ಜ್ವರದಲ್ಲಿ ಬಳಸಬಹುದಾದ ಕೆಲವು ಆಯುರ್ವೇದಿಕ ಔಷಧಗಳು

ವೈದ್ಯ ಮೇಘರಾಜ ಪರಾಡಕರ್

೧. ಮಹಾಸುದರ್ಶನ ಘನವಟಿ

‘ಈ ಔಷಧಿಯನ್ನು, ಯಾವುದೇ ಜ್ವರದಲ್ಲಿ ಯಾವುದೇ ವಯಸ್ಸಿನ ವ್ಯಕ್ತಿಯು ನಿಃಸಂದೇಹವಾಗಿ ಬಳಸಬಹುದು. (ಕೃಪೆ : ‘ಸಿದ್ಧಯೋಗ ಸಂಗ್ರಹ’ / ‘ಆಯುರ್ವೇದ ಸಾರ ಸಂಗ್ರಹ’) ಈ ಔಷಧಿಯಿಂದ ಶರೀರದಲ್ಲಿನ ಜ್ವರದ ವಿಷವು ಮಲದ ಮೂಲಕ ಹೊರಹೋಗಲು ಸಹಾಯವಾಗುತ್ತದೆ.

ಈಗಷ್ಟೇ ಬಂದ ಜ್ವರದಲ್ಲಿ, ಹಾಗೆಯೇ ಹಳೆಯ ಜ್ವರದಲ್ಲಿಯೂ ಈ ಔಷಧಿ ಲಾಭದಾಯಕವಾಗಿದೆ. ಈ ಔಷಧಿಯನ್ನು ಜ್ವರ ಬರುವ ಸಾಧ್ಯತೆಯಿರುವಾಗ ತೆಗೆದುಕೊಂಡರೆ ಜ್ವರವನ್ನು ತಡೆಗಟ್ಟಬಹುದು.

೧ ಅ. ಜ್ವರ : ಜ್ವರ ಬರುವ ಸಾಧ್ಯತೆಯಿರುವಾಗ ಅಥವಾ ಜ್ವರ ಬಂದಿರುವಾಗ ೨ ರಿಂದ ೩ ದಿನ ಒಂದೊಂದು ಮಾತ್ರೆಯ ಚೂರ್ಣವನ್ನು ಬೆಚ್ಚಗಿನ ನೀರಿನೊಂದಿಗೆ ದಿನದಲ್ಲಿ ೨ ರಿಂದ ೩ ಬಾರಿ ತೆಗೆದುಕೊಳ್ಳಬೇಕು. ೩ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ೧/೪ ಪ್ರಮಾಣದಲ್ಲಿ ಮತ್ತು ೩ ರಿಂದ ೧೨ ವರ್ಷ ವಯಸ್ಸಿನ ಮಕ್ಕಳಿಗೆ ೧/೨ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು. ಕೆಲವೊಮ್ಮೆ ಜ್ವರದಲ್ಲಿ ಒಣ ಕೆಮ್ಮು ಸತತವಾಗಿ ಬರುತ್ತಿರುತ್ತದೆ. ಇಂತಹ ಸಮಯದಲ್ಲಿ ಈ ಔಷಧಿಯನ್ನು ಬಳಸದೇ ಸಂಶಮನಿ ವಟಿಯಂತಹ ಬೇರೆ ಔಷಧಿಯನ್ನು ಬಳಸಬೇಕು.

೧ ಆ. ಪಿತ್ತ : ಗಂಟಲಿನಲ್ಲಿ ಅಥವಾ ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ ಉರಿಯತ್ತಿರುವಾಗ ಈ ಔಷಧಿಯನ್ನು ಜಗಿದು ತಿನ್ನುವುದರಿಂದ ಲಾಭವಾಗುತ್ತದೆ. ತೊಂದರೆಯಾದಾಗ, ೧ ಗುಳಿಗೆಯನ್ನು ಜಗಿದು ತಿನ್ನಬೇಕು. ಗುಳಿಗೆ ಮಾತ್ರ ಬಹಳ ಕಹಿ ಇರುತ್ತದೆ.

