ರಷ್ಯಾ-ಉಕ್ರೇನ್ ಯುದ್ಧ ಮತ್ತು ತ್ರಿವರ್ಣಧ್ವಜದ ಮೌಲ್ಯ !

‘ಯುದ್ಧಸ್ಯ ಕಥಾ ರಮ್ಯಃ |’ ಈ ಸಂಸ್ಕೃತ ವಚನದ ಸಾರ್ಥಕತೆ ಈಗ ಜಗತ್ತಿನಾದ್ಯಂತ ಶ್ರೋತೃಗಳು ಮತ್ತು ವಾಚಕರು ಅನುಭವಿಸುತ್ತಿದ್ದಾರೆ. ಸದ್ಯ ಜಗತ್ತಿನಾದ್ಯಂತ ರಷ್ಯಾ-ಉಕ್ರೇನ್ ಯುದ್ಧದ ನಿಮಿತ್ತ ‘ಇದು ಮುಂಬರುವ ಮೂರನೇ ಮಹಾಯುದ್ಧಕ್ಕೆ ಕಾರಣವಾಗಿದೆಯೇ ?’ ಎಂದು ಚರ್ಚೆಯಾಗುತ್ತಿದೆ. ಯುದ್ಧದಲ್ಲಿ ಭಾರತದ ತಟಸ್ಥ ವಿದೇಶಾಂಗ ನೀತಿ ಮತ್ತು ಉಕ್ರೇನ್‌ನಲ್ಲಿ ವಿದ್ಯಾರ್ಥಿಗಳ ರಕ್ಷಣೆಗಾಗಿ ನಡೆಯುತ್ತಿರುವ ‘ಆಪರೇಶನ್ ಗಂಗಾ’ ಈ ವಿಷಯವು ಭಾರತದಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಎರಡು ವಿಷಯಗಳ ಸಂಕ್ಷಿಪ್ತ ವಿಶ್ಲೇಷಣೆಯನ್ನು ನೀಡುವ ಲೇಖನ…

೧. ಭಾರತದ ತಟಸ್ಥ ವಿದೇಶನೀತಿ ಮತ್ತು ‘ಆಪರೇಶನ್ ಗಂಗಾ’

ಶ್ರೀ. ವಿನೋದ ಕಾಮತ

ರಷ್ಯಾ-ಉಕ್ರೇನ್ ಯುದ್ಧದ ಆರಂಭಿಕ ಹಂತದಲ್ಲಿ, ಜಗತ್ತಿನಾದ್ಯಂತ ರಾಜತಾಂತ್ರಿಕರು ವಿಶ್ವದ ಇತರೆ ದೇಶಗಳು ಯಾರ ಪರವಾಗಿ ನಿಂತಿವೆ ಮತ್ತು ಭಾರತವು ಯಾವ ಪಾತ್ರವನ್ನು ವಹಿಸಲಿದೆ, ಎಂಬ ಚರ್ಚೆ ಮಾಡುತ್ತಿದ್ದರು. ಯುರೋ-ಅಮೆರಿಕಾ ರಾಷ್ಟ್ರಗಳು ಉಕ್ರೇನ್ ಬಗ್ಗೆ ಸಹಾನುಭೂತಿ ಹೊಂದಿದ್ದರೂ, ಭಾರತವು ರಷ್ಯಾ ಅಥವಾ ಉಕ್ರೇನ್‌ಗೆ ಮತ ಹಾಕದೆ ತಟಸ್ಥವಾಗಿದ್ದು, ‘ಈ ವಿಷಯ ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ತಂದು ಈ ವಿವಾದ ಬಗೆಹರಿಸಬೇಕು’, ಎಂದು ನಿಲುವು ತಾಳಿದೆ. ಇದರಿಂದಾಗಿ ಬ್ರಿಟಿಷ್ ಮತ್ತು ಅಮೇರಿಕಾದ ದಿನಪತ್ರಿಕೆಗಳು ಭಾರತದ ಮೇಲೆ ವೈಚಾರಿಕ ಹಲ್ಲೆ ನಡೆಸಿದವು. ಭಾರತದ ವಿದೇಶಾಂಗ ನೀತಿ ಕ್ರೂರವಾಗಿದೆ ಎಂಬ ವಾತಾವರಣ ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿದೆ; ಆದರೆ ಭಾರತ ಸರಕಾರ ಅದಕ್ಕೆ ಜಗ್ಗಲಿಲ್ಲ. ಇದಕ್ಕೆ ರಷ್ಯಾ ಮತ್ತು ಉಕ್ರೇನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರು ಕಾರಣವಾಗಿದೆ !

