ಶ್ರದ್ಧೆ ಮತ್ತು ಸಂತ ವಚನ ಇವುಗಳ ಮೇಲಿನ ದೃಢವಿಶ್ವಾಸದಿಂದ ಭಗವಂತನ ದರ್ಶನವಾಗುವುದು

ಒಂದು ಅರಣ್ಯದಲ್ಲಿ ಓರ್ವ ಸಂತರು ಒಂದು ಗುಡಿಸಲನ್ನು ಕಟ್ಟಿಕೊಂಡು ಇರುತ್ತಿದರು. ಓರ್ವ ಬೇಟೆಗಾರನು ಯಾವಾಗ ಅಲ್ಲಿಂದ ಹೋಗುತ್ತಿದ್ದನೋ, ಆಗ ಆ ಸಂತರಿಗೆ ನಿಯಮಿತವಾಗಿ ನಮಸ್ಕಾರ ಮಾಡಿ ಹೋಗುತ್ತಿದ್ದನು. ಒಂದು ದಿನ ಆ ಬೇಟೆಗಾರನು ಸಂತರಿಗೆ, ‘ಬಾಬಾ ನಾನು ಜಿಂಕೆಯ ಬೇಟೆಯಾಡುತ್ತೇನೆ. ನೀವು ಯಾರ ಬೇಟೆಯಾಡಲು ಇಲ್ಲಿ ಕುಳಿತಿರುವಿರಿ ?’ ಎಂದು ಕೇಳಿದನು. ಆಗ ಸಂತರು ‘ಶ್ರೀಕೃಷ್ಣನ ಬೇಟೆ!’ ಎಂದರು ಮತ್ತು ಅವರ ಕಣ್ಣುಗಳಿಂದ ಕಣ್ಣೀರು ಹರಿಯತೊಡಗಿದವು. ಆಗ ಬೇಟೆಗಾರನು, ‘ಬಾಬಾ ನೀವೇಕೆ ಅಳುತ್ತಿರುವಿರಿ ? ಅವನು ಹೇಗೆ ಕಾಣಿಸುತ್ತಾನೆ ನನಗೆ ಹೇಳಿರಿ ? ನಾನು ಅವನನ್ನು ಹಿಡಿದುಕೊಂಡು ಬರುತ್ತೇನೆ’ ಎಂದು ಹೇಳಿದನು. ಸಂತರು ಭಗವಾನ ಶ್ರೀಕೃಷ್ಣನ ಮನೋಹರ ವರ್ಣನೆಯನ್ನು ಮಾಡಿ ಬೇಟೆಗಾರನಿಗೆ, ‘ಅವನ ಬಣ್ಣ ತಿಳಿನೀಲಿ, ಅವನ ತಲೆಯ ಮೇಲೆ ನವಿಲುಗರಿ, ಅವನು ಕೊಳಲನ್ನು ನುಡಿಸುತ್ತಾನೆ’ ಎಂದು ಹೇಳಿದರು.

ಬೇಟೆಗಾರನು, “ಬಾಬಾ, ಎಲ್ಲಿಯವರೆಗೆ ನಾನು ನಿಮ್ಮ ಬೇಟೆಯನ್ನು ಹಿಡಿದುಕೊಂಡು ಬರುವುದಿಲ್ಲವೋ, ಅಲ್ಲಿಯವರೆಗೆ ನೀರನ್ನೂ ಕುಡಿಯುವುದಿಲ್ಲ” ಎಂದು ಹೇಳಿದನು. ಅನಂತರ ಅವನು ಒಂದು ಸ್ಥಳದಲ್ಲಿ ಜಾಳಿಗೆಯನ್ನು ಹರಡಿ ಕುಳಿತುಕೊಂಡನು. ದಾರಿಯನ್ನು ಕಾಯುತ್ತಾ ಕಾಯುತ್ತಾ ೩ ದಿನಗಳು ಉರುಳಿತು. ದಯಾಘನ ಭಗವಂತನಿಗೆ ಬೇಟೆಗಾರನ ಮೇಲೆ ದಯೆ ಬಂದಿತು. ಶ್ರೀಕೃಷ್ಣನು ಕೊಳಲನ್ನು ನುಡಿಸುತ್ತಾ ಬಂದನು ಮತ್ತು ತಾನಾಗಿಯೇ ಆ ಜಾಲದಲ್ಲಿ ಸಿಕ್ಕಿ ಬಿದ್ದನು. ಶ್ರೀಕೃಷ್ಣನ ಆ ರೂಪವನ್ನು ನೋಡಿ ಬೇಟೆಗಾರನು ಅವನ ಮೋಹಕ ರೂಪದಲ್ಲಿ ಸಿಲುಕಿಕೊಂಡನು. ಒಂದೇ ಸಮನೆ ಶ್ಯಾಮಸುಂದರನನ್ನು ನೋಡುತ್ತಾ ನೋಡುತ್ತಾ ಅವನ ಕಣ್ಣುಗಳಿಂದ ಭಾವಾಶ್ರುಗಳು ಹರಿಯತೊಡಗಿದವು, ಅವನು ತನ್ನ ಅಸ್ತಿತ್ವವನ್ನು ಮರೆತನು. ಅವನ ಚೇತನಾ ಜಾಗೃತವಾಯಿತು, ಆಗ ಅವನು, ‘ಬೇಟೆ ಸಿಕ್ಕಿತು, ಬೇಟೆ ಸಿಕ್ಕಿತು’ ಎಂದು ಜೋರಾಗಿ ಕೂಗತೊಡಗಿದನು.

