‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಭಾಷೆ ಮತ್ತು ಲಿಪಿ’ ಕುರಿತಾದ ಸಂಶೋಧನೆಯು ನವ ದೆಹಲಿಯಲ್ಲಿ ನಡೆದ ಆಂತರರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ನಲ್ಲಿ ಮಂಡನೆ !

ಪಠ್ಯಕ್ರಮದಲ್ಲಿ ಭಾಷೆಯ ಸಾತ್ತ್ವಿಕತೆಯನ್ನು ಸೇರಿಸುವ ಮಾನದಂಡ ಇರಬೇಕು !

ಸಂಸ್ಕೃತ ಭಾಷೆ ಅತಿ ಹೆಚ್ಚು ಸಾತ್ವಿಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ ! – ಸಂಶೋಧನೆಯ ನಿಷ್ಕರ್ಷ

ನಮ್ಮ ವಿಚಾರಗಳನ್ನು ಮಂಡಿಸಲು ಮತ್ತು ಪರಸ್ಪರರಲ್ಲಿ ಸಂವಾದ ಸಾಧಿಸಲು ಭಾಷೆಯೇ ಪ್ರಾರ್ಥಮಿಕ ಮಾಧ್ಯಮವಾಗಿರುವುದರಿಂದ, ನಾವು ಮಾತನಾಡುವ ಭಾಷೆ ನಮ್ಮ ಜೀವನದ ದೊಡ್ಡ ಭಾಗವಾಗಿದೆ. ನಮ್ಮ ಮಾತೃಭಾಷೆ ಯಾವುದಿರಬೇಕು ಎಂಬುದನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿಲ್ಲ; ಆದರೆ ಸಾತ್ವಿಕ ಭಾಷೆ ಕಲಿಯುವುದು ನಮ್ಮ ಕೈಯಲ್ಲಿದೆ. ಸಂಶೋಧನೆಗೆ ಆಯ್ಕೆಯಾದ ೮ ರಾಷ್ಟ್ರೀಯ ಮತ್ತು ೧೧ ವಿದೇಶಿ ಭಾಷೆಗಳ ಪೈಕಿ ‘ಸಂಸ್ಕೃತ’ ಭಾಷೆ ಅತಿ ಹೆಚ್ಚು ಸಾತ್ವಿಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಪ್ರತಿಪಾದಿಸಿದರು. ಅವರು ನವ ದೆಹಲಿಯಲ್ಲಿ ನಡೆದ ೨೫ ನೇ ಇಂಡಿಯಾ ಕಾನ್ಫರೆನ್ಸ್ ಆಫ್ ವೇವ್‌ಸ್ ಆನ್ ‘ದ ಕನ್ಸೆಪ್ಟ್ ಆಫ್ ಲಿಬರ್ಟಿ ಆಂಡ್ ಇಕ್ವಾಲಿಟಿ ಇನ್ ವೇದಿಕ ಪರ್‌ಸ್ಪೆಕ್ಟಿವ್’ ಎಂಬ ಆಂತರರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ನಲ್ಲಿ ಮಾತನಾಡುತ್ತಿದ್ದರು. ಅವರು ‘ಎಲ್ಲಕ್ಕಿಂತ ಹೆಚ್ಚು ಪ್ರಚಲಿತ ಭಾಷೆಗಳು ಮತ್ತು ಅವುಗಳ ಲಿಪಿಗಳಲ್ಲಿನ ಸೂಕ್ಷ್ಮ ಸ್ಪಂದನಗಳ’ ಕುರಿತು ಶೋಧಪ್ರಬಂಧವನ್ನು ಮಂಡಿಸಿದರು. ಈ ಪರಿಷದ್‌ಅನ್ನು ‘ದಿ ವೈಡರ್ ಅಸೋಸಿಯೇಷನ್ ಫಾರ್ ವೇದಿಕ್ ಸ್ಟಡೀಸ್ (ವೇವ್‌ಸ್) ಹೊಸ ದೆಹಲಿ’ ಆಯೋಜಿಸಿತ್ತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ, ಪರಾತ್ಪರ ಗುರು ಡಾ. ಆಠವಲೆಯವರು ಈ ಪ್ರಬಂಧದ ಮುಖ್ಯ ಲೇಖಕರು ಮತ್ತು ಶ್ರೀ. ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ.

ಶ್ರೀ. ಶಾನ್ ಕ್ಲಾರ್ಕ್

ಮೇಲಿನ ಶೋಧಪ್ರಬಂಧವು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಿಷತ್ತುಗಳಲ್ಲಿ ಮಂಡಿಸಿರುವ 85 ನೇ ಪ್ರಬಂಧವಾಗಿದೆ. ಇಲ್ಲಿಯವರೆಗೆ ವಿಶ್ವವಿದ್ಯಾಯವು 15 ರಾಷ್ಟ್ರೀಯ ಮತ್ತು 69 ಆಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಈ ಪೈಕಿ 9 ಆಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ಸಂಶೋಧನಾ ಪ್ರಬಂಧ’ ಪ್ರಶಸ್ತಿ ಲಭಿಸಿದೆ.

ಶ್ರೀ. ಶಾನ್ ಕ್ಲಾರ್ಕ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಬರೆಯುವ ಅಥವಾ ಮಾತನಾಡುವ ಮೂಲಕ ಭಾಷೆಯಿಂದಲೂ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತದೆ. ನಾವು ಮತ್ತು ‘ಯಾರೊಂದಿಗೆ ನಾವು ಸಂವಾದ ಮಾಡುತ್ತೇವೆ ಅವರು’ ಇಬ್ಬರ ಮೇಲೆಯೂ ನಮ್ಮ ಭಾಷೆಯಲ್ಲಿನ ಸ್ಪಂದನಗಳ ಪರಿಣಾಮವಾಗುತ್ತವೆ. ಶ್ರೀ. ಶಾನ್ ಕ್ಲಾರ್ಕ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಪ್ರಭಾವಳಿ ಅಳೆಯುವ ಉಪಕರಣಗಳು ಮತ್ತು ಸೂಕ್ಷ್ಮ ಪರೀಕ್ಷಣೆಗಳ ಮೂಲಕ ನಡೆಸಿದ ಕೆಲವು ಪರೀಕ್ಷೆಗಳ ಮಾಹಿತಿಯನ್ನು ನೀಡಿದರು.

ಪರೀಕ್ಷೆ ೧. ’ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಮತ್ತು ಪಶ್ಚಿಮದಲ್ಲಿ ಅಸ್ತಮಿಸುತ್ತಾನೆ’, ಎಂಬ ವಾಕ್ಯವನ್ನು 8 ರಾಷ್ಟ್ರೀಯ ಮತ್ತು 11 ವಿದೇಶಿ ಭಾಷೆಗಳಿಗೆ ಅನುವಾದಿಸಲಾಯಿತು. ಪ್ರತಿಯೊಂದು ಭಾಷೆಯ ವಾಕ್ಯಗಳನ್ನು ‘ಎ ೪’ ಆಕಾರದ ಕಾಗದದ ಮೇಲೆ ಮುದ್ರಿಸಲಾಯಿತು. ಅದರ ನಂತರ, ಈ ಪ್ರತಿಯೊಂದು ಕಾಗದದಿಂದ ಪ್ರಕ್ಷೇಪಿಸಲ್ಪಡುವ ಸೂಕ್ಷ್ಮ ಶಕ್ತಿಯ ಅಧ್ಯಯನವನ್ನು ಯುನಿವರ್ಸಲ್ ಆರಾ ಸ್ಕ್ಯಾನರ್ ಮೂಲಕ ಮಾಡಲಾಯಿತು. ಕೆಲವು ಭಾಷೆಗಳಲ್ಲಿ ಕೇವಲ ನಕಾರಾತ್ಮಕ ಶಕ್ತಿ, ಕೆಲವರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳೆರಡೂ, ಇನ್ನು ಕೆಲವು ಭಾಷೆಗಳಲ್ಲಿ ಸಕಾರಾತ್ಮಕ ಶಕ್ತಿಯಷ್ಟೇ ಪ್ರಕ್ಷೇಪಿಸಲ್ಪಡುತ್ತಿತ್ತು. ದೇವನಾಗರಿ ಲಿಪಿಯನ್ನು ಹೊಂದಿರುವ ಭಾಷೆಗಳು ಇತರ ಭಾಷೆಗಳಿಗಿಂತ ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ಹೊಂದಿವೆ ಎಂದು ಕಂಡುಬಂತು. ಸಂಸ್ಕೃತ ಭಾಷೆಯು ಅತ್ಯಂತ ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ಹೊಂದಿತ್ತು ಮತ್ತು ಅದರ ಪ್ರಭಾವಳಿಯು 14.21 ಮೀಟರ್ ಆಗಿತ್ತು.

ಇನ್ನೊಂದು ಪರೀಕ್ಷೆಯಲ್ಲಿ, ಮೇಲಿನ ಪರೀಕ್ಷೆಯಲ್ಲಿನ ಸಂಸ್ಕೃತ ವಾಕ್ಯಗಳನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ನಿರ್ಮಿಸಿದ ಸಾತ್ವಿಕ ಶೈಲಿಯ ದೇವನಾಗರಿ ಅಕ್ಷರಗಳಲ್ಲಿ ಮತ್ತು ಪ್ರಚಲಿತ ಕಂಪ್ಯೂಟರ್ ಶೈಲಿಯ ಅಕ್ಷರಗಳಲ್ಲಿ ಮುದ್ರಿಸಲಾಯಿತು. ಸಾತ್ವಿಕ ಶೈಲಿಯ ದೇವನಾಗರಿ ಅಕ್ಷರಗಳಲ್ಲಿ ಕಂಪ್ಯೂಟರ್‌ನ ಜನಪ್ರಿಯ ಶೈಲಿಯ ಅಕ್ಷರಗಳಿಗಿಂತ ಶೇ. 146 ಹೆಚ್ಚು ಸಕಾರಾತ್ಮಕ ಶಕ್ತಿ ಕಂಡುಬಂತು. ಕೊನೆಯದಾಗಿ ಶ್ರೀ. ಶಾನ್ ಕ್ಲಾರ್ಕ್ ಇವರು, ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮಕ್ಕೆ ಭಾಷೆಯನ್ನು ಆಯ್ದುಕೊಳ್ಳುವಾಗ ಭಾಷೆಯ ಸಾತ್ವಿಕತೆಯು ಮುಖ್ಯ ಮಾನದಂಡವಾಗಿರಬೇಕು ಎಂದು ಹೇಳಿದರು.