ಬೆಂಗಳೂರು – ಪ್ರೇಮಭಾವ, ಸತತ ಇತರರ ವಿಚಾರ ಮಾಡುವುದು ಇತ್ಯಾದಿ ಗುಣಗಳಿರುವ ಮತ್ತು ಶ್ರೀಗುರುಗಳ ಬಗ್ಗೆ ದೃಢ ಶ್ರದ್ಧೆ ಇರುವ ಬೆಂಗಳೂರಿನ ಸಾಧಕ ದಂಪತಿಗಳಾದ ಶ್ರೀ. ಸದಾನಂದ ಕಳ್ಸೆ (೭೦ ವರ್ಷ) ಮತ್ತು ಸೌ. ಸುಧಾ ಸದಾನಂದ (೬೩ ವರ್ಷ) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರೆಂದು ೧೨ ಜನವರಿ ೨೦೨೨ ರಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಆನಂದ ವಾರ್ತೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪೂ. ರಮಾನಂದ ಗೌಡ ಇವರು ಶ್ರೀ. ಸದಾನಂದ ಕಳ್ಸೆ ಮತ್ತು ಸೌ. ಸುಧಾ ಸದಾನಂದ ಇವರಿಗೆ ಉಡುಗೊರೆ ನೀಡಿ ಸತ್ಕಾರ ಮಾಡಿದರು. ಶ್ರೀ. ಸದಾನಂದ ಕಳ್ಸೆ ಇವರು ಮೂಲತಃ ಹೊಟೆಲ್ ಉದ್ಯಮಿಯಾಗಿದ್ದಾರೆ. ಇವರು ಕಳೆದ ೨೧ ವರ್ಷಗಳಿಂದ ಅವರ ಮನೆಯ ನೆಲಮಹಡಿಯನ್ನು ಸನಾತನ ಸಂಸ್ಥೆಯ ಕಾರ್ಯಕ್ಕೆ ನೀಡಿದ್ದಾರೆ.
‘ಸಾಧಕತ್ವ, ಆಂತರಿಕ ಗುಣಗಳಿಂದಾಗಿ ಶ್ರೀ. ಸದಾನಂದರವರು ಮತ್ತು ಸೌ. ಸುಧಾ ಸದಾನಂದರವರು ಜನನ-ಮರಣ ಚಕ್ರದಿಂದ ಬಿಡುಗಡೆಯಾದರು’, ಎಂದು ಪೂ. ರಮಾನಂದ ಗೌಡ ಇವರು ಈ ವೇಳೆ ಹೇಳಿದರು. ಇದನ್ನು ಕೇಳಿ ಶ್ರೀ ಸದಾನಂದರವರಿಗೆ ಭಾವಜಾಗೃತಿಯಾಯಿತು. ಅವರು ಮಾತನಾಡುತ್ತಾ ‘ನಾನು ಏನು ಮಾಡಿಲ್ಲ, ನಿರುಪಯುಕ್ತವಾಗಿದ್ದ ಜಾಗವನ್ನು ನೀಡಿದ್ದೆ. ಆದರೆ ಇಂತಹ ಜಾಗದಲ್ಲಿ ಗುರುಗಳ ಇಷ್ಟೊಂದು ಮಹಾನ್ ಕಾರ್ಯ ಆಗುತ್ತಿರುವುದು ನೋಡಿ ತುಂಬಾ ಸಂತೋಷ ಆನಿಸುತ್ತಿದೆ. ಗುರುಗಳ ಅಖಂಡ ಕೃಪೆ ನಮ್ಮ ಮೇಲೆ ಇದೆ. ಗುರುಗಳು (ಪರಾತ್ಪರ ಗುರು ಡಾ. ಆಠವಲೆಯವರು) ನಮ್ಮನ್ನು ಸತತ ರಕ್ಷಣೆ ಮಾಡುತ್ತಿದ್ದಾರೆ’, ಎಂದರು.