ಮುಖ್ಯನ್ಯಾಯಾಧೀಶರ ಹುದ್ದೆಯ ಕಾಲಾವಧಿ ಎಷ್ಟಿರಬೇಕು ?

ಕು. ಸಾಯಲಿ ಡಿಂಗರೆ

೨೭ ಆಗಸ್ಟ್ ೨೦೨೨ ರಂದು ನ್ಯಾಯಾಧೀಶ ಉದಯ ಲಳಿತ ಇವರು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರೆಂದು ಪ್ರಮಾಣವಚನ ಸ್ವೀಕರಿಸಿದ್ದು ಅವರ ಅಧಿಕಾರಾವಧಿ ಕೇವಲ ೭೪ ದಿನಗಳದ್ದಾಗಿದೆ. ಅಂದರೆ ೮ ನವೆಂಬರ್ ೨೦೨೨ ರಂದು ಅವರು ಈ ಹುದ್ದೆಯಿಂದ ನಿವೃತ್ತರಾಗುತ್ತಾರೆ. ‘ನ್ಯಾಯಕ್ಷೇತ್ರದಲ್ಲಿ ಮುಖ್ಯನ್ಯಾಯಾಧೀಶ ಎಂಬ ಸರ್ವೋಚ್ಚ ಹುದ್ದೆಯ ವ್ಯಕ್ತಿಗೆ ಕೇವಲ ಎರಡುವರೆ ತಿಂಗಳ ಅಧಿಕಾರಾವಧಿ ಹೇಗೆ?’, ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಬಹುದು. ಆದ್ದರಿಂದ ಇದು ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿಯ ವಿಷಯದಲ್ಲಿ ಮಾಡಿರುವ ವಿಚಾರವಿಮರ್ಶೆ !

೧. ಇಂದಿನ ವರೆಗಿನ ೪೮ ರಲ್ಲಿ ೨೦ ಮುಖ್ಯ ನ್ಯಾಯಾಧೀಶರಿಗೆ ೧ ವರ್ಷಕ್ಕಿಂತಲೂ ಕಡಿಮೆ ಅಧಿಕಾರಾವಧಿ

ಇದು ವರೆಗೆ ದೇಶಕ್ಕೆ ೪೮ ಮುಖ್ಯನ್ಯಾಯಾಧೀಶರು ಲಭಿಸಿದ್ದಾರೆ. ಕೆಳಗೆ ಕೊಟ್ಟಿರುವ ಕೋಷ್ಟಕದಿಂದ ಅವರಲ್ಲಿ ೨೦ ಅಂದರೆ ಅರ್ಧದಷ್ಟು ಮುಖ್ಯನ್ಯಾಯಾಧೀಶರಿಗೆ ೧ ವರ್ಷಕ್ಕಿಂತಲೂ ಕಡಿಮೆ ಸಮಯ ಕಾರ್ಯನಿರ್ವಹಿಸಲು ಸಿಕ್ಕಿದೆ, ಎಂಬುದು ತಿಳಿಯುತ್ತದೆ. ಈ ಪರಿಸ್ಥಿತಿಯು ವಿಚಾರ ಮಾಡುವಂತಿದೆ.

(ಆಧಾರ : ವಿಕಿಪಿಡಿಯಾ)

೨. ನೇತೃತ್ವವು ವರ್ಷಂಪ್ರತಿ ಬದಲಾಗುತ್ತಿದ್ದರೆ ದೀರ್ಘಕಾಲದ ಸುಧಾರಣೆಯ ಹೊಣೆಯನ್ನು ಹೊರುವವರು ಯಾರು ?

ನ್ಯಾಯವ್ಯವಸ್ಥೆಯು ಪ್ರಜಾಪ್ರಭುತ್ವದ ಒಂದು ದೊಡ್ಡ ಆಧಾರವಾಗಿದೆ. ಈ ಮೇಲಿನ ಕೋಷ್ಟಕವನ್ನು ನೋಡಿದರೆ ೧೭ ದಿನ, ೨೯ ದಿನ, ೩೫ ದಿನಗಳಷ್ಟು ಕಡಿಮೆ ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ ಮುಖ್ಯನ್ಯಾಯಾಧೀಶರಿದ್ದಾರೆ. ಮುಖ್ಯನ್ಯಾಯಾಧೀಶರ ಈ ಹುದ್ದೆಯು ಕೇವಲ ಹೆಸರಿಗೆ ಮಾತ್ರವಿರದೇ ಇದುವರೆಗೆ ತುಂಬಾ ದೊಡ್ಡ ಹಾಗೂ ಕ್ರಾಂತಿಕಾರಿ ನಿರ್ಣಯಗಳನ್ನು ಆ ಪೀಠದಿಂದ ನೀಡಲಾಗಿದೆ. ಹೀಗಿರುವಾಗ ‘ರಾಷ್ಟ್ರೀಯ ಸ್ತರದ ಪ್ರಭಾವ ಬೀರುವ ಪ್ರಕರಣಗಳ ಅಭ್ಯಾಸ ಮತ್ತು ಅವುಗಳ ವಿಷಯದಲ್ಲೇನಾದರೂ ಒಳ್ಳೆಯದನ್ನು ಮಾಡಲು ಈ ಅವಧಿಯು ನಿಜವಾಗಿಯೂ ಸಾಕೆನಿಸುತ್ತದೆಯೇ ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಅವಧಿಯಲ್ಲಿ ಬರುವ ಸರಕಾರಿ ರಜೆಗಳು ಬೇರೆ ! ವ್ಯಕ್ತಿ ಎಷ್ಟೇ ಅನುಭವಿಯಾಗಿದ್ದರೂ ಪರಿಪಕ್ವ ಹಾಗೂ ಕರ್ತವ್ಯಶೀಲನಾಗಿದ್ದರೂ, ಇಷ್ಟು ಮಹತ್ವದ ಸ್ಥಾನದಲ್ಲಿ ಸ್ಥಿರವಾಗಿ ಕುಳಿತುಕೊಳ್ಳಲು ಕೆಲವು ದಿನಗಳು ಅಥವಾ ತಿಂಗಳುಗಳು ಖಂಡಿತವಾಗಿಯೂ ಸಾಕಾಗುವುದಿಲ್ಲ ಎಂಬುದು ನಿಜ. ವಿಶೇಷವಾಗಿ ಎಲ್ಲಿ ಬಹಳಷ್ಟು ಮಾಡುವಂತಿರುವಲ್ಲಿ ನೇತೃತ್ವವೇ ಹೀಗೆ ವರ್ಷಾನುವರ್ಷ ಬದಲಾಗುತ್ತಿದ್ದರೆ ಅಲ್ಲಿನ ಅಡಚಣೆಗಳು, ಕಾರ್ಯಪದ್ಧತಿಯಲ್ಲಿನ ಕೊರತೆ ಹಾಗೂ ವ್ಯವಸ್ಥೆಯನ್ನು ಸುಧಾರಿಸುವ ಅಭಿಯಾನಗಳ ಹೊಣೆಯನ್ನು ಯಾರು ವಹಿಸುವರು ?

ಮುಖ್ಯನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯದ ಆಡಳಿತದಲ್ಲಿನ ಮುಖ್ಯಸ್ಥರಾಗಿರುತ್ತಾರೆ. ಹೆಚ್ಚು ಸಮಯ ಸಿಕ್ಕಿದರೆ ಅವರು ಹೆಚ್ಚು ಅಭ್ಯಾಸಪೂರ್ಣ ಕೆಲಸ ಮಾಡಬಲ್ಲರು. ಅಷ್ಟು ಮಾತ್ರವಲ್ಲ ಸ್ವಲ್ಪ ದಿನ ಕೆಲಸ ಮಾಡಲು ಸಿಕ್ಕಿದರೂ ಅವರಿಗೆ ಎಲ್ಲವೂ ಪರಿಚಿತವಿರುವುದರಿಂದ ಅವರು ನಿಶ್ಚಿತವಾಗಿ ಸಾಕಷ್ಟು ಕಾರ್ಯವನ್ನು ಮಾಡಬಹುದು. ಅರ್ಜಿಗಳಿಗೆ ನಿರ್ಣಯ ನೀಡುವುದರ ಜೊತೆಗೆ ಅವರು ನ್ಯಾಯವ್ಯವಸ್ಥೆಯಲ್ಲಿ ಆಡಳಿತಾತ್ಮಕವಾಗಿಯೂ ಸುಧಾರಣೆ ಮಾಡಬಹುದು. ಅದಕ್ಕೆ ಮಾತ್ರ ತೀವ್ರ ಇಚ್ಛಾಶಕ್ತಿ ಬೇಕಾಗುತ್ತದೆ !

