‘ವಿಶೇಷ ರೀತಿಯ ಧ್ವನಿಸುರುಳಿ (ಆಡಿಯೋ) ಅಥವಾ ಧ್ವನಿಚಿತ್ರ ಸುರುಳಿ (ವಿಡಿಯೋಗಳಿಗೆ ಕಾನೂನಿನ ದೃಷ್ಟಿಯಲ್ಲಿ ಎಷ್ಟು ಮಹತ್ವವಿದೆ ? ಅವುಗಳ ಪುರಾವೆ ನ್ಯಾಯಾಲಯದಲ್ಲಿ ಎಷ್ಟರ ಮಟ್ಟಿಗೆ ಸ್ವೀಕರಿಸಲಾಗು ತ್ತವೆ ಅಥವಾ ಸ್ವೀಕರಿಸಲಾ ಗುವುದಿಲ್ಲ ? ತನಿಖೆಯ ಕಾಲದಲ್ಲಿ ಇಲೆಕ್ಟ್ರಾನಿಕ್ ಪುರಾವೆಗಳನ್ನು ನೀಡುವಾಗ ಯಾವ ಜಾಗರೂಕತೆಯನ್ನು ವಹಿಸಬೇಕು ?, ಈ ಎಲ್ಲ ವಿಷಯವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. |
೧. ಆರೋಪಪತ್ರವನ್ನು ದಾಖಲಿಸುವ ಮೊದಲು ಮತ್ತು ದಾಖಲಿಸಿದ ನಂತರ ತಾಂತ್ರಿಕ ಪುರಾವೆಗಳಿಗೆ ವಿಶೇಷ ಮಹತ್ವವಿದೆ
‘ಅನೇಕ ವರ್ಷಗಳ ಹಿಂದೆ ಯಾವುದಾದರೊಂದು ಅಪರಾಧವನ್ನು ತಪಾಸಣೆ ಮಾಡಲು ಪೊಲೀಸರಿಗೆ ಖಬರಿಗಳ (ಅಪರಾಧಿಗಳ ಬಗ್ಗೆ ಗುಪ್ತ ಮಾಹಿತಿ ನೀಡುವವರು) ಜಾಲವನ್ನು ಅವಲಂಬಿಸಿರಬೇಕಾಗುತ್ತಿತ್ತು; ಆದರೆ ಈಗ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಹೆಚ್ಚಿನಂಶ ಅಪರಾಧಗಳನ್ನು ತಾಂತ್ರಿಕ ಪುರಾವೆಗಳ ಆಧಾರದಲ್ಲಿಯೇ ತಪಾಸಣೆ ಮಾಡಲಾಗುತ್ತದೆ. ಇಲೆಕ್ಟ್ರಾನಿಕ್ ಪುರಾವೆಗಳೆಂದರೆ ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಂಗ್ರಹಿಸಿರುವ ಮಾಹಿತಿ, ಉದಾ. ಚಿತ್ರಸುರುಳಿ, ಧ್ವನಿಚಿತ್ರೀಕರಣ, ಸಂಚಾರಿವಾಣಿಯಲ್ಲಿನ ಛಾಯಾಚಿತ್ರಗಳು, ಸಂದೇಶಗಳು, ‘ವಾಟ್ಸ್ ಆಪ್’ ಸಂದೇಶಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಲೇಖನಗಳು (ಪೋಸ್ಟ್), ವಿ-ಅಂಚೆ (ಈ- ಮೇಲ್), ಸಂಚಾರಿವಾಣಿಯಲ್ಲಿನ ‘ಸಿಡಿಆರ್’ (call detail record) ಇತ್ಯಾದಿ. ಸಾಧಾರಣವಾಗಿ ತಾಂತ್ರಿಕ ಪುರಾವೆಗಳು