ಶ್ರೀಕೃಷ್ಣನು ಅವನ ಕಡೆಗೆ ಮುಗುಳ್ನಗೆ ಬೀರುತ್ತಾ ನೋಡುತ್ತಿದ್ದನು. ಬೇಟೆಗಾರನು ಶ್ರೀಕೃಷ್ಣನನ್ನು ಬೇಟೆಯಂತೆ ಹೆಗಲ ಮೇಲೆ ಹೊತ್ತುಕೊಂಡು ಸಂತರ ಬಳಿಗೆ ಬಂದನು. ಶ್ರೀಕೃಷ್ಣನು ಜಾಲದಲ್ಲಿ ಮುಗುಳ್ನಗು ಬೀರುತ್ತಿರುವ ದೃಶ್ಯವನ್ನು ನೋಡಿ ಸಂತರ ಪ್ರಜ್ಞೆ ತಪ್ಪಿತು. ಎಚ್ಚರಗೊಂಡಾಗ ಅವರು ಬೇಟೆಗಾರನ ಕಾಲುಗಳನ್ನು ಹಿಡಿದು ನಮಸ್ಕಾರ ಮಾಡಿದರು. ಅವರು ಶ್ರೀಕೃಷ್ಣನಿಗೆ ಅಂಜಿಕೆಯ ಸ್ವರದಲ್ಲಿ, ‘ಹೇ ನಾಥಾ, ನಾನು ಚಿಕ್ಕವನಿದ್ದಾಗಿನಿಂದ ಎಷ್ಟು ಪ್ರಯತ್ನಿಸಿದೆನು. ನಿಮ್ಮ ಪ್ರಾಪ್ತಿಗಾಗಿ ಮನೆ-ಮಠವನ್ನು ಬಿಟ್ಟೆನು, ಭಜನೆಯನ್ನು ಮಾಡಿದೆನು. ನೀವು ಭೇಟಿಯಾಗಲಿಲ್ಲ; ಆದರೆ ಇವನಿಗೆ ಕೇವಲ ೩ ದಿನಗಳಲ್ಲಿ ಭೇಟಿಯಾದಿರಿ ಎಂದರು. ಆಗ ಭಗವಂತನು, ‘ನಿಮ್ಮ ಮೇಲೆ ಇರುವ ಇವನ ಅಪರಿಮಿತ ಪ್ರೇಮ ಮತ್ತು ನೀಡಿದ ವಚನದ ಮೇಲಿನ ದೃಢ ವಿಶ್ವಾಸವನ್ನು ನೋಡಿ ನನಗೆ ಇವನ ಬಳಿ ಬರದೇ ಇರಲು ಸಾಧ್ಯವಾಗಲಿಲ್ಲ’ ಎಂದನು.

ಭಗವಂತನು ಭಕ್ತರ, ಅಂದರೆ ಸಂತರ ಆಧೀನನಾಗಿರುತ್ತಾನೆ. ಬೇಟೆಗಾರನಿಗೆ ಭಗವಂತನೆಂದರೆ ಯಾರು ಎಂಬುದೂ ಗೊತ್ತಿರಲಿಲ್ಲ; ಆದರೆ ಅವನು ಸಂತರಿಗೆ ಪ್ರತಿದಿನ ನಮಸ್ಕಾರ ಮಾಡುತ್ತಿದ್ದನು. ಸಂತರಿಗೆ ನಮಸ್ಕಾರ ಮಾಡುವುದು ಮತ್ತು ಸಂತದರ್ಶನದ ಫಲದಿಂದ ಅವನಿಗೆ ೩ ದಿನಗಳಲ್ಲಿ ಭಗವಂತನ ದರ್ಶನವಾಯಿತು.

ಲೇಖಕರು : ಶ್ರೀ. ವಿಜಯ ಅನಂತ ಆಠವಲೆ