ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕೃತಿಗಳು

ಯಾವುದೇ ಹಬ್ಬ ಬಂದರೆ ಆ ಹಬ್ಬದ ವೈಶಿಷ್ಟ್ಯದಂತೆ ಮತ್ತು ನಮ್ಮ ಪದ್ಧತಿಯಂತೆ ನಾವು ಏನಾದರೂ ಮಾಡುತ್ತಿರುತ್ತೇವೆ; ಆದರೆ ಧರ್ಮದಲ್ಲಿ ಹೇಳಿದಂತಹ ಇಂತಹ ಪಾರಂಪರಿಕ ಕೃತಿಯ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡರೆ ಅದರ ಮಹತ್ವವು ನಮಗೆ ಹಿಡಿಸುತ್ತದೆ. ಇಲ್ಲಿ ನಾವು ಯುಗಾದಿಯಂದು ಮಾಡಬೇಕಾದ ಧಾರ್ಮಿಕ ಕೃತಿಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅಭ್ಯಂಗಸ್ನಾನ

ಅಭ್ಯಂಗ ಸ್ನಾನ

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ. ಯುಗಾದಿ ಪಾಡ್ಯದಂದು ಮುಂಜಾನೆ ಬೇಗನೇ ಎದ್ದು ಮೊದಲು ಅಭ್ಯಂಗ ಸ್ನಾನವನ್ನು ಮಾಡಬೇಕು. ಅಭ್ಯಂಗ ಸ್ನಾನ ಮಾಡುವಾಗ ದೇಶಕಾಲ ಕಥನ ಮಾಡಬೇಕು. ಬ್ರಹ್ಮದೇವನ ಜನ್ಮವಾದಾಗಿನಿಂದ ಇಲ್ಲಿಯವರೆಗೆ ಬ್ರಹ್ಮದೇವನ ಎಷ್ಟು ವರ್ಷಗಳಾದವು; ಯಾವ ವರ್ಷದಲ್ಲಿನ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ; ಈ ಮನ್ವಂತರದಲ್ಲಿನ ಎಷ್ಟನೆಯ ಮಹಾಯುಗ ಮತ್ತು ಆ ಮಹಾಯುಗದಲ್ಲಿನ ಯಾವ ಉಪಯುಗ ನಡೆದಿದೆ, ಇವೆಲ್ಲವುಗಳ ಉಲ್ಲೇಖವು ದೇಶಕಾಲಕಥನದಲ್ಲಿ ಇರುತ್ತದೆ. ಈ ರೀತಿ ದೇಶಕಾಲ ಕಥನ ಮಾಡುವುದಿರುತ್ತದೆ. ಇದರಿಂದ ಇದಕ್ಕಿಂತ ಮೊದಲು ಎಷ್ಟು ದೊಡ್ಡ ಕಾಲವು ಗತಿಸಿದೆ ಮತ್ತು ಉಳಿದ ಕಾಲವೂ ಎಷ್ಟು ದೊಡ್ಡದಾಗಿದೆ ಎನ್ನುವುದರ ಕಲ್ಪನೆಯು ಬರುತ್ತದೆ. ‘ನಾನು ಬಹಳ ದೊಡ್ಡವನಾಗಿದ್ದೇನೆ’ ಎಂದು ಪ್ರತಿಯೊಬ್ಬನಿಗೂ ಅನಿಸುತ್ತಿರುತ್ತದೆ; ಆದರೆ ‘ನಾವೆಷ್ಟು ಚಿಕ್ಕವರು ಮತ್ತು ಎಷ್ಟು ಸೂಕ್ಷ್ಮರಾಗಿದ್ದೇವೆ’ ಎಂಬುದರ  ಕಲ್ಪನೆಯು ಈ ವಿಶ್ವದ ಬೃಹತ್ ಕಾಲವನ್ನು ಮನಗಂಡಾಗ ಅರಿವಾಗುತ್ತದೆ. ಇದರಿಂದ ಮನುಷ್ಯನ ಗರ್ವವು ನಾಶವಾಗುತ್ತದೆ.’

ತೋರಣವನ್ನು ಕಟ್ಟುವುದು

ತೋರಣವನ್ನು ಕಟ್ಟುವುದು

ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಕಟ್ಟಬೇಕು; ಏಕೆಂದರೆ ಕೆಂಪು ಬಣ್ಣ ಶುಭ ಸೂಚಕವಾಗಿದೆ.

