ವಾಫಸಾ : ವೃಕ್ಷಗಳಿಗೆ ಆವಶ್ಯಕ ನೀರಿನ ಸ್ಥಿತಿ !

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ ಮಾಲಿಕೆ ೯

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/57146.html
ಸುಭಾಷ ಪಾಳೇಕರ್

‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ತಂತ್ರದ ‘ವಾಫಸಾ’ (ಮರಾಠಿ ಪದ) ಎಂಬುದು ಇನ್ನೊಂದು ಪ್ರಮುಖ ಸ್ತಂಭವಾಗಿದೆ. ಈ ಲೇಖನದಲ್ಲಿ ‘ವಾಫಸಾ ಎಂದರೇನು ?’, ಹಾಗೂ ವಾಫಸಾದ ಸ್ಥಿತಿ ಸಿದ್ಧವಾಗಲು ನೀರನ್ನು ಹೇಗೆ ಉಪಯೋಗಿಸಬೇಕು ? ಎಂಬುದನ್ನು ತಿಳಿದುಕೊಳ್ಳೋಣ.

ಸಂಕಲನಕಾರರು : ಸೌ. ರಾಘವಿ ಕೊನೆಕರ, ಢವಳಿ, ಫೋಂಡಾ, ಗೋವಾ.

(‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ತಂತ್ರವನ್ನು ಆಧರಿಸಿದ ಲೇಖನದಿಂದ ಸಂಕಲನ ಮಾಡಿದ ಲೇಖನ)

೧. ವಾಫಸಾ ಎಂದರೇನು ?

‘ಭೂಮಿಯಲ್ಲಿ ಮಣ್ಣಿನ ಎರಡು ಕಣಗಳ ನಡುವಿನ ಟೊಳ್ಳಿನಲ್ಲಿ ನೀರಿನ ಅಸ್ತಿತ್ವವಿರುವುದಿಲ್ಲ; ಬದಲಾಗಿ ಶೇ. ೫೦ ರಷ್ಟು ಬಾಷ್ಪ ಮತ್ತು ಶೇ. ೫೦ ರಷ್ಟು ಗಾಳಿಯ ಮಿಶ್ರಣವಿರುತ್ತದೆ’, ಇದನ್ನು ‘ವಾಫಸಾ’ ಎನ್ನುತ್ತಾರೆ. ವೃಕ್ಷಗಳ ಬೇರುಗಳು ನೀರಿನ ಅವಶ್ಯಕತೆಯನ್ನು ಬಾಷ್ಪ ರೂಪದ ನೀರಿನ ಕಣಗಳಿಂದ ಪೂರ್ಣಗೊಳಿಸುತ್ತವೆ. ಆದ್ದರಿಂದ ವೃಕ್ಷಗಳಿಗೆ ನೇರವಾದ ನೀರಿನದ್ದಲ್ಲ, ಬದಲಾಗಿ ಬಾಷ್ಪದ ಅವಶ್ಯಕತೆ ಇರುತ್ತದೆ. ಇದರೊಂದಿಗೆ ವೃಕ್ಷಗಳ ಬೇರುಗಳಿಗೆ ಮತ್ತು ಮಣ್ಣಿನಲ್ಲಿರುವ ವಿವಿಧ ಜೀವಾಣುಗಳಿಗೆ ಜೀವಿಸಲು ಗಾಳಿಯ ಅವಶ್ಯಕತೆ ಇರುತ್ತದೆ. ಅದರಿಂದ ಮಣ್ಣಿನಲ್ಲಿ ಗಾಳಿಯ ಸಂಚಾರವೂ ಆವಶ್ಯಕವಾಗಿರುತ್ತದೆ. ವಾಫಸಾದ ಸ್ಥಿತಿಯಲ್ಲಿ ಇವೆರಡೂ ವಿಷಯಗಳು ಪೂರ್ಣಗೊಳ್ಳುತ್ತವೆ. ಸುಲಭ ಭಾಷೆಯಲ್ಲಿ ಹೇಳುವುದಾದರೆ ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ತಂತ್ರದಲ್ಲಿ ನಮಗೆ ಭೂಮಿಯಲ್ಲಿ ಕೇವಲ ಆರ್ದ್ರತೆಯನ್ನು ಉಳಿಸಿಕೊಳ್ಳಲಿಕ್ಕಿರುತ್ತದೆ. ಹೆಚ್ಚುವರಿ ನೀರನ್ನು ಕೊಡುವ ಅವಶ್ಯಕತೆಯಿಲ್ಲ.

