ಓರ್ವ ಅಗರ್ಭ ಶ್ರೀಮಂತ ಉದ್ಯಮಿಯಿದ್ದರು. ಅವರು ಅನೇಕ ಕಂಪನಿಗಳ ಮಾಲೀಕರಾಗಿದ್ದರು. ಅವರ ಬಳಿ ಬಹಳಷ್ಟು ವಾಹನಗಳು, ಬಂಗಲೆಗಳಿದ್ದವು. ಅವರಿಗೆ ಯಾವುದೇ ಕೊರತೆ ಇರಲಿಲ್ಲ. ಒಂದು ದಿನ ಅವರು ವಾಹನದಲ್ಲಿ ಕಾರ್ಯಾಲಯಕ್ಕೆ ಹೋಗುವಾಗ ವಾಹನಚಾಲಕನಿಗೆ ರೇಡಿಯೋ ಹಾಕಲು ಹೇಳಿದರು. ರೇಡಿಯೋದ ಯಾವುದೋ ಒಂದು ಚ್ಯಾನಲ್‌ನಲ್ಲಿ ಯಾರದೋ ಒಂದು ಆಧ್ಯಾತ್ಮಿಕ ಮಾರ್ಗದರ್ಶನ ನಡೆದಿತ್ತು. ಅವರು, ಮನುಷ್ಯನು ಜೀವನದಲ್ಲಿ ಭೌತಿಕ ಅರ್ಥದಲ್ಲಿ ಏನೆಲ್ಲ ಗಳಿಸುತ್ತಾನೆಯೋ, ಅದನ್ನು ಮೃತ್ಯುವಿನ ಸಮಯದಲ್ಲಿ ಇಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ. ಅವನಿಗೆ ಅದರಲ್ಲಿನ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ’, ಎಂದು ಹೇಳುತ್ತಿದ್ದರು. ಉದ್ಯಮಿಯು ಇದನ್ನು ಕೇಳಿ ಕೂಡಲೇ ಅಂತರ್ಮುಖರಾದರು. ಅವರಿಗೆ ಒಮ್ಮೆಲೆ, ನಾನು ಏನೆಲ್ಲ ಹಣ, ಆಸ್ತಿ, ವೈಭವವನ್ನು ಗಳಿಸಿರುವೆನೋ, ಅದರಲ್ಲಿ ಒಂದು ರೂಪಾಯಿಯನ್ನೂ ಸಾಯುವಾಗ ನನ್ನ ಮುಂದಿನ ಜನ್ಮಕ್ಕಾಗಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಎಲ್ಲ ಇಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ ಎಂದರಿವಾಯಿತು.
೧. ನಾನು ಗಳಿಸಿದ ಅಪಾರ ಸಂಪತ್ತನ್ನು ಮೃತ್ಯುವಿನ ನಂತರ ನನ್ನ ಜೊತೆಗೆ ಹೇಗೆ ತೆಗೆದುಕೊಂಡು ಹೋಗಬಹುದೆಂಬ ಬಗ್ಗೆ ಉದ್ಯಮಿಯು ಸಿಬ್ಬಂದಿಗಳಿಗೆ ಶೋಧಿಸಲು ಹೇಳುವುದು
ಆ ಉದ್ಯಮಿಗೆ ಒಮ್ಮೆಲೆ ಕಸಿವಿಸಿಯಾಯಿತು. ಅವರು ಬಹಳ ಅಸ್ವಸ್ಥರಾದರು. ಕಾರ್ಯಾಲಯಕ್ಕೆ ತಲುಪಿದ ನಂತರ ಅವರು ತಮ್ಮ ಸಿಬ್ಬಂದಿಗಳ ಒಂದು ತುರ್ತು ಸಭೆಯನ್ನು ಕರೆದರು. ಸಭೆಗೆ ಎಲ್ಲ ಅಧಿಕಾರಿಗಳನ್ನು ಮತ್ತು ಕಾನೂನುತಜ್ಞರನ್ನು ಕರೆದರು. ಉದ್ಯಮಿಯು ನಾನು ಸ್ವತಃ ಈ ಅಪಾರ ಸಂಪತ್ತನ್ನು ಗಳಿಸಿದ್ದೇನೆ, ನಾನು ಸಾಯುವಾಗ ಇದನ್ನು ನನ್ನೊಂದಿಗೆ ತೆಗೆದುಕೊಂಡು ಹೋಗಲು ಬಯಸುತ್ತೇನೆ, ನಾನು ಇದನ್ನು ಹೇಗೆ ತೆಗೆದುಕೊಂಡು ಹೋಗಬಹುದು ? ಎಂಬುದನ್ನು ನೀವು ನನಗೆ ವಿಚಾರ ಮಾಡಿ ಹೇಳಿರಿ ಎಂದು ಹೇಳಿದರು. ಎಲ್ಲರೂ ಪರಸ್ಪರರ ಕಡೆಗೆ ನೋಡತೊಡಗಿದರು. ‘ಸಾಹೇಬರು ಇಂದು ಹೀಗೆ ಅಸಂಬದ್ಧವಾಗಿ ಏಕೆ ಮಾತನಾಡುತ್ತಿದ್ದಾರೆ ? ಸಾಯುವಾಗ ಯಾರಿಗೂ ಏನೂ ಜೊತೆಗೆ ತೆಗೆದುಕೊಂಡು ಹೋಗಲು ಬರುವುದಿಲ್ಲ, ಇದು ಸೂರ್ಯಪ್ರಕಾಶದಷ್ಟೇ ಸತ್ಯವಾಗಿದೆ. ಇವರು ಇಷ್ಟೊಂದು ಸಂಪತ್ತನ್ನು ಜೊತೆಗೆ ಒಯ್ಯುವ ಬಗ್ಗೆ ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ ?’, ಎಂಬ ಪ್ರಶ್ನೆ ಅವರ (ಸಿಬ್ಬಂದಿಗಳ) ಮನಸ್ಸಿನಲ್ಲಿ ಆರಂಭವಾಯಿತು.