 

೨. ಸಂಶಮನಿ ವಟಿ

ಈ ಔಷಧಿಯು ಈಗಷ್ಟೇ ಬಂದಿರುವ ಜ್ವರಕ್ಕಿಂತ ಹಳೆಯ ಜ್ವರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. (ಇತ್ತೀಚೆಗೆ ಬಂದ ಜ್ವರದಲ್ಲಿ ಮಹಾಸುದರ್ಶನ ಘನವಟಿ ಔಷಧಿಯನ್ನು ತೆಗೆದುಕೊಳ್ಳಬೇಕು.) ಈ ಔಷಧಿಯಲ್ಲಿ ಅಮೃತಬಳ್ಳಿಯೊಂದಿಗೆ ಲೋಹಭಸ್ಮ, ಸುವರ್ಣಮಾಕ್ಷಿಕ ಭಸ್ಮ ಮತ್ತು ಅಭ್ರಕ ಭಸ್ಮ ಈ ಘಟಕಗಳಿರುತ್ತವೆ. ಇವುಗಳಿಂದ ರಕ್ತವು ಶಕ್ತಿಯುತವಾಗಲು ಸಹಾಯವಾಗುತ್ತದೆ. ಸಾಮಾನ್ಯವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಈ ಔಷಧಿ ಉಪಯೋಗವಾಗುತ್ತದೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ಈ ಔಷಧಿ ತುಂಬಾ ಪ್ರಸಿದ್ಧವಾಯಿತು. ಗರ್ಭವತಿಯರು, ಬಾಣಂತಿಯರು, ಚಿಕ್ಕ ಮಕ್ಕಳು, ಸೂಕ್ಷ್ಮ ಪ್ರಕೃತಿಯ ಜನರು, ಹಾಗೆಯೇ ವಯಸ್ಸಾದವರೂ ಈ ಔಷಧಿಯನ್ನು ನಿಃಸಂದೇಹವಾಗಿ ಬಳಸಬಹುದು. ದಿನದಲ್ಲಿ ಒಂದೊಂದು ಗುಳಿಗೆಯ ಚೂರ್ಣವನ್ನು ೨ ಬಾರಿ ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು. ೩ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ೧/೪ ಪ್ರಮಾಣದಲ್ಲಿ ಮತ್ತು ೩ ರಿಂದ ೧೨ ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು.

೨ ಅ. ಹಳೆಜ್ವರ : ದೇಹದಲ್ಲಿ ತುಂಬಾ ಕಾಲ ಉಳಿದ (ದೀರ್ಘ ಕಾಲದ) ಜ್ವರಕ್ಕೆ ಇದು ಒಳ್ಳೆಯ ರೀತಿಯಿಂದ ಉಪಯೋಗವಾಗುತ್ತದೆ. ಇಂತಹ ಜ್ವರಗಳಲ್ಲಿ ಕೆಲವೊಮ್ಮೆ ಗುಲ್ಮ(pleen) ದೊಡ್ಡದಾಗುತ್ತದೆ. ಆ ಸಮಯದಲ್ಲಿಯೂ ಈ ಔಷಧಿ ಉಪಯುಕ್ತವಾಗುತ್ತದೆ. ಈ ಔಷಧಿಯನ್ನು ೧ ತಿಂಗಳು ತೆಗೆದುಕೊಳ್ಳಬೇಕು.

೨ ಆ. ಪಾಂಡುರೋಗ : ಶರೀರ ಕ್ಷೀಣವಾಗುವುದು, ಆಯಾಸವಾಗುವುದು ಮತ್ತು ಪಾಂಡುರೋಗ (ಹಿಮೋಗ್ಲೋಬಿನ್ ಕಡಿಮೆ ಆಗುವುದು) ಇವುಗಳಲ್ಲಿ ಇದು ಉಪಯುಕ್ತವಾಗಿದೆ. ಈ ಔಷದಿಯನ್ನು ೧ ರಿಂದ ೩ ತಿಂಗಳು ತೆಗೆದುಕೊಳ್ಳಬೇಕು. ಇದರೊಂದಿಗೆ ರಕ್ತವನ್ನು ಹೆಚ್ಚಿಸುವ ಇತರ ಔಷಧಿಗಳನ್ನೂ ತೆಗೆದುಕೊಳ್ಳಬೇಕು.

೨ ಇ. ಬಹಳ ದಿನಗಳ ಕೆಮ್ಮು : ೧ – ೨ ವಾರ ಈ ಔಷಧಿಯನ್ನು ತೆಗೆದುಕೊಳ್ಳಬೇಕು. ೧ ತಿಂಗಳಿಗಿಂತ ಹೆಚ್ಚು ದಿನ ಕೆಮ್ಮು ಬರುತ್ತಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.

೨ ಈ. ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿಸ್ರಾವ ಆಗುವುದು) ಮತ್ತು ವೀರ್ಯಸ್ರಾವ : ೧ ರಿಂದ ೩ ತಿಂಗಳು ಔಷಧಿ ಸೇವಿಸಬೇಕು.