ಆರೋಪಪತ್ರವನ್ನು ದಾಖಲಿಸುವ ಮೊದಲು ಮತ್ತು ದಾಖಲಿಸಿದ ನಂತರ ವಿವಿಧ ಪ್ರಕಾರ ಕಾರ್ಯವನ್ನು ಮಾಡುತ್ತವೆ. ಬಹಳಷ್ಟು ಸಲ ‘ಯಾವುದಾದರೊಂದು ತಾಂತ್ರಿಕ ಪುರಾವೆಯಿಂದ ದಾಖಲಾರ್ಹ ಅಪರಾಧವಾಗಿದೆ’, ಎಂದು ಆರಂಭದಲ್ಲಿ ಅನಿಸಿದರೆ ಪೊಲೀಸರು ಅದಕ್ಕನುಸಾರ ಸಂಶಯಿತನನ್ನು ವಶಪಡಿಸಿಕೊಂಡು ವಿಚಾರಣೆಯನ್ನು ಮಾಡಬಹುದು. ಬಹಳಷ್ಟು ಸಲ ಇಂತಹ ವಿಚಾರಣೆಯು ಯಶಸ್ವಿಯಾಗುತ್ತದೆ. ಅದಕ್ಕನುಸಾರ ಪೊಲೀಸರಿಗೆ ಅಥವಾ ತನಿಖಾದಳಕ್ಕೆ ವಿವಿಧ ಸುಳಿವುಗಳು ಸಿಗುತ್ತವೆ. ಅವುಗಳ ಆಧಾರ ಪಡೆದು ಮುಂದಿನ ತನಿಖೆಯನ್ನು ಮಾಡಲು ಸಾಧ್ಯವಿರುತ್ತದೆ.
೨. ಆರೊಪಿಗಳ ಛಾಯಾಚಿತ್ರ ಅಥವಾ ಧ್ವನಿಚಿತ್ರಸುರುಳಿಗಳಿಗೆ (ವಿಡಿಯೋ) ಮಾಧ್ಯಮಗಳಲ್ಲಿ ಪ್ರಸಿದ್ಧಿ ಸಿಕ್ಕಿದರೆ ಆಲಿಕೆಯ ಸಮಯದಲ್ಲಿ ಆರೋಪಿಗೆ ಅದರ ಲಾಭವಾಗಬಹುದು.
ತನಿಖೆ (ವಿಚಾರಣೆ) ನಡೆಯುತ್ತಿರುವಾಗ ಯಾವುದೆ ಧ್ವನಿಮುದ್ರಣ, ಧ್ವನಿಚಿತ್ರೀಕರಣ ಅಥವಾ ಇತರ ತಾಂತ್ರಿಕ ಪುರಾವೆಗಳು ಮಾಧ್ಯಮಗಳಲ್ಲಿ ಪ್ರಸಿದ್ಧವಾದರೆ ಅದರಿಂದ ಒಳ್ಳೆಯ ಮತ್ತು ಕೆಟ್ಟ ಇವೆರಡೂ ಪರಿಣಾಮಗಳಾಗಬಹುದು. ಆ ಪುರಾವೆಯು ನಕಲಿ ಆಗಿದ್ದರೆ ಮತ್ತು ಹಾಗೆ ಅದು ನ್ಯಾಯಾಲಯದಲ್ಲಿ ಸಿದ್ಧವಾದರೆ ಮಾಧ್ಯಮಗಳಲ್ಲಿ ಪ್ರಸಿದ್ಧವಾದ ಮಾಹಿತಿಯಿಂದಾಗಿ ಸಂಬಂಧಪಟ್ಟ ವ್ಯಕ್ತಿಯ ಆಗುವ ಅವಮಾನವನ್ನು ಎಂದಿಗೂ ತುಂಬಿಸಿಕೊಡಲು ಸಾಧ್ಯವಿಲ್ಲ. ಯಾವುದಾದರೊಂದು ಅಪರಾಧವನ್ನು ಅಪರಿಚಿತ ವ್ಯಕ್ತಿಯು ಮಾಡಿದ್ದರೆ ಮತ್ತು ಅದರಲ್ಲಿನ ಆರೋಪಿಯ ಛಾಯಾಚಿತ್ರ ಅಥವಾ ಧ್ವನಿಚಿತ್ರಸುರುಳಿ (ವಿಡಿಯೋ) ಮಾಧ್ಯಮಗಳಲ್ಲಿ ಪ್ರಸಿದ್ಧವಾದರೆ ಅದರಿಂದ ಆರೋಪಿಯ ವಕೀಲರು ಪ್ರಕರಣದ ಆಲಿಕೆಯ ಸಮಯದಲ್ಲಿ ಲಾಭವನ್ನು