೨. ವಾಫಸಾವನ್ನು ಹೀರುವ ಬೇರುಗಳು ಎಲ್ಲಿರುತ್ತವೆ ?

ಯಾವುದೇ ವೃಕ್ಷದ ನೆರಳು ಮಧ್ಯಾಹ್ನ ೧೨ ಗಂಟೆಗೆ ಎಲ್ಲಿ ಬೀಳುತ್ತದೆಯೋ, ಆ ನೆರಳಿನ ಸೀಮೆಯಲ್ಲಿ ಆಹಾರದ್ರವ್ಯಗಳು ಮತ್ತು ವಾಫಸಾವನ್ನು ಹೀರಿಕೊಳ್ಳುವ ಬೇರುಗಳಿರುತ್ತವೆ. ಆದ್ದರಿಂದ ವೃಕ್ಷದ ಬುಡಕ್ಕೆ ನೀರನ್ನು ಹಾಕದೆ ಅದನ್ನು ನೆರಳಿನ ಸೀಮೆಯ ೫ – ೬ ಇಂಚು ಹೊರಗೆ ಹಾಕಬೇಕು. ಹೀಗೆ ಮಾಡುವುದರಿಂದ ಬೇರುಗಳು ತಮಗೆ ಬೇಕಾಗುವಷ್ಟು ವಾಫಸಾವನ್ನು ಹೀರಿಕೊಳ್ಳುತ್ತವೆ; ಆಗ ಹೆಚ್ಚುವರಿ ನೀರಿನ ಅಂಶದಿಂದ ಬೇರುಗಳು ಕೊಳೆಯುವ ಅಥವಾ ಬುರುಸು ಬರುವ ಸಾಧ್ಯತೆ ಕಡಿಮೆಯಿರುತ್ತದೆ.

೩. ನೀರನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವುದರಿಂದ ಉತ್ಪನ್ನ ಹೇಗೆ ಹೆಚ್ಚಾಗುವುದು ?

ವೃಕ್ಷದ ಬುಡದಿಂದ ೬ ಇಂಚು ದೂರ ನೀರನ್ನು ಉಣಿಸುವುದರಿಂದ ವೃಕ್ಷದ ಬೇರುಗಳು ವಾಫಸಾವನ್ನು ಹುಡುಕುತ್ತಾ ದೂರದ ವರೆಗೆ ಹರಡುತ್ತವೆ. ಬೇರುಗಳ ಬೆಳವಣಿಗೆ ಚೆನ್ನಾಗಿ ಆದರೆ, ಅದರಿಂದ ಕಾಂಡದ ಮೇಲೆ ನೇರವಾದ ಪರಿಣಾಮವಾಗುತ್ತದೆ ಹಾಗೂ ಕಾಂಡದ ಸುತ್ತಳತೆ (ಪರಿಧಿ) ಹೆಚ್ಚಾಗುತ್ತದೆ. ಕಾಂಡದ ಸುತ್ತಳತೆಯು ಎಷ್ಟು ಹೆಚ್ಚೊ ಅಷ್ಟು ಎಲೆಗಳು ತಯಾರಿಸುವ ಆಹಾರವು ಹೆಚ್ಚೆಚ್ಚು ಪ್ರಮಾಣದಲ್ಲಿ ಕಾಂಡದಲ್ಲಿ ಶೇಖರಣೆಯಾಗುತ್ತದೆ ಹಾಗೂ ಅದರಿಂದಾಗಿ ವೃಕ್ಷದ ಆಕಾರ, ಕೊಂಬೆಗಳ ಸಂಖ್ಯೆಗಳು ಹೆಚ್ಚಾಗುತ್ತವೆ. ಇವೆಲ್ಲದರ ಪರಿಣಾಮವೆಂದು ವೃಕ್ಷದಿಂದ ಸಿಗುವ ಉತ್ಪನ್ನವು ತನ್ನಿಂತಾನೆ ಹೆಚ್ಚಾಗುತ್ತದೆ.