೨ ಉ. ಸ್ಮರಣಶಕ್ತಿಯನ್ನು ಹೆಚ್ಚಿಸಲು, ಮೆದುಳು ಮತ್ತು ಜೀರ್ಣಾಂಗಗಳಿಗೆ ಬಲ ನೀಡಲು, ಹಾಗೆಯೇ ಯಾವುದೇ ದೀರ್ಘ ಕಾಲೀನ ರೋಗದಲ್ಲಿ ರಕ್ತ ಶಕ್ತಿಯುತವಾಗಲು : ೧ ರಿಂದ ೩ ತಿಂಗಳು ಈ ಔಷಧಿಯನ್ನು ತೆಗೆದುಕೊಳ್ಳಬೇಕು

೩. ಜಯಮಂಗಲ ರಸ

ಇದು ಸುವರ್ಣಯುಕ್ತ ಔಷಧವಾಗಿದ್ದು ಜ್ವರದ ಅತ್ಯಧಿಕ ಅವಸ್ಥೆಯಲ್ಲಿ (ತುರ್ತು ಪರಿಸ್ಥಿತಿಯಲ್ಲಿ) ಉಪಯೋಗವಾಗುತ್ತದೆ. ಜ್ವರ ೧೦೪ ಅಂಶ ಫ್ಯಾರಾನಿಟ್‌ಗಿಂತ ಹೆಚ್ಚು ಹೋದರೆ ಒಂದು ಗುಳಿಗೆಯ ಪುಡಿಯನ್ನು ೨ ಚಿಟಿಕೆ ಜೀರಿಗೆಯ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಇವುಗಳ ಮಿಶ್ರಣವನ್ನು ಮಾಡಿ ತೆಗೆದುಕೊಳ್ಳಬೇಕು. ಜೀರಿಗೆ ಪುಡಿ ಇಲ್ಲದಿದ್ದರೆ ಕೇವಲ ಜೇನುತುಪ್ಪದೊಂದಿಗೆ ಮತ್ತು ಜೇನುತುಪ್ಪ ಸಹ ಇಲ್ಲದಿದ್ದರೆ ಕೇವಲ ಗುಳಿಗೆಯನ್ನು ಜಗಿದು ತಿನ್ನಬೇಕು. (ಇಷ್ಟು ಹೆಚ್ಚು ಜ್ವರವಿದ್ದರೆ ತಮ್ಮ ಮನಸ್ಸಿನಂತೆ  ಔಷಧಿಯನ್ನು ತೆಗೆದುಕೊಳ್ಳದೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು; ಆದರೆ ವೈದ್ಯರು ಸಿಗುವವರೆಗೆ ಪ್ರಾಥಮಿಕ ಚಿಕಿತ್ಸೆ ಎಂದು ಈ ಔಷಧಿಯನ್ನು ತೆಗೆದುಕೊಳ್ಳಬಹುದು.) ಈ ಔಷಧಿಯಲ್ಲಿ ಬಂಗಾರ ಮತ್ತು  ಬೆಳ್ಳಿಯ ಭಸ್ಮವಿರುವುದರಿಂದ ಈ ಔಷಧವು ದುಬಾರಿಯಾಗಿದೆ.’

ಔಷಧಿಗಳನ್ನು ತಮ್ಮ ಮನಸ್ಸಿನಂತೆ ತೆಗೆದುಕೊಳ್ಳದೇ ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು. ಕೆಲವೊಮ್ಮೆ ವೈದ್ಯರ ಬಳಿಗೆ ತಕ್ಷಣ ಹೋಗುವಂತಹ ಸ್ಥಿತಿ ಇರುವುದಿಲ್ಲ. ಕೆಲವೊಮ್ಮೆ ವೈದ್ಯರ ಬಳಿಗೆ ಹೋಗುವವರೆಗೆ ತಕ್ಷಣ ಔಷಧಿ ಸಿಗುವುದು ಆವಶ್ಯಕವಾಗಿರುತ್ತದೆ ಮತ್ತು ಕೆಲವೊಮ್ಮೆ ಅಲ್ಪಸ್ವಲ್ಪ ಔಷಧಿಗಳನ್ನು ತೆಗೆದುಕೊಂಡಾಗ ವೈದ್ಯರ ಬಳಿಗೆ ಹೋಗುವ ಆವಶ್ಯಕತೆಯೇ ಬೀಳುವುದಿಲ್ಲ. ಆದುದರಿಂದ ‘ಪ್ರಾಥಮಿಕ ಚಿಕಿತ್ಸೆ’ಯೆಂದು ಇಲ್ಲಿ ಆಯುರ್ವೇದಿಕ ಕೆಲವು ಔಷಧಿಗಳನ್ನು ನೀಡಲಾಗಿದೆ. ಔಷಧಿಗಳನ್ನು ತೆಗೆದುಕೊಂಡು ಗುಣಮುಖರಾಗದಿದ್ದರೆ ರೋಗವನ್ನು ಹಾಗೆಯೇ ಸಹಿಸದೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೭.೨೦೨೨)