ನಾವು ೨೧ ನೇ ಶತಮಾನದ ಕಡೆಗೆ ಮಾರ್ಗಕ್ರಮಿಸುತ್ತಿರುವಾಗ ಸುಮಾರು ಶೇ. ೮೦ ರಷ್ಟು ಜನರು (ಪುತ್ರ, ಪುತ್ರಿಯರು) ತಮಗೆ ಜನ್ಮ ನೀಡಿದ ತಾಯಿ-ತಂದೆಯರನ್ನು ದುರ್ಲಕ್ಷಿಸುತ್ತಿದ್ದಾರೆ. ಯಾರು ನಮ್ಮನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಚಿಕ್ಕವರಿಂದ ದೊಡ್ಡವರನ್ನಾಗಿ ಮಾಡಿದರೋ, ನಮ್ಮ ಪಾಲನೆ-ಪೋಷಣೆಯನ್ನು ಮಾಡಿದರೋ, ಅವರನ್ನೇ ನಾವು ದೊಡ್ಡವರಾದ ನಂತರ ಅಥವಾ ವಿವಾಹವಾದ ನಂತರ ದ್ವೇಷ, ತಿರಸ್ಕಾರ ಮಾಡಿ ಅಥವಾ ಮರೆತು ಸಹ ಬಿಡುತ್ತೇವೆ; ಆಗ ‘ನಾವು ಸಹ ಒಂದಲ್ಲ ಒಂದು ದಿನ ಮುದುಕರು ಅಥವಾ ವೃದ್ಧರಾಗುವೆವು’ ಎಂಬುದನ್ನು ಮಾತ್ರ ಮರೆಯುತ್ತೇವೆ. ತಾಯಿ-ತಂದೆಗೆ ವೃದ್ಧಾಪ್ಯದಲ್ಲಿ ಮಕ್ಕಳಿಂದ ಯಾವ ಅಪೇಕ್ಷೆ ಇರುತ್ತದೆಯೋ, ಅದು ಪೂರ್ಣವಾಗುವುದಿಲ್ಲ.
ಇದಕ್ಕಾಗಿ ನಾನು, ಇನ್ನು ಮುಂದೆ ಯಾರು ತಾಯಿ-ತಂದೆಯಾಗುವವರಿದ್ದಾರೆಯೋ ಅಥವಾ ಯಾರು ಆಗಿದ್ದಾರೆಯೋ ಅಥವಾ ಯಾರ ಕೈಯಲ್ಲಿ ಇದುವರೆಗೆ ಎಲ್ಲ ಅಧಿಕಾರಗಳಿವೆಯೋ, ಅಂತಹ ತಾಯಿ-ತಂದೆಯರು ಮುಂದಿನ ಕಾಳಜಿಗಳನ್ನು ವಹಿಸಿದರೆ, ತಮ್ಮ ಮೇಲೆ ವೃದ್ಧಾಪ್ಯದಲ್ಲಿ ಯಾವ ಸಮಸ್ಯೆಗಳು ಉತ್ಪನ್ನವಾಗುತ್ತವೆಯೋ, ಅವು ತನ್ನಷ್ಟಕ್ಕೆ ದೂರವಾಗಲು ಸಹಾಯವಾಗಲಿದೆ ಎಂದು ಹೇಳಲಿಚ್ಛಿಸುತ್ತೇನೆ.
ವೃದ್ಧಾಪ್ಯಕಾಲದಲ್ಲಿ ಮುಂದೆ ಕೊಟ್ಟಂತೆ ವರ್ತಿಸಬೇಕು
೧. ಪ್ರತಿಯೊಂದು ವಿಷಯದ ಕಡೆಗೆ, ಹಾಗೆಯೇ ತಮ್ಮ ವೃದ್ಧಾಪ್ಯದತ್ತ ತಟಸ್ಥ ದೃಷ್ಟಿಯಿಂದಿರಬೇಕು. ಆದಷ್ಟು ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.
೨. ನಾವು ಇಂದಿನ ವರೆಗೆ ಕಳೆದ ನಮ್ಮ ಜೀವನದಲ್ಲಿನ ಅಧಿಕಾರ, ಮಾನ-ಸನ್ಮಾನಗಳನ್ನು ಇಳಿ ವಯಸ್ಸಿನಲ್ಲಿ ಇತರರ ಮೇಲೆ ಹೇರಬಾರದು. ಇದರಿಂದ ವಿನಾಕಾರಣ ಸಂಘರ್ಷ ಒತ್ತಡ ಮತ್ತು ದುಃಖಗಳು ಉದ್ಭವಿಸಬಹುದು.
೩. ನಾವು ಕುಟುಂಬದಲ್ಲಿ ಇತರರ ಮೇಲೆ ಸಂಪೂರ್ಣ ಅವಲಂಬಿಸಿರಬಾರದು. ನಮಗೆ ಸಾಧ್ಯವಿದ್ದಷ್ಟು ಸಣ್ಣಪುಟ್ಟ ಕೆಲಸಗಳನ್ನು ನಾವು ಸ್ವತಃ ಮಾಡಬೇಕು.
೪. ನಮ್ಮ ವರ್ತನೆಯಲ್ಲಿ ಒಂದು ರೀತಿಯ ಹೊಂದಾಣಿಕೆಯನ್ನು ಇಟ್ಟುಕೊಳ್ಳಬೇಕು. ಎಲ್ಲ ರೀತಿಯ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಬೇಕು. ಮಕ್ಕಳು ಕೇಳಿದರೆ ಮಾತ್ರ, ಸಲಹೆಯನ್ನು ಕೊಡಬೇಕು. ಅನಾವಶ್ಯಕ (ಕೇಳದಿದ್ದರೆ) ಸಲಹೆಗಳನ್ನು ಕೊಡಬಾರದು.
೫. ನಮ್ಮ ಯುವ ವಯಸ್ಸಿನಲ್ಲಿ ಪಾಲಿಸಿದಂತಹ ರೂಢಿ, ಪರಂಪರೆ, ಸಂಸ್ಕಾರಗಳನ್ನು ವೃದ್ದಾಪ್ಯದಲ್ಲಿ (ಬದಲಾಗಿರುವ ಜೀವನಶೈಲಿಯ ವಿಚಾರ ಮಾಡಿ) ಯುವಕರ ಮೇಲೆ ಹೇರಬಾರದು. ಹಾಗೆಯೇ ಹೊಸ ಪೀಳಿಗೆಗೆ ಬೆಟ್ಟು ತೋರಿಸದೇ ಅವರೊಂದಿಗೆ ಹೊಂದಿಕೊಳ್ಳಬೇಕು.
೬. ಎಷ್ಟೇ ಗಂಭೀರ ಪರಿಸ್ಥಿತಿ ಉದ್ಭವಿಸಿದರೂ, ನಾವು ಗಳಿಸಿದ ನಮ್ಮ ಸಂಪೂರ್ಣ ಹಣವನ್ನು (ಆಸ್ತಿಯನ್ನು) ಮಕ್ಕಳಿಗೆ ಕೊಡಬಾರದು ಅಥವಾ ಅವರಿಗಾಗಿ ಖರ್ಚು ಮಾಡಬಾರದು. ಈ ರೀತಿಯ ಉದಾರತೆಯು ಮುಂದೆ ತೊಂದರೆಗಳನ್ನು ತರಬಹುದು.
೭. ಸಮಾಜದಲ್ಲಿ ಇಂದಿಗೂ ತಾವು ಸ್ವತಃ ಸಂಪಾದಿಸಿದ್ದರೂ ವೃದ್ಧಾಪ್ಯ ಕಾಲಕ್ಕಾಗಿ ಹಣವನ್ನು ಸಂಗ್ರಹಿಸಿಡುವ ಸ್ತ್ರೀಯರು ತುಂಬಾ ಕಡಿಮೆಯಿದ್ದಾರೆ. ಆದುದರಿಂದ ಪತಿಯು ಎಲ್ಲ ಹಣವನ್ನು ಮಕ್ಕಳಿಗೆ ಕೊಟ್ಟು ತನ್ನ ಪತ್ನಿಯನ್ನು ನಿರಾಶ್ರಿತಳನ್ನಾಗಿ ಮಾಡಬಾರದು.
೮. ತಮ್ಮ ನಿದ್ರೆ ಕಡಿಮೆಯಾದ ಬಗ್ಗೆ, ಹಾಗೆಯೇ ಹೊರಗಿನ ಹೆಚ್ಚುತ್ತಿರುವ ವೇಗವಾದ ಜೀವನದ ಬಗ್ಗೆ ಮತ್ತು ಕುಟುಂಬದಲ್ಲಿನ ಕಿರಿಯ-ಹಿರಿಯ ವ್ಯಕ್ತಿಗಳ ಜೀವನದ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು.