೪. ವೃಕ್ಷಗಳಿಗೆ ನೀರು ಉಣಿಸುವ ಅವಶ್ಯಕತೆಯಿದೆ, ಎಂಬುದನ್ನು ಹೇಗೆ ಗುರುತಿಸುವುದು ?

ಕೇವಲ ನೀರುಣಿಸುವ ಸಮಯವಾಯಿತೆಂದು ವೃಕ್ಷಗಳಿಗೆ ಪ್ರತಿದಿನ ನೀರುಣಿಸಿದೆನು ಎಂದಾಗಬಾರದು, ವೃಕ್ಷಗಳ ಮತ್ತು ಮಣ್ಣಿನ ನಿರೀಕ್ಷಣೆ ಮಾಡಿ ವಾಫಸಾ ಇದೆಯೇ, ಎಂದು ಅಂದಾಜು ಮಾಡಿಕೊಂಡು ನಂತರವೇ ನೀರನ್ನುಣಿಸಬೇಕು. ಇದನ್ನು ಗುರುತಿಸಲು ಕುಂಡದಿಂದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅದನ್ನು ಲಾಡುವಿನಂತೆ ಗೋಲಾಕಾರ ಮಾಡಲು ಸಾಧ್ಯವಾಗುತ್ತದೆಯೇ ? ಎಂದು ನೋಡಬೇಕು. ಗೋಲಾಕಾರವಾದರೆ ನೀರಿನ ಅವಶ್ಯಕತೆ ಇರುವುದಿಲ್ಲ. ಮಣ್ಣಿನಲ್ಲಿ ಸಾಕಷ್ಟು ನೀರಿನ ಅಂಶವಿದೆ, ಎಂದು ತಿಳಿಯಬೇಕು. (ಒಮ್ಮೆ ಅಂದಾಜು ಬಂತೆಂದು ಪ್ರತಿದಿನ ಅಗೆದು ನೋಡುವ ಅವಶ್ಯಕತೆಯಿರುವುದಿಲ್ಲ) ಅದೇ ರೀತಿ ಕೆಲವೊಮ್ಮೆ ನೀರುಣಿಸುವ ಅವಶ್ಯಕತೆಯಿದ್ದರೆ, ಗಿಡಗಳ ತುದಿ ನಿಸ್ತೇಜವಾಗಿರುವುದು ಕಾಣಿಸುತ್ತವೆ. ಇಂತಹ ಲಕ್ಷಣಗಳಿದ್ದರೆ ನೀರುಣಿಸಬೇಕು.

ವೃಕ್ಷಗಳ ನೀರಿನ ಅವಶ್ಯಕತೆ ಋತುಮಾನಕ್ಕನುಸಾರ ಬದಲಾಗುತ್ತದೆ. ಮಳೆಗಾಲದ ೪ ತಿಂಗಳು ನಿರಂತರ ನೀರಿನ ತೇವಾಂಶವಿರುತ್ತದೆ. ಆದ್ದರಿಂದ ನೀರು ಕೊಡುವ ಅವಶ್ಯಕತೆ ಇರುವುದಿಲ್ಲ. ಚಳಿಗಾಲದಲ್ಲಿಯೂ ತಾಪಮಾನ ತುಂಬಾ ಕಡಿಮೆ ಇದ್ದರೆ, ೧-೨ ದಿನಗಳ ಅಂತರದಲ್ಲಿ ನೀರನ್ನು ನೀಡಿದರೆ ಸಾಕು. ಬೇಸಿಗೆಯಲ್ಲಿ ಮಾತ್ರ ನಿಯಮಿತವಾಗಿ ನೀರನ್ನು ಕೊಡಬೇಕು. ಕ್ರಮೇಣ ಅಭ್ಯಾಸದಿಂದ ಹಾಗೂ ನಿರೀಕ್ಷಣೆಯಿಂದ ಇದರಲ್ಲಿನ ಸೂಕ್ಷ್ಮತೆಯ ನಿಯಮ ಅರಿವಾಗುತ್ತದೆ.

೫. ನೀರಿನ ನಿರ್ವಹಣೆ ಬಗ್ಗೆ ಗಮನದಲ್ಲಿಡುವ ಇತರ ವಿಷಯಗಳು

ಅ. ಕುಂಡದಲ್ಲಿನ ಅಥವಾ ಮಡಿಯಲ್ಲಿನ ಮಣ್ಣು ಬಿಡಿಬಿಡಿಯಾಗಿ ಹಾಗೂ ನೀರನ್ನು ಹೀರಿಕೊಳ್ಳುವಂತಿರಬೇಕು. ಕುಂಡವನ್ನು ತುಂಬಿಸುವಾಗ ತಳದಲ್ಲಿ ರಂಧ್ರಗಳಿವೆಯೇ ಎಂಬುದನ್ನು ನೋಡಿಕೊಳ್ಳಬೇಕು ಹಾಗೂ ಆ ರಂಧ್ರಗಳಿಗೆ ಕರ್ಪೂರ ಅಥವಾ ಕಲ್ಲನ್ನು ಇಡಬೇಕು ಇದರಿಂದ ರಂಧ್ರದಿಂದ ಮಣ್ಣು ಹರಿದು ಹೋಗದೆ ಕೇವಲ ನೀರು ಹೊರಗೆ ಹೋಗಲು ಸಹಾಯವಾಗುತ್ತದೆ. ಅನಂತರ ತೆಂಗಿನಜುಟ್ಟು, ತರಗೆಲೆ ಇತ್ಯಾದಿಗಳನ್ನು ಹೆಚ್ಚು ಪ್ರಮಾಣದಲ್ಲಿ ಹಾಕಿ ಸ್ವಲ್ಪ ಪ್ರಮಾಣದಲ್ಲಿ ಮಣ್ಣನ್ನು ಹಾಕಬೇಕು ಹಾಗೂ ಅದರಲ್ಲಿ ಗಿಡಗಳನ್ನು ನೆಡಬೇಕು. (ಗಿಡದ ಬೇರುಗಳ ಸುತ್ತಲೂ ಮಣ್ಣು ಇಲ್ಲದಿದ್ದರೆ, ಗಿಡವನ್ನು ಮಣ್ಣಿನಲ್ಲಿಯೇ ನೆಡಬೇಕು; ತರಗೆಲೆಗಳಲ್ಲಿ ನೆಡಬಾರದು. ಬೇರುಗಳ ಸುತ್ತಲೂ ಮಣ್ಣಿನ ಗೆಡ್ಡೆ ಇದ್ದರೆ, ಅದರ ಸುತ್ತಲೂ ತರಗೆಲೆಗಳನ್ನು ಹರಡಬಹುದು) ಹೀಗೆ ಮಾಡುವುದರಿಂದ ನೀರು ಸರಿಯಾಗಿ ಬಸಿದು ಹೋಗಿ ನೀರಿನ ಅಂಶ ಹೆಚ್ಚಿರುವುದಿಲ್ಲ. ಮಣ್ಣು ತುಂಬಾ ಅಂಟಾಗಿದ್ದರೆ, ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮರಳನ್ನು ಮಿಶ್ರಣ ಮಾಡಬಹುದು.

