ಸರಕಾರವು ಆಡಳಿತಾತ್ಮಕ ಅವ್ಯವಸ್ಥೆ ದೂರ ಮಾಡಲು ಸಂಬಂಧಿತರಿಗೆ ಧರ್ಮಶಿಕ್ಷಣ ನೀಡುವ ಜೊತೆ ಕಠಿಣ ಶಿಕ್ಷೆ ವಿಧಿಸಬೇಕು, ಆಗಲೇ ಸ್ಥಿತಿ ಬದಲಾಗುವುದು
ಸರಕಾರಿ ಕಾರ್ಯಾಲಯಗಳಲ್ಲಿ ನಿಯಮಿತವಾಗಿ ಕಾಡುವ ಸಮಸ್ಯೆ ಎಂದರೆ ‘ಸರ್ವರ್ ಡೌನ್’ ಆಗುವುದು (ಗಣಕಯಂತ್ರಗಳಲ್ಲಿನ ಮಾಹಿತಿಯನ್ನು ಸಂಗ್ರಹಿಸಿಟ್ಟಿರುವ ಗಣಕೀಕರಣ ವ್ಯವಸ್ಥೆ ಕಾರ್ಯನಿರ್ವಹಿಸದೇ ಇರುವುದು) ! ಈ ತೊಂದರೆಯನ್ನು ಅನುಭವಿಸದ ವ್ಯಕ್ತಿ ಸಿಗುವುದು ಅಸಾಧ್ಯವೆಂದು ಹೇಳಬಹುದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಡಿಜಿಟಲ್’ ಭಾರತದ ಘೋಷಣೆಯನ್ನು ಮಾಡಿ ಕಳೆದ ಕೆಲವು ವರ್ಷಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಗಣಕೀಕರಣಗೊಳಿಸಿದರು. ಸರಕಾರದ ಕೆಲಸಗಳಲ್ಲಿ ಆಗುವ ಭ್ರಷ್ಟಾಚಾರದ ನಿವಾರಣೆ ಮತ್ತು ಸರಕಾರಿ ಕೆಲಸಗಳು ತ್ವರಿತವಾಗಿ ಆಗಲು ಅದು ಆವಶ್ಯಕವಾಗಿತ್ತು; ಆದರೆ ಹೊಸ ಗಣಕೀಕೃತ ವ್ಯವಸ್ಥೆಯಲ್ಲಿ ‘ಸರ್ವರ್ ಡೌನ್ ಆಗುವುದು, ಈ ಸಮಸ್ಯೆಯನ್ನು ನಾಗರಿಕರು ಎದುರಿಸಬೇಕಾಗುತ್ತಿದೆ.
೧. ನಾಗರಿಕರನ್ನು ಕಾಡುವ ಸರಕಾರಿ ಕಾರ್ಯಾಲಯಗಳ ‘ಸರ್ವರ್ ಡೌನ್’ ಸಮಸ್ಯೆ !
ಕಳೆದ ಕೆಲವು ವರ್ಷಗಳಿಂದ ಎಲ್ಲೆಡೆ ‘ಡಿಜಿಟಲ್’ ವ್ಯವಹಾರ ವೇಗದಲ್ಲಿ ನಡೆದಿದೆ ಮತ್ತು ಜನರಿಂದ ಮೆಚ್ಚುಗೆಯನ್ನೂ ಪಡೆದಿದೆ. ಹೆಚ್ಚುಕಡಿಮೆ ಎಲ್ಲ ಕ್ಷೇತ್ರಗಳಲ್ಲಿಯೂ ಎಲ್ಲ ವ್ಯವಸ್ಥೆಗಳನ್ನು ಗಣಕೀಕರಣಗೊಳಿಸಲಾಗಿದೆ. ಬಿಲ್‌ಗಳನ್ನು ಪಾವತಿಸುವುದು, ಪ್ರವಾಸದ ಟಿಕೇಟು ಖರೀದಿಸುವುದು, ವಸ್ತುಗಳನ್ನು ‘ಆನ್‌ಲೈನ್’ ಮೂಲಕ ಖರೀದಿಸುವುದು ಇತ್ಯಾದಿ ಸೌಲಭ್ಯಗಳು ಜನತೆಗೆ ಲಭಿಸಿರುವುದರಿಂದ ಶ್ರಮ, ಸಮಯ, ಅಲ್ಲದೇ ಕೆಲವೊಂದು ಬಾರಿ ಹಣದ ಉಳಿತಾಯವೂ ಆಗುತ್ತದೆ. ಸರಕಾರಿ ಕಾರ್ಯಾಲಯಗಳಲ್ಲಿ ಮಾತ್ರ ಈ ಗಣಕೀಕರಣದಿಂದ ಜನರಿಗೆ ಹೇಳುವಷ್ಟು ಪ್ರಯೋಜನ ಸಿಗುತ್ತಿಲ್ಲ ಎಂದು ಕಾಣಿಸುತ್ತದೆ; ತದ್ವಿರುದ್ಧ ಸಾರ್ವಜನಿಕರು ತೊಂದರೆಗಳನ್ನೇ ಸಹಿಸಬೇಕಾಗುತ್ತಿದೆ. ಅನೇಕ ಸರಕಾರಿ ಕಾರ್ಯಾಲಯಗಳಲ್ಲಿ ನಾಗರಿಕರಿಗೆ ವಾರದಲ್ಲಿ ಕಡಿಮೆಯೆಂದರೂ ಒಮ್ಮೆಯಾದರೂ ‘ಸರ್ವರ್ ಡೌನ್’ ಸಮಸ್ಯೆಯನ್ನು ಎದುರಿಸಬೇಕಾಗುತ್ತ್ತಿದೆ. ಅಂಚೆ ಕಚೇರಿ, ಕಂದಾಯ ಇಲಾಖೆ, ಮಹಾನಗರಪಾಲಿಕೆ, ಚುನಾವಣಾ ಕಚೇರಿ, ಬ್ಯಾಂಕ್ ಇತ್ಯಾದಿ ಯಾವುದೇ ವಿಭಾಗಗಳು ಇದರಿಂದ ಹೊರತಾಗಿಲ್ಲ.
೨. ಗಣಕೀಕರಣದ ಅಡಚಣೆಗಳನ್ನು ತತ್ಪರತೆಯಿಂದ ಸರಿಪಡಿಸದೇ ಸಾರ್ವಜನಿಕರಿಗೆ ಅನಾನುಕೂಲತೆ ಮಾಡುವ ಸರಕಾರಿ ನೌಕರರು
ಸರಕಾರಿ ನೌಕರರು ಸಲೀಸಾಗಿ ‘ಇಂಟರನೆಟ್ ಬಂದ್’ (ಮಾಹಿತಿಜಾಲ ಉಪಲಬ್ಧವಿಲ್ಲ), ‘ಸರ್ವರ್ ಡೌನ್’, ‘ಸಿಸ್ಟಂ ಅಪಡೇಶನ್’ (ಗಣಕೀಕರಣವನ್ನು ನವೀಕರಣಗೊಳಿಸುವುದು) ಇತ್ಯಾದಿ ಕಾರಣಗಳನ್ನು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡು ತಾವು ಸುರಕ್ಷಿತವಾಗಿರಲು ಪ್ರಯತ್ನಿಸುತ್ತಾರೆ. ಅಸಹಾಯಕ ಸಾರ್ವಜನಿಕರು ‘ತಮ್ಮ ಕೆಲಸ ಯಾವಾಗ ಆಗುವುದು ?’, ‘ತಾವು ಪುನಃ ಯಾವಾಗ ಬರಬೇಕು’, ಎಂದು ಆಸೆಯಿಂದ ವಿಚಾರಿಸಿದಾಗ, ಸರಕಾರಿ ನೌಕರರು ಏನಾದರೊಂದು ಹಾರಿಕೆಯ ಉತ್ತರವನ್ನು ನೀಡಿ ಅವರನ್ನು ಕಳುಹಿಸುತ್ತಾರೆ ಅಥವಾ ‘ಅದು ನಮ್ಮ ಕೈಯಲ್ಲಿಲ್ಲ, ನಾವು ಹೇಗೆ ಹೇಳುವುದು ?’, ಎಂದು ಉತ್ತರಿಸಿ ಸರಕಾರಿ ನೌಕರರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.
