ಇಡೀ ವಿಶ್ವವನ್ನು ವ್ಯಾಪಿಸಿಕೊಂಡಿರುವ ಆಕಾಶಕ್ಕಿಂತ ತಂದೆಯೇ ಶ್ರೇಷ್ಠ !

‘ಯಕ್ಷ : ಆಕಾಶಕ್ಕಿಂತ ದೊಡ್ಡದು ಯಾವುದು ?

ಯುಧಿಷ್ಠಿರ : ತಂದೆ

ಆಕಾಶವೆಂದರೆ ಅಂತರಿಕ್ಷ, ಟೊಳ್ಳು, ಮಧ್ಯದ ಅವಕಾಶ, ಟೊಳ್ಳು ಸ್ಥಾನ (ಜಾಗ). ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳ ಪೈಕಿ ಕೊನೆಯ ಮಹಾಭೂತವೆಂದರೆ ಆಕಾಶ. ಈ ಮಹಾಭೂತವನ್ನು ‘ಶಬ್ದಗುಣಕ’ವೆಂದೂ ಗುರುತಿಸಲಾಗುತ್ತದೆ. ಆಕಾಶವೆಂದರೆ ‘ವಿಭೂ’ ಅಂದರೆ ಸರ್ವವ್ಯಾಪಿ ಅನಂತ ಅವಕಾಶರೂಪಿ ತತ್ತ್ವ.

ಛಾಂದೋಗ್ಯ ಉಪನಿಷತ್ತು ಆಕಾಶವನ್ನು ‘ಜಗತ್ತಿನಲ್ಲಿನ ಎಲ್ಲ ಉತ್ಪತ್ತಿಗೆ ಕಾರಣವಾಗಿದೆ ಎಂದು ಒಪ್ಪಿಕೊಂಡಿದೆ’. ಈ ವಿಶ್ವದ ಗತಿ ಏನಾಗುವುದು ? ಎಂಬ ಪ್ರಶ್ನೆಯನ್ನು ಪ್ರವಾಹಣ ಜೈವಲೀಲಾ ಇವನು ಕೇಳಿದಾಗ ಅವರು ಉತ್ತರ ನೀಡಿದರು –

ಆಕಾಶ ಇತಿ ಹೋವಾಚ |

ಸರ್ವಾಣಿ ಹ ವಾ ಇಮಾನಿ ಭೂತಾನ್ಯಾಕಾಶಾದೇವ ಸಮುತ್ಪದ್ಯನ್ತ

ಆಕಾಶಂ ಪ್ರತ್ಯಸ್ತಂ ಯನ್ತಿ |

ಆಕಾಶೋ ಹಿ ಏವ ಏಭ್ಯೋ ಜ್ಯಾಯಾನ್ | ಆಕಾಶಃ ಪರಾಯಣಮ್ |

– ಛಾಂದೋಗ್ಯ ಉಪನಿಷತ್ತು, ಅಧ್ಯಾಯ ೧, ಖಂಡ ೯, ಶ್ಲೋಕ ೧

ಅರ್ಥ : ಪ್ರವಾಹಣರು ಹೇಳುತ್ತಾರೆ, “ಆಕಾಶವೇ ಈ ಪೃಥ್ವಿಲೋಕದ ಆಶ್ರಯವಾಗಿದೆ. ಎಲ್ಲ ಭೂತಗಳು ಆಕಾಶದಿಂದ ಉತ್ಪನ್ನವಾಗುತ್ತವೆ ಮತ್ತು ಕೊನೆಗೆ ಆಕಾಶದಲ್ಲಿಯೇ ವಿಲೀನವಾಗುತ್ತವೆ. ಈ ಜಗತ್ತಿನಲ್ಲಿ ಆಕಾಶವೇ ಸರ್ವಶ್ರೇಷ್ಠವಾಗಿದೆ. ಅದೇ ಕೊನೆಯ ಪರಮಸ್ಥಾನವಾಗಿದೆ”.

ವೈಶೆಷಿಕ ದರ್ಶನವು ಒಟ್ಟು ಒಂಭತ್ತು ‘ದ್ರವ್ಯಗಳನ್ನು’, ಒಪ್ಪಿಕೊಂಡಿದೆ, ಪೃಥ್ವಿ, ಜಲ, ತೇಜ, ವಾಯು, ಆಕಾಶ, ಕಾಲ, ದಿಕ್ಕು, ಆತ್ಮ ಮತ್ತು ಮನಸ್ಸು ಇವು ಆ ಒಂಭತ್ತು ದ್ರವ್ಯಗಳಾಗಿವೆ. ‘ಇವುಗಳ ಪೈಕಿ ‘ಆಕಾಶ’ವು ಐದನೇಯ ದ್ರವ್ಯವಾಗಿದೆ’. ಇದು ವಿಭೂ ಅಂದರೆ ಸರ್ವವ್ಯಾಪಿ ದ್ರವ್ಯವಾಗಿದ್ದು ಅದು ಎಲ್ಲ ಕಾಲಗಳಲ್ಲಿ ಸ್ಥಿರ ಮತ್ತು  ಧೃಢವಾಗಿರುತ್ತದೆ.