೩. ಕಾರ್ಯಕಲಾಪಗಳಿಗೆ ಕಡಿಮೆ ಸಮಯ, ಖಾಲಿ ಹುದ್ದೆಗಳು ಮತ್ತು ಬಾಕಿ ಇರುವ ಖಟ್ಲೆಗಳ ಹೆಚ್ಚುತ್ತಿರುವ ಅಂಕಿ ಅಂಶಗಳು !

೨೦೧೯ ರಲ್ಲಿ ಸರ್ವೋಚ್ಚ ನ್ಯಾಯಾಲಯದ ಕಾರ್ಯಕಲಾಪವು ಕೇವಲ ೧೩೮ ದಿನಗಳಷ್ಟೆ ನಡೆದಿತ್ತು. ಉಳಿದ ದಿನಗಳಲ್ಲಿ ರಜೆಯಿತ್ತು. ಯಾವಾಗಲೂ ಸರ್ವೋಚ್ಚ ನ್ಯಾಯಾಲಯದ ಕಾರ್ಯಕಲಾಪವು ೧೮೦ ದಿನಗಳು ಮತ್ತು ಮುಂಬಯಿ ಉಚ್ಚ ನ್ಯಾಯಾಲಯದ ಕಾರ್ಯವು ೨೧೦ ದಿನಗಳಷ್ಟೇ ನಡೆಯುತ್ತವೆ. ಸರಕಾರಿ ವ್ಯವಸ್ಥೆಯಲ್ಲಿ ಬೇಸಿಗೆಯಲ್ಲಿ ೨ ತಿಂಗಳ ರಜೆ, ನವರಾತ್ರಿ, ದೀಪಾವಳಿ, ಕ್ರಿಸಮಸ್, ಹೋಳಿ ಇತ್ಯಾದಿ ಅನೇಕ ದೀರ್ಘ ಕಾಲದ ರಜೆಗಳನ್ನು ನ್ಯಾಯಾಲಯಗಳು ಮಾತ್ರ ಪಡೆಯಬಹುದು. ದೇಶದಲ್ಲಿ ಉಳಿದ ಎಲ್ಲ ವ್ಯವಸ್ಥೆಗಳು ವರ್ಷವಿಡೀ ಕಾರ್ಯನಿರತವಾಗಿರುತ್ತವೆ. ಸೈನಿಕರು, ಆಧುನಿಕ ವೈದ್ಯರು ಇವರಂತೂ ಅಖಂಡವಾಗಿ ಕಾರ್ಯನಿರತರಾಗಿರುತ್ತಾರೆ. ಹೀಗಿರುವಾಗ ಮತ್ತು ಖಟ್ಲೆಗಳು ಪ್ರಲಂಬಿತವಾಗಿರುವಾಗ ನ್ಯಾಯಾಲಯವು ಇಷ್ಟು ರಜೆಗಳನ್ನು ಏಕೆ ತೆಗೆದುಕೊಳ್ಳಬೇಕು ?

ಎನ್ನುವ ಪ್ರಶ್ನೆಗಳು ನಡುನಡುವೆ ಉದ್ಭವಿಸುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕೆಲವು ನ್ಯಾಯಾಧೀಶರು ರಜೆಯ ದಿನಗಳಲ್ಲಿಯೂ ಕೆಲಸ ಮಾಡುತ್ತಾರೆ. ನ್ಯಾಯಾಲಯದಲ್ಲಿ ಅರ್ಜಿದಾರರ ಹೇಳಿಕೆಗಳನ್ನು ಕೇಳುವುದರೊಂದಿಗೆ ಆಡಳಿತ ಸ್ತರದಲ್ಲಿ ವಿಷಯಗಳನ್ನು ಬಗೆಹರಿಸುವುದು, ಖಟ್ಲೆಗಳ ಅಧ್ಯಯನ ಮಾಡುವುದು, ತೀರ್ಪುಪತ್ರಗಳ ವಾಚನ ಮತ್ತು ಲೇಖನಗಳನ್ನು ಮಾಡುವುದು ಇತ್ಯಾದಿ ಅನೇಕ ಮಹತ್ವದ ಕೆಲಸಗಳಿರುತ್ತವೆ. ಅವುಗಳನ್ನು ರಜೆಯ ಸಮಯದಲ್ಲಿ ಮಾಡಲಾಗುತ್ತದೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನ್ಯಾಯವ್ಯವಸ್ಥೆಯಲ್ಲಿ ಕಾರ್ಯಕಲಾಪಗಳ ವ್ಯಾಪ್ತಿ ಎಷ್ಟೇ ದೊಡ್ಡದಾಗಿದ್ದರೂ, ಕೋಟಿಗಟ್ಟಲೆ ಖಟ್ಲೆಗಳು ಇತ್ಯರ್ಥವಾಗದಿರುವುದು ಒಪ್ಪಲಾಗದು !

ನ್ಯಾಯಾಲಯದಲ್ಲಿನ ಖಾಲಿ ಹುದ್ದೆಗಳು ಕೂಡ ಅಡಚಣೆಗೆ ಪುಷ್ಟಿ ನೀಡುತ್ತದೆ. ಪ್ರತಿವರ್ಷ ೧೦-೧೨ ನ್ಯಾಯಾಧೀಶರು ನಿವೃತ್ತರಾಗುತ್ತಾರೆ ಹಾಗೂ ಅಷ್ಟೇ ಹೊಸಬರ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಖಾಲಿ ಹುದ್ದೆಗಳ ಸಂಖ್ಯೆ ಎಷ್ಟಿತ್ತೋ ಅಷ್ಟೇ ಉಳಿಯುತ್ತದೆ. ರಜೆಗಳು, ಖಟ್ಲೆಗಳ ಹೆಚ್ಚುತ್ತಿರುವ ಸಂಖ್ಯೆ ಮತ್ತು ಖಾಲಿಯಾಗುವ ಹುದ್ದೆಗಳ ಸಂಖ್ಯೆಗಳ ತಾಳಮೇಳವು ಇಂದಿನವರೆಗೂ ಆಗಿರುವುದು ಕಾಣಿಸುವುದಿಲ್ಲ.

೪. ಮಾಡುವ ಕೆಲಸಗಳ ಫಲಿತಾಂಶದ ಲೆಕ್ಕಾಚಾರವಿಲ್ಲ !

ನ್ಯಾಯಾಧೀಶರ ಕಾರ್ಯಕಲಾಪಗಳಿಗೆ ಎಷ್ಟು ದಿನಗಳು ಸಿಗುತ್ತವೆಯೋ, ಅದರಲ್ಲಿಯೂ ಯಾವುದೇ ಒಂದು ಪ್ರಕರಣದ ಆಲಿಕೆಯನ್ನು ಎಷ್ಟು ಅವಧಿಯಲ್ಲಿ ಪೂರ್ಣಗೊಳಿಸಬೇಕು ? ಎಂಬುದಕ್ಕೆ ನಿರ್ಧಿಷ್ಟ ಸಮಯಮಿತಿಯಿಲ್ಲ. ಆದ್ದರಿಂದ ಖಟ್ಲೆ ಎಷ್ಟು ಸಮಯ ನಡೆಯಬಹುದು ? ಎಂಬುದರ ಬಗ್ಗೆ ಯಾರಿಗೂ ಕಲ್ಪನೆ ಇಲ್ಲ. ಎಲ್ಲ ಅತ್ಯಾಧುನಿಕ ಉಪಕರಣಗಳನ್ನು ಉಪಯೋಗಿಸುವ ಇಂದಿನ ನ್ಯಾಯವಾದಿಗಳೂ ‘ಅಂದಾಜು-ಭವಿಷ್ಯವಾಣಿ’ಯ ಆಟವನ್ನೇ ಆಡಬೇಕಾಗುತ್ತದೆ. ಅಮೇರಿಕಾದಲ್ಲಿ ಅಲ್ಲಿನ ಸರ್ವೋಚ್ಚ ನ್ಯಾಯಾಲಯವು ಯುಕ್ತಿವಾದಕ್ಕಾಗಿ ಎರಡೂ ಪಕ್ಷಗಳಿಗೆ ೩೦ ನಿಮಿಷಗಳನ್ನು ನೀಡುತ್ತದೆ, ಆ ಖಟ್ಲೆಯು ಎಷ್ಟೇ ಮಹತ್ವದ್ದಾಗಿರಲಿ ! ಅಮೇರಿಕಾ ಮತ್ತು ಇತರ ಪಾಶ್ಚಾತ್ಯ ದೇಶಗಳ ನ್ಯಾಯಾಲಯಗಳಲ್ಲಿ ಹೆಚ್ಚಿನ ತರ್ಕಗಳು ಲಿಖಿತ ಹಾಗೂ ಸಂಕ್ಷಿಪ್ತ ಮನವಿಯ ಮೂಲಕ ಆಗುತ್ತವೆ. ಭಾರತದಲ್ಲಿ ಬಹಳಷ್ಟು ನ್ಯಾಯವಾದಿಗಳು ಮೌಖಿಕ ಯುಕ್ತಿವಾದಕ್ಕೆ ಆದ್ಯತೆಯನ್ನು ನೀಡುತ್ತಾರೆ, ಅದರಿಂದ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸಬೇಕಾಗುತ್ತದೆ. ಇಂದು ದೇಶದ ವಿವಿಧ ನ್ಯಾಯಾಲಯಗಳಲ್ಲಿ ೪ ಕೋಟಿ ೭ ಲಕ್ಷಗಳಿಗಿಂತಲೂ ಹೆಚ್ಚು ಖಟ್ಲೆಗಳು ಇತ್ಯರ್ಥವಾಗದೇ ಉಳಿದಿದೆ. ಅದರ ಮಹತ್ವದ ಒಂದು ಕಾರಣ ಇದು ಸಹ ಆಗಿದೆ. ಎಷ್ಟು ಗಂಟೆ ಕೆಲಸ ಮಾಡಿದೆ ಎಂಬುದರ ನಿಶ್ಚಿತವಾದ ಲೆಕ್ಕಾಚಾರವಿಲ್ಲ ಹಾಗೂ ಅದರ ಫಲಶ್ರುತಿ ಎಷ್ಟು ? ಅದರಿಂದ ಎಷ್ಟು ವಿಷಯಗಳು ನೆನೆಗುದಿಯಲ್ಲಿವೆ ? ಎಷ್ಟು ಬಗೆಹರಿದವು ? ಎಂಬುದರ ಯಾವುದೇ ಲೆಕ್ಕವಿಲ್ಲ. ಆದ್ದರಿಂದ ಸರಳವಾದ ಅರ್ಜಿಗಳು ಕೂಡ ವರ್ಷಾನುವರ್ಷ ನಡೆಯುತ್ತಿರುತ್ತವೆ !

೫. ನಿವೃತ್ತಿವೇತನ ಹಾಗೂ ನಿವೃತ್ತಿಯ ನಂತರ ವಿವಿಧ ಆಯೋಗಗಳಲ್ಲಿ ಮಹತ್ವದ ಹುದ್ದೆಗಳಲ್ಲಿ ನೇಮಕಗೊಳ್ಳುವುದೇ ಮುಖ್ಯ ಉದ್ದೇಶವಾಗಬಾರದು !

ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರ ಮಾಸಿಕವೇತನ ಲಕ್ಷಗಳಲ್ಲಿರುತ್ತದೆ. ಇತ್ತೀಚೆಗಷ್ಟೆ ಶೆಟ್ಟಿ ಆಯೋಗವು ಅದನ್ನು ಇನ್ನೂ ಹೆಚ್ಚು ಮಾಡಿದೆ. ಇತರ ರೀತಿಯ ಆರ್ಥಿಕ ಸೌಲಭ್ಯಗಳು ಹಲವಾರು ಇರುತ್ತವೆ. ದೆಹಲಿಯ ಮಹತ್ವದ ಸ್ಥಳದಲ್ಲಿ ನಿವಾಸ, ವಾಹನ, ನೌಕರ-ಸಿಬ್ಬಂದಿ, ‘ಝೆಡ್’ ಅಥವಾ ‘ಝೆಡ್ ಪ್ಲಸ್’ ಮಟ್ಟದ ಸುರಕ್ಷೆ, ಇತ್ಯಾದಿ. ನಿವೃತ್ತಿಯ ನಂತರವೂ ಮುಖ್ಯನ್ಯಾಯಾಧೀಶರಿಗೆ ೧೬ ಲಕ್ಷದ ೮೦ ಸಾವಿರ ರೂಪಾಯಿಗಳ ವಾರ್ಷಿಕ ನಿವೃತ್ತಿವೇತನ ಸಿಗುತ್ತದೆ. ಇದರ ಜೊತೆಗೆ ಅವರಿಗೆ ಸುರಕ್ಷೆಯೂ ಇರುತ್ತದೆ. ನಿವೃತ್ತ ಮುಖ್ಯನ್ಯಾಯಾಧೀಶರಿಗೆ ಕೇಂದ್ರ ಸರಕಾರದ ವಿವಿಧ ಆಯೋಗಗಳು ಮತ್ತು ಸಮಿತಿಗಳಲ್ಲಿ ಅಧಿಕಾರದ ಹುದ್ದೆ ಸಿಗುತ್ತದೆ. ‘ರಾಷ್ಟ್ರೀಯ ಮಾನವ ಹಕ್ಕು ಆಯೋಗ’, ಲೋಕಪಾಲ ಇತ್ಯಾದಿ ಸಂಸತ್ತು ಕಾನೂನು ಪ್ರಕಾರ ಸ್ಥಾಪಿಸಿರುವ ಸಂಸ್ಥೆಗಳ ಮೂಲ ರಚನೆಯಲ್ಲಿಯೇ ಆ ಹುದ್ದೆಗಳಿಗೆ  ಸರ್ವೋಚ್ಚ ನ್ಯಾಯಾಲಯದಲ್ಲಿನ ಮಾಜಿ ನ್ಯಾಯಾಧೀಶರು ಅಥವಾ ಮಾಜಿ ಮುಖ್ಯನ್ಯಾಯಾಧೀಶರನ್ನೇ ನೇಮಿಸಬೇಕೆಂಬ ವ್ಯವಸ್ಥೆ ಇದೆ. ಮುಖ್ಯ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದರೆ, ಇಂತಹ ಸಂಸ್ಥೆಗಳಲ್ಲಿ ಅಧ್ಯಕ್ಷರ ಹುದ್ದೆ ಸಿಗುತ್ತದೆ. ಅವರ ಮಾನಧನವೂ ಹೆಚ್ಚಿರುತ್ತದೆ. ನ್ಯಾಯಾಧೀಶರೆಂದು ನಿವೃತ್ತರಾದರೆ, ೧೫ ಲಕ್ಷ ವಾರ್ಷಿಕ ನಿವೃತ್ತಿವೇತನ ಇರುತ್ತದೆ ಹಾಗೂ ವಿವಿಧ ಆಯೋಗಗಳು ಮತ್ತು ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಸ್ವೀಕರಿಸಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು ಮತ್ತು ನ್ಯಾಯಾಧೀಶರ ಈ ೨ ಹುದ್ದೆಗಳಿಂದ ನಿವೃತ್ತವಾಗುವುದರಲ್ಲಿ ಬಹುದೊಡ್ಡ ವ್ಯತ್ಯಾಸವಿದೆ.

೬. ಒಡಿಶಾ ಉಚ್ಚ ನ್ಯಾಯಾಲಯದಲ್ಲಿ ಕೇವಲ ೩ ದಿನಗಳಿಗೆ ಮುಖ್ಯ ನ್ಯಾಯಾಧೀಶರ ನೇಮಕ !

‘ಸರ್ವೋಚ್ಚ ನ್ಯಾಯಾಲಯದ ಸ್ಥಿತಿ ಹೀಗಿದ್ದಲ್ಲಿ ಕೆಳಗಿನ ನ್ಯಾಯಾಲಯಗಳ ಸ್ಥಿತಿ ಹೇಗಿರಬಹುದು ?’, ಎಂದು ಜನ ಸಾಮಾನ್ಯರ ಮನಸ್ಸಿನಲ್ಲಿ ವಿಚಾರ ಬರಬಹುದು. ಇದಕ್ಕೆ ಒಡಿಶಾ ಉಚ್ಚನ್ಯಾಯಾಲಯದ ಒಂದು ಉದಾಹರಣೆ ಸಾಕು. ನ್ಯಾಯಾಧೀಶ ಬಿಲಾಲ ನಾಝಕೀ ಇವರು ಒಡಿಶಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದರು. ಮುಖ್ಯ ನ್ಯಾಯಾಧೀಶರೆಂದು ಅವರ ಅಧಿಕಾರಾವಧಿಯು ಕೇವಲ ೩ ದಿನಗಳದ್ದಾಗಿತ್ತು ! ಆ ದಿನ ಶನಿವಾರ, ರವಿವಾರ ಮತ್ತು ಸೋಮವಾರವಾಗಿತ್ತು ! ಅಂದರೆ ಎರಡೇ ಕೆಲಸದ ದಿನಗಳು ! ನಂತರ ಮಾತ್ರ ಅವರು ಅಲಂಕರಿಸಿದ ಹುದ್ದೆಗಳು ವಿಚಾರ ಮಾಡುವಂತಿದೆ. ಅವರು ಜಮ್ಮು-ಕಾಶ್ಮೀರ ಮತ್ತು ಬಿಹಾರ ಈ ರಾಜ್ಯಗಳ ಮಾನವಾಧಿಕಾರ ಆಯೋಗದ ಅಧ್ಯಕ್ಷರಾಗಿದ್ದರು. ಭಾರತ ಸರಕಾರ ಸ್ಥಾಪಿಸಿದ ಹಜ್ ಆಯೋಗಕ್ಕೂ ಅವರು ಅಧ್ಯಕ್ಷರಾಗಿದ್ದರು. ಇದರ ಜೊತೆಗೆ ಅನೇಕ ವಿವಿಧ ಆಯೋಗಗಳಿಗೆ ಅವರ ನೇಮಕ ಆಗಿತ್ತು. ಈ ಉದಾಹರಣೆಯಿಂದ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಯಾವ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ, ಎಂಬ ಪ್ರಶ್ನೆ ಉದ್ಭವಿಸುತ್ತದೆ !

೭. ದೇಶದಾದ್ಯಂತ ಎಲ್ಲ ಕ್ಷೇತ್ರಗಳಿಗೆ ಕಾಲಮಿತಿಯಿರುವಾಗ ಸರ್ವೋಚ್ಚ ನ್ಯಾಯಾಲಯಕ್ಕೆ ಏಕೆ ಸಮಯಮಿತಿಯಿಲ್ಲ?

ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳು ಅನ್ವಯವಾಗುತ್ತವೆ. ಜನಪ್ರತಿನಿಧಿಗಳು ೫ ವರ್ಷಗಳಿಗೆ ಆರಿಸಿ ಬರುತ್ತಾರೆ. ಸರಕಾರಿ ಅಧಿಕಾರಿಗಳಿಗೆ ೩ ವರ್ಷಗಳ ನಂತರ ವರ್ಗಾವಣೆಯಾಗುತ್ತದೆ. ಜಿಲ್ಲಾ ನ್ಯಾಯಾಧೀಶರಿಗೂ ೩ ವರ್ಷಗಳ ನಂತರ ಸ್ಥಳಾಂತರವಾಗುತ್ತದೆ. ಒಂದು ವೇಳೆ ಇತರ ಎಲ್ಲಾ ಕ್ಷೇತ್ರಗಳಿಗೆ ನಿಶ್ಚಿತ ಸಮಯಮಿತಿ ಇದೆ, ಕೆಳಗಿನ ನ್ಯಾಯಾಲಯದ ನ್ಯಾಯಾಧೀಶರಿಗೂ ೩ ವರ್ಷದ ಅವಧಿ ನಿಶ್ಚಿತವಿರುವಾಗ ಆ ನಿಲುವು ಮುಖ್ಯ ನ್ಯಾಯಾಧೀಶರಿಗೆ ಏಕೆ ಅನ್ವಯಿಸುವುದಿಲ್ಲ ? ಮುಖ್ಯ ನ್ಯಾಯಾಧೀಶರ ಹುದ್ದೆಗೂ ಕಾಲಾವಧಿಯನ್ನು ನಿರ್ಧರಿಸಬೇಕೆಂಬ ಬೇಡಿಕೆಯು ಅಯೋಗ್ಯವಲ್ಲ.

೮. ಮುಖ್ಯನ್ಯಾಯಾಧೀಶರಿಗೆ ಬಹಳಷ್ಟು ಕಾರ್ಯ ಮಾಡಲು ಅವಕಾಶ ಸಿಗಲು ಸಮಯಮಿತಿ ಇರಬೇಕು !