ಆ. ಮಳೆಗಾಲದಲ್ಲಿ ಕುಂಡದಲ್ಲಿ ನೀರು ಶೇಖರಣೆಯಾಗುತ್ತಿಲ್ಲವಲ್ಲ ? ಎಂಬುದನ್ನು ನಿರೀಕ್ಷಣೆ ಮಾಡುತ್ತಿರಬೇಕು. ಶೇಖರಣೆಯಾದ ನೀರನ್ನು ಕುಂಡವನ್ನು ಬಗ್ಗಿಸಿ ತಕ್ಷಣ ತೆಗೆಯಬೇಕು.

ಇ. ನೀರನ್ನು ನೇರವಾಗಿ ಪೈಪ್‌ನಿಂದ ಹಾಕಬಾರದು; ಸಾಧ್ಯವಿದ್ದರೆ ಸ್ಪ್ರೇರೂಪದ ನೀರಿನ ಕ್ಯಾನ್ ಅಥವಾ ಪೈಪ್‌ಗೆ ಶವರ್ ಹಚ್ಚಿ ಹಾಕಬೇಕು. ಶಾವರನ್ನು ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸಬಹುದು. ಎಣ್ಣೆಯ ೫ ಲೀಟರ್ ಕ್ಷಮತೆಯ ಪ್ಲಾಸ್ಟಿಕಿನ ಖಾಲಿ ಕ್ಯಾನ್ ತೆಗೆದುಕೊಳ್ಳಬೇಕು. ಅದರ ಮುಚ್ಚಳಕ್ಕೆ ೧೦ – ೧೫ ಸಣ್ಣ ಸಣ್ಣ ರಂಧ್ರಗಳನ್ನು ಮಾಡಬೇಕು. ಈ ಕ್ಯಾನ್‌ಅನ್ನು ನೀರನ್ನು ಹಾಕಲು ಸ್ಪ್ರೇ ರೂಪದಲ್ಲಿ ಉಪಯೋಗಿಸಬಹುದು.

ಈ. ವಾಫಸಾದ ಸ್ಥಿತಿ ಯೋಗ್ಯ ರೀತಿಯಲ್ಲಿರಬೇಕೆಂದು ಆಚ್ಛಾದನೆ ತುಂಬಾ ಸಹಾಯಕವಾಗಿರುತ್ತದೆ. ಆದ್ದರಿಂದ ಆಚ್ಛಾದನೆಯನ್ನು (ಭೂಮಿಯ ಮೇಲ್ಭಾಗವನ್ನು ಮುಚ್ಚಿಡುವುದು) ಯೋಗ್ಯ ರೀತಿಯಲ್ಲಿ ಮಾಡಲಾಗಿದೆಯೇ ? ಎಂಬುದನ್ನು ಗಮನಿಸಬೇಕು. (ಆಚ್ಛಾದನೆ ವಿಷಯದಲ್ಲಿ ವಿಸ್ತಾರವಾದ ವಿವೇಚನೆಯನ್ನು ಸಾಪ್ತಾಹಿಕ ಕನ್ನಡ ಸನಾತನ ಪ್ರಭಾತದ ೨೩/೧೯ ನೇ ಸಂಚಿಕೆಯಲ್ಲಿ ಮುದ್ರಿಸಿದ ಲೇಖನದಲ್ಲಿ ಕೊಡಲಾಗಿದೆ.)

೬. ನೀರನ್ನು ಉಳಿತಾಯ ಮಾಡುವ ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ತಂತ್ರವು ಆಪತ್ಕಾಲಕ್ಕಾಗಿ ‘ಸಂಜೀವನಿ’ !

