ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೩ ನೇ ವರ್ಷದ ವರ್ಧಂತ್ಯುತ್ಸವದ ನಿಮಿತ್ತ ಸಂತರು ಮತ್ತು ಗಣ್ಯರ ಸಂದೇಶ !

ಸನಾತನ ಪ್ರಭಾತವು ಸಮಾಜದ ಸಂಘಟನೆ ಮತ್ತು ಬಲವರ್ಧನೆಯ ದಿಶೆಯಲ್ಲಿ ಉತ್ತಮ ಸೇವೆ-ಸಾಧನೆ ಮಾಡಿದೆ ! – ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ

ಡಾ. ಡಿ. ವೀರೇಂದ್ರ ಹೆಗ್ಗಡೆ

‘ಸನಾತನ ಪ್ರಭಾತ’ ವಾರಪತ್ರಿಕೆಯು ಯಶಸ್ವಿಯಾಗಿ ೨೩ ವರ್ಷಗಳ ಸೇವೆಯನ್ನು ಪೂರೈಸಿ ವರ್ಧಂತ್ಯುತ್ಸವ ಸಂದರ್ಭ ವಿಶೇಷಾಂಕ ಪ್ರಕಟಿಸಲಿರುವ ವಿಚಾರ ತಿಳಿದು ಸಂತೋಷವಾಯಿತು. ಧರ್ಮಪ್ರಭಾವನೆ ಹಾಗೂ ಧರ್ಮಜಾಗೃತಿಯೊಂದಿಗೆ ನಿಮ್ಮ ಪತ್ರಿಕೆಯು ವಿದ್ವಾಂಸರಿಂದ ಉಪಯುಕ್ತ ಮಾಹಿತಿ, ಮಾರ್ಗದರ್ಶನದೊಂದಿಗೆ ಉತ್ತಮ ಲೇಖನಗಳನ್ನು ಪ್ರಕಟಿಸುತ್ತಿರುವುದು ಸ್ತುತ್ಯಾರ್ಹವಾಗಿದೆ. ಪತ್ರಿಕೆಗಳು ಸಾಮಾಜಿಕ ಪರಿವರ್ತನೆಯ ಪ್ರಬಲ ಮಾಧ್ಯಮವಾಗಿವೆ. ಜೊತೆಗೆ ಓದುಗರಿಗೆ ಚಿಂತನ-ಮಂಥನಕ್ಕೆ ಗ್ರಾಸವಾದ ವಿಚಾರಗಳನ್ನೂ ಪ್ರಕಟಿಸಿ ಓದುಗರ ಆಸಕ್ತಿಯನ್ನು ಅರಳಿಸಿ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆ ನೀಡುತ್ತವೆ. ತನ್ಮೂಲಕ ಸಮಾಜದ ಸಂಘಟನೆ ಮತ್ತು ಬಲವರ್ಧನೆಯೊಂದಿಗೆ ಆರೋಗ್ಯಪೂರ್ಣ, ಸಭ್ಯ, ಸುಸಂಸ್ಕೃತ ಸಮಾಜ ನಿಮಾರ್ಣಕ್ಕೂ ಮಾರ್ಗದರ್ಶನ ನೀಡುತ್ತವೆ.

ಈ ದಿಸೆಯಲ್ಲಿ ‘ಸನಾತನ ಪ್ರಭಾತ’ ಉತ್ತಮ ಸೇವೆ-ಸಾಧನೆ ಮಾಡಿದೆ. ಅಭಿನಂದನೆಗಳು. ೨೩ ನೇ ವರ್ಧಂತ್ಯುತ್ಸವ ಸಂದರ್ಭದಲ್ಲಿ ವಿಶೇಷಾಂಕವನ್ನು ಪ್ರಕಟಿಸಲಿರುವ ವಿಚಾರ ತಿಳಿದು ಸಂತೋಷವಾಯಿತು. ಧರ್ಮಜಾಗೃತಿ ಹಾಗೂ ಸಮಾಜದ ಸಂಘಟನೆಗೆ ಪೂರಕವಾದ ಲೇಖನಗಳೊಂದಿಗೆ ವಿಶೇಷ ಸಂಚಿಕೆ ಉತ್ತಮ ಮಾಹಿತಿಯ ಕಣಜವಾಗಿ ಪ್ರಕಟವಾಗಲೆಂದು ಆಶಿಸುತ್ತಾ, ಈ ದಿಸೆಯಲ್ಲಿ ನಿಮ್ಮೆಲ್ಲರ ಪ್ರಯತ್ನ-ಪರಿಶ್ರಮ ಯಶಸ್ವಿಯಾಗುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

– ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ, ದಕ್ಷಿಣ ಕನ್ನಡ ಜಿಲ್ಲೆ

ಜಗತ್ತಿನ ಹಿಂದೂಗಳಿಗೆ ಉತ್ತೇಜನ ನೀಡುವ ಪತ್ರಿಕೆ – ಶ್ರೀ ದೇವಬಾಬಾ

ಪ.ಪೂ. ದೇವಬಾಬಾ

ಪರಾತ್ಪರ ಗುರು ಡಾ. ಅಠವಲೆಯವರು ಸನಾತನ ಸಂಸ್ಥೆ ಎಂಬ ಆಧ್ಯಾತ್ಮಿಕ ಸಂಘಟನೆಯನ್ನು ಸ್ಥಾಪಿಸಿದರು. ಕ್ರಮೇಣ ನಮ್ಮ ದೇಶದ ವಿವಿಧ ಭಾಗಗಳಲ್ಲೂ ಇದರ ಕೇಂದ್ರಗಳು ತೆರೆಯಲ್ಪಟ್ಟವು. ಇವರ ಸಂಸ್ಥೆಯು ಮೇಲೆ ಬರಲು ಮುಖ್ಯ ಕಾರಣವೆಂದರೆ ಸನಾತನ ಪ್ರಭಾತ ಪತ್ರಿಕೆ. ಇಡೀ ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಪತ್ರಿಕೆಯು ಸ್ಥಳೀಯ ಭಾಷಾ ಪತ್ರಿಕೆಯಾಗಿ, ವಾರ ಪತ್ರಿಕೆ, ಪಾಕ್ಷಿಕ ಪತ್ರಿಕೆ ಹೀಗೆ ವಿವಿಧ ರೀತಿಯ ಪತ್ರಿಕೆಗಳು ಹೊರಬಂದವು.

ಜಗತ್ತಿನಲ್ಲಿ ಹಿಂದೂಗಳು ಇದ್ದ ಎಲ್ಲಾ ರಾಷ್ಟ್ರಗಳಿಗೆ ಉತ್ತೇಜನವು ಈ ಪತ್ರಿಕೆಯ ಮೂಲಕ ದೊರೆಯಿತು. ಜನ ಜಾಗೃತಿಯು ಹೊಡೆದೆಬ್ಬಿಸಿದಂತೆ ಕಾಶ್ಮೀರದಂತಹ ಜಾಗದಲ್ಲೂ ಕೂಡಾ ಇಂದು ಹಿಂದೂಗಳ ರಕ್ಷಣಾ ವೇದಿಕೆಯು ಬಹಳ ಚುರುಕಾಗಿ ಕೆಲಸ ಮಾಡುತ್ತಿದೆ.

ಇಂತಹ ಪತ್ರಿಕೆಯು ೨೪ ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ೨೦೨೩ ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿ ಎಂಬುದನ್ನು ನಾವು ಹಾರೈಸುತ್ತೇವೆ. ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಆಶಯ ಹಾಗೂ ಆಶೀರ್ವಾದದಂತೆ, ಹಿಂದೂ ರಾಷ್ಟ್ರವಾಗಿ ನಮ್ಮೀ ದೇಶ ಮಾರ್ಪಾಟು ಹೊಂದಲಿ. ಇದು ಎಲ್ಲಾ ಭಾರತೀಯರ, ಹಿಂದೂಗಳ ಏಕೈಕ ಅಪೇಕ್ಷೆಯಾಗಿದೆ.

– ಪ.ಪೂ. ದೇವಬಾಬಾ, ಶ್ರೀ ಶಕ್ತಿದರ್ಶನ ಯೋಗಾಶ್ರಮ, ಎಳತ್ತೂರು, ಕಿನ್ನಿಗೋಳಿ.

ಸಮಾಜ ಸೇವೆ ಮಾಡುತ್ತಿರುವ ಸನಾತನ ಪ್ರಭಾತಕ್ಕೆ ಹೃತ್ಪೂರ್ವಕ ಅಭಿನಂದನೆ – ಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

– ಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

ಹಿಂದೂ ಧರ್ಮದ ಧಾರ್ಮಿಕ ಆಚಾರ-ವಿಚಾರಗಳ, ಸಾಮಾಜಿಕ ಜವಾಬ್ದಾರಿಗಳ ಕುರಿತಾಗಿ ಮಾರ್ಗದರ್ಶನ ನೀಡುವ ವಿಶೇಷ ಲೇಖನಗಳು, ಚಿತ್ರಪಟಗಳು, ಉಪನ್ಯಾಸಗಳು ಇವುಗಳನ್ನು ಒಳಗೊಂಡ ‘ಸನಾತನ ಪ್ರಭಾತ’ ಪತ್ರಿಕೆಯ ಮೂಲಕ ಸಮಾಜಸೇವೆಯನ್ನು ಗೈಯುತ್ತಿರುವುದಕ್ಕೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಶ್ರೀಕೃಷ್ಣಾನುಗ್ರಹದಿಂದ ಸನಾತನ ಪ್ರಭಾತವು ಉತ್ತರೋತ್ತರವಾಗಿ ಬೆಳೆಯಲಿ. ಇಂತು ಸಪ್ರೇಮ ನಾರಾಯಣ ಸ್ಮರಣೆಗಳೊಂದಿಗೆ

– ಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ಸನಾತನ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಿ ರಾಷ್ಟ್ರಹಿತಕ್ಕಾಗಿ ಕಟಿಬದ್ಧವಾಗಿರುವ ‘ಸನಾತನ ಪ್ರಭಾತ’ ! – ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳು

ಶ್ರೀಮದ್ ಗಂಗಾಧರೇಂದ್ರಸರಸ್ವತೀ

ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಆಶೀರ್ವಾದದಿಂದ ಮುನ್ನಡೆಯುತ್ತಿರುವ ‘ಸನಾತನ ಪ್ರಭಾತ’ ಪತ್ರಿಕೆಯು ೨೩ ನೆಯ ವರ್ಧಂತ್ಯುತ್ಸವವನ್ನು ಆಚರಿಸುತ್ತಿರುವ ವಿಷಯವನ್ನು ನಿವೇದಿಸಿದ್ದೀರಿ, ಸಂತೋಷ. ಭಾರತೀಯ ಸಂಸ್ಕೃತಿಗೆ ಸನಾತನ ಧರ್ಮವು ಭದ್ರ ಬುನಾದಿಯಾಗಿದೆ. ರಾಷ್ಟ್ರಹಿತ ಸಾಧನೆಗೂ ಧರ್ಮವೇ ಸಮರ್ಪಕ ಸಾಧನವಾಗಿದೆ. ಧರ್ಮವು ಸಮೃದ್ಧವಾಗಿರುವಾಗ ರಾಷ್ಟ್ರಕ್ಕೆ ಸುಭಿಕ್ಷ ಉಂಟಾಗುತ್ತದೆ, ಧರ್ಮವು ಕ್ಷೀಣವಾದಾಗ ರಾಷ್ಟ್ರಕ್ಕೆ ವಿಪತ್ತುಗಳು ಬಂದೆರಗುತ್ತವೆ. ಇದು ಪುರಾಣಕಾಲದಿಂದಲೂ ಕಂಡು-ಕೇಳಿ ಬರುತ್ತಿರುವ ವಾಸ್ತವ ಸಂಗತಿ. ಧರ್ಮವು ಆಚರಣೆಯಿಂದಲೇ ಸ್ಥಾಪಿಸಲ್ಪಡಬೇಕಾದದ್ದು. ಧರ್ಮದ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಹಾಗೂ ಶ್ರದ್ಧೆಗಳೇ ಧರ್ಮಾಚರಣೆಗೆ ಹಿನ್ನೆಲೆಯಾಗಿವೆ. ಧರ್ಮವನ್ನು ತಿಳಿಯಲು ನಾವು ವೇದ-ಶಾಸ್ತ್ರ-ಪುರಾಣ-ಇತಿಹಾಸಗಳನ್ನು ಮೊರೆ ಹೋಗಬೇಕು. ಅಂತೆಯೇ ಅವುಗಳನ್ನು ತಿಳಿದು, ಆಚರಣೆಯಲ್ಲಿರಿಸಿಕೊಂಡ ಮಹಾತ್ಮರ ನಡೆ-ನುಡಿಗಳೂ ಧರ್ಮವನ್ನು ತಿಳಿದುಕೊಳ್ಳಲು ಮಾರ್ಗದರ್ಶನ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ರಾಷ್ಟ್ರಹಿತ ಸಾಧನೆಗೆ ಕಟಿಬದ್ಧವಾಗಿರುವ ‘ಸನಾತನ ಪ್ರಭಾತ’ ಸಾಪ್ತಾಹಿಕ ಪತ್ರಿಕೆಯನ್ನು ಅಸ್ತಿಕ ಸಮಾಜಕ್ಕೆ ತಲುಪಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

೨೩ ನೇ ವರ್ಷದ ವರ್ಧಂತ್ಯುತ್ಸವವನ್ನು ಆಚರಿಸುತ್ತಿರುವ ಸನಾತನ ಪ್ರಭಾತ ಸಾಪ್ತಾಹಿಕ ಪತ್ರಿಕೆಯು ಧರ್ಮಜಾಗೃತಿಯ ಸಾಧನಾಪಥದಲ್ಲಿ ಇನ್ನಷ್ಟು ಶಕ್ತಿಯುತವಾಗಿ, ಪ್ರಭಾವಪೂರ್ಣವಾಗಿ ಮುನ್ನಡೆಯು ವಂತಾಗಲೆಂದು ಹಾರೈಸುತ್ತೇವೆ. ಉದಾತ್ತ ಸಂಕಲ್ಪದೊಂದಿದೆ ಈ ಪತ್ರಿಕೆಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಸಂಪಾದಕರಿಗೂ, ಎಲ್ಲ ಹಿತೈಷಿಗಳಿಗೂ ಹೆಚ್ಚಿನ ಶ್ರೇಯಸ್ಸು ದೊರೆಯುವಂತಾಗಲಿ, ಪತ್ರಿಕೆಯ ಸಮಸ್ತ ಓದುಗರಿಗೂ ಸನಾತನ ಧರ್ಮಶ್ರದ್ಧೆ, ರಾಷ್ಟ್ರಾಭಿಮಾನ ಜಾಗೃತವಾಗಲಿ, ಧರ್ಮಸಮೃದ್ಧಿಯಿಂದ ರಾಷ್ಟಕ್ಕ್ರೆ ಕ್ಷೇಮ ಉಂಟಾಗಲೆಂದು ಅರಾಧ್ಯ ಶ್ರೀ ದೇವರಲ್ಲಿ ಪ್ರಾರ್ಥಿಸಿ ಅಶೀರ್ವದಿಸುತ್ತೇವೆ.

– ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸ್ವರ್ಣವಲ್ಲಿ ಮಠ, ಶಿರಸಿ (ತಾ.)