ಪಡೆದುಕೊಳ್ಳಬಹುದು. ‘ಮಾಧ್ಯಮಗಳಲ್ಲಿ ಛಾಯಾಚಿತ್ರ ಮತ್ತು ಧ್ವನಿಚಿತ್ರಸುರುಳಿ ಬಂದಿರುವುದರಿಂದ ನೀವು ಆರೋಪಿಯ ಹೆಸರನ್ನು ಹೇಳುತ್ತೀರಿ ಅಥವಾ ಅವನನ್ನು ಗುರುತಿಸುತ್ತೀರಿ’, ಈ ರೀತಿ ಅವರು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬಹುದು.
೩. ತನಿಖೆಯ ಸಮಯದಲ್ಲಿ ತನಿಖೆ ಮಾಡುವ ಅಧಿಕಾರಿಗಳು ಪುರಾವೆಯನ್ನು ಪರೀಕ್ಷಿಸಿ, ಪಂಚನಾಮೆ ಮಾಡಿ ಅದಕ್ಕೆ ಸೀಲ್ ಹಾಕಿ ತಾಂತ್ರಿಕ ಪುರಾವೆಯನ್ನು ತಮ್ಮ ಕಡೆಗೆ ತೆಗೆದುಕೊಳ್ಳಬೇಕು !
ಸದ್ಯ ತಂತ್ರಜ್ಞಾನ ಎಷ್ಟು ಪ್ರಗತಿಯಾಗಿದೆಯೆಂದರೆ, ಸರ್ವ ಸಾಮಾನ್ಯ ಜನರು ಉಪಯೋಗಿಸಲು ಬರುವಂತಹ ಸಾವಿರಾರು ‘ಅಪ್ಲಿಕೇಶನ್ಸ್’ಗಳು ಆಪ್) ಉಚಿತ ಲಭ್ಯವಾಗಿವೆ. ಅವುಗಳ ಸಹಾಯದಿಂದ ಯಾವುದೇ ಛಾಯಾಚಿತ್ರ ಅಥವಾ ಚಿತ್ರ ಸುರುಳಿಯಲ್ಲಿ ನಮಗೆ ಬೇಕಾದ ಹಾಗೆ ಬದಲಾವಣೆಗಳನ್ನು ಮಾಡಬಹುದು. ಅದಕ್ಕಾಗಿ ಬೇರೆ ತರಬೇತಿ ಪಡೆಯುವ ಆವಶ್ಯಕತೆಯಿಲ್ಲ. ಈ ವಿಷಯದಲ್ಲಿ ತರಬೇತಿ ಪಡೆದಿರುವ ಯಾವುದಾದರೊಬ್ಬ ತಜ್ಞ ವ್ಯಕ್ತಿಯು ಅದರಲ್ಲಿ ಎಡಿಟಿಂಗ್ (ಬದಲಾವಣೆಯನ್ನು) ಮಾಡಿದ್ದರೆ, ಅದನ್ನು ಗುರುತಿಸುವುದು ಬಹಳ ಕಠಿಣವಾಗುತ್ತದೆ. ಆದ್ದರಿಂದ ತನಿಖೆಯ ಸಮಯದಲ್ಲಿ ಇಂತಹ ಯಾವುದಾದರೊಂದು ಪುರಾವೆಯನ್ನು ತೆಗೆದುಕೊಳ್ಳುವಾಗ ತನಿಖೆಯನ್ನು ಮಾಡುವ ಅಧಿಕಾರಿಗಳು ಅದನ್ನು ಯೋಗ್ಯ ರೀತಿಯಲ್ಲಿ ಪರೀಕ್ಷಿಸಿ, ಪಂಚನಾಮೆಯನ್ನು ಮಾಡಿ ಅದಕ್ಕೆ ಸೀಲ್ ಹಾಕಿ ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಹಾಗೆ ಮಾಡಿದರೆ ನಂತರ ಅದರಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಆರೋಪವನ್ನು ಪರವಕೀಲರು ಮಾಡಲು ಸಾಧ್ಯವಿಲ್ಲ.
೪. ನ್ಯಾಯಾಲಯದಲ್ಲಿ ಧ್ವನಿಮುದ್ರಿತ ‘ಕ್ಲಿಪ್’ ತಯಾರಿಸುವುದಿದ್ದರೆ ಅದನ್ನು ನ್ಯಾಯವೈದ್ಯಕೀಯ ಪ್ರಯೋಗಶಾಲೆಗೆ ಕಳುಹಿಸಿ ತಜ್ಞರಿಂದ ವರದಿಯನ್ನು ತರಿಸಬೇಕಾಗುತ್ತದೆ
ನ್ಯಾಯಾಲಯದಲ್ಲಿ ಯಾವುದಾದರೊಂದು ಧ್ವನಿಮುದ್ರಿತ ‘ಕ್ಲಿಪ್’ನ್ನು ತಯಾರಿಸಲಿಕ್ಕಿದ್ದರೆ, ಅದರಲ್ಲಿ ಯಾವ ವ್ಯಕ್ತಿಯ ಧ್ವನಿ ಇದೆ, ಎಂಬುದನ್ನು ನೋಡಿ ಆ ವ್ಯಕ್ತಿ ಜೀವಂತವಿದ್ದರೆ, ಅವನನ್ನು ಕರೆದು ಅವನ ಧ್ವನಿಯ ನಮೂನೆಯನ್ನು ಪಂಚನಾಮೆ ಮೂಲಕ ಪಡೆಯಬೇಕಾಗುತ್ತದೆ. ಆ ವ್ಯಕ್ತಿ ಮೃತನಾಗಿದ್ದರೆ ಆ ವ್ಯಕ್ತಿಯ ಕುಟುಂಬದಲ್ಲಿ ಅವನ ಧ್ವನಿಯಲ್ಲಿನ ಯಾವುದಾದರೂ ಮುದ್ರಣ ಅಥವಾ ಚಿತ್ರಸುರುಳಿ ಇದ್ದರೆ, ಅದನ್ನು ಪಂಚನಾಮೆ ಮಾಡುವಾಗ ಪಡೆಯುವುದು ಆವಶ್ಯಕವಾಗಿದೆ. ಅನಂತರ ಇಂತಹ ವಿವಾದಾತ್ಮಕ ಧ್ವನಿಮುದ್ರಣದ ಕ್ಲಿಪ್’ ಮತ್ತು ಮಾದರಿಯನ್ನು ಧ್ವನಿಮುದ್ರಣದ ‘ಕ್ಲಿಪ್’ ನ್ಯಾಯವೈದ್ಯಕೀಯ ಪ್ರಯೋಗಶಾಲೆಗೆ ಕಳುಹಿಸಿ ‘ಅವೆರಡರಲ್ಲಿನ ವ್ಯಕ್ತಿಯ ಧ್ವನಿ ಒಂದೇ ಆಗಿದೆಯೇ ?’, ಎಂಬುದರ ವರದಿಯನ್ನು ತಜ್ಞರಿಂದ ತರಿಸಿಕೊಳ್ಳಬೇಕಾಗುತ್ತದೆ. ಅನಂತರವೆ ಧ್ವನಿಮುದ್ರಿಕೆಯಲ್ಲಿನ ಕ್ಲಿಪ್’ನಲ್ಲಿನ ಧ್ವನಿ ಆ ವ್ಯಕ್ತಿಯದ್ದಾಗಿದೆಯೆಂದು ಸಿದ್ಧವಾಗಲು ಸಾಧ್ಯವಿದೆ. ಇದೇ ಪ್ರಕ್ರಿಯೆಯನ್ನು ಯಾವುದೇ ಚಿತ್ರಸುರುಳಿ, ಛಾಯಾಚಿತ್ರ ಅಥವಾ ಹಸ್ತಾಕ್ಷರದ ಬಗ್ಗೆಯೂ ಮಾಡಬೇಕಾಗುತ್ತದೆ.