ಆಕಾಶಕ್ಕೆ ‘ಶಬ್ದಗುಣಕ’ ಎಂದೂ ಹೇಳುವುದು !

ಆಕಾಶವೆಂದರೆ ಅವಕಾಶ, ಟೊಳ್ಳು, ನಮ್ಮ ಹೃದಯಕ್ಕೆ ಹೃದಯಾವಕಾಶವೆಂದು ಹೇಳುತ್ತಾರೆ. ಆಕಾಶವು ಅನಂತವಾಗಿದೆ. ಪ್ರಚಂಡ ಮತ್ತು ನಿಗೂಢವಾಗಿದೆ (ಅನಾಕಲನೀಯ). ಪಕ್ಷಿಗಳು ಅಥವಾ ಮನುಷ್ಯನು ಎಷ್ಟೇ ಎತ್ತರಕ್ಕೆ ಹೋದರೂ, ಅವರಿಗೆ ಆಕಾಶವನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ, ಯಾವಾಗಲೂ ಅದು ‘ಹತ್ತು ಅಂಗುಲ’ ಮೇಲೆಯೇ ಇರುತ್ತದೆ ! ಆಕಾಶವು ಎಲ್ಲಿಯಾದರೂ ಪೃಥ್ವಿಗೆ ತಾಗಿಕೊಂಡಿರಬಹುದು, ಎಂದೆನಿಸುವುದು ನಮ್ಮ ಭ್ರಮೆಯಾಗಿರುತ್ತದೆ. ಆಕಾಶರೂಪಿ ಟೊಳ್ಳು ನಮ್ಮ ಶರೀರದಲ್ಲಿಯೂ ಇರುತ್ತದೆ, ಆದ್ದರಿಂದ ನಮಗೆ ಧ್ವನಿ, ನಾದ ಮತ್ತು ಶಬ್ದಗಳನ್ನು ಪ್ರಕಟ ಮಾಡಲು ಬರುತ್ತದೆ, ಆದುದರಿಂದ ಆಕಾಶಕ್ಕೆ ಶಬ್ದಗುಣಕ ಎಂದೂ ಹೇಳಲಾಗಿದೆ.

 ಅಮರಕೋಶದಲ್ಲಿನ ಆಕಾಶದ ಕೆಲವು ಹೆಸರುಗಳು – ದ್ಯೋ, ದಿವ, ಅಭ್ರ, ವ್ಯೋಮ, ಪುಷ್ಕರ, ಅಂಬರ, ನಭ, ಅಂತರಿಕ್ಷ, ಗಗನ, ಅನಂತ, ರವ, ಸುರವರ್ತ್ಮನ. ಹೀಗೆ ಸಂಪೂರ್ಣ ವಿಶ್ವವನ್ನು ವ್ಯಾಪಿಸಿಕೊಂಡಿರುವ ಈ ಆಕಾಶಕ್ಕಿಂತಲೂ ತಂದೆ ಶ್ರೇಷ್ಠನೆಂದು ಯುಧಿಷ್ಠಿರನು ಯಕ್ಷನಿಗೆ ಹೇಳಿದ್ದಾನೆ. ಅಮರಕೋಶದಲ್ಲಿ ತಂದೆಗೆ ‘ತಾತ’ ‘ಜನಕ’ ಮತ್ತು ‘ಪಿತಾ’ ಎಂಬ ಹೆಸರುಗಳಿವೆ. ತಂದೆಯ ಶ್ರೇಷ್ಠತ್ವವನ್ನು ಹೇಳುವ ಅನೇಕ ವಚನಗಳು ರಾಮಾಯಣ ಮತ್ತು ಮಹಾಭಾರತದಲ್ಲಿ ಅಲ್ಲಲ್ಲಿ ಬಂದಿವೆ. ಪಿತೃಭಕ್ತ ಮಕ್ಕಳ ಕಥೆಗಳೂ ಪುರಾಣದಲ್ಲಿ ಮತ್ತು ಸಂಸ್ಕೃತ ಸಾಹಿತ್ಯಗಳಲ್ಲಿ ಕಂಡು ಬರುತ್ತವೆ. ಪ್ರತಿಯೊಬ್ಬ ಮಗನು, ಪುತ್ರನು ತನ್ನ ತಂದೆ, ಜನಕ, ತಾತ ಇವನನ್ನೇ ದೈವತವೆಂದು (ದೇವರೆಂದು) ತಿಳಿದು ಮನಃಪೂರ್ವಕ ಅವನ ಸೇವೆಯನ್ನು ಮಾಡಬೇಕು. ವೃದ್ಧ ಮತ್ತು ಕಾಯಿಲೆಯಿಂದ ಪೀಡಿತ ತಂದೆಯನ್ನು ದುರ್ಲಕ್ಷಿಸಿ ಅಥವಾ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಮಕ್ಕಳು ತಮ್ಮ ಪಾಪವನ್ನೇ ಹೆಚ್ಚಿಸುತ್ತಿರುತ್ತಾರೆ, ಯುವಕರು ಇದನ್ನು ಎಂದಿಗೂ ಮರೆಯಬಾರದು.

– ದಾಜಿ ಪಣಶೀಕರ (ಆಧಾರ : ಸಾಮನಾ, ೩೦.೫.೨೦೧೦)