ್’, ‘ಆರ್.ಸಿ. ಬುಕ್’, ವಾಹನಚಾಲನಕನ ವಾಹನ ಪರವಾನಗಿಯ ಪ್ರತಿ, ಬ್ಯಾಂಕ್ ಮಾಹಿತಿ ಮುಂತಾದ ಕಾಗದಪತ್ರಗಳನ್ನು ಸಂಭಾವ್ಯ ಖರ್ಚಿನ ಅರ್ಜಿಯೊಂದಿಗೆ ಕೊಡಬೇಕು. ಈ ಕಾಗದಪತ್ರಗಳನ್ನು ಸಲ್ಲಿಸಿದ ನಂತರ ವಿಮಾ ಕಂಪನಿಯಿಂದ ಓರ್ವ ಸರ್ವೇಯರ್ ಬಂದು ವಾಹನ ಪರಿಶೀಲಿಸುತ್ತಾರೆ ಮತ್ತು ವಾಹನದ ಒಟ್ಟು ನಷ್ಟದಲ್ಲಿ ವಿಮಾ ಕಂಪನಿ ಎಷ್ಟು ಪರಿಹಾರ ಕೊಡಬಹುದು, ಎಂಬ ವರದಿಯನ್ನು ನೀಡುತ್ತಾರೆ ಮತ್ತು ಅದಕ್ಕನುಸಾರ ವಾಹನದ ಮಾಲೀಕನಿಗೆ ಪರಿಹಾರ ಸಿಗುತ್ತದೆ.