ನಿವೃತ್ತರಾಗುವ ಮುಖ್ಯನ್ಯಾಯಾಧೀಶರು ಅವರ ಉತ್ತರಾಧಿಕಾರಿಯೆಂದು ಸರ್ವೋಚ್ಚ ನ್ಯಾಯಾಲಯದಲ್ಲಿನ ಹಿರಿಯ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಬೇಕಾಗುತ್ತದೆ. ಸೇವೆಯ ಅವಧಿಗನುಸಾರವೆ ನೇಮಕವಾಗುತ್ತಿದ್ದರೂ, ನಿವೃತ್ತಿಯ ದಿನಾಂಕವು ನಿಶ್ಚಿತವಾಗಿರುತ್ತದೆ. ಮುಖ್ಯನ್ಯಾಯಾಧೀಶರು ವಯಸ್ಸಿನ ೬೫ ನೆ ವರ್ಷ ಪೂರ್ಣವಾದಾಗ ನಿವೃತ್ತವಾಗುತ್ತಾರೆ. ಅಂತಹ ವ್ಯವಸ್ಥೆಯೇ ಇರುವುದರಿಂದ ನ್ಯಾಯಾಧೀಶರು ಮುಖ್ಯನ್ಯಾಯಾಧೀಶರ ಹುದ್ದೆಗೆ ತಲಪುವ ತನಕ ವಯಸ್ಸು ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯಲ್ಲಿ ಎಷ್ಟೇ ಕಾರ್ಯಕ್ಷಮತೆ ಹಾಗೂ ಹೊಣೆಗಾರಿಕೆಯಿದ್ದರೂ ಅವರ ಬುದ್ಧಿಕೌಶಲ್ಯವನ್ನು ಉಪಯೋಗಿಸಿಕೊಳ್ಳಲು ಅವಕಾಶವಿರುವುದಿಲ್ಲ.

ವಾಸ್ತವದಲ್ಲಿ ನ್ಯಾಯವ್ಯವಸ್ಥೆಯು ಸರ್ವಸಾಮಾನ್ಯರಿಗೆ ದೊಡ್ಡ ಆಶಾಕೇಂದ್ರವಾಗಿದೆ. ಇಲ್ಲಿ ವೈಯಕ್ತಿಕ ಆರೋಪ-ಪ್ರತ್ಯಾರೋಪ ಮಾಡುವ ಉದ್ದೇಶವಿಲ್ಲ; ಆದರೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಲೇಬೇಕು, ಎಂದೆನಿಸುತ್ತದೆ. ನಾವು ಖಾಸಗಿ ಕ್ಷೇತ್ರದಲ್ಲಿ ನೋಡುವುದಾದರೆ, ಸಾಮಾನ್ಯ ನೌಕರಿಯನ್ನು ಪಡೆಯುವಾಗ ಕೂಡ ನಿರ್ಧಿಷ್ಟ ಕಾಲಾವಧಿಗಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ನೌಕರಿಯನ್ನು ಬಿಡುವ ಮೊದಲು ವಿಶಿಷ್ಟ ಕಾಲಾವಧಿಯ ಮೊದಲೇ ಪೂರ್ವ ಕಲ್ಪನೆಯನ್ನು (notice pe) ನೀಡಬೇಕಾಗುತ್ತದೆ. ಹೀಗಿರುವಾಗ ಮುಖ್ಯನ್ಯಾಯಾಧೀಶರ ಹುದ್ದೆಯಲ್ಲಿರುವ ವ್ಯಕ್ತಿಗೆ ಇಷ್ಟು ಕಡಿಮೆ ಅವಧಿ ಸಿಗುವುದು ಅರ್ಥವಾಗದಂತಿದೆ !

ನಮ್ಮ ನ್ಯಾಯವ್ಯವಸ್ಥೆಯನ್ನು ಬ್ರಿಟಿಷರು ರೂಪಿಸಿದ್ದಾರೆ. ಸ್ವಾತಂತ್ರ್ಯದ ನಂತರ ನಾವು ಅದನ್ನು ಹಾಗೆಯೇ ಸ್ವೀಕರಿಸಿದೆವು. ದೇಶದ ಅನೇಕ ವ್ಯವಸ್ಥೆಗಳ ಪುನರುಜ್ಜೀವನವಾಗುತ್ತದೆ. ನ್ಯಾಯವ್ಯವಸ್ಥೆಯಲ್ಲಿಯೂ ಭಾರತೀಯ ದೃಷ್ಟಿಕೋನದಿಂದ ಅಮೂಲ್ಯವಾದ ಬದಲಾವಣೆಯಾದರೆ ಅದು ಒಂದು ಐತಿಹಾಸಿಕ ಬದಲಾವಣೆಯಾಗುವುದು !’

– ಕು. ಸಾಯಲಿ ಡಿಂಗರೆ, ಪ್ರತಿನಿಧಿ, ದೈನಿಕ ‘ಸನಾತನ ಪ್ರಭಾತ’ (೧೮.೮.೨೦೨೨)