ಸಂವತ್ಸರ ಪೂಜೆ

ಸಂವತ್ಸರ ಪೂಜೆ

ಮೊದಲು ನಿತ್ಯಕರ್ಮ ಮಾಡಿ ದೇವರ ಪೂಜೆಯನ್ನು ಮಾಡಬೇಕು. ‘ವರ್ಷದ ಪಾಡ್ಯದಂದು ಮಹಾಶಾಂತಿ ಮಾಡಬೇಕು. ಶಾಂತಿಯ ಪ್ರಾರಂಭದಲ್ಲಿ ಬ್ರಹ್ಮದೇವನ ಪೂಜೆಯನ್ನು ಮಾಡಬೇಕು; ಏಕೆಂದರೆ ಬ್ರಹ್ಮದೇವನು ವಿಶ್ವದ ನಿರ್ಮಾಣ ಮಾಡಿದನು. ಪೂಜೆಯಲ್ಲಿ ಅವನಿಗೆ ದವನವನ್ನು (ಸುವಾಸನೆಯ ಎಲೆಗಳನ್ನು) ಅರ್ಪಿಸಬೇಕು. ಅನಂತರ ಹೋಮ-ಹವನ ಮತ್ತು ಬ್ರಾಹ್ಮಣಸಂತರ್ಪಣೆ ಮಾಡಬೇಕು. ತರುವಾಯ ಅನಂತರೂಪಗಳಲ್ಲಿ ಅವತರಿಸುವ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ‘ನಮಸ್ತೇ ಬಹುರೂಪಾಯ ವಿಷ್ಣವೇ ನಮಃ |’, ಎನ್ನುವ ಮಂತ್ರವನ್ನು ಹೇಳಿ ಅವನಿಗೆ ನಮಸ್ಕರಿಸಬೇಕು. ಅನಂತರ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು.

ಬ್ರಹ್ಮಧ್ವಜವನ್ನು ಏರಿಸುವುದು

೧. ಬ್ರಹ್ಮಧ್ವಜವನ್ನು ಸೂರ್ಯೋದಯದ ನಂತರ ಕೂಡಲೇ ನಿಲ್ಲಿಸಬೇಕಾಗಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ (ಉದಾ. ತಿಥಿಕ್ಷಯ) ಮಾತ್ರ ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು.

೨. ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ.

೩. ‘ಬ್ರಹ್ಮಧ್ವಜಾಯ ನಮಃ’ ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಬ್ರಹ್ಮಧ್ವಜದ ಪೂಜೆಯನ್ನು ಮಾಡಬೇಕು.

ಪಂಚಾಂಗ ಶ್ರವಣ

ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು.

ಲಾಭ

ತಿಥೇಶ್ಚ ಶ್ರೀಕರಂ ಪ್ರೋಕ್ತಂ ವಾರಾದಾಯುಷ್ಯವರ್ಧನಮ್ |

ನಕ್ಷತ್ರಾದ್ಧರತೆ ಪಾಪಂ ಯೋಗಾ ದ್ರೋಗನಿವಾರಣಮ್ ||

ಕರಣಾಚ್ಚಿಂತಿತಂ ಕಾರ್ಯಂ ಪಂಚಾಂಗಫಲಮುತ್ತಮಮ್ |

ಏತೇಷಾಂ ಶ್ರವಣಾನ್ನಿತ್ಯಂ ಗಂಗಾ ಸ್ನಾನಫಲಂ ಲಭೇತ್ ||

ಅರ್ಥ : ತಿಥಿಯ ಶ್ರವಣದಿಂದ ಲಕ್ಷ್ಮೀಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ. ನಕ್ಷತ್ರ ಶ್ರವಣದಿಂದ ಪಾಪನಾಶವಾಗುತ್ತದೆ, ಯೋಗ ಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.’

ಬೇವಿನ ಪ್ರಸಾದ

ಇತರ ಯಾವುದೇ ಪದಾರ್ಥಕ್ಕಿಂತ ಬೇವಿನಲ್ಲಿ ಪ್ರಜಾಪತಿ ಲಹರಿಗಳನ್ನು ಗ್ರಹಣ ಮಾಡುವ ಕ್ಷಮತೆ ಹೆಚ್ಚಿರುವುದರಿಂದ ಯುಗಾದಿ ದಿನ ಕಹಿಬೇವಿನ ಪ್ರಸಾದ ತಿನ್ನುತ್ತಾರೆ. ಕಹಿ ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೆಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನು ಬೆರೆಸಿ ಪ್ರಸಾದ ತಯಾರಿಸುತ್ತಾರೆ ಮತ್ತು ಅದನ್ನು ಎಲ್ಲರಿಗೂ ಹಂಚುತ್ತಾರೆ.

ಭೂಮಿಯನ್ನು ಉಳುವುದು

ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜದ ಮೊಳಕೆಯೊಡೆಯುವ ಭೂಮಿಯ ಸಾಮಥ್ರ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ-ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು ಹಾಕಬೇಕು. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಬೇಕು. ಈ ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ, ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರಬೇಕು.

ದಾನ

ಯಾಚಕರಿಗೆ ಅನೇಕ ವಿಧದ ದಾನ ಕೊಡಬೇಕು, ಅರವಟಿಗೆ (ಜಲ ಮಂದಿರ) ನಿರ್ಮಿಸಿ ನೀರಿನ ದಾನ ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.