ರಥಸಪ್ತಮಿ (೭.೨.೨೦೨೨)

ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿಯ ದಿನ. ಇಂದಿಗೆ ಚಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುತ್ತದೆ. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವ ಪದ್ಧತಿಯಿದೆ. ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.

ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುತ್ತಾರೆ. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುತ್ತಾರೆ. ಹೀಗೆ ೧೦೮ ನಮಸ್ಕಾರಗಳನ್ನು ಮಾಡುತ್ತಾರೆ. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುತ್ತಾರೆ. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ. ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ ರೀತ್ಯಾ ಒಂದು ನಮಸ್ಕಾರವನ್ನು ೧೨ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು. ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುತ್ತಾರೆ ಮತ್ತು ಇತರರೂ ಸೇವಿಸುತ್ತಾರೆ.

ಒಡಿಶಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು, ಅಸ್ಸಾಂನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವುಗಳು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು. ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು ಸಂಜನಾ ಮತ್ತು ಛಾಯಾ. ಮನು, ಯಮ, ಯಮುನಾ, ಕರ್ಣ, ಸುಗ್ರೀವ ಮುಂತಾದವರು ಅವನ ಮಕ್ಕಳು. ಶ್ರೀರಾಮನು ಸೂರ್ಯನ ವಂಶಜನು.

– ಶ್ರೀ. ಸಮರ್ಥ ಕಾಂತಾವರ