೫. ಇಲೆಕ್ಟ್ರಾನಿಕ್ ಪುರಾವೆಗಳಲ್ಲಿ ಬದಲಾವಣೆಗಳನ್ನು ಮಾಡುವುದು ಸುಲಭವಾಗಿರುವುದರಿಂದ ನ್ಯಾಯಾಲಯದಲ್ಲಿ ಇಂತಹ ಪುರಾವೆಗಳನ್ನು ಸಿದ್ಧಮಾಡುವುದು ಕಠಿಣವಾಗಿದೆ
ಇಲೆಕ್ಟ್ರಾನಿಕ್ ಪುರಾವೆಗಳಲ್ಲಿ ಬದಲಾವಣೆ ಮಾಡುವುದು ಸುಲಭವಾಗಿರುವುದರಿಂದ ನ್ಯಾಯಾಲಯದಲ್ಲಿ ಇಂತಹ ಪುರಾವೆಗಳನ್ನು ಸಿದ್ಧಪಡಿಸುವುದು ಅಡಚಣೆಯದ್ದಾಗಿದೆ. ಭಾರತೀಯ ಪುರಾವೆ ಕಾನೂನಿನ ವ್ಯವಸ್ಥೆಗನುಸಾರ ಇಂತಹ ಪುರಾವೆಗಳು ಸಿದ್ಧವಾಗದಿದ್ದರೆ, ನ್ಯಾಯಾಲಯ ಅದನ್ನು ಒಪ್ಪಿಕೊಳ್ಳುವುದಿಲ್ಲ. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಆಗಾಗ ಇಲೆಕ್ಟ್ರಾನಿಕ್ ಪುರಾವೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ಹೇಗಿರಬೇಕು ಎಂಬ ವಿಷಯದಲ್ಲಿ ವಿಸ್ತಾರವಾಗಿ ಚರ್ಚೆ ಮತ್ತು ಅನೇಕ ನ್ಯಾಯನಿರ್ಣಯಗಳೂ ಆಗಿವೆ. ಅವುಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಕೆಲವು ಮಹತ್ವದ ನಿರ್ಣಯಗಳೆಂದರೆ, ‘ಎನ್ಸೀಟಿ’ ದೆಹಲಿ ವಿರುದ್ಧ ನವಜ್ಯೋತ ಸಂಧೂ ಮತ್ತು ಇತರರು’, ‘ತೋಮಸೋ ಬ್ರುನೋ, ಶಫ್ಫೀ ಮಹಮ್ಮದ ವಿರುದ್ಧ ಹಿಮಾಚಲ ಪ್ರದೇಶ ಸರಕಾರ’, ‘ಅನ್ವರ ಪಿ.ವಿ. ವಿರುದ್ಧ ಬಶೀರ’ ಇವುಗಳಾಗಿವೆ. ಈ ಎಲ್ಲ ನಿರ್ಣಯಗಳಲ್ಲಿ ವಿವಿಧ ಅಭಿಪ್ರಾಯಗಳನ್ನು ನೀಡಲಾಗಿತ್ತು. ಅನಂತರ ೧೪ ಜುಲೈ ೨೦೨೦ ರಂದು ಸನ್ಮಾನ್ಯ ಸರ್ವೋಚ್ಚ ನ್ಯಾಯಾಲಯವು ‘ಅರ್ಜುನ ಖೋತಕರ್ ವಿರುದ್ಧ ಕೈಲಾಸ’ ಈ ಪ್ರಕರಣದ ನಿರ್ಣಯವನ್ನು ನೀಡುವಾಗ ಹಿಂದಿನ ಎಲ್ಲ ನಿರ್ಣಯಗಳ ಚರ್ಚೆಯನ್ನು ಮಾಡಿ ಅವುಗಳ ಆಧಾರದಲ್ಲಿ ಬಶೀರ ಪ್ರಕರಣದಲ್ಲಿನ ವ್ಯವಸ್ಥೆಯು ಹೆಚ್ಚಿನಂಶ ಯೋಗ್ಯವಾಗಿದೆಯೆಂದು ಹೇಳಲಾಯಿತು. ಸರ್ವೋಚ್ಚ ನ್ಯಾಯಾಲಯಕ್ಕನುಸಾರ ಯಾವುದೇ ‘ಇಲೆಕ್ಟ್ರಾನಿಕ್’ ಪುರಾವೆಯನ್ನು ಸಿದ್ಧಪಡಿಸಲು ಬಾಯಿಮಾತಿನ ಸಾಕ್ಷಿಯ ಜೊತೆಗೆ ಭಾರತೀಯ ಪುರಾವೆ ಕಾನೂನಿನ ಕಲಮ್ ೬೫ (ಬ) ಕ್ಕನುಸಾರ ಪ್ರಮಾಣಪತ್ರವನ್ನು ನೀಡುವುದು ಆವಶ್ಯಕವಾಗಿದೆ. ಯಾವುದಾದರೊಂದು ಚಿತ್ರಸುರುಳಿಯನ್ನು ಅಥವಾ ಧ್ವನಿ ಮುದ್ರಣವನ್ನು ಯಾವ ಸಂಚಾರಿವಾಣಿಯಲ್ಲಿ (mobile) ಅಥವಾ ‘ಇಲೆಕ್ಟ್ರಾನಿಕ್ ಉಪಕರಣ’ದಲ್ಲಿ ಸುರಕ್ಷಿತವಾಗಿಟ್ಟಿದ್ದರೆ, ಆ ‘ಮಾಸ್ಟರ್ ಉಪಕರಣ’ವನ್ನು ನ್ಯಾಯಾಲಯಕ್ಕೆ ನೀಡಿದರೆ, ಇಂತಹ ಪ್ರಮಾಣಪತ್ರದ ಅವಶ್ಯಕತೆ ಇರುವುದಿಲ್ಲ. ಇಂತಹ ಪ್ರಮಾಣಪತ್ರವನ್ನು ಮೊದಲೆ ನೀಡದೇ ಇದ್ದರೆ, ನಂತರ ಅದನ್ನು ಬೇಕಾದಾಗ ತರಿಸಿಕೊಳ್ಳುವ ಅಧಿಕಾರ ನ್ಯಾಯಾಲಯಕ್ಕಿದೆ. ‘ಯಾವ ಪ್ರಕರಣದ ತನಿಖೆಯಲ್ಲಿ ಯಾವ ‘ಸಿಡಿಆರ್’ ಉಪಯೋಗಿಸಲಾಗಿದೆಯೊ, ಆ ‘ಸಿಡಿಆರ್’ ಸಂಚಾರಿವಾಣಿ ಕಂಪನಿಗಳು ಮತ್ತು ಅಂತರಜಾಲದ ಸೇವೆಯನ್ನು ಪೂರೈಸುವವರು ಸುರಕ್ಷಿತವಾಗಿ ಇಡುವುದು ಆವಶ್ಯಕವಾಗಿರುತ್ತದೆ. ಅದನ್ನು ಆ ಪ್ರಕರಣದ ಯಾವುದೇ ಪಕ್ಷಕಾರರು ಉಪಯೋಗಿಸಬಹುದು’, ಎಂದು ನ್ಯಾಯಾಲಯ ಆದೇಶ ನೀಡಿದೆ. ಒಂದು ವೇಳೆ ಯಾವುದೇ ‘ಮಾಸ್ಟರ್ ಡಿವೈಸ್’ನಲ್ಲಿ ಸುರಕ್ಷಿತವಾಗಿರುವ ಡಾಟಾ (ಮಾಹಿತಿ) ಕಾಪಿ ಮಾಡಿ ಕೊಟ್ಟಿದ್ದರೆ, ಕಲಮ್ ೬೫ (ಬ) ಕ್ಕನುಸಾರ ಆ ‘ಡಿವೈಸ್’ನಲ್ಲಿ ಡೇಟಾ ಸುರಕ್ಷಿತ ವಾಗುವಾಗ ಅದು ಚಾಲುಸ್ಥಿತಿಯಲ್ಲಿತ್ತು, ಅದರಲ್ಲಿ ಯಾವುದೇ ಮಾನವಿ ಹಸ್ತಕ್ಷೇಪ ಇರಲಿಲ್ಲ ಮತ್ತು ಅದರಲ್ಲಿದ್ದ ಯಾವ ಮೂಲ ಡೇಟಾದ ಕಾಪಿಯನ್ನು ಮಾಡಲಾಗಿದೆ, ಎಂಬ ಪ್ರಮಾಣಪತ್ರವನ್ನು ಕೊಡಬೇಕಾಗುತ್ತದೆ.
೬. ಅಲಕ್ಷದಿಂದ ನಮ್ಮ ಬಾಯಿಯಿಂದ ಹೊರಬರುವ ಶಬ್ದಗಳಿಂದ ಭವಿಷ್ಯದಲ್ಲಿ ಅಡಚಣೆಗಳು ನಿರ್ಮಾಣವಾಗಬಾರದೆಂದು ಸಂಚಾರಿವಾಣಿಯಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಕಾಳಜಿ ವಹಿಸಬೇಕು !
ತಾಂತ್ರಿಕ ಪುರಾವೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಒಂದು ಮೆಟ್ಟಿಲು ತಪ್ಪಿದರೂ, ಆರೋಪಿಗೆ ಸಂಶಯದ ಲಾಭ ಸಿಗುತ್ತದೆ. ಬಹಳಷ್ಟು ಸಲ ಪುರಾವೆಗಳು ಸ್ವೀಕಾರವಾಗುವುದಿಲ್ಲ. – ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ್, ವಿಶೇಷ ಸರಕಾರೀ ವಕೀಲ, ಮುಂಬಯಿ.
ಪ್ರತಿಯೊಬ್ಬರ ಸಂಚಾರಿವಾಣಿಯಲ್ಲಿ ಧ್ವನಿಮುದ್ರಣ (Recording), ಕೆಮೆರಾ, ಮತ್ತು ‘ಕಾಲ್ ರೆಕಾರ್ಡರ್ ಇರುತ್ತವೆ. ನಾವು ಅವುಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಅವುಗಳನ್ನು ಉಪಯೋಗಿಸುವಾಗ ಅಪ್ಪಿತಪ್ಪಿ ನಾವು ಇತರರಲ್ಲಿ ಸಿಕ್ಕಿಕೊಳ್ಳದಂತೆ ಜಾಗರೂಕರಾಗಿರಬೇಕು. ಸಂಚಾರಿವಾಣಿಯಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು. ಅಲಕ್ಷದಿಂದ ಅಥವಾ ತಪ್ಪಿ ನಿಮ್ಮ ಬಾಯಿಯಿಂದ ಹೊರಟಿರುವ ಶಬ್ದಗಳಿಂದ ನೀವು ಭವಿಷ್ಯದಲ್ಲಿ ಅಡಚಣೆಗೊಳಗಾಗಬಾರದು.
– ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ್, ವಿಶೇಷ ಸರಕಾರೀ ವಕೀಲ, ಮುಂಬಯಿ.