ಉದ್ಯಮಿಯು ಎಲ್ಲರಿಗೂ ಅದನ್ನು ಹುಡುಕಲು ಹೇಳಿದರು. ಇದಕ್ಕೆ ಯಾರು ನನಗೆ ಶೇ. ೧೦೦ ರಷ್ಟು ಪರಿಣಾಮಕಾರಿ ಪದ್ಧತಿಯನ್ನು ಹೇಳುವರೋ, ನಾನು ಅವರಿಗೆ ಅಪಾರ ಸಂಪತ್ತನ್ನು ಕೊಡುವೆನು ಎಂದು ಘೋಷಿಸಿದರು. ಆದುದರಿಂದ ಪ್ರತಿಯೊಬ್ಬರೂ ಸಾಯುವಾಗ ಸಂಪತ್ತನ್ನು ಜೊತೆಗೆ ಒಯ್ಯುವ ಪದ್ಧತಿಯನ್ನು ಕಂಡು ಹಿಡಿಯಲು ಪ್ರಯತ್ನಿಸತೊಡಗಿದರು. ಪ್ರತಿಯೊಬ್ಬರು ಎಡೆಬಿಡದೆ ಪ್ರಯತ್ನಿಸುತ್ತಿದ್ದರು; ಆದರೆ ಯಾವುದೇ ಉತ್ತರ ಸಿಗುತ್ತಿರಲಿಲ್ಲ. ಉದ್ಯಮಿಯು ದಿನದಿಂದ ದಿನಕ್ಕೆ ನಿರಾಶರಾಗುತ್ತಿದ್ದರು. ನಂತರ ಅವರು ಇದಕ್ಕಾಗಿ ಜಾಹೀರಾತನ್ನು ನೀಡಿದರು. ಬಹಳ ದೊಡ್ಡ ಬಹುಮಾನವನ್ನು ಘೋಷಿಸಿದರು.
೨. ಮೃತ್ಯುವಿನ ನಂತರ ‘ಸಾಧನೆ’ ಎಂಬ ಹೆಸರಿನ ಸಂಪತ್ತನ್ನು ತೆಗೆದುಕೊಂಡು ಹೋಗಲು ಬರುತ್ತದೆ, ಇದರ ಬಗ್ಗೆ ಓರ್ವ ವ್ಯಕ್ತಿಯು ಉದ್ಯಮಿಗೆ ತಿಳಿಸಿ ಹೇಳುವುದು
ಒಂದು ದಿನ ಅಕಸ್ಮಾತ್ತಾಗಿ ಓರ್ವ ವ್ಯಕ್ತಿಯು ಆ ಉದ್ಯಮಿಯ ಕಚೇರಿಗೆ ಬಂದನು. ಅವನು ಉದ್ಯಮಿಯನ್ನು ಭೇಟಿಯಾದನು. ಅವನು ‘ನನ್ನ ಹೆಸರು ಶ್ಯಾಮ. ನಾನು ಸಾಯುವಾಗ ಸಂಪತ್ತನ್ನು ಜೊತೆಗೆ ಒಯ್ಯುವ ಪದ್ಧತಿಯನ್ನು ನಿಮಗೆ ಹೇಳುವೆನು; ಆದರೆ ನಾನು ಮೊದಲು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುವೆನು, ನೀವು ಅವುಗಳ ಉತ್ತರವನ್ನು ಕೊಡಬೇಕು’ ಎಂದು ಹೇಳಿದನು. ಉದ್ಯಮಿಯು ಒಪ್ಪಿದರು. ಆಮೇಲೆ ಅವರಲ್ಲಿ ಮುಂದಿನ ಸಂಭಾಷಣೆ ನಡೆಯಿತು.
ಶ್ಯಾಮ : ನೀವು ಯಾವಾಗಲಾದರೂ ಅಮೇರಿಕಾಗೆ ಹೋಗಿದ್ದೀರಾ ?
ಉದ್ಯಮಿ : ಹೌದು.
ಶ್ಯಾಮ : ನೀವು ಅಲ್ಲಿ ಏನಾದರೂ ಖರೀದಿಸಿದ್ದೀರಾ ?
ಉದ್ಯಮಿ : ಹೌದು.
ಶ್ಯಾಮ : ನೀವು ಅಲ್ಲಿ ಹಣವನ್ನು ಹೇಗೆ ನೀಡಿದಿರಿ ?
ಉದ್ಯಮಿ : ಹೇಗೆ ಎಂದರೆ ಏನು ? ನನ್ನ ಹಣವನ್ನು ನೀಡಿ ಅಮೇರಿಕಾದ ಡಾಲರ್ಸ್ಗಳನ್ನು ಖರೀದಿಸಿದೆನು ಮತ್ತು ನೀಡಿದೆನು.
ಶ್ಯಾಮ : ಬೇರೆ ಯಾವ ದೇಶಗಳಿಗೆ ಹೋಗಿರುವಿರಿ ? ಅಲ್ಲಿ ಏನು ಖರೀದಿಸಿದಿರಿ ಮತ್ತು ಅಲ್ಲಿ ಯಾವ್ಯಾವ ಹಣವನ್ನು ನೀಡಿದಿರಿ ?
ಉದ್ಯಮಿ : ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ಡಾಲರ್ಸ್, ಸಿಂಗಾಪುರದಲ್ಲಿ ಸಿಂಗಾಪುರ ಡಾಲರ್ಸ್, ಜಪಾನಿನಲ್ಲಿ ಯೆನ್, ಬಾಂಗ್ಲಾದೇಶದಲ್ಲಿ ಟಕಾ, ಸೌದಿ ಅರೇಬಿಯಾದಲ್ಲಿ ರಿಯಾಲ್, ದುಬೈದಲ್ಲಿ ದಿರಹಾಮ, ಯುರೋಪ್‌ನಲ್ಲಿ ಯುರೋ ಈ ಹಣವನ್ನು ಉಪಯೋಗಿಸಿದೆ. ಯಾವ ಸ್ಥಳದಲ್ಲಿ ಯಾವ ಹಣ ನಡೆಯುತ್ತದೆಯೋ, ಅವುಗಳನ್ನೇ ಉಪಯೋಗಿಸಬೇಕಾಗುತ್ತದೆ.
ಶ್ಯಾಮ : ಅಂದರೆ ನಿಮ್ಮ ಬಳಿಯಿರುವ ಹಣವನ್ನು ಎಲ್ಲ ಸ್ಥಳಗಳಲ್ಲಿ ಉಪಯೋಗಿಸಲು ಆಗುವುದಿಲ್ಲ. ಅವುಗಳನ್ನು ನಿಮಗೆ ದೇಶಕ್ಕನುಸಾರ ಮತ್ತು ಸ್ಥಳಕ್ಕನುಸಾರ ಬದಲಾಯಿಸಬೇಕಾಗುತ್ತದೆ. ಹಾಗಾದರೆ ಅದೇ ನ್ಯಾಯದಿಂದ ನಿಮಗೆ ನಿಮ್ಮ ಹಣವನ್ನು ಕೊಟ್ಟು ಅದರ ಬದಲು ಮೃತ್ಯುವಿನ ನಂತರ ಬಳಸಬೇಕಾದ ಹಣವನ್ನು ಖರೀದಿಸಬೇಕಾಗುತ್ತದೆ. ಅಲ್ಲಿ ನಿಮ್ಮ ರೂಪಾಯಿಗಳು ಹೇಗೆ ನಡೆಯುವವು ? ಅಲ್ಲಿ ಈ ರೂಪಾಯಿಗಳು ನಡೆಯಲಾರವು; ಏಕೆಂದರೆ ಮೃತ್ಯುವಿನ ನಂತರದ ಹಣ ಎಂದರೆ ‘ಸಾಧನೆ’. ಅಲ್ಲಿ ನಿಮಗೆ ಅದನ್ನು ತೆಗೆದುಕೊಂಡು ಹೋಗಬೇಕಾಗುವುದು. ಹೀಗೆ ಮಾಡಿದರೆ ಮಾತ್ರ ನಿಮಗೆ ಅದನ್ನು ಅಲ್ಲಿ ಉಪಯೋಗಿಸಲು ಸಾಧ್ಯವಾಗುವುದು. ಆದುದರಿಂದ ನಿಮ್ಮ ಬಳಿಯಿರುವ ಹಣವನ್ನು ನಿಮಗೆ ‘ಸಾಧನೆ’ ಎಂಬ ಹೆಸರಿನ ಹಣದಲ್ಲಿ ರೂಪಾಂತರ ಮಾಡಿಕೊಳ್ಳಬೇಕಾಗುವುದು. ಹೀಗೆ ಮಾಡಿದರೆ ಮಾತ್ರ ನೀವು ಅದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು ಮತ್ತು ಅಲ್ಲಿ ಉಪಯೋಗಿಸಬಹುದು.
ಉದ್ಯಮಿಗೆ ಕೊನೆಗೆ ‘ಸಾಧನೆ’ಯನ್ನೇ ಜೊತೆಗೆ ತೆಗೆದುಕೊಂಡು ಹೋಗಬೇಕಾಗುವುದು ಎಂಬುದು ತಿಳಿಯಿತು. ಪೃಥ್ವಿಯ ಮೇಲಿನ ಹಣವನ್ನು ಹೀಗೆಯೇ ಬದಲಾಯಿಸಿಕೊಳ್ಳಬೇಕಾಗುವುದು ಅದಕ್ಕಾಗಿ ನಾಮಜಪ, ಪ್ರಾರ್ಥನೆ, ಕೃತಜ್ಞತೆ, ಧರ್ಮಾಚರಣೆಯನ್ನು ಮಾಡಬೇಕಾಗುವುದು ಮತ್ತು ಅದನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು. ಉದ್ಯಮಿಗೆ ತಮ್ಮ ಪ್ರಶ್ನೆಗೆ ಯೋಗ್ಯ ಉತ್ತರ ಸಿಕ್ಕಿತು. ಅವರು ಶ್ಯಾಮರಿಗೆ ನಮಸ್ಕಾರ ಮಾಡಿದರು ಮತ್ತು ಅವರಿಗೆ ಯೋಗ್ಯ ಬಹುಮಾನ ನೀಡಿ ಅವರನ್ನು ಸತ್ಕರಿಸಿದರು.
ಉದ್ಯಮಿಯಂತೆ ನಾವು ಸಹ ಈಗ ಗಳಿಸಿದ್ದೆಲ್ಲವನ್ನು ‘ಸಾಧನೆ’ ಎಂಬ ಹೆಸರಿನ ಹಣದಲ್ಲಿ ಬದಲಾಯಿಸಿ ಕೊಳ್ಳಬೇಕಾಗುವುದು. ಕೊನೆಯವರೆಗೆ ಇದನ್ನೇ ಮಾಡಬೇಕು. (ಮೃತ್ಯುವಿನ ನಂತರ) ಮೇಲೆ ಹೋಗುವಾಗ ಅಷ್ಟು ಮಾತ್ರ ಸಾಕಾಗುತ್ತದೆ.
ನೀರಿನಲ್ಲಿ ಮತ್ತು ಮನಸ್ಸಿನಲ್ಲಿ ಸಾಮ್ಯವೇನು ?ನೀರು ಮತ್ತು ಮನಸ್ಸು ದೂಷಿತವಾಗಿದ್ದರೆ ಅವು ನಮ್ಮ ಆಯುಷ್ಯವನ್ನು ಕೊನೆಗೊಳಿಸಬಹುದು. ಎರಡರಲ್ಲಿಯೂ ಆಳವಿಲ್ಲದಿದ್ದರೆ ಅಪಾಯದ ಮಟ್ಟವನ್ನು ಹೆಚ್ಚಿಸಬಹುದು. ಎರಡೂ ಸ್ವಚ್ಛವಾಗಿದ್ದರೆ, ಎಲ್ಲಿ ಹೋಗುವೆವೋ ಅಲ್ಲಿ ಆನಂದದ ವನವನ್ನೇ ಅರಳಿಸಬಹುದು; ಆದರೆ ನೀರಿನಲ್ಲಿ ಮತ್ತು ಮನಸ್ಸಿನಲ್ಲಿ ಮುಖ್ಯ ವ್ಯತ್ಯಾಸ ಯಾವುದು ? ನೀರಿಗೆ ಕಟ್ಟೆಯನ್ನು ಕಟ್ಟಿದರೆ ನೀರು ಶಾಂತ ಮತ್ತು ಮನಸ್ಸಿಗೆ ಕಟ್ಟೆಯನ್ನು ಹಾಕಿದರೆ ಮನುಷ್ಯನು ‘ಸಂತ’. |