ಒಂದು ಲಕ್ಷಕ್ಕಿಂತಲೂ ಹೆಚ್ಚು ಭಾರತೀಯ ಮತ್ತು ಭಾರತೀಯ ವಿದ್ಯಾರ್ಥಿಗಳು ಈಗ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ರಷ್ಯಾ ಮತ್ತು ಉಕ್ರೇನ್‌ನಲ್ಲಿ ನೆಲೆಸಿದ್ದಾರೆ. ಯುದ್ಧದಲ್ಲಿ ಯಾವುದೇ ಒಂದು ದೇಶದ ಪರವಾಗಿ ನಿಂತರೆ ಅಲ್ಲಿನ ಭಾರತೀಯ ಪ್ರಜೆಗಳನ್ನು ಅಸುರಕ್ಷಿತರನ್ನಾಗಿಸಿದಂತಾಗುತ್ತದೆ. ಭಾರತವು ತಟಸ್ಥ ನಿಲುವನ್ನು ತೆಗೆದುಕೊಂಡು ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳ ಮುಖ್ಯಸ್ಥರೊಂದಿಗೆ ಸಂವಾದವನ್ನು ಸಾಧಿಸಿತು, ಅದು ಉಕ್ರೇನ್‌ನಿಂದ ಭಾರತೀಯರು ಪೋಲೆಂಡ್, ಬೆಲಾರೂಸ್ ಮತ್ತು ರೊಮೇನಿಯಾ ಈ ದೇಶಗಳ ಗಡಿಗಳನ್ನು ಸುರಕ್ಷಿತವಾಗಿ ದಾಟಲು ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ಈ ಹೆಜ್ಜೆ ಇಟ್ಟಿತು ! ರಷ್ಯಾವು ಭಾರತೀಯ ತ್ರಿವರ್ಣ ಧ್ವಜವಿರುವ ಜನ ಸಮೂಹ ಮತ್ತು ವಾಹನಗಳ ಮೇಲೆ ಸೇನೆ ದಾಳಿ ನಡೆಸುವುದಿಲ್ಲ ಎಂದು ಘೋಷಿಸಿದೆ. ಉಕ್ರೇನ್, ಭಾರತೀಯರನ್ನು ಪೋಲೆಂಡ್, ಬೆಲಾರೂಸ್ ಮತ್ತು ರೊಮೇನಿಯಾದ ಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಘೋಷಿಸಿತು. ಪೋಲೆಂಡ್ ಮತ್ತು ರೊಮೇನಿಯಾದಲ್ಲಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಬರುವ ಭಾರತೀಯರು ಮತ್ತು ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲು ಬರುತ್ತಿರುವ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ಭಾರತದ ನಾಲ್ಕು ಕೇಂದ್ರ ಸಚಿವರು ಆ ದೇಶಗಳಲ್ಲಿ ಪೂರ್ಣಾವಧಿ ಇದ್ದಾರೆ. ಅಂತರರಾಷ್ಟ್ರೀಯ ಕಾನೂನಿನ ತೊಡಕನ್ನು ಬಗೆಹರಿಸಿ ‘ಆಪರೇಶನ್ ಗಂಗಾ’ ಮೂಲಕ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳುಹಿಸಲಾಗುತ್ತಿದೆ. ಇಂದು ಅಮೇರಿಕಾ- ಚೀನಾ-ಯುರೋಪಿಯನ್ ರಾಷ್ಟ್ರಗಳು ಕೇವಲ ಆರ್ಥಿಕ ಲಾಭಕ್ಕಾಗಿ ರಷ್ಯಾ ಅಥವಾ ಉಕ್ರೇನ್‌ನ ಪರವಾಗಿ ನಿಲ್ಲುತ್ತಿವೆ.

ಅಮೇರಿಕಾ ಮತ್ತು ಯುರೋಪಿಯನ್ ಮೂಲದ ಲಕ್ಷಾಂತರ ನಾಗರಿಕರು ಇಂದಿಗೂ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ; ಆದರೆ ಅವರ ಜೀವದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಮತ್ತೊಂದೆಡೆ ಭಾರತೀಯ ಸಂಸ್ಕೃತಿ ‘ಅರ್ಥ’ ಪರಿಕಲ್ಪನೆಗಿಂತ ‘ಜೀವನ’ ಪರಿಕಲ್ಪನೆಗೆ ಹೆಚ್ಚಿನ ಮಹತ್ವವನ್ನು ನೀಡುವುದರಿಂದ, ಭಾರತವು ತೋರಿಕೆಯ ವ್ಯಾವಹಾರಿಕತೆಯನ್ನು ತೋರಿಸದೇ ಜಗತ್ತಿನೆದುರು ಹೊಸ ಪರಿಪಾಠವನ್ನು ಹಾಕಿಕೊಂಡಿದೆ. ಜಗತ್ತಿನಾದ್ಯಂತ ಭಾರತದ ತ್ರಿವರ್ಣ ಧ್ವಜದ ಹೆಚ್ಚಿದ ಮೌಲ್ಯದ ಅನುಭವವಾಗುತ್ತಿದೆ. ಭಾರತೀಯ ತ್ರಿವರ್ಣ ಧ್ವಜವಿರುವ ವಾಹನಗಳು ಸುರಕ್ಷಿತವಾಗಿ ಉಕ್ರೇನ್‌ನಿಂದ ಹೊರ ಬರುತ್ತಿವೆ. ಭಾರತದ ಬದ್ಧ ವಿರೋಧಿಯಾಗಿರುವ ಪಾಕಿಸ್ತಾನ ಮತ್ತು ತುರ್ಕಸ್ತಾನದ ನಾಗರಿಕರು ಸಹ ಉಕ್ರೇನ್‌ನಿಂದ ಭಾರತದ ತ್ರಿವರ್ಣಧ್ವಜದ ಆಶ್ರಯದಲ್ಲಿ ಸ್ಥಳಾಂತರವಾಗುತ್ತಿದ್ದಾರೆ.