ನಾಗರಿಕರಿಗೆ ‘ಸರ್ವರ್ ಡೌನ್’ ಎಂಬ ಉತ್ತರವನ್ನು ನೀಡಿದರೆ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎಂದು ಸರಕಾರಿ ಸಿಬ್ಬಂದಿಗಳಿಗೆ ಅನಿಸುತ್ತದೆ. ಇಂತಹ ಸೌಜನ್ಯರಹಿತ ಉತ್ತರದಿಂದ ಸಾರ್ವಜನಿಕರಿಗೆ ಮನಸ್ತಾಪದ ಹೊರತಾಗಿ ಇನ್ನೇನೂ ಸಿಗುವುದಿಲ್ಲ. ತಾಂತ್ರಿಕ ಸಮಸ್ಯೆಯ ಹೆಸರಿನಲ್ಲಿ ಸರಕಾರಿ ನೌಕರರಿಂದ ಸಮಯವನ್ನು ಮುಂದೂಡುವ ಅನುಭವವೇನು ಹೊಸತಲ್ಲ. ‘ಈ ಸಮಸ್ಯೆ ದುರ್ಗಮ ಹಳ್ಳಿಗಳಲ್ಲಿ ಮಾತ್ರ ಇದೆ’, ಎಂದೇನಿಲ್ಲ. ‘ಮೆಟ್ರೊಪಾಲಿಟನ್ ಸಿಟಿ’ (ಮಹಾನಗರ) ಅಥವಾ ‘ಸ್ಮಾರ್ಟ್ ಸಿಟಿ’ (ಎಲ್ಲ ಅತ್ಯಾಧುನಿಕ ಸೌಲಭ್ಯಗಳಿರುವ) ಎಂದು ಕರೆಸಿಕೊಳ್ಳುವ ನಗರಗಳಲ್ಲಿಯೂ ಇದೆ.
೩. ಸರಕಾರಿ ಕಾರ್ಯಾಲಯಗಳಲ್ಲಿ ಇಡಲಾಗುವ ‘ಸರ್ವರ್ ಡೌನ್’ ಎಂಬ ರಟ್ಟಿನ ಫಲಕಗಳು ‘ಡಿಜಿಟಲ್ ಭಾರತ’ಕ್ಕೆ ಲಜ್ಜಾಸ್ಪದ !
ಸರಕಾರಿ ಕಾರ್ಯಾಲಯಗಳು ಈ ಸಮಸ್ಯೆಗೆ ಎಷ್ಟು ಹೊಂದಿಕೊಂಡಿವೆ ಎಂದರೆ, ಅವರು ‘ಸರ್ವರ್ ಡೌನ್’ ಎನ್ನುವ ರಟ್ಟಿನ ಫಲಕಗಳನ್ನೇ ತಯಾರಿಸಿಟ್ಟುಕೊಂಡಿದ್ದಾರೆ. ‘ಸಿಸ್ಟಂ ಡೌನ್’ ಆದ ಕೂಡಲೇ, ಆ ಫಲಕವನ್ನು ಕಿಟಕಿಯ ಎದುರಿಗೆ ಇಡುವ ತೊಂದರೆಯನ್ನು ಮಾತ್ರ ಅವರು ತೆಗೆದುಕೊಳ್ಳುತ್ತಾರೆ. ಈ ಚಿತ್ರ ‘ಡಿಜಿಟಲೀಕರಣ’ಗೊಳಿಸಲು ನೋಡುವ ಭಾರತಕ್ಕೆ ಲಜ್ಜಾಸ್ಪದವಾಗಿದೆ.
೪. ಜನರ ಕೆಲಸಗಳಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡುವ ಸರಕಾರಿ ನೌಕರರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?
ಸರಕಾರಿ ಕೆಲಸಗಳಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡುವ ವ್ಯಕ್ತಿಯ ಮೇಲೆ ಭಾರತೀಯ ದಂಡ ಸಂಹಿತೆ ಕಲಂ ೩೫೩ ಕ್ಕನುಸಾರ ಕ್ರಮವನ್ನು ತೆಗೆದುಕೊಳ್ಳುವ ಏರ್ಪಾಡು ಇದೆ. ಸರಕಾರಿ ನೌಕರರಿಗೆ ಅಪಶಬ್ದಗಳನ್ನು (ಬೈಗಳನ್ನು) ಉಪಯೋಗಿಸಿದರೆ, ಅವರೊಂದಿಗೆ ವಾದ ಮಾಡಿದರೆ, ಶಿಕ್ಷೆಗೆ ಅವಕಾಶವಿದೆ. ಹೀಗಿರುವಾಗ ಇದೇ ಅಪರಾಧ ಸರಕಾರಿ ನೌಕರರಿಂದ ಸಾರ್ವಜನಿಕರ ಸಂದರ್ಭದಲ್ಲಿಯಾದರೆ, ಅವರಿಗೆ ಯಾರು ಶಿಕ್ಷಿಸುವರು ? ‘ಸರ್ವರ್ ಬಂದ್’ ಆಗಿದ್ದರಿಂದ ಜನರ ಪೂರ್ವನಿಯೋಜಿತ ಕೆಲಸಗಳಲ್ಲಿ ಅಡಚಣೆಗಳು ನಿರ್ಮಾಣವಾಗುತ್ತವೆ, ಅವರ ಅಮೂಲ್ಯ ಸಮಯ, ಹಾಗೆಯೇ ಹಣದ ಅಪವ್ಯಯವಾಗುತ್ತದೆ, ಅಲ್ಲದೇ ಇವೆಲ್ಲವುಗಳಿಂದ ಮನಸ್ತಾಪವನ್ನೂ ಸಹಿಸಬೇಕಾಗುತ್ತದೆ. ಇದಕ್ಕೆ ಯಾರು ಹೊಣೆ ? ಜನರ ಸಮಯ ಮತ್ತು ಹಣದ ಅಪವ್ಯಯಗೊಳಿಸುವ ಈ ಸರಕಾರಿ ನೌಕರರಿಗೆ ಶಿಕ್ಷೆಯನ್ನು ವಿಧಿಸುವವರ‍್ಯಾರು ? ಸರಕಾರದ ಮಟ್ಟದಲ್ಲಿ ಇದರ ವಿಚಾರವಾಗುವ ಅವಶ್ಯಕತೆಯಂತೂ ಇದ್ದೇ ಇದೆ; ಆದರೆ ಇದಕ್ಕಿಂತ ಮೊದಲು ದೋಷಪೂರಿತ ಉಪಕರಣಗಳನ್ನು ಮತ್ತು ಕಾರ್ಯಾಲಯಗಳ ವ್ಯವಸ್ಥೆಯನ್ನು ಸುಧಾರಿಸುವ ಆವಶ್ಯಕತೆಯೂ ಇದೆ.
೫. ರೈಲು ನಿಗದಿತ ಸ್ಥಳವನ್ನು ತಲುಪಲು ೫ ನಿಮಿಷ ತಡವಾದರೂ, ಆ ಸಂದರ್ಭದಲ್ಲಿ ಅಧಿಕೃತ ಪ್ರಮಾಣಪತ್ರವನ್ನು ನೀಡಿ ತಪ್ಪನ್ನು ಒಪ್ಪಿಕೊಳ್ಳುವ ಜಪಾನಿನ ಆಡಳಿತ ವ್ಯವಸ್ಥೆ !
ಈ ಸಂದರ್ಭದಲ್ಲಿ ಜಪಾನಿನ ಉದಾಹರಣೆಯು ಕಲಿಯುವಂತಹದ್ದಾಗಿದೆ. ಜಪಾನಿನ ವ್ಯವಸ್ಥೆಗಳು ಮತ್ತು ಅಲ್ಲಿನ ಸಾರ್ವಜನಿಕರು ಸಮಯ ಪಾಲನೆಗೆ ಸುಪ್ರಸಿದ್ಧವಾಗಿವೆ. ಜಪಾನಿನಲ್ಲಿ ರೈಲುಗಳು ವೇಳಾಪಟ್ಟಿಯಂತೇ ಓಡುತ್ತವೆ. ರೈಲು ಬರಲು ೫ ನಿಮಿಷ ವಿಳಂಬವಾದರೂ, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇಂತಹ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿನ ರೈಲ್ವೆ ನೌಕರರು ಪ್ರಯಾಣಿಕರಿಗೆ ರೈಲು ವಿಳಂಬವಾಗಿರುವುದರ ಬಗ್ಗೆ ಅಧಿಕೃತ ಪ್ರಮಾಣಪತ್ರವನ್ನು ನೀಡುತ್ತಾರೆ. ‘ರೈಲು ತಲುಪಲು ವಿಳಂಬವಾಗಿರುವುದು, ಜನತೆಯ ತಪ್ಪಲ್ಲ, ವ್ಯವಸ್ಥೆಯಿಂದ ಆಗಿರುವ ತಪ್ಪು’, ಎಂದು ಒಪ್ಪಿಕೊಂಡು, ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದಾದರೊಬ್ಬ ವ್ಯಕ್ತಿಯು ತನಗೆ ತಡವಾದ ಬಗ್ಗೆ ಕಾರಣವೆಂದು ಪ್ರಮಾಣಪತ್ರವನ್ನು ಕಚೇರಿಯ ಹಿರಿಯ ಅಧಿಕಾರಿಗಳಿಗೆ, ಶಾಲೆಗಳಲ್ಲಿ ಶಿಕ್ಷಕರಿಗೆ ಅಥವಾ ಇಂತಹ ಇನ್ನಿತರೆ ಜವಾಬ್ದಾರಿಯುತ ವ್ಯಕ್ತಿಗಳಿಗೆ ನೀಡಿದರೆ, ಅದನ್ನು ಒಪ್ಪಿಕೊಳ್ಳಲಾಗುತ್ತದೆ. ನಾವು ಭಾರತದಲ್ಲಿ ಇಂತಹ ವ್ಯವಸ್ಥೆಯ ಬಗ್ಗೆ ವಿಚಾರವನ್ನಾದರೂ ಮಾಡಬಹುದೇ ? ಹೀಗೆ ಭಾರತದಲ್ಲಿ ಆಗದೇ ಇರುವುದರ ಹಿಂದೆ ಸಾರ್ವಜನಿಕರ ಹಿತಾಸಕ್ತಿಯ ವ್ಯವಸ್ಥೆಯ ಅಭಾವ, ಸರಕಾರಿ ಮಟ್ಟದ ಕೆಲಸದಲ್ಲಿ ಮೈಗಳ್ಳತನ ಮಾಡುವುದು, ಬೇಜವಾಬ್ದಾರಿಯುತ ನಡವಳಿಕೆ ಇಂತಹ ಎಷ್ಟೋ ಕಾರಣಗಳನ್ನು ಹೇಳಬಹುದು. ವ್ಯವಸ್ಥೆಯ ಈ ದೋಷಗಳು ದೂರವಾಗಿ ಜನತೆಗೆ ಸುವ್ಯವಸ್ಥೆಯನ್ನು ಅನುಭವಿಸಲು ಸಾಧ್ಯವಾಗಬೇಕು ಅಥವಾ ದುರವಸ್ಥೆಯ ತೊಂದರೆಗಳು ದೂರವಾಗಬೇಕು ಇದುವೇ ಅಪೇಕ್ಷೆ !
ಸರಕಾರಿ ಕಚೇರಿಗಳಲ್ಲಿನ ‘ಸರ್ವರ್ ಡೌನ್’ ಆಗುತ್ತಿದ್ದರೆ, ಜನತೆ ‘ಅಪ್’ ಹೇಗೆ ಆಗುವರು ? (ಮುಂದಿನ ಹಂತಕ್ಕೆ ಹೇಗೆ ಹೋಗುವರು ?) ಎಂದರೆ ಜನತೆಯ ಪರ್ಯಾಯದಿಂದ ರಾಷ್ಟ್ರದ ವಿಕಾಸ ಹೇಗೆ ಆಗುವುದು ? ಇದನ್ನು ಗಂಭೀರವಾಗಿ ವಿಚಾರ ಮಾಡುವ ಆವಶ್ಯಕತೆಯಿದೆ. (ಸೆಪ್ಟೆಂಬರ್ ೨೦೨೧)
– ಸೌ. ಗೌರಿ ನೀಲೇಶ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಸಾಧಕರಿಗೆ ಸೂಚನೆ ಮತ್ತು ಓದುಗರಿಗೆ ಮತ್ತು ಹಿತಚಿಂತಕರಿಗೆ ವಿನಂತಿ !ಸರಕಾರದ ಬಗ್ಗೆ ಒಳ್ಳೆಯ ಅಥವಾ ಕಟು ಅನುಭವಗಳು ಬಂದಿದ್ದರೆ ತಿಳಿಸಿರಿ ! ಈ ಲೇಖನದಲ್ಲಿ ಉಲ್ಲೇಖಿಸಿದಂತೆ ಸರಕಾರದ ವಿಷಯದಲ್ಲಿ ಈ ರೀತಿಯ ಒಳ್ಳೆಯ ಅಥವಾ ಕಟು ಅನುಭವಗಳು ಬಂದಿದ್ದರೆ, ಹಾಗೆಯೇ ಅದರ ಬಗ್ಗೆ ಏನಾದರೂ ಕೃತಿಯನ್ನು ಮಾಡಿದ್ದರೆ ಅದನ್ನು ನಮಗೆ ಈ ಕೆಳಗಿನ ವಿಳಾಸಕ್ಕೆ ಹೆಸರಿನೊಂದಿಗೆ ತಿಳಿಸಿ. ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ, ‘ಸುರಾಜ್ಯ ಅಭಿಯಾನ’, ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ ೪೦೧೪೦೩ ಸಂಪರ್ಕ ಕ್ರಮಾಂಕ : ೯೫೯೫೯೮೪೮೪೪ ಇ – ಮೇಲ್ ವಿಳಾಸ : [email protected] |