ನೀರನ್ನು ನಿರ್ಮಾಣ ಮಾಡಲು ನಮಗೆ ಸಾಧ್ಯವಿಲ್ಲ; ಆದರೆ ಉಪಲಬ್ಧವಿರುವ ನೀರನ್ನು ಮಿತವ್ಯಯದಿಂದ ಉಪಯೋಗಿಸುವುದು ನಮ್ಮ ಕೈಯಲ್ಲಿದೆ. ಈ ರೀತಿಯಲ್ಲಿ ನೀರನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿದರೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಉಪಯೋಗಿಸಿಯೂ ಉತ್ತಮವಾದ ಬೇಸಾಯ ಮಾಡಬಹುದು. ‘ಆಚ್ಛಾದನೆ’ ಮತ್ತು ಅದರಿಂದ ಸಿದ್ಧವಾಗಿರುವ ‘ಹ್ಯೂಮಸ್’ನ ಮೂಲಕ ಗಾಳಿಯಲ್ಲಿ ಆರ್ದ್ರತೆಯನ್ನು ಸೆಳೆದು ಅದನ್ನು ಬೇರುಗಳಿಗೆ ಉಪಲಬ್ಧವಾಗುವ ಕ್ರಿಯೆ ನಿರಂತರ ನಡೆಯುತ್ತಿರುತ್ತದೆ. ಆದ್ದರಿಂದ ವೃಕ್ಷದ ಒಟ್ಟು ನೀರಿನ ಅವಶ್ಯಕತೆಯಲ್ಲಿ ಕೇವಲ ಶೇ. ೧೦ ರಷ್ಟೇ ನೀರನ್ನು ನಾವು ಪೂರೈಸಬೇಕಾಗುತ್ತದೆ. ಆದ್ದರಿಂದಲೇ ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ತಂತ್ರವನ್ನು ಅವಲಂಬಿಸುವುದು ಆಪತ್ಕಾಲದಲ್ಲೂ ‘ಸಂಜೀವನಿ’ಯಾಗಿರುವುದು ಸಿದ್ಧವಾಗುತ್ತದೆ ! (೩೦.೧೨.೨೦೨೧)

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

ಕೈದೋಟಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಲೇಖನ ಕಳುಹಿಸಿ

‘ಗಿಡಗಳನ್ನು ಬೆಳೆಸುವುದು’ (ಕೃಷಿ ಮಾಡುವುದು) ಇದು ಒಂದು ಪ್ರಾಯೋಗಿಕ ವಿಷಯವಾಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಅನುಭವಗಳಿಗೂ ಬಹಳ ಮಹತ್ವವಿರುತ್ತದೆ. ಯಾವ ಸಾಧಕರು ಇಲ್ಲಿಯವರೆಗೆ ಕೃಷಿಯನ್ನು ಮಾಡಿಲ್ಲವೋ, ಅವರು ಕೃಷಿಯನ್ನು ಮಾಡುವಾಗ ತಮಗೆ ಬಂದ ಅನುಭವ, ಆದ ತಪ್ಪುಗಳು, ಆ ತಪ್ಪುಗಳಿಂದ ಕಲಿಯಲು ಸಿಕ್ಕಿದ ಅಂಶಗಳು, ಕೃಷಿಗೆ ಸಂಬಂಧಿಸಿದಂತೆ ಮಾಡಿದ ವೈಶಿಷ್ಟ್ಯಪೂರ್ಣ ಪ್ರಯೋಗ ಇವುಗಳ ಬಗೆಗಿನ ಬರವಣಿಗೆಯನ್ನು ತಮ್ಮ ಛಾಯಾಚಿತ್ರದೊಂದಿಗೆ ಕಳುಹಿಸಬೇಕು. ಈ ಬರವಣಿಗೆಯನ್ನು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಇತರರಿಗೂ ಕಲಿಯಲು ಸಿಗುತ್ತದೆ. ಬರವಣಿಗೆಯನ್ನು ಕಳುಹಿಸಲು

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, c/o ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಗಣಕೀಯ ವಿಳಾಸ : [email protected]  (‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ತಂತ್ರವನ್ನು ಆಧರಿಸಿದ ಲೇಖನದಿಂದ ಸಂಕಲನ ಮಾಡಿದ ಲೇಖನ)