೯. ಮನೆಯಲ್ಲಿನ ಇತರರಿಗೆ ನಮ್ಮಿಂದ ಯಾವುದೇ ಅಡಚಣೆ ಆಗಬಾರದೆಂದು ನಮ್ಮ ಎಲ್ಲ ಕಾರ್ಯಕ್ರಮಗಳನ್ನು ಸಮಯಬಂದರೆ ಎಲ್ಲವನ್ನೂ ಬದಲಾಯಿಸುವ ಮಾನಸಿಕ ಸಿದ್ಧತೆಯನ್ನಿಟ್ಟುಕೊಳ್ಳಬೇಕು.
೧೦. ನಿಸರ್ಗದ ಸೌಂದರ್ಯದಲ್ಲಿ ಸಂತೋಷದಿಂದಿರಲು ಕಲಿಯಬೇಕು. ಪ್ರತಿದಿನ ಬೆಳಗ್ಗೆ ಎದ್ದು ಹೊರಗಿನ ತಂಪುಗಾಳಿಯಲ್ಲಿ ತಿರುಗಾಡಲು ಹೋಗಬೇಕು. ಇದರಿಂದ ಮಾನಸಿಕ ಆನಂದ ಮತ್ತು ವ್ಯಾಯಾಮ ಈ ಎರಡೂ ಸಾಧ್ಯವಾಗುವವು.
೧೧. ದಿನದಲ್ಲಿನ ಬಹಳಷ್ಟು ಸಮಯವನ್ನು ಆಧ್ಯಾತ್ಮಿಕ ವಾಚನ, ಮನನ, ಚಿಂತನ ಮತ್ತು ಧ್ಯಾನ ಇವುಗಳಿಗಾಗಿ ಕೊಡಬೇಕು.
೧೨. ಸತತವಾಗಿ ಧ್ಯಾನದಿಂದ ಆತ್ಮಸಾಕ್ಷಾತ್ಕಾರಕ್ಕಾಗಿ (ಆತ್ಮಾನುಭೂತಿಯನ್ನು ಪಡೆಯಲು) ಪ್ರಯತ್ನಿಸಬೇಕು.
೧೩. ಊಟದಲ್ಲಿ ಸಾಧ್ಯವಿದ್ದಷ್ಟು ಅನ್ನ, ಚಪಾತಿ, ರೊಟ್ಟಿ, ಸಿಹಿ, ಸ್ನಿಗ್ಧ (ಎಣ್ಣೆಯುಕ್ತ) ಪದಾರ್ಥಗಳ ಪ್ರಮಾಣವನ್ನು ಕಡಿಮೆ ಮಾಡಿ ಪಲ್ಯ, ಕೊಸಂಬರಿ, ಹಣ್ಣು, ಹಾಲು, ಮಜ್ಜಿಗೆ, ಮೊಸರು ಇವುಗಳ ಪ್ರಮಾಣವನ್ನು ಹೆಚ್ಚಿಸಬೇಕು.
೧೪. ಶಾರೀರಿಕ ಸ್ವಚ್ಛತೆ, ಮಾನಸಿಕ ಮತ್ತು ಭಾವನಾತ್ಮಕ ಪಾವಿತ್ರ್ಯವನ್ನು ಕಾಯ್ದುಕೊಳ್ಳಬೇಕು.
೧೫. ಗಿಡದಲ್ಲಿನ ಹಚ್ಚಹಸಿರು ಹೊಸಹೊಸ ಚಿಗುರು ಒಡೆಯುವ ಎಲೆಗಳ ವಿಚಾರ ಮಾಡಿ ಮನಸ್ಸನ್ನು ಆನಂದದಲ್ಲಿರಿಸಬೇಕು. ಒಣಗಿದ ಎಲೆಗಳು ಉದುರಲೇಬೇಕು.
– ಶ್ರೀ. ದಿಲೀಪ ಹಿರಾಲಾಲ ಹೆಡಾ, ಸಟಾಣಾ, ನಾಶಿಕ ಜಿಲ್ಲೆ.
(ಆಧಾರ : ಅಕ್ಕಲಕೋಟ ಸ್ವಾಮಿದರ್ಶನ)