೨. ಉಕ್ರೇನ್‌ಗೆ ನೇರ ಬೆಂಬಲವನ್ನು ನಿರಾಕರಿಸುವುದು ವ್ಯಾವಹಾರಿಕ ದೃಷ್ಟಿಯಲ್ಲಿ ಯೋಗ್ಯವೇ ಆಗಿದೆ !

ವಿದೇಶಾಂಗ ನೀತಿ ಭಾವನಾತ್ಮಕವಾಗಿರದೇ, ವ್ಯಾವಹಾರಿಕವಾಗಿರುತ್ತದೆ. ಉಭಯ ದೇಶಗಳ ನಡುವಿನ ಸ್ನೇಹವನ್ನು ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿಂದ ನಿರ್ಧರಿಸಲಾಗುತ್ತದೆ. ರಷ್ಯಾದ ದಾಳಿಯಿಂದ ಜಗತ್ತಿನಾದ್ಯಂತ ಅನುಕಂಪದ ಅಲೆ ಪಡೆಯುತ್ತಿರುವ ಉಕ್ರೇನ್ ಭಾರತಕ್ಕೆ ಎಷ್ಟು ಸಹಾಯ ಮಾಡಿದೆ, ಎಂಬುದರ ‘ಹೋಮ್‌ವರ್ಕ’ ಭಾರತೀಯ ವಿದೇಶಾಂಗ ಸಚಿವಾಲಯವು ಈಗಾಗಲೇ ಮಾಡಿಟ್ಟಿದೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ೩೭೦ ವಿಷಯ ಬಂದಾಗ ಉಕ್ರೇನ್ ಭಾರತದ ವಿರುದ್ಧ ಅಭಿಪ್ರಾಯ ಮಂಡಿಸಿತು. ಭಾರತ ಪರಮಾಣು ಪರೀಕ್ಷಣೆ ಮಾಡಿದಾಗಲೂ ಉಕ್ರೇನ್ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮತ ಹಾಕಿತ್ತು. ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ವಿಚಾರದಲ್ಲಿ ಉಕ್ರೇನ್ ಕೂಡ ವಿರೋಧ ವ್ಯಕ್ತಪಡಿಸಿತ್ತು. ಭಾರತದ ಸಾಂಪ್ರದಾಯಿಕ ಶತ್ರುವಾದ ಪಾಕಿಸ್ತಾನಕ್ಕೆ ಉಕ್ರೇನ್ ಶಸ್ತ್ರಾಸ್ತ್ರಗಳನ್ನು ನೀಡಿದೆ. ಭಾರತಕ್ಕೆ ಪರಮಾಣು ಶಕ್ತಿಗಾಗಿ ಯುರೇನಿಯಂ ಅಗತ್ಯವಿದ್ದಾಗ, ಯುರೇನಿಯಂ ನಿಕ್ಷೇಪಗಳನ್ನು ಹೊಂದಿದ ಉಕ್ರೇನ್ ಅದನ್ನು ನೀಡಲು ನಿರಾಕರಿಸಿತು. ಆದ್ದರಿಂದ ವ್ಯಾವಹಾರಿಕವಾಗಿ, ಉಕ್ರೇನ್ ಪರ ವಹಿಸದಿರುವುದು ಸೂಕ್ತವಾಗುತ್ತದೆ.

೩. ರಷ್ಯಾಕ್ಕೆ ಕೃತಜ್ಞತೆ ಸಲ್ಲಿಕೆ !

ಭಾರತದ ಸ್ವಾತಂತ್ರ್ಯದ ನಂತರ, ರಷ್ಯಾ ಭಾರತದ ಸಾಂಪ್ರದಾಯಿಕ ಮಿತ್ರರಾಷ್ಟ್ರವಾಗಿ ಉಳಿಯಿತು, ಆಗ  ಉಕ್ರೇನ್ ಉದಯಿಸಿರಲಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವೆ ‘ಸ್ಲಾವ’ ನಾಗರಿಕ ಜನಾಂಗ ಒಂದೇಯಾಗಿದೆ. ಸ್ಲಾವ ನಾಗರಿಕ ಭಾಷೆಗಳಲ್ಲಿ ಸಂಸ್ಕೃತ ಪದಗಳು ಅತ್ಯಧಿಕ ಇವೆ. ವಿಶ್ವ ಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ರಷ್ಯಾ ತನ್ನ ನಕಾರಾಧಿಕಾರವನ್ನು ಬಳಸಿಕೊಂಡು ೧೯೬೫ ಮತ್ತು ೧೯೭೧ ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧಗಳಲ್ಲಿ ಭಾರತವನ್ನು ಬೆಂಬಲಿಸಿತ್ತು. ಶಕ್ತಿಶಾಲಿ ಕ್ಷಿಪಣಿ ‘ಬ್ರಹ್ಮೋಸ್’ ಭಾರತದಲ್ಲೇ ತಯಾರಾಗುತ್ತಿದೆ, ಇದಕ್ಕೆ ಏಕೈಕ ಕಾರಣವೆಂದರೆ ರಷ್ಯಾದ ಭಾರತದ ಮೇಲಿನ ಪ್ರೀತಿ ! ಉಕ್ರೇನ್ ಮೂಲತಃ ರಷ್ಯಾದ ಭಾಗವಾಗಿದೆ. ಭಾಷೆ, ಸಂಸ್ಕೃತಿ ರಷ್ಯನ್ ಆಗಿದೆ. ಹೀಗಿರುವಾಗ ಉಕ್ರೇನ್ ರಷ್ಯಾದ ವಿರುದ್ಧ ಹೋಗಿ ಅಮೇರಿಕದ ಹಿಂದೆಬಿದ್ದು ನ್ಯಾಟೋದ ಹಿಂದೆ ಹೋಗುತ್ತಿದ್ದರೆ ಅದು ಮಾತೃಭೂಮಿಗೆ ಮಾಡಿದ ದ್ರೋಹ ಎಂದೇ ಹೇಳಬೇಕಾಗುತ್ತದೆ. ಉಕ್ರೇನ್ ದೇಶವು ನ್ಯಾಟೋ ದೇಶಗಳು ಮತ್ತು ರಷ್ಯಾದ ಗಡಿಗಳ ನಡುವಿನ ‘ಬಫರ್ ಸ್ಟೇಟ್’ ಆಗಿದೆ. ಇಂತಹ ಸಮಯದಲ್ಲಿ ಉಕ್ರೇನ್ ನ್ಯಾಟೋಗೆ ಸೇರ್ಪಡೆಗೊಂಡರೆ ನ್ಯಾಟೋ ಅಂದರೆ ಪರ್ಯಾಯವಾಗಿ ರಷ್ಯಾದ ಪ್ರತಿಸ್ಪರ್ಧಿ ಅಮೇರಿಕಾ ರಷ್ಯಾದ ಗಡಿ ತಲುಪಲಿದ್ದು, ಇಂತಹ ಸಮಯದಲ್ಲಿ ರಷ್ಯಾ ಯುದ್ಧಕ್ಕೆ ಮುಂದಾಗಿರುವುದು ಆತ್ಮರಕ್ಷಣೆಯ ವಿಚಾರವಾಗಿದೆ. ಸ್ವಾತಂತ್ರ ವೀರ ಸಾವರಕರರು, ಆಕ್ರಮಣ ಇದೊಂದೇ ತನ್ನ ರಕ್ಷಣೆಯ ಉತ್ತಮ ಮಾರ್ಗ ಎಂದಿದ್ದರು. ಪ್ರಸ್ತುತ ರಷ್ಯಾ ವಿರೋಧಿ ಧೋರಣೆ ತಳೆಯದೆ ರಷ್ಯಾ ಹಿಂದೆಲ್ಲ ಮಾಡಿದ ನೆರವನ್ನು ಭಾರತ ಕೃತಜ್ಞತೆಯಿಂದ ತೀರಿಸಿದೆ. ಭವಿಷ್ಯದಲ್ಲಿ ಮೂರನೇ ಮಹಾಯುದ್ಧವಾದಾಗ ಭಾರತದ ವಿದೇಶಾಂಗ ನೀತಿಯು ರಷ್ಯಾ-ಚೀನಾ ಪರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾಲವೇ ಉತ್ತರಿಸಬೇಕು.

– ಶ್ರೀ. ವಿನೋದ ಕಾಮತ್, ವಕ್ತಾರರು, ಸನಾತನ ಸಂಸ್ಥೆ