ಪನ್ಹಾಲಗಡದಲ್ಲಿ ಪ್ರವಾಸಿಗರಿಂದ ಕೋಟೆಯ ಗೋಡೆ ಧ್ವಂಸ!

ಪನ್ಹಾಲ (ಕೋಲ್ಲಾಪುರ) – ಪ್ರವಾಸಿಗರು ಪನ್ಹಾಲಗಡದ ಪುಸಾಟಿ ಬುರುಜದ ಬಳಿಯ ಕೋಟೆ ಗೋಡೆಯ ಕಲ್ಲುಗಳನ್ನು ಕಣಿವೆಗೆ ಎಸೆದಿದ್ದಾರೆ. ಕೋಟೆ ಗೋಡೆಯ ದೊಡ್ಡ ಕಲ್ಲುಗಳನ್ನು ಕಣಿವೆಗೆ ತಳ್ಳುವುದು ಸುಲಭವಲ್ಲ, ಆದರೂ ಪ್ರವಾಸಿಗರು ಈ ಕೃತ್ಯವನ್ನು ಮಾಡಿದ್ದಾರೆ. ಪುಸಾಟಿ ಬುರುಜದ ಬಳಿ ಎರಡು ಪೊಲೀಸ್ ಠಾಣೆಗಳಿದ್ದರೂ ಈ ಘಟನೆ ನಡೆದಿದೆ.

ಕೋಟೆ ಗೋಡೆ ಮುರಿದಿರುವುದು ಬೆಳಗ್ಗೆ ಪನ್ಹಾಲಗಡದಲ್ಲಿ ತಿರುಗಾಡಲು ಬರುವ ಸ್ಥಳೀಯ ಜನರ ಗಮನಕ್ಕೆ ಬಂದಾಗ ಅವರು ಪುರಾತತ್ವ ಇಲಾಖೆಯ ವಿಭಾಗೀಯ ಅಧಿಕಾರಿ ವಿಜಯ ಚವ್ಹಾಣ್ ಅವರಿಗೆ ತಿಳಿಸಿದರು. ಇದಕ್ಕೆ ಚವ್ಹಾಣ್, “ನಮಗೆ ಈ ಘಟನೆಯ ಬಗ್ಗೆ ತಿಳಿದಿಲ್ಲ. ಕೆಳಗೆ ಬಿದ್ದಿರುವ ಕೋಟೆ ಗೋಡೆಯ ಕಲ್ಲುಗಳನ್ನು ಮೇಲೆ ತಂದು ದುರಸ್ತಿ ಮಾಡುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರ ಕೋಟೆಯನ್ನು ಹಾಳು ಮಾಡುವ ಪ್ರವಾಸಿಗರು ಪನ್ಹಾಲಗಡಕ್ಕೆ ಬರಬಾರದು” ಎಂದು ಅವರು ಮನವಿ ಮಾಡಿದ್ದು, ಸ್ಥಳೀಯ ಜನರು ಗಮನ ಹರಿಸಿದ್ದರಿಂದ ಕೋಟೆ ಉತ್ತಮ ಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. (ಕೇವಲ ಅಭಿಪ್ರಾಯ ವ್ಯಕ್ತಪಡಿಸಿದರೆ ಸಾಲದು, ಈ ಬಗ್ಗೆ ಪುರಾತತ್ವ ಇಲಾಖೆ ಏನು ಮಾಡುತ್ತದೆ? ಎಂಬುದನ್ನೂ ಅವರು ಹೇಳುವುದು ನಿರೀಕ್ಷಿತವಾಗಿದೆ! – ಸಂಪಾದಕರು) ಈ ಘಟನೆಯನ್ನು ಪುರಾತತ್ವ ಇಲಾಖೆ ಮತ್ತು ಪೊಲೀಸ್ ಆಡಳಿತ ಎರಡೂ ನಿರ್ಲಕ್ಷಿಸಿವೆ ಎಂದು ಸ್ಥಳೀಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಸಂಪಾದಕೀಯ ನಿಲುವು

ಪನ್ಹಾಲಗಡದಲ್ಲಿ ಪ್ರವಾಸಿಗರಿಂದ ಇಂತಹ ಕೃತ್ಯಗಳು ನಡೆಯುವುದು ದುರದೃಷ್ಟಕರ! ಪುರಾತತ್ವ ಇಲಾಖೆ ಮತ್ತು ಪೊಲೀಸ್ ಆಡಳಿತವು ಕೋಟೆಯ ರಕ್